More

    PHOTOS | ಪಿಪಿಇ ಕಿಟ್ ಧರಿಸಿ ಆಸೀಸ್‌ಗೆ ತೆರಳಿದ ಟೀಮ್ ಇಂಡಿಯಾ!

    ದುಬೈ: ಎರಡು ತಿಂಗಳ ಸುದೀರ್ಘ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭಾರತೀಯ ಕ್ರಿಕೆಟ್ ತಂಡ ಬುಧವಾರ ರಾತ್ರಿ ಪ್ರಯಾಣ ಬೆಳೆಸಿತು. ಕರೊನಾ ಕಾಲದಲ್ಲಿ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ಆಡಲಿರುವ ಭಾರತ ತಂಡದ ಎಲ್ಲ ಆಟಗಾರರು ವಿಶೇಷವಾದ ಪಿಪಿಇ ಕಿಟ್ ಧರಿಸಿ ವಿಮಾನ ಏರಿದರು. ‘ಟೀಮ್ ಇಂಡಿಯಾ ಮರಳಿ ಬಂದಿದೆ. ನವವಾಸ್ತವವನ್ನು ಒಪ್ಪಿಕೊಳ್ಳೋಣ’ ಎಂದು ಬಿಸಿಸಿಐ ಟ್ವಿಟರ್‌ನಲ್ಲಿ ಟೀಮ್ ಇಂಡಿಯಾದ ಚಿತ್ರವನ್ನು ಪ್ರಕಟಿಸಿ ಬರೆದುಕೊಂಡಿದೆ.

    ಭಾರತ ತಂಡದ ಬಹುತೇಕ ಆಟಗಾರರು ಐಪಿಎಲ್‌ನಲ್ಲಿ ಆಡಿದ್ದು, ಟೂರ್ನಿ ಮುಗಿದ ಬೆನ್ನಲ್ಲೇ ರಾಷ್ಟ್ರೀಯ ತಂಡದ ಬಯೋ-ಬಬಲ್ ಪ್ರವೇಶಿಸಿದ್ದಾರೆ. ಟೆಸ್ಟ್ ತಂಡದ ಆಟಗಾರರಾದ ಚೇತೇಶ್ವರ ಪೂಜಾರ, ಹನುಮ ವಿಹಾರಿ ಮತ್ತು ತರಬೇತಿ ಸಿಬ್ಬಂದಿ ಕಳೆದ ಒಂದು ತಿಂಗಳಿನಿಂದ ಯುಎಇಯಲ್ಲೇ ಟೀಮ್ ಇಂಡಿಯಾದ ಬಯೋ-ಬಬಲ್‌ನಲ್ಲಿದ್ದರು.

    ಮುಂಬೈ ಇಂಡಿಯನ್ಸ್ ತಂಡಕ್ಕೆ 5ನೇ ಬಾರಿ ಐಪಿಎಲ್ ಪ್ರಶಸ್ತಿ ಗೆದ್ದುಕೊಟ್ಟ ರೋಹಿತ್ ಶರ್ಮ ಮಾತ್ರ ಭಾರತ ತಂಡದೊಂದಿಗೆ ತೆರಳದೆ ತವರಿಗೆ ಮರಳಿದ್ದಾರೆ. ಅವರು ದೀಪಾವಳಿ ಹಬ್ಬದ ಬಳಿಕ ಬೆಂಗಳೂರಿನ ಎನ್‌ಸಿಎಗೆ ಬರಲಿದ್ದು, ವೇಗಿ ಇಶಾಂತ್ ಶರ್ಮ ಜತೆಗೆ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಟೆಸ್ಟ್ ಸರಣಿಯ ವೇಳೆ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದ್ದಾರೆ.

    ಟೆಸ್ಟ್ ತಂಡದ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಕೂಡ ಗಾಯದಿಂದಾಗಿ ತಂಡದ ಜತೆಗೆ ಪ್ರಯಾಣಿಸುತ್ತಿಲ್ಲ. ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ತಂಡದ ಪರ ಆಡಿದಾಗ ಅವರು ಗಾಯಗೊಂಡಿದ್ದರು. ಟೆಸ್ಟ್ ಸರಣಿಗೆ ಅವರ ಪ್ರಯಾಣದ ಬಗ್ಗೆ ಬಿಸಿಸಿಐ ತಡವಾಗಿ ನಿರ್ಧಾರ ಕೈಗೊಳ್ಳಲಿದೆ.

    ಭಾರತ ತಂಡ ಗುರುವಾರ ಸಿಡ್ನಿ ತಲುಪಲಿದ್ದು, ಬಳಿಕ 14 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಲಿದೆ. ಆದರೆ ಈ ವೇಳೆ ತಂಡಕ್ಕೆ ಅಭ್ಯಾಸ ನಡೆಸಲು ಅವಕಾಶ ಲಭಿಸಿದೆ. ಕೇವಲ ಒಂದು ಕರೊನಾ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದ ಕೂಡಲೆ ತಂಡದ ಆಟಗಾರರು ಅಭ್ಯಾಸ ಆರಂಭಿಸಬಹುದಾಗಿದೆ.

    ಭಾರತ ತಂಡ ಪ್ರವಾಸದಲ್ಲಿ ತಲಾ 3 ಏಕದಿನ, ಟಿ20 ಮತ್ತು 4 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ನವೆಂಬರ್ 27ರಂದು ಸಿಡ್ನಿಯಲ್ಲಿ ಏಕದಿನ ಸರಣಿ ಆರಂಭಗೊಳ್ಳಲಿದೆ. ಬಹುನಿರೀಕ್ಷಿತ ಟೆಸ್ಟ್ ಸರಣಿ ಡಿಸಂಬರ್ 17ರಂದು ಅಡಿಲೇಡ್‌ನಲ್ಲಿ ಆರಂಭಗೊಳ್ಳಲಿದೆ. ಮೊದಲ ಟೆಸ್ಟ್ ಪಂದ್ಯ ಅಹರ್ನಿಶಿಯಾಗಿ ಸಾಗಲಿದೆ. ಟೆಸ್ಟ್ ಸರಣಿಯ ಪಂದ್ಯಗಳಿಗೆ ಪ್ರೇಕ್ಷಕರಿಗೂ ಪ್ರವೇಶ ಅವಕಾಶ ಕಲ್ಪಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts