More

    ಬೌಲರ್ಸ್ ಶ್ರಮ ವ್ಯರ್ಥಗೊಳಿಸಿದ ಬ್ಯಾಟ್ಸ್​ಮನ್ಸ್; ಕಿವೀಸ್ ಎದುರು ಮುನ್ನಡೆ ಕಂಡರೂ ಲಾಭವಿಲ್ಲ

    ಕ್ರೖೆಸ್ಟ್​ಚರ್ಚ್: ವೇಗಿಗಳಾದ ಮೊಹಮದ್ ಶಮಿ (81ಕ್ಕೆ 4) ಮತ್ತು ಜಸ್​ಪ್ರೀತ್ ಬುಮ್ರಾ (62ಕ್ಕೆ 3) ಸಾಹಸದಿಂದ ಭಾರತ ತಂಡ ಮೊದಲ ಇನಿಂಗ್ಸ್​ನಲ್ಲಿ ಅಮೂಲ್ಯ ಮುನ್ನಡೆ ಸಾಧಿಸಿದರೂ ಅದರ ಲಾಭವೆತ್ತುವಲ್ಲಿ ವಿಫಲವಾಗಿದೆ. ದ್ವಿತೀಯ ಇನಿಂಗ್ಸ್​ನಲ್ಲಿ ಭಾರತ ತಂಡದ ಬ್ಯಾಟಿಂಗ್ ವಿಭಾಗ ಕುಸಿತ ಕಾಣುವುದರೊಂದಿಗೆ ಆತಿಥೇಯ ನ್ಯೂಜಿಲೆಂಡ್ ವಿರುದ್ಧದ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿದೆ. ಈ ಮೂಲಕ ಸರಣಿ ಸೋಲಿನ ಕಾಮೋಡವೂ ಆವರಿಸಿದೆ.

    ಹ್ಯಾಗ್ಲೆ ಓವಲ್ ಮೈದಾನದಲ್ಲಿ ವಿಕೆಟ್ ನಷ್ಟವಿಲ್ಲದೆ 63 ರನ್​ಗಳಿಂದ ಭಾನುವಾರ 2ನೇ ದಿನದಾಟ ಆರಂಭಿಸಿದ ನ್ಯೂಜಿಲೆಂಡ್ ತಂಡ ಚಹಾ ವಿರಾಮಕ್ಕೆ ಮುನ್ನ 235 ರನ್​ಗೆ ಆಲೌಟ್ ಆಯಿತು. ಇದರಿಂದ ಭಾರತ ಮೊದಲ ಇನಿಂಗ್ಸ್​ನಲ್ಲಿ 7 ರನ್​ಗಳ ಅಲ್ಪ ಮುನ್ನಡೆ ಸಾಧಿಸಿತು. ಆದರೆ ಈ ಮುನ್ನಡೆಯ ಲಾಭವೆತ್ತಲು ಬ್ಯಾಟ್ಸ್​ಮನ್​ಗಳು ಸಹಕಾರ ನೀಡಲಿಲ್ಲ. ಇದರಿಂದ ಭಾರತ ದಿನದಂತ್ಯಕ್ಕೆ 6 ವಿಕೆಟ್​ಗೆ 90 ರನ್ ಗಳಿಸಿ ಸಂಕಷ್ಟದಲ್ಲಿದೆ. ಭಾರತ ಈಗ ಒಟ್ಟು 97 ರನ್ ಮುನ್ನಡೆಯಲ್ಲಿದ್ದು, ಆತಿಥೇಯರಿಗೆ ಕನಿಷ್ಠ ಸ್ಪರ್ಧಾತ್ಮಕ ಮೊತ್ತದ ಸವಾಲು ನಿಗದಿಪಡಿಸಲು ಹೋರಾಟ ನಡೆಸಬೇಕಿದೆ.

    ಶಮಿ, ಬುಮ್ರಾ ಕಡಿವಾಣ: ಬೆಳಗಿನ ಅವಧಿಯಲ್ಲಿ ಭಾರತೀಯ ವೇಗಿಗಳು ಕಿವೀಸ್​ಗೆ ತಿರುಗೇಟು ನೀಡುವ ಸೂಚನೆ ತೋರಿದರು. ಸ್ಪಿನ್ನರ್ ರವೀಂದ್ರ ಜಡೇಜಾ (22ಕ್ಕೆ 2) ಕೂಡ ಮೊಹಮದ್ ಶಮಿ, ಜಸ್​ಪ್ರೀತ್ ಬುಮ್ರಾ ಸಾಹಸಕ್ಕೆ ಸಾಥ್ ನೀಡಿದರು. ಕ್ರಮವಾಗಿ 27 ಮತ್ತು 29 ರನ್​ಗಳಿಂದ ದಿನದಾಟ ಮುಂದುವರಿಸಿದ ಆರಂಭಿಕರಾದ ಟಾಮ್ ಲಾಥಮ್ ಮತ್ತು ಟಾಮ್ ಬ್ಲಂಡೆಲ್ ಜೋಡಿ ದಿನದ 3ನೇ ಓವರ್​ನಲ್ಲೇ ಬೇರ್ಪಟ್ಟರು. ಬ್ಲಂಡೆಲ್ (30) ಹಿಂದಿನ ದಿನದ ಗಳಿಕೆಗೆ ಒಂದೇ ರನ್ ಸೇರಿಸಿ ಉಮೇಶ್ ಯಾದವ್ ಎಸೆತದಲ್ಲಿ ಎಲ್​ಬಿ ಬಲೆಗೆ ಬಿದ್ದರು. ಬೆನ್ನಲ್ಲೇ ನಾಯಕ ಕೇನ್ ವಿಲಿಯಮ್ಸನ್​ಗೆ (3) ಬುಮ್ರಾ ಪೆವಿಲಿಯನ್ ದಾರಿ ತೋರಿದರೆ, ರಾಸ್ ಟೇಲರ್ (15) ಜಡೇಜಾಗೆ ವಿಕೆಟ್ ಒಪ್ಪಿಸಿದರು. ಅರ್ಧಶತಕ ಪೂರೈಸಿದ ಬೆನ್ನಲ್ಲೇ ಲಾಥಮ್ (52) ಶಮಿಗೆ ಮೊದಲ ವಿಕೆಟ್ ರೂಪದಲ್ಲಿ ಬಲಿಯಾದರು. ಮರು ಓವರ್​ನಲ್ಲಿ ಹೆನ್ರಿ ನಿಕೋಲ್ಸ್ (14) ಕೂಡ ಶಮಿ ಎಸೆತದಲ್ಲಿ ಔಟಾದರು. ಇದರಿಂದಾಗಿ ಕಿವೀಸ್ ಭೋಜನ ವಿರಾಮದ ವೇಳೆಗೆ 5 ವಿಕೆಟ್​ಗೆ 142 ರನ್ ಗಳಿಸಿ ತತ್ತರಿಸಿತ್ತು. ಮತ್ತೆ ಆಟ ಆರಂಭಗೊಂಡಾಗ ವಾಟ್ಲಿಂಗ್ (0) ಮತ್ತು ಸೌಥಿ (0) ವಿಕೆಟ್​ಗಳನ್ನು ಕೇವಲ 3 ಎಸೆತಗಳ ಅಂತರದಲ್ಲಿ ಕಬಳಿಸಿದ ಬುಮ್ರಾ ಕಿವೀಸ್​ಗೆ ಭಾರಿ ಹಿನ್ನಡೆಯ ಭೀತಿ ಹುಟ್ಟಿಸಿದ್ದರು.

    ಬೌಲ್ಟ್ ದಾಳಿಗೆ ಕುಸಿದ ಕೊಹ್ಲಿ ಪಡೆ

    ಕಿವೀಸ್ ಅನುಭವಿ ವೇಗಿ ಟ್ರೆಂಟ್ ಬೌಲ್ಟ್ (12ಕ್ಕೆ 3) ಭಾರತ ತಂಡದ ಅಗ್ರ ಕ್ರಮಾಂಕವನ್ನು ಕಾಡುವುದರೊಂದಿಗೆ ಪಂದ್ಯವನ್ನು ಮತ್ತೆ ಆತಿಥೇಯರತ್ತ ತಿರುಗಿಸಿದರು. ಆರಂಭಿಕರಾದ ಪೃಥ್ವಿ ಷಾ (14), ಕನ್ನಡಿಗ ಮಯಾಂಕ್ ಅಗರ್ವಾಲ್ (3) ತಂಡದ ಮೊತ್ತ 8 ರನ್ ಆಗುವಷ್ಟರಲ್ಲೇ ಬೇರ್ಪಟ್ಟರು. ಮಯಾಂಕ್ ಮತ್ತೊಮ್ಮೆ ಬೌಲ್ಟ್ ಎಸೆತದಲ್ಲಿ ಎಲ್​ಬಿ ಬಲೆಗೆ ಬಿದ್ದರು. ಸೌಥಿ ಎಸೆತದಲ್ಲಿ ಪೃಥ್ವಿ ಷಾ ಕೀಪರ್ ಲಾಥಮ್​ ಕ್ಯಾಚ್ ನೀಡಿದರು. ನಾಯಕ ವಿರಾಟ್ ಕೊಹ್ಲಿ (14) ಪ್ರವಾಸದ ಕೊನೇ ಇನಿಂಗ್ಸ್​ನಲ್ಲೂ ರನ್​ಬರ ಮುಂದುವರಿಸಿದರೆ, ಉಪನಾಯಕ ಅಜಿಂಕ್ಯ ರಹಾನೆ (9) ಕೆಟ್ಟ ಹೊಡೆತಕ್ಕೆ ಕೈಹಾಕಿ ಔಟಾದರು. ಚೇತೇಶ್ವರ ಪೂಜಾರ (24) ಕೂಡ ಅಲ್ಪ ಪ್ರತಿರೋಧವನ್ನಷ್ಟೇ ತೋರಿದರು. ನೈಟ್ ವಾಚ್​ವುನ್ ಆಗಿ ಬಂದ ಉಮೇಶ್ ಯಾದವ್ ದಿನದ ಕೊನೆಯ ಓವರ್​ನಲ್ಲಿ ಔಟಾದರು. ಹನುಮ ವಿಹಾರಿ (5*) ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್​ಮನ್ ರಿಷಭ್ ಪಂತ್ (1) 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    ಭಾರತ ತಂಡವನ್ನು ಮತ್ತೆ ಕಾಡಿದ ನ್ಯೂಜಿಲೆಂಡ್ ಬಾಲಂಗೋಚಿಗಳು

    ಒಂದು ಹಂತದಲ್ಲಿ 153 ರನ್​ಗೆ 7 ವಿಕೆಟ್ ಕಳೆದುಕೊಂಡ ಕಿವೀಸ್ ಭಾರಿ ಹಿನ್ನಡೆ ಕಾಣುವ ಅಪಾಯಕ್ಕೆ ಸಿಲುಕಿತ್ತು. ಆಗ ಮತ್ತೊಮ್ಮೆ ಬಾಲಂಗೋಚಿ ಆಟಗಾರರು ಭಾರತದ ಪಾಲಿಗೆ ಕಗ್ಗಂಟಾದರು. ಲಂಬು ವೇಗಿ ಕೈಲ್ ಜೇಮಿಸನ್ (49 ರನ್, 63 ಎಸೆತ, 7 ಬೌಂಡರಿ), ಆಲ್ರೌಂಡರ್ ಕಾಲಿನ್ ಗ್ರಾಂಡ್​ಹೋಮ್ (26) ಜತೆಗೂಡಿ 8ನೇ ವಿಕೆಟ್​ಗೆ 24 ರನ್ ಪೇರಿಸಿದರೆ, ನೀಲ್ ವ್ಯಾಗ್ನರ್ () ಅವರೊಂದಿಗೆ 9ನೇ ವಿಕೆಟ್​ಗೆ 51 ರನ್ ಸೇರಿಸಿ ತಂಡದ ಹಿನ್ನಡೆಯನ್ನು ದೊಡ್ಡ ಪ್ರಮಾಣದಲ್ಲಿ ತಗ್ಗಿಸಿದರು. ಕೊನೇ 3 ವಿಕೆಟ್​ಗಳಿಂದ ನ್ಯೂಜಿ ಲೆಂಡ್ ತಂಡ 82 ರನ್ ಕೂಡಿಹಾಕಿತು. ಅರ್ಧ ಶತಕದಿಂದ ಜೇಮಿಸನ್ ಕೇವಲ 1 ರನ್ ದೂರ ವಿದ್ದಾಗ ಶಮಿ ಎಸೆತದಲ್ಲಿ ಕೀಪರ್ ಪಂತ್​ಗೆ ಕ್ಯಾಚ್ ನೀಡಿದರು. ಇದರಿಂದಾಗಿ ಭಾರತಕ್ಕೆ ಅಲ್ಪ ಮುನ್ನಡೆಯ ಸಮಾಧಾನ ಲಭಿಸಿತು.

    02: ಕೊಹ್ಲಿ 2ನೇ ಬಾರಿಗೆ 2 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳ ಸರಣಿಯಲ್ಲಿ ಯಾವುದೇ ಇನಿಂಗ್ಸ್​ನಲ್ಲಿ 20ಕ್ಕಿಂತ ಹೆಚ್ಚು ರನ್ ಗಳಿಸಲು ವಿಫಲರಾದರು. 2017ರಲ್ಲಿ ತವರಿನಲ್ಲಿ ಆಸೀಸ್ ವಿರುದ್ಧವೂ ಇಂಥ ರನ್​ಬರ ಎದುರಿಸಿದ್ದರು.

    205: ಸರಣಿಯಲ್ಲಿ ನ್ಯೂಜಿಲೆಂಡ್ ತಂಡ 2 ಇನಿಂಗ್ಸ್​ಗಳಿಂದ 8ರಿಂದ 10ನೇ ವಿಕೆಟ್​ಗೆ ಒಟ್ಟಾರೆ 205 ರನ್ ಜತೆಯಾಟವಾಡಿದೆ. ಇದೇ ವೇಳೆ ಭಾರತ 3 ಇನಿಂಗ್ಸ್​ಗಳಿಂದ 97 ರನ್ ಕೂಡಿಹಾಕಿದೆ.

    05: ವಿರಾಟ್ ಕೊಹ್ಲಿ ಕನಿಷ್ಠ ಒಂದು ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯ ಒಳಗೊಂಡ ಪ್ರವಾಸದಲ್ಲಿ ಒಂದೂ ಶತಕ ಸಿಡಿಸಲು ವಿಫಲರಾಗಿದ್ದು ಇದು 5ನೇ ಬಾರಿಯಾಗಿದೆ.

    ಭಾರತ ಪ್ರಥಮ ಇನಿಂಗ್ಸ್: 242

    ನ್ಯೂಜಿಲೆಂಡ್ ಮೊದಲ ಇನಿಂಗ್ಸ್: 73.1 ಓವರ್​ಗಳಲ್ಲಿ 235 (ಶನಿವಾರ ವಿಕೆಟ್ ನಷ್ಟವಿಲ್ಲದೆ 63)

    ಟಾಮ್ ಲಾಥಮ್ ಬಿ ಮೊಹಮದ್ ಶಮಿ 52

    ಟಾಮ್ ಬ್ಲಂಡೆಲ್ ಎಲ್​ಬಿಡಬ್ಲ್ಯು ಬಿ ಉಮೇಶ್ 30

    ವಿಲಿಯಮ್ಸನ್ ಸಿ ಪಂತ್ ಬಿ ಬುಮ್ರಾ 3

    ರಾಸ್ ಟೇಲರ್ ಸಿ ಉಮೇಶ್ ಬಿ ಜಡೇಜಾ 15

    ನಿಕೋಲ್ಸ್ ಸಿ ಕೊಹ್ಲಿ ಬಿ ಶಮಿ 14

    ವಾಟ್ಲಿಂಗ್ ಸಿ ಜಡೇಜಾ ಬಿ ಬುಮ್ರಾ 0

    ಗ್ರಾಂಡ್​ಹೋಮ್ ಬಿ ಜಡೇಜಾ 26

    ಸೌಥಿ ಸಿ ಪಂತ್ ಬಿ ಬುಮ್ರಾ 0

    ಜೇಮಿಸನ್ ಸಿ ಪಂತ್ ಬಿ ಶಮಿ 49

    ವ್ಯಾಗ್ನರ್ ಸಿ ಜಡೇಜಾ ಬಿ ಶಮಿ 21

    ಟ್ರೆಂಟ್ ಬೌಲ್ಟ್ ಔಟಾಗದೆ 1

    ಇತರ: 24. ವಿಕೆಟ್ ಪತನ: 1-66, 2-69, 3-109, 4-130, 5-133, 6-153, 7-153, 8-177, 9-228. ಬೌಲಿಂಗ್: ಬುಮ್ರಾ 22-5-62-3, ಉಮೇಶ್ ಯಾದವ್ 18-2-46-1, ಶಮಿ 23.1-3-81-4, ರವೀಂದ್ರ ಜಡೇಜಾ 10-2-22-2.

    ಭಾರತ ದ್ವಿತೀಯ ಇನಿಂಗ್ಸ್:

    36 ಓವರ್​ಗಳಲ್ಲಿ 6 ವಿಕೆಟ್​ಗೆ 90

    ಪೃಥ್ವಿ ಷಾ ಸಿ ಲಾಥಮ್ ಬಿ ಸೌಥಿ 14

    ಮಯಾಂಕ್ ಎಲ್​ಬಿಡಬ್ಲ್ಯು ಬಿ ಬೌಲ್ಟ್ 3

    ಚೇತೇಶ್ವರ ಪೂಜಾರ ಬಿ ಟ್ರೆಂಟ್ ಬೌಲ್ಟ್ 24

    ಕೊಹ್ಲಿ ಎಲ್​ಬಿಡಬ್ಲ್ಯು ಬಿ ಗ್ರಾಂಡ್​ಹೋಮ್14

    ಅಜಿಂಕ್ಯ ರಹಾನೆ ಬಿ ವ್ಯಾಗ್ನರ್ 9

    ಉಮೇಶ್ ಯಾದವ್ ಬಿ ಟ್ರೆಂಟ್ ಬೌಲ್ಟ್ 1

    ಹನುಮ ವಿಹಾರಿ ಬ್ಯಾಟಿಂಗ್ 5

    ರಿಷಭ್ ಪಂತ್ ಬ್ಯಾಟಿಂಗ್ 1

    ಇತರ: 19. ವಿಕೆಟ್ ಪತನ: 1-8, 2-26, 3-51, 4-72, 5-84, 6-89. ಬೌಲಿಂಗ್: ಟಿಮ್ ಸೌಥಿ 6-2-20-1, ಟ್ರೆಂಟ್ ಬೌಲ್ಟ್ 9-3-12-3, ಕೈಲ್ ಜೇಮಿಸನ್ 8-4-18-0, ಗ್ರಾಂಡ್​ಹೋಮ್ 5-3-3-1, ನೀಲ್ ವ್ಯಾಗ್ನರ್ 8-1-18-1.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts