More

    ಭಾರತಕ್ಕೆ ನ್ಯೂಜಿಲೆಂಡ್ ವೇಗಿಗಳ ಟೆಸ್ಟ್, ಇಂದಿನಿಂದ ವೆಲ್ಲಿಂಗ್ಟನ್​ನಲ್ಲಿ ಮೊದಲ ಟೆಸ್ಟ್ | ರಾಸ್ ಟೇಲರ್​ಗೆ 100ನೇ ಪಂದ್ಯ

    ವೆಲ್ಲಿಂಗ್ಟನ್: ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್ ನಿಟ್ಟಿನಲ್ಲಿ ಭಾರತದ ಮಟ್ಟಿಗೆ ಬಹುಮುಖ್ಯವಾಗಿರುವ ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಶುಕ್ರವಾರ ಚಾಲನೆ ಸಿಗಲಿದೆ. ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್​ಗೆ ವೆಲ್ಲಿಂಗ್ಟನ್​ನ ಬೇಸಿನ್ ರಿಸರ್ವ್ ಸ್ಟೇಡಿಯಂ ಸಜ್ಜಾಗಿದ್ದು, ಸಮಪ್ರಮಾಣದ ಪೈಪೋಟಿ ಏರ್ಪಡಲಿರುವ ಟೆಸ್ಟ್ ಸರಣಿ ಇದಾಗಿರಲಿದೆ. ಅದಕ್ಕೆ ಕಾರಣ ವಿಶ್ವ ಟೆಸ್ಟ್ ರ್ಯಾಂಕಿಂಗ್​ನ ಬ್ಯಾಟ್ಸ್​ಮನ್ ಹಾಗೂ ಬೌಲರ್​ಗಳ ಪಟ್ಟಿಯಲ್ಲಿ ಅಗ್ರ 20 ರ್ಯಾಂಕ್​ಗಳಲ್ಲಿರುವ 8 (5 ಬ್ಯಾಟ್ಸ್​ಮನ್, 3 ಬೌಲರ್) ಆಟಗಾರರು ಈ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ.

    ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ನಲ್ಲಿ ಈವರೆಗೆ ಆಡಿರುವ ಏಳೂ ಪಂದ್ಯಗಳಲ್ಲಿ ಅಜೇಯವಾಗಿರುವ ಭಾರತ ತಂಡ, ನ್ಯೂಜಿಲೆಂಡ್ ತಂಡದ ವೇಗದ ಬೌಲರ್​ಗಳಿಂದ ಟೆಸ್ಟ್ ಸರಣಿಯಲ್ಲಿ ದೊಡ್ಡ ಮಟ್ಟದ ಸವಾಲನ್ನು ಎದುರಿಸಲಿದೆ. ಹಾಲಿ ಪ್ರವಾಸದಲ್ಲಿ ಟಿ20 ಸರಣಿಯನ್ನು ಕ್ಲೀನ್​ಸ್ವೀಪ್ ಮಾಡಿದ್ದ ಭಾರತ ತಂಡ ಏಕದಿನ ಸರಣಿಯಲ್ಲಿ ವೈಟ್​ವಾಷ್ ಅವಮಾನಕ್ಕೆ ತುತ್ತಾಗಿತ್ತು. ಮುಂದಿನ ಎರಡು ವಾರದಲ್ಲಿ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0, 0-2, 1-0, 0-1, 1-1 ಹಾಗೂ 0-0 ಹೀಗೆ ಎಲ್ಲ ರೀತಿಯ ಸ್ಕೋರ್​ಲೈನ್​ನ ಸಾಧ್ಯತೆಗಳೂ ಇವೆ. ವಿಶ್ವದ ಎರಡು ಅಗ್ರ ವೇಗದ ಬೌಲಿಂಗ್ ವಿಭಾಗವನ್ನು ಹೊಂದಿರುವ ತಂಡಗಳು ಮುಖಾಮುಖಿ ಆಗಲಿರುವ ಕಾರಣ ಎಲ್ಲರಲ್ಲೂ ಸರಣಿಯ ಬಗ್ಗೆ ಕುತೂಹಲವಿದೆ. ವಿಶ್ವದ ಯಾವುದೇ ಮೈದಾನದಲ್ಲಿ ಪೈಪೋಟಿ ನೀಡುವಂಥ ಬೌಲಿಂಗ್ ವಿಭಾಗವನ್ನು ಭಾರತ ಸದ್ಯ ತನ್ನಲ್ಲಿ ಹೊಂದಿದೆ. ಮೊದಲ ಇನಿಂಗ್ಸ್​ಗಿಂತ ಹೆಚ್ಚಾಗಿ 2ನೇ ಇನಿಂಗ್ಸ್​ನ ವೇಳೆ ಇಲ್ಲಿನ ಪಿಚ್​ಗಳು ಭಾರತದ ಬೌಲರ್​ಗಳಿಗೆ ಹೆಚ್ಚಿನ ನೆರವೀಯಬಹುದು.

    ಭಾರತ, ನ್ಯೂಜಿಲೆಂಡ್ 57 ಟೆಸ್ಟ್​ನಲ್ಲಿ ಮುಖಾಮುಖಿಯಾಗಿದ್ದು, ಭಾರತ ತಂಡ 21ರಲ್ಲಿ ಗೆಲುವು, 10 ಸೋಲು ಹಾಗೂ 26 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಪ್ರಸ್ತುತ ಭಾರತ ತಂಡ ಇರುವ ಫಾರ್ಮ್​ನಲ್ಲಿ ವಿಶ್ವದ ಯಾವುದೇ ದೇಶದಲ್ಲಿ ನಡೆಯುವ ಟೆಸ್ಟ್ ಸರಣಿಯಲ್ಲಿ ಫೇವರಿಟ್ ಆಗಿ ಕಣಕ್ಕಿಳಿಯಬಹುದು. ಆದರೆ, ನ್ಯೂಜಿಲೆಂಡ್​ನಲ್ಲಿ ಭಾರತ ಫೇವರಿಟ್ ಎಂದು ಹೇಳಲು ಬರುವುದಿಲ್ಲ. ಕಿವೀಸ್ ತಂಡ ತವರಿನಲ್ಲಿ ಆಡಿದ ಕಳೆದ 14 ಟೆಸ್ಟ್ ಸರಣಿಗಳ ಪೈಕಿ ಕೇವಲ 2 ಪಂದ್ಯಗಳಲ್ಲಿ ಮಾತ್ರವೇ ಸೋತಿದೆ. ತವರಿನಲ್ಲಿ ಭಾರತ ಹೊರತಾಗಿ ಇಂಥ ಅತ್ಯುತ್ತಮ ದಾಖಲೆ ಹೊಂದಿರುವ ತಂಡ ನ್ಯೂಜಿಲೆಂಡ್. ಇನ್ನೊಂದೆಡೆ ಭಾರತ ತಂಡ 2018ರಲ್ಲಿ ಇಂಗ್ಲೆಂಡ್ ವಿರುದ್ಧ 1-4 ರಿಂದ ಸರಣಿ ಸೋಲು ಕಂಡ ಬಳಿಕ ಯಾವುದೇ ದೇಶದಲ್ಲಿ ಸರಣಿ ಸೋಲನ್ನು ಎದುರಿಸಿಲ್ಲ.-ಪಿಟಿಐ/ಏಜೆನ್ಸೀಸ್

    ಟೇಲರ್ ಅಪರೂಪದ ದಾಖಲೆ: ನ್ಯೂಜಿಲೆಂಡ್​ನ ಹಿರಿಯ ಆಟಗಾರ ರಾಸ್ ಟೇಲರ್, 100 ಟೆಸ್ಟ್ ಪಂದ್ಯವಾಡಿದ ಸಾಧನೆ ಮಾಡಲಿದ್ದಾರೆ. ಆ ಮೂಲಕ ಕ್ರಿಕೆಟ್​ನ ಮೂರು ಮಾದರಿಯಲ್ಲೂ 100 ಪಂದ್ಯವಾಡಿದ ವಿಶ್ವದ ಮೊದಲ ಆಟಗಾರ ಎನ್ನುವ ಗೌರವಕ್ಕೆ ಟೇಲರ್ ಪಾತ್ರರಾಗಲಿದ್ದಾರೆ. ಕಿವೀಸ್ ಪರವಾಗಿ 100 ಟೆಸ್ಟ್ ಆಡಿದ ನಾಲ್ಕನೇ ಆಟಗಾರ ಇವರಾಗಲಿದ್ದಾರೆ. ಡೇನಿಯಲ್ ವೆಟೋರಿ ಗರಿಷ್ಠ 112 ಪಂದ್ಯಗಳನ್ನು ಆಡಿದ್ದರೆ, ಸ್ಟೀಫನ್ ಫ್ಲೆಮಿಂಗ್ (111) ಹಾಗೂ ಬ್ರೆಂಡನ್ ಮೆಕ್ಕಲಂ (101) ನಂತರದ ಸ್ಥಾನದಲ್ಲಿದ್ದಾರೆ.

    ಪಿಚ್ ರಿಪೋರ್ಟ್: ಮೋಡ ಮುಸುಕಿದ ವಾತಾವರಣ ವೆಲ್ಲಿಂಗ್ಟನ್​ನಲ್ಲಿದ್ದರೂ, ಮಳೆಯ ಸಾಧ್ಯತೆ ಕಡಿಮೆ. 22 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಮೊದಲ ಎರಡು ದಿನದಾಟದಲ್ಲಿ ವೇಗದ ಬೌಲರ್​ಗಳೊಂದಿಗೆ ಬ್ಯಾಟಿಂಗ್ ಸ್ನೇಹಿಯಾಗಿಯೂ ಪಿಚ್ ವರ್ತಿಸಲಿದೆ. ಒಟ್ಟಾರೆ ಪಂದ್ಯದಲ್ಲಿ ಸ್ಪಿನ್ನರ್​ಗಳಿಂತ ಹೆಚ್ಚಾಗಿ ವೇಗದ ಬೌಲರ್​ಗಳಿಗೆ ನೆರವು ಜಾಸ್ತಿ.
    ಭಾರತ: ಗಾಯದಿಂದ ಚೇತರಿಸಿಕೊಂಡು ಇಶಾಂತ್ ಶರ್ಮ ತಂಡಕ್ಕೆ ಮರಳಿರುವುದು ಪ್ಲಸ್ ಪಾಯಿಂಟ್. ಗುರುವಾರ ಇಶಾಂತ್ ಅಭ್ಯಾಸದಲ್ಲಿ ಭಾಗಿಯಾಗಿಲ್ಲ. ಅವರು ಫಿಟ್ ಆಗಿದ್ದಲ್ಲಿ ಮಾತ್ರವೇ ತಂಡಕ್ಕೆ ಆಯ್ಕೆಯಾಗಲಿದ್ದು, ಇಲ್ಲದೇ ಇದ್ದಲ್ಲಿ ಉಮೇಶ್ ಯಾದವ್ ಕಣಕ್ಕಿಳಿಯಲಿದ್ದಾರೆ. ಪೃಥ್ವಿ ಷಾ ಹಾಗೂ ಮಯಾಂಕ್ ಅಗರ್ವಾಲ್ ಆರಂಭಿಕ ಜೋಡಿಯಾಗಿ ಆಡುವುದು ಖಚಿತಗೊಂಡಿದೆ. ವಿಕೆಟ್ ಕೀಪಿಂಗ್​ನಲ್ಲಿ ರಿಷಭ್ ಪಂತ್ ಹಾಗೂ ವೃದ್ಧಿಮಾನ್ ಸಾಹ ನಡುವೆ ಯಾರು ಆಡಲಿದ್ದಾರೆ ಎನ್ನುವ ಗೊಂದಲವಿದೆ. ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ಇರಲಿದ್ದಾರೆ ಎಂದು ಕೊಹ್ಲಿ ಹೇಳಿರುವ ಕಾರಣ, ಆರ್.ಅಶ್ವಿನ್ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಫೇವರಿಟ್ ಆಗಿದ್ದಾರೆ. ಬೇಸಿನ್ ರಿಸರ್ವ್ ಮೈದಾನದಲ್ಲಿ ಬೀಸುವ ಗಾಳಿ ಅಶ್ವಿನ್ ಬೌಲಿಂಗ್​ಗೆ ಹೆಚ್ಚಿನ ಮಟ್ಟದಲ್ಲಿ ನೆರವು ನೀಡಬಲ್ಲದು.

    ಸಂಭಾವ್ಯ ತಂಡ: ಮಯಾಂಕ್ ಅಗರ್ವಾಲ್, ಪೃಥ್ವಿ ಷಾ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಭ್ ಪಂತ್ (ವಿ.ಕೀ), ಆರ್.ಅಶ್ವಿನ್, ಇಶಾಂತ್ ಶರ್ಮ/ಉಮೇಶ್ ಯಾದವ್, ಮೊಹಮದ್ ಶಮಿ, ಜಸ್​ಪ್ರೀತ್ ಬುಮ್ರಾ.

    ನ್ಯೂಜಿಲೆಂಡ್: ಅಪ್ಪನಾಗುವ ಸಂಭ್ರಮದಲ್ಲಿರುವ ನೀಲ್ ವ್ಯಾಗ್ನರ್ ಮೊದಲ ಪಂದ್ಯಕ್ಕೆ ಲಭ್ಯವಿಲ್ಲ. ಇದರಿಂದಾಗಿ ನ್ಯೂಜಿಲೆಂಡ್ ಪರವಾಗಿ ಟೆಸ್ಟ್ ಆಡಿದ 279ನೇ ಆಟಗಾರ ಎನಿಸಿಕೊಂಡು ಕೈಲ್ ಜೇಮಿಸನ್ ಪದಾರ್ಪಣೆ ಮಾಡಲಿದ್ದಾರೆ. ಮ್ಯಾಟ್ ಹೆನ್ರಿಯನ್ನು ಆಡುವ ಬಳಗದಿಂದ ಕೈಬಿಡುವ ನಿರ್ಧಾರದ ಮೂಲಕ, ವ್ಯಾಗ್ನರ್​ರಂಥ ಬೌಲರ್​ಅನ್ನೇ ತಂಡ ಬಯಸಿದೆ ಎನ್ನುವುದನ್ನು ತಿಳಿಸಿದೆ. ಇತ್ತೀಚಿನ ಟೆಸ್ಟ್​ಗಳಲ್ಲಿ ನೀಲ್ ವ್ಯಾಗ್ನರ್ 2ನೇ ಇನಿಂಗ್ಸ್​ನಲ್ಲಿ ತೋರಿದ ಬೌಲಿಂಗ್ ನಿರ್ವಹಣೆ ಕಿವೀಸ್ ಜಯಕ್ಕೆ ಕಾರಣವಾಗಿದೆ. ಬೌನ್ಸರ್ ಎಸೆತಗಳು ಹಾಗೂ ಆಕರ್ಷಕ ಲೆಂಥ್ ಬೌಲಿಂಗ್ ಮೂಲಕ ನೀಳಕಾಯದ ಜೇಮಿಸನ್ ತಂಡಕ್ಕೆ ನೆರವಾಗಬಲ್ಲರು. ಆದರೆ, ಪಂದ್ಯದ ಆರಂಭಕ್ಕೂ ಮುನ್ನ ಪಿಚ್ ಹೇಗೆ ಇರಲಿದೆ ಎನ್ನುವ ಆಧಾರದ ಮೇಲೆ ಡೇರಿಲ್ ಮಿಚೆಲ್ ಹಾಗೂ ಅಜಾಜ್ ಪಟೇಲ್ ನಡುವೆ ಆಯ್ಕೆ ನಡೆಯಲಿದೆ. ಅಜಾಜ್ ಪಟೇಲ್ ಕಿವೀಸ್ ತಂಡದಲ್ಲಿರುವ ಏಕೈಕ ಸ್ಪಿನ್ನರ್ ಎನಿಸಿದ್ದಾರೆ.

    ಸಂಭಾವ್ಯ ತಂಡ: ಟಾಮ್ ಲಾಥಮ್ ಟಾಮ್ ಬ್ಲಂಡೆಲ್, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಬಿಜೆ ವ್ಯಾಟ್ಲಿಂಗ್ (ವಿ.ಕೀ), ಕಾಲಿನ್ ಡಿ ಗ್ರಾಂಡ್​ಹೊಮ್ ಡೇರಿಲ್ ಮಿಚೆಲ್/ಅಜಾಜ್ ಪಟೇಲ್, ಟಿಮ್ ಸೌಥಿ, ಕೈಲ್ ಜೇಮಿಸನ್, ಟ್ರೆಂಟ್ ಬೌಲ್ಟ್.‘

    ನ್ಯೂಜಿಲೆಂಡ್​ನಲ್ಲಿ ಆಡುವಾಗ ಆಟದಲ್ಲಿ ಬಹಳ ಶಿಸ್ತು ಬೇಕಾಗುತ್ತದೆ. ದಿನದ ಆರಂಭದಿಂದ ಕೊನೆಯವರೆಗೂ ಒಂದೇ ರೀತಿಯಲ್ಲಿ ದಾಳಿ ನಡೆಸಬಲ್ಲ ಬೌಲರ್​ಗಳು ಅವರಲ್ಲಿದ್ದಾರೆ. ಉತ್ಸಾಹಿ ಫೀಲ್ಡರ್​ಗಳೂ ಕೂಡ ಆ ತಂಡದಲ್ಲಿದ್ದಾರೆ. ನ್ಯೂಜಿಲೆಂಡ್​ನಲ್ಲಿ ಆಡುವಾಗ ಫೀಲ್ಡ್​ನಲ್ಲಿ ಇನ್ನಷ್ಟು ಏಕಾಗ್ರತೆಯಿಂದ ಆಡಬೇಕಾಗುತ್ತದೆ.
    ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts