More

    ಐಪಿಎಲ್‌ಗೆ ಬರಲು ವಿದೇಶಿ ಅಂಪೈರ್‌ಗಳ ಹಿಂದೇಟು, ಭಾರತೀಯರೇ ಆಧಾರ

    ದುಬೈ: ಯುಎಇಯಲ್ಲಿ ನಡೆಯಲಿರುವ ಐಪಿಎಲ್ 13ನೇ ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲು ಐಸಿಸಿ ಎಲೈಟ್ ಪ್ಯಾನೆಲ್‌ನ ವಿದೇಶಿ ಅಂಪೈರ್‌ಗಳು ಹಿಂದೇಟು ಹಾಕಿದ್ದಾರೆ. ಭಾರತೀಯರ ಹೊರತಾಗಿ ಕೇವಲ ಮೂವರು ವಿದೇಶಿ ಎಲೈಟ್ ಅಂಪೈರ್‌ಗಳು ಟೂರ್ನಿಯಲ್ಲಿ ಕಾರ್ಯನಿರ್ವಹಿಸಲು ಒಪ್ಪಿಕೊಂಡಿದ್ದು, ಐಸಿಸಿ ಎಲೈಟ್ ಮ್ಯಾಚ್ ರೆಫ್ರಿಗಳ ಪೈಕಿ ಭಾರತದ ಜಾವಗಲ್ ಶ್ರೀನಾಥ್ ಮಾತ್ರ ಟೂರ್ನಿಯಲ್ಲಿ ಕಾರ್ಯನಿರ್ವಹಿಸಲು ಲಭ್ಯರಾಗಿದ್ದಾರೆ.

    ಟೂರ್ನಿಯ ಅಂಪೈರಿಂಗ್ ಗುಣಮಟ್ಟ ಕಾಪಾಡಿಕೊಳ್ಳುವ ಸಲುವಾಗಿ ಬಿಸಿಸಿಐ, ಹೆಚ್ಚಿನ ಐಸಿಸಿ ಎಲೈಟ್ ಪ್ಯಾನೆಲ್ ಅಂಪೈರ್‌ಗಳನ್ನು ಕಣಕ್ಕಿಳಿಸಲು ಬಯಸಿತ್ತು. ಆದರೆ, ವಿವಿಧ ಕಾರಣಗಳನ್ನು ನೀಡಿ ವಿದೇಶಿ ಅಂಪೈರ್‌ಗಳು ಟೂರ್ನಿಯಿಂದ ಜಾರಿಕೊಂಡಿದ್ದಾರೆ. ಈ ಹಿಂದಿನ ಐಪಿಎಲ್‌ಗಳಲ್ಲಿ ಕನಿಷ್ಠ 6 ವಿದೇಶಿ ಅಂಪೈರ್‌ಗಳು ಕಾರ್ಯನಿರ್ವಹಿಸಿದ್ದರು.

    ಐಪಿಎಲ್ ಸಮಯದಲ್ಲಿ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಳು ಇಲ್ಲದಿದ್ದರೂ, ವಿದೇಶಿ ಅಂಪೈರ್‌ಗಳು ಆಗಮಿಸಲು ಒಲವು ತೋರಿಲ್ಲ. 50 ವರ್ಷ ಮೇಲ್ಪಟ್ಟಿರುವ ಕೆಲ ಅಂಪೈರ್‌ಗಳಿಗೆ ಕರೊನಾ ಭೀತಿ ಕಾಡಿರುವ ಸಾಧ್ಯತೆಯೂ ಇದೆ.

    ಇದನ್ನೂ ಓದಿ: ನಂ. 1 ಪಟ್ಟಕ್ಕೆ ಇಂಗ್ಲೆಂಡ್-ಆಸೀಸ್ ಫೈಟ್, ಟಿ20 ಸರಣಿಯ ಫಲಿತಾಂಶ ಭಾರತಕ್ಕೂ ಲಾಭ ತರಬಹುದು!

    ‘ಬಿಸಿಸಿಐ ಆಹ್ವಾನವನ್ನು ಕೆಲ ಎಲೈಟ್ ಅಂಪೈರ್‌ಗಳು ನಿರಾಕರಿಸಿದ್ದಾರೆ. ಈ ಹಿಂದೆ ಐಪಿಎಲ್‌ನಲ್ಲಿ ಕಾರ್ಯನಿರ್ವಹಿಸಿದ್ದ ಶ್ರೀಲಂಕಾದ ಕುಮಾರ ಧರ್ಮಸೇನ ಕೂಡ ಈ ಬಾರಿ ಹಿಂದೇಟು ಹಾಕಿದ್ದು, ತವರಿನ ಟೂರ್ನಿಗಳಲ್ಲಿ ಬಿಜಿಯಾಗಿರುವುದಾಗಿ ತಿಳಿಸಿದ್ದಾರೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಎಲೈಟ್ ಅಂಪೈರ್‌ಗಳು ಐಸಿಸಿ ಒಪ್ಪಂದ ಹೊಂದಿರುತ್ತಾರೆ. ಹೀಗಾಗಿ ಅವರಿಗೆ ಕೆಲಸದ ಅಭದ್ರತೆ ಇಲ್ಲ. ಕರೊನಾ ಕಾಲದಲ್ಲಿ ಯಾವುದೇ ಅಪಾಯಕ್ಕೆ ಸಿಲುಕಿಕೊಳ್ಳದಿರಲು ಅವರು ಬಯಸಿರಬಹುದು ಎಂದೂ ಅವರು ಹೇಳಿದ್ದಾರೆ.

    ನ್ಯೂಜಿಲೆಂಡ್‌ನ ಕ್ರಿಸ್ ಗಾನಿ ಮತ್ತು ಇಂಗ್ಲೆಂಡ್‌ನ ರಿಚರ್ಡ್ ಎಲ್ಲಿಂಗ್‌ವರ್ತ್ ಮತ್ತು ಮೈಕೆಲ್ ಗೌಫ್​ ಐಪಿಎಲ್‌ಗೆ ಬರಲು ಒಪ್ಪಿಕೊಂಡಿರುವ ಎಲೈಟ್ ಪ್ಯಾನೆಲ್‌ನ ವಿದೇಶಿ ಅಂಪೈರ್‌ಗಳಾಗಿದ್ದಾರೆ. ಇವರೊಂದಿಗೆ ಭಾರತದ ಎಲೈಟ್ ಪ್ಯಾನೆಲ್ ಅಂಪೈರ್ ನಿತಿನ್ ಮೆನನ್ ಕೂಡ ಕಾರ್ಯನಿರ್ವಹಿಸಲಿದ್ದಾರೆ. ಇನ್ನು ಭಾರತದ ಇಂಟರ್‌ನ್ಯಾಷನಲ್ ಪ್ಯಾನಲ್ ಅಂಪೈರ್‌ಗಳಾದ ಅನಿಲ್ ಚೌಧರಿ, ಸಿ. ಶಂಶುದ್ದೀನ್, ವೀರೇಂದ್ರ ಶರ್ಮ ಮತ್ತು ಕೆಎನ್ ಅನಂತಪದ್ಮನಾಭನ್ ಮತ್ತು ಮಾಜಿ ಎಲೈಟ್ ಪ್ಯಾನಲ್ ಅಂಪೈರ್ ಎಸ್. ರವಿ ಕಾರ್ಯನಿರ್ವಹಿಸಲಿದ್ದಾರೆ. 12 ಅಂಪೈರ್‌ಗಳ ಪೈಕಿ 3 ಮಂದಿ ಕೇವಲ 4ನೇ ಅಂಪೈರ್ ಆಗಿರುತ್ತಾರೆ ಎನ್ನಲಾಗಿದೆ.

    ಭಾರತೀಯ ಅಂಪೈರ್‌ಗಳಿಗೆ ತಮ್ಮ ಗುಣಮಟ್ಟವನ್ನು ಸಾಬೀತು ಪಡಿಸಲು ಈ ಟೂರ್ನಿ ಉತ್ತಮ ಅವಕಾಶವಾಗಿದೆ ಎಂದೂ ಹೇಳಲಾಗುತ್ತಿದೆ. ಇನ್ನು ಟೂರ್ನಿಗೆ ಬರಲು ಒಪ್ಪಿಕೊಂಡಿರುವ ಇಂಗ್ಲೆಂಡ್‌ನ ಇಬ್ಬರು ಅಂಪೈರ್‌ಗಳ ಕಾರ್ಯನಿರ್ವಹಣೆ ಬಗ್ಗೆ ಕಳೆದ ವಿಂಡೀಸ್ ವಿರುದ್ಧ ಟೆಸ್ಟ್ ಸರಣಿಯ ವೇಳೆ ಟೀಕೆಗಳು ಎದುರಾಗಿದ್ದವು. ಆದರೆ ಬಯೋ-ಬಬಲ್‌ನಲ್ಲಿ ಕಾರ್ಯನಿರ್ವಹಿಸಿರುವ ಅವರ ಅನುಭವ ಐಪಿಎಲ್‌ಗೆ ಉಪಯುಕ್ತವಾಗಲಿದೆ ಎನ್ನಲಾಗಿದೆ.

    ಕರೊನಾ ಭಯವಿಲ್ಲ, ಮನೆಯಲ್ಲಿ ಪೂಜೆ ಇರುವ ಕಾರಣ ಪಿವಿ ಸಿಂಧು ಉಬೆರ್ ಕಪ್ ಆಡಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts