More

    ಕರೊನಾ ಭೀತಿಯಿಂದ ರದ್ದುಗೊಂಡಿದ್ದ ಮ್ಯಾಂಚೆಸ್ಟರ್ ಟೆಸ್ಟ್ 2022ರಲ್ಲಿ ಮರುನಿಗದಿ

    ಲಂಡನ್: ಕರೊನಾ ಭೀತಿಯಿಂದಾಗಿ ಈ ತಿಂಗಳು ರದ್ದುಗೊಂಡ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯವನ್ನು ಭಾರತ-ಇಂಗ್ಲೆಂಡ್ ತಂಡಗಳು ಮುಂದಿನ ವರ್ಷದ ಜೂನ್-ಜುಲೈನಲ್ಲಿ ಆಡಲಿವೆ. ಪಂದ್ಯ ಮರುನಿಗದಿಪಡಿಸಿರುವುದನ್ನು ಬಿಸಿಸಿಐ ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗಳು (ಇಸಿಬಿ) ದೃಢಪಡಿಸಿವೆ. ಆದರೆ ಈ ಪಂದ್ಯ ಕಳೆದ ಸರಣಿಯ ಮುಂದುವರಿದ ಭಾಗವಾಗಿರುವುದೇ ಅಥವಾ ಪ್ರತ್ಯೇಕವಾದ ಏಕೈಕ ಟೆಸ್ಟ್ ಪಂದ್ಯವಾಗಿರುವುದೇ ಎಂಬುದನ್ನು ಖಚಿತಪಡಿಸಿಲ್ಲ.

    ಮ್ಯಾಂಚೆಸ್ಟರ್ ಟೆಸ್ಟ್ ದಿಢೀರ್ ರದ್ದುಗೊಂಡಿದ್ದರಿಂದ ಇಸಿಬಿಗೆ ಆಗಿರುವ ನಷ್ಟವನ್ನು ತುಂಬಿಕೊಡುವ ಸಲುವಾಗಿ ಬಿಸಿಸಿಐ ಈ ಪಂದ್ಯವನ್ನು ಆಡಲು ಸಮ್ಮತಿಸಿದೆ. ಪೂರ್ವ ನಿಗದಿಯ ವೇಳಾಪಟ್ಟಿಯ ಪ್ರಕಾರ ಭಾರತ ತಂಡ ಮುಂದಿನ ವರ್ಷ ಜೂನ್-ಜುಲೈ ತಿಂಗಳ ಇಂಗ್ಲೆಂಡ್ ಪ್ರವಾಸದಲ್ಲಿ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಬೇಕಾಗಿದೆ. ಅದರ ಜತೆಯಲ್ಲೇ ಇದೀಗ ಏಕೈಕ ಟೆಸ್ಟ್ ಪಂದ್ಯವೂ ನಿಗದಿಯಾಗಿದೆ.

    ಕಳೆದ ಪ್ರವಾಸದ ಟೆಸ್ಟ್ ಸರಣಿಯ ಕೊನೇ ಪಂದ್ಯ ರದ್ದುಗೊಳ್ಳುವುದಕ್ಕೆ ಮುನ್ನ ಭಾರತ 2-1 ಮುನ್ನಡೆ ಸಾಧಿಸಿತ್ತು. ಆ ಸರಣಿಯನ್ನು ಅಲ್ಲಿಗೆ ಮುಕ್ತಾಯಗೊಳಿಸಿ ಮುಂದಿನ ಪ್ರವಾಸದ ವೇಳೆ ಒಂದು ಟೆಸ್ಟ್‌ಗೆ ಬದಲಾಗಿ 2 ಹೆಚ್ಚುವರಿ ಟಿ20 ಪಂದ್ಯಗಳನ್ನು ಆಡುವ ಪ್ರಸ್ತಾಪವನ್ನು ಬಿಸಿಸಿಐ ಇಟ್ಟಿತ್ತು. ಈ ಮೂಲಕ ಟೆಸ್ಟ್ ಪಂದ್ಯ ರದ್ದುಗೊಂಡಿದ್ದರಿಂದ ಆಗಿರುವ ಆರ್ಥಿಕ ನಷ್ಟವನ್ನು ತುಂಬಿಕೊಡಲು ಮುಂದಾಗಿತ್ತು. ಆದರೆ ಇದಕ್ಕೆ ಇಸಿಬಿ ಒಪ್ಪಿಕೊಂಡಿಲ್ಲ ಎನ್ನಲಾಗಿದೆ.

    ಈ ಏಕೈಕ ಟೆಸ್ಟ್ ಪಂದ್ಯವು, ಭಾರತ 2-1 ಮುನ್ನಡೆಯಲ್ಲಿರುವ ಕಳೆದ ಸರಣಿಯ ಭಾಗವೇ ಆಗಿದ್ದರೆ, ನಿರ್ಣಾಯಕ ಪಂದ್ಯದ ಮಹತ್ವವನ್ನು ಪಡೆಯಲಿದೆ. ಇಲ್ಲದಿದ್ದರೆ ಭಾರತ ಕಳೆದ ಸರಣಿಯನ್ನು 2-1ರಿಂದ ಗೆಲ್ಲಲಿದ್ದು, ಏಕೈಕ ಟೆಸ್ಟ್ ಪಂದ್ಯವನ್ನು ಜಯಿಸುವ ಮೂಲಕ ಸೇಡು ತೀರಿಸಿಕೊಳ್ಳುವ ಅವಕಾಶ ಆತಿಥೇಯ ಆಂಗ್ಲರಿಗೆ ಲಭಿಸಲಿದೆ. ಈ ಬಗ್ಗೆ ಇನ್ನೂ ಉಭಯ ಮಂಡಳಿಗಳು ಒಮ್ಮತದ ನಿರ್ಧಾರಕ್ಕೆ ಬಂದಿಲ್ಲ ಎನ್ನಲಾಗಿದೆ. ಈ ವಿಷಯದ ಇತ್ಯರ್ಥಕ್ಕೆ ಐಸಿಸಿ ಮಧ್ಯಪ್ರವೇಶದ ಸಾಧ್ಯತೆಯೂ ಇದೆ.

    2021ರ ಮೊದಲ ಪ್ರಶಸ್ತಿ ಗೆಲುವಿನ ಸನಿಹದಲ್ಲಿ ಸಾನಿಯಾ ಮಿರ್ಜಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts