More

    ಟಿ20 ವಿಶ್ವಕಪ್ ಫೈನಲ್​ಗೇರಿದ ಭಾರತ

    ಸಿಡ್ನಿ: ಲೀಗ್ ಹಂತದಲ್ಲಿ ಸತತ 4 ಜಯದೊಂದಿಗೆ ಅಜೇಯ ನಿರ್ವಹಣೆ ತೋರಿದ ಬಲದಿಂದ ಭಾರತ ತಂಡ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊಟ್ಟಮೊದಲ ಬಾರಿಗೆ ಫೈನಲ್​ಗೇರಿ ಹೊಸ ಇತಿಹಾಸ ಬರೆದಿದೆ.

    ಮಾಜಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಗುರುವಾರ ನಡೆಯಬೇಕಾಗಿದ್ದ ಸೆಮಿಫೈನಲ್ ಪಂದ್ಯ ಭಾರಿ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದುಗೊಂಡ ಕಾರಣ ಭಾರತ ತಂಡ, ಲೀಗ್ ಹಂತದ ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ಆಧಾರದಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದೆ. ಬಿ ಗುಂಪಿನ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದು ಸೆಮಿಫೈನಲ್​ಗೇರಿದ್ದ ಇಂಗ್ಲೆಂಡ್ ತಂಡ ನಿರಾಸೆ ಅನುಭವಿಸಿತು.

    ಭಾರತ ತಂಡ ಅಂತಾರಾಷ್ಟ್ರೀಯ ಮಹಿಳೆಯರ ದಿನಾಚರಣೆಯ ಹಿನ್ನೆಲೆಯಲ್ಲಿ ಭಾನುವಾರ ಮೆಲ್ಬೋರ್ನ್​ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆತಿಥೇಯ ಹಾಗೂ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾಕ್ಕೆ ಸೋಲುಣಿಸಿತ್ತು.

    ಸ್ಥಳೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ (ಭಾರತದಲ್ಲಿ ಬೆಳಗ್ಗೆ 9.30) ಮೊದಲ ಸೆಮಿಫೈನಲ್ ಪಂದ್ಯ ಆರಂಭಗೊಳ್ಳಬೇಕಾಗಿತ್ತು. ಆದರೆ ಬೆಳಗ್ಗೆಯಿಂದಲೇ ಮಳೆ ಕಾಡಿದ್ದರಿಂದ ಸಿಡ್ನಿ ಕ್ರಿಕೆಟ್ ಗ್ರೌಂಡ್ ಹೊದಿಕೆಯಿಂದ ಮುಚ್ಚಲ್ಪಟ್ಟಿತ್ತು. ಕನಿಷ್ಠ ಟಾಸ್ ಕೂಡ ಆಗುವ ಲಕ್ಷಣ ಕಾಣಿಸಲಿಲ್ಲ. ಟೂರ್ನಿ ನಿಯಮದ ಪ್ರಕಾರ, ಫಲಿತಾಂಶ ನಿರ್ಧಾರಕ್ಕಾಗಿ ಕನಿಷ್ಠ 20 ಓವರ್​ಗಳ ಪಂದ್ಯ (ತಲಾ 10 ಓವರ್) ಅಗತ್ಯವಿತ್ತು. ಆದರೆ ಸ್ಥಳೀಯ ಕಾಲಮಾನ ಸಂಜೆ 4.10ರವರೆಗೆ ಟಾಸ್ ಕೂಡ ಸಾಧ್ಯವಾಗದ ಕಾರಣ, ಪಂದ್ಯವನ್ನು ರದ್ದುಗೊಳಿಸುವ ನಿಷ್ಠುರ ನಿರ್ಧಾರ ಕೈಗೊಂಡು, 2ನೇ ಸೆಮಿಫೈನಲ್ ಪಂದ್ಯದ ಸಿದ್ಧತೆಗೆ ಅವಕಾಶ ಬಿಟ್ಟುಕೊಡಲಾಯಿತು.

    ಪಂದ್ಯಕ್ಕೆ ಐಸಿಸಿ ಮೀಸಲು ದಿನ ನಿಗದಿ ಮಾಡಿರದ ಕಾರಣ, ಆಂಗ್ಲರ ವಿಶ್ವಕಪ್ ಅಭಿಯಾನ ಕಣ್ಣೀರಿನೊಂದಿಗೆ ಕೊನೆಗೊಂಡಿತು. ಈ ಮುನ್ನ 4 ಬಾರಿ ಫೈನಲ್​ಗೇರಿದ್ದ ಇಂಗ್ಲೆಂಡ್, ಒಮ್ಮೆ ಪ್ರಶಸ್ತಿ ಗೆದ್ದಿತ್ತು.

    ಭಾರತ ತಂಡ ಲೀಗ್ ಹಂತದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ್ದು ಸೆಮೀಸ್​ನಲ್ಲಿ ಲಾಭದಾಯಕವಾಗಿ ಪರಿಣಮಿಸಿದೆ. ಬಳಿಕ ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ವಿರುದ್ಧವೂ ಗೆದ್ದು ಭಾರತ ಗೆಲುವಿನ ಓಟ ಮುಂದುವರಿಸಿತ್ತು. -ಪಿಟಿಐ/ಏಜೆನ್ಸೀಸ್

    ದಕ್ಷಿಣ ಆಫ್ರಿಕಾ ಮಹಿಳೆಯರ ಟಿ20 ವಿಶ್ವಕಪ್​ನಲ್ಲಿ 2ನೇ ಬಾರಿ ಸೆಮೀಸ್​ನಲ್ಲೇ ನಿರ್ಗಮಿಸಿತು. 2014ರಲ್ಲೂ ಇಂಥದ್ದೇ ನಿರಾಸೆ ಅನುಭವಿಸಿತು. ಮಹಿಳೆಯರ ಏಕದಿನ ವಿಶ್ವಕಪ್​ನಲ್ಲೂ ದಕ್ಷಿಣ ಆಫ್ರಿಕಾ 2 ಬಾರಿ (2000, 2017) ಸೆಮೀಸ್​ನಲ್ಲಿ ಎಡವಿದೆ.

    ಪುರುಷರ ಕ್ರಿಕೆಟ್ ಸೇರಿದಂತೆ ದಕ್ಷಿಣ ಆಫ್ರಿಕಾ ಐಸಿಸಿ ವಿಶ್ವಕಪ್​ನಲ್ಲಿ ಒಟ್ಟಾರೆ 10ನೇ ಬಾರಿ ಸೆಮೀಸ್​ನಲ್ಲೇ ನಿರ್ಗಮಿಸಿತು. ಪುರುಷರ ವಿಶ್ವಕಪ್​ನಲ್ಲಿ 6 ಬಾರಿ (ಏಕದಿನದಲ್ಲಿ 4, ಟಿ20ಯಲ್ಲಿ 2) ಸೆಮೀಸ್​ನಲ್ಲಿ ಎಡವಿದೆ.

    ಏಳು ಆವೃತ್ತಿಯ ಮಹಿಳೆಯರ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡ ಮೊಟ್ಟಮೊದಲ ಬಾರಿಗೆ ಫೈನಲ್​ಗೇರಿದೆ. ಈ ಮುನ್ನ 3 ಬಾರಿ (2009, 2010, 2018) ಸೆಮಿಫೈನಲ್​ನಲ್ಲೇ ಎಡವಿತ್ತು.

    ಆಂಗ್ಲ ಪುರುಷರಿಗೆ ಲಾಭ, ಮಹಿಳೆಯರಿಗೆ ನಷ್ಟ!

    ಐಸಿಸಿ ನಿಯಮದಲ್ಲಿನ ಲೋಪದೋಷದಿಂದಾಗಿ ಇಂಗ್ಲೆಂಡ್ ಪುರುಷರ ತಂಡ ಲಾಭ ಪಡೆದಿದ್ದರೆ, ಮಹಿಳಾ ತಂಡ ನಷ್ಟ ಅನುಭವಿಸಿರುವುದು ವಿಪರ್ಯಾಸ. ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧದ ಪುರುಷರ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಮತ್ತು ಸೂಪರ್ ಓವರ್ ಟೈ ಆದಾಗ ಇಂಗ್ಲೆಂಡ್ ತಂಡ ಬೌಂಡರಿ ಕೌಂಟ್ ನಿಯಮದನ್ವಯ ಗೆದ್ದಿದ್ದರೆ, ಇಂಗ್ಲೆಂಡ್ ಮಹಿಳೆಯರಿಗೆ ಮಳೆಯಿಂದ ಆಡುವ ಅವಕಾಶವೇ ಸಿಗದೆ, ಮೀಸಲು ದಿನವಿಲ್ಲದ ಕಾರಣ ನಿರಾಸೆಯಾಗಿದೆ.

    ಮಹಿಳೆಯರಿಗೆ ಕೊಹ್ಲಿ ಅಭಿನಂದನೆ

    ಚೊಚ್ಚಲ ಫೈನಲ್ ಸಾಧನೆ ಮಾಡಿದ ಭಾರತ ಮಹಿಳಾ ತಂಡವನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿನಂದಿಸಿದ್ದಾರೆ. ‘ಹುಡುಗಿಯರೇ ನಿಮ್ಮ ಸಾಧನೆ ನಮಗೆ ಹೆಮ್ಮೆ ತಂದಿದೆ. ಫೈನಲ್​ಗೆ ಶುಭಹಾರೈಕೆಗಳು’ ಎಂದು ಕೊಹ್ಲಿ ಟ್ವೀಟಿಸಿದ್ದಾರೆ. ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್ ಕೂಡ ಟ್ವಿಟರ್​ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

    ಸತತ 6ನೇ ಬಾರಿ ಫೈನಲ್​ಗೇರಿದ ಆಸೀಸ್

    ನಾಲ್ಕು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡ 2ನೇ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಡಕ್ವರ್ತ್-ಲೂಯಿಸ್ ನಿಯಮದನ್ವಯ 5 ರನ್​ಗಳಿಂದ ಸೋಲಿಸಿ ಸತತ 6ನೇ ಬಾರಿ ಫೈನಲ್​ಗೇರಿತು. ಮೊದಲ ಸೆಮೀಸ್ ಮಳೆಯಿಂದ ರದ್ದಾದರೂ, ಈ ಪಂದ್ಯ ನಿಗದಿತ ಸಮಯದಲ್ಲೇ ಆರಂಭಗೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಆಸೀಸ್, ನಾಯಕಿ ಮೆಗ್ ಲ್ಯಾನಿಂಗ್ (49*ರನ್, 49 ಎಸೆತ, 4 ಬೌಂಡರಿ, 1 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್​ನಿಂದ 20 ಓವರ್​ಗಳಲ್ಲಿ 5 ವಿಕೆಟ್​ಗೆ 134 ರನ್ ಪೇರಿಸಿತು. ಬಳಿಕ ಮಳೆ ಬಿದ್ದ ಕಾರಣ ಆಟ ವಿಳಂಬಗೊಂಡು ದಕ್ಷಿಣ ಆಫ್ರಿಕಾಕ್ಕೆ 13 ಓವರ್​ಗಳಲ್ಲಿ 98 ರನ್ ಗಳಿಸುವ ಪರಿಷ್ಕೃತ ಗುರಿ ನೀಡಲಾಯಿತು. ಪ್ರತಿಯಾಗಿ ದಕ್ಷಿಣ ಆಫ್ರಿಕಾ 5 ವಿಕೆಟ್​ಗೆ 92 ರನ್ ಗಳಿಸಿ ಸೋಲೊಪ್ಪಿಕೊಂಡಿತು. ದಕ್ಷಿಣ ಆಫ್ರಿಕಾ ಲೀಗ್ ಹಂತದಲ್ಲಿ ಎ ಗುಂಪಿನ ಅಗ್ರಸ್ಥಾನಿಯಾಗಿ ಸೆಮೀಸ್​ಗೇರಿತ್ತು ಮತ್ತು ಈ ಪಂದ್ಯ ರದ್ದಾಗಿದ್ದರೆ ಫೈನಲ್​ಗೇರುವ ಅವಕಾಶ ಹೊಂದಿತ್ತು.

    ಆಸ್ಟ್ರೇಲಿಯಾ: 20 ಓವರ್​ಗಳಲ್ಲಿ 5 ವಿಕೆಟ್​ಗೆ 134 (ಅಲಿಸ್ಸಾ 18, ಮೂನಿ 28, ಲ್ಯಾನಿಂಗ್ 49*, ಹೇಯ್್ನ ್ಸ 17, ನಾಡಿನ್ ಡಿ ಕ್ಲರ್ಕ್ 19ಕ್ಕೆ 3, ), ದಕ್ಷಿಣ ಆಫ್ರಿಕಾ: (ಗುರಿ: 13 ಓವರ್​ಗಳಲ್ಲಿ 98) 13 ಓವರ್​ಗಳಲ್ಲಿ 5 ವಿಕೆಟ್​ಗೆ 92 (ನೈಕರ್ಕ್ 12, ಲುಸ್ 21, ವೋಲ್ವಾರ್ಡ್ 41*, ಸ್ಕಟ್ 17ಕ್ಕೆ 2). ಪಂದ್ಯಶ್ರೇಷ್ಠ: ಮೆಗ್ ಲ್ಯಾನಿಂಗ್.

    ನಿಯಮ ಬದಲಿಸಲು ನಾಯಕಿಯರ ಒತ್ತಾಯ

    ಮೀಸಲು ದಿನವಿಲ್ಲದ ಕಾರಣ ಸೆಮೀಸ್​ನಲ್ಲೇ ನಿರಾಸೆ ಅನುಭವಿಸಿದ ಇಂಗ್ಲೆಂಡ್ ತಂಡದ ನಾಯಕಿ ಹೀದರ್ ನೈಟ್, ನಿಯಮ ಬದಲಾವಣೆಗಾಗಿ ಐಸಿಸಿಯನ್ನು ಒತ್ತಾಯಿಸಿದ್ದಾರೆ. ಭಾರತ ತಂಡದ ನಾಯಕಿ ಹರ್ವನ್​ಪ್ರೀತ್ ಕೌರ್ ಕೂಡ ಐಸಿಸಿ ಟೂರ್ನಿಯ ನಾಕೌಟ್ ಪಂದ್ಯಗಳಿಗೆ ಮೀಸಲು ದಿನ ಅಗತ್ಯವೆಂದು ಅಭಿಪ್ರಾಯಪಟ್ಟಿದ್ದಾರೆ. ಈ ಮುನ್ನ ಆತಿಥೇಯ ಕ್ರಿಕೆಟ್ ಆಸ್ಟ್ರೇಲಿಯಾ ಮಳೆ ಭೀತಿಯಿಂದಾಗಿ ಮೀಸಲು ದಿನಕ್ಕಾಗಿ ಮನವಿ ಸಲ್ಲಿಸಿದ್ದರೂ, ಐಸಿಸಿ ಅದನ್ನು ತಿರಸ್ಕರಿಸಿತ್ತು. ‘ಹಾಲಿ ಟೂರ್ನಿಯ ನಿಯಮವನ್ನು ಗೌರವಿಸಲೇಬೇಕು. ಆದರೆ ಭವಿಷ್ಯದ ಟೂರ್ನಿಗಳಲ್ಲಿ ಈ ನಿಯಮ ಬದಲಾವಣೆಗೆ ಮುಂದಾಗಬೇಕಿದೆ. ಬೇರೆ ಯಾವ ತಂಡಕ್ಕೂ ಮಳೆಯಿಂದಾಗಿ ವಿಶ್ವಕಪ್​ನಿಂದ ಹೊರಬೀಳುವ ಪರಿಸ್ಥಿತಿ ಬಾರದಿರಲಿ’ ಎಂದು ಹೀದರ್ ನೈಟ್ ಹೇಳಿದ್ದಾರೆ. ಕನಿಷ್ಠ ಮೈದಾನಕ್ಕೂ ಇಳಿಯುವ ಅವಕಾಶ ಸಿಗದೆ ಹೊರಬಿದ್ದ ಕಾರಣ ಇಂಗ್ಲೆಂಡ್ ಆಟಗಾರ್ತಿಯರು ಡ್ರೆಸ್ಸಿಂಗ್ ರೂಮ್ಲ್ಲಿ ಕಣ್ಣೀರಿಟ್ಟರು.

    ನಿಜಕ್ಕೂ ಹತಾಶೆ ಕಾಡುತ್ತಿದೆ. ವಿಶ್ವಕಪ್​ನಲ್ಲಿ ನಾವು ಬಯಸಿದಂಥ ಮುಕ್ತಾಯ ಇದಲ್ಲ. ಮೀಸಲು ದಿನವಿಲ್ಲದ ಕಾರಣ ನಮಗೆ ಆಡುವ ಅವಕಾಶವೇ ಇಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್ ಸೋತು ಪಂದ್ಯ ಕೈಚೆಲ್ಲಿದ್ದು ನಮಗಿಲ್ಲಿ ದುಬಾರಿಯಾಗಿದೆ.

    | ಹೀದರ್ ನೈಟ್, ಇಂಗ್ಲೆಂಡ್ ನಾಯಕಿ

    ಲೀಗ್ ಹಂತದ ಎಲ್ಲ ಪಂದ್ಯ ಗೆಲ್ಲುವತ್ತ ಗಮನವಿಟ್ಟಿದ್ದೆವು. ಅದಕ್ಕೀಗ ಉತ್ತಮ ಪ್ರತಿಫಲ ದೊರೆತಿದೆ. ಶೆಫಾಲಿ-ಸ್ಮೃತಿ ಉತ್ತಮ ಅರಂಭ ಒದಗಿಸುತ್ತಿದ್ದರು. ಅದರಿಂದ ನೆರವಾಗಿದೆ. ನಾವೀಗ ಹೆಚ್ಚು ಸಕಾರಾತ್ಮಕ ಆಟದತ್ತ ಗಮನಹರಿಸಿದ್ದೇವೆ.

    | ಹರ್ವನ್​ಪ್ರೀತ್ ಕೌರ್ ಭಾರತ ತಂಡದ ನಾಯಕಿ

    ಭಾರತ ಉತ್ತಮ ದರ್ಜೆಯ ತಂಡ. ಇತ್ತೀಚೆಗೆ ಅತ್ಯುತ್ತಮ ಕ್ರಿಕೆಟ್ ಆಡುತ್ತಿದೆ. ಅವರನ್ನು ಸೋಲಿಸಬೇಕಾದರೆ ನಾವು ಅತ್ಯುತ್ತಮ ಆಟವಾಡಬೇಕಾಗುತ್ತದೆ. ನಾವು ಪ್ರತಿ ಪಂದ್ಯದಲ್ಲಿ ಸುಧಾರಣೆ ಕಾಣುತ್ತಿದ್ದೇವೆ.

    | ಮೆಗ್ ಲ್ಯಾನಿಂಗ್ ಆಸೀಸ್ ನಾಯಕಿ

     

    ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಫೈನಲ್

    ಯಾವಾಗ: ಭಾನುವಾರ

    ಎಲ್ಲಿ: ಮೆಲ್ಬೋರ್ನ್

    ಆರಂಭ: ಮಧ್ಯಾಹ್ನ 12.30

    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 2

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts