More

    ಡಿಜಿಟಲ್ ಒಲವು; ಆನ್​ಲೈನ್ ವ್ಯವಹಾರದಲ್ಲಿ ಭಾರತ ಮುಂದೆ…

    ಕಪ್ಪುಹಣ ನಿಯಂತ್ರಣ ಮತ್ತ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2008ರ ನವೆಂಬರ್​ನಲ್ಲಿ 500 ರೂ. ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿತ್ತು. ಈ ಕ್ರಮದ ಬಗ್ಗೆ ಈಗಲೂ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಪರ-ವಿರೋಧ ಚರ್ಚೆ ನಡೆಯುತ್ತಿದೆ ಎಂಬುದು ಬೇರೆ ಮಾತು. ಆ ಸಂದರ್ಭದಲ್ಲಿ, ನಗದು ವ್ಯವಹಾರವನ್ನು ಕಡಿಮೆ ಮಾಡಿ ಡಿಜಿಟಲ್ ವಹಿವಾಟಿಗೆ ಹೆಚ್ಚು ಒತ್ತು ನೀಡಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನರಿಗೆ ಕರೆನೀಡಿದ್ದರು. ಆ ನಂತರದ ದಿನಗಳಲ್ಲಿ ಕೇಂದ್ರ ಸರ್ಕಾರ ಡಿಜಿಟಲ್ ವ್ಯವಹಾರಕ್ಕೆ ಉತ್ತೇಜನ ನೀಡುವ ಕ್ರಮಗಳನ್ನು ಸಹ ಪ್ರಕಟಿಸುತ್ತ ಬಂದಿದೆ. ಅಲ್ಲದೆ, ನಗದು ವ್ಯವಹಾರಕ್ಕೆ 2 ಲಕ್ಷ ರೂ.ಗಳ ಮಿತಿಯನ್ನೂ ವಿಧಿಸಿದೆ. ಇದೆಲ್ಲದರ ಪರಿಣಾಮ ಕಂಡುಬರುತ್ತಿದ್ದು, ಕರೊನಾ ಸಂಕಷ್ಟದ ಸಂದರ್ಭದಲ್ಲಿಯೂ ಭಾರತ 2020ರಲ್ಲಿ ಗರಿಷ್ಠ ರಿಯಲ್ ಟೈಮ್ ಆನ್​ಲೈನ್ ವಹಿವಾಟು ದಾಖಲಿಸಿ ಜಾಗತಿಕವಾಗಿ ಮೊದಲ ಸ್ಥಾನದಲ್ಲಿದೆ.

    ಈ ವರ್ಷದಲ್ಲಿ ಭಾರತ 25.50 ಶತಕೋಟಿ ರಿಯಲ್ ಟೈಮ್ ಆನ್​ಲೈನ್ ವಹಿವಾಟನ್ನು ದಾಖಲಿಸಿದೆ. ಚೀನಾ ಎರಡನೇ ಸ್ಥಾನದಲ್ಲಿದ್ದು, 15.70 ಶತಕೋಟಿ ವಹಿವಾಟು ಅಲ್ಲಿ ಆಗಿದೆ. ದಕ್ಷಿಣ ಕೊರಿಯಾ 6 ಶತಕೋಟಿ, ಥಾಯ್ಲೆಂಡ್ 5.20 ಶತಕೋಟಿ, ಬ್ರಿಟನ್ 2.80 ಶತಕೋಟಿ, ಅಮೆರಿಕ 1.20 ಶತಕೋಟಿ ವಹಿವಾಟನ್ನು ದಾಖಲಿಸಿವೆ. 2020ರಲ್ಲಿ ಇನ್​ಸ್ಟಾ ಪೇಮೆಂಟಿನ ಒಟ್ಟು ವಹಿವಾಟಿನಲ್ಲಿ ಭಾರತದ ಪಾಲು ಶೇ.15.6 ಮತ್ತು ಇತರ ಎಲೆಕ್ಟ್ರಾನಿಕ್ ಪೇಮೆಂಟಿನ ಶೇ.22 ಆಗಿದೆ ಎಂದು ಬ್ರಿಟನ್​ನ ಪೇಮೆಂಟ್ ಸಿಸ್ಟಮ್ ಕಂಪನಿ ಎಸಿಐ ವರ್ಲ್ಡ್​ವೈಡ್ ತನ್ನ ವರದಿಯಲ್ಲಿ ಹೇಳಿದೆ. ಭಾರತದಲ್ಲಿ ನಗದು ವಹಿವಾಟು ಪ್ರಮಾಣ ಶೇ.61ರಷ್ಟು ಇದೆ ಎಂದು ಈ ವರದಿ ತಿಳಿಸಿದೆ. 2025ರ ಹೊತ್ತಿಗೆ ಈ ಚಿತ್ರಣದಲ್ಲಿ ಒಂದಷ್ಟು ಬದಲಾವಣೆಗಳನ್ನು ವರದಿ ಮುನ್ನಂದಾಜಿಸಿದೆ. ಆ ಪ್ರಕಾರ, ನಗದು ವಹಿವಾಟಿನ ಪ್ರಮಾಣ ಆ ಸಮಯಕ್ಕೆ ಶೇ.28 ಆಗಿರಲಿದೆ ಎಂದು ವರದಿ ಹೇಳಿರುವುದು ಭಾರತದಲ್ಲಿ ಡಿಜಿಟಲ್ ವ್ಯವಹಾರ ಮತ್ತಷ್ಟು ಹೆಚ್ಚುವುದರ ಸ್ಪಷ್ಟ ಸೂಚನೆ.

    ಸಾರ್ವಜನಿಕ ವ್ಯವಹಾರದಲ್ಲಿ ನಗದು ಬಳಕೆ ಕಡಿಮೆಯಾದಷ್ಟು ಅಲ್ಲಿ ಪಾರದರ್ಶಕತೆ ಹೆಚ್ಚುತ್ತದೆ ಮತ್ತು ನಗದು ಬಳಕೆ ಹೆಚ್ಚಿದಷ್ಟು ಅಲ್ಲಿ ಅಕ್ರಮಕ್ಕೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚು ಎಂಬುದರತ್ತ ಮಾರುಕಟ್ಟೆ ತಜ್ಞರು ಬೊಟ್ಟುಮಾಡುತ್ತಾರೆ. ಇದಲ್ಲದೆ, ತಂತ್ರಜ್ಞಾನವನ್ನು ಸರಿಯಾಗಿ ಅರಿತಲ್ಲಿ, ಮತ್ತು ಅದಕ್ಕೆ ಸೂಕ್ತ ಸಾಧನ ಅಂದರೆ ಮೊಬೈಲ್ ಇದ್ದಲ್ಲಿ ಡಿಜಿಟಲ್ ವ್ಯವಹಾರ ನಡೆಸುವುದು ಬಹಳ ಸುಲಭ. ಈಗ ಮೊಬೈಲ್ ಫೋನ್ ಬಹುತೇಕ ಎಲ್ಲರ ಕೈಲೂ ಇರುತ್ತದೆ ಎಂಬುದು ನಿಜವಾದರೂ, ಹಳ್ಳಿಗಳು ಹೆಚ್ಚಿಗೆ ಇರುವ ಮತ್ತು ತಂತ್ರಜ್ಞಾನದ ಮಾಹಿತಿ ಇಲ್ಲದಿರುವ ಜನರು ನಮ್ಮಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ ಎಂಬುದನ್ನೂ ಮರೆಯಬಾರದು. ಅದೇ ಸಂದರ್ಭದಲ್ಲಿ ಆನ್​ಲೈನ್ ಅಕ್ರಮಗಳು ಕೂಡ ಹೆಚ್ಚುತ್ತಿರುವುದನ್ನು ಕಡೆಗಣಿಸಲಾಗದು. ಹೀಗಾಗಿ ಜನರನ್ನು ಡಿಜಿಟಲ್ ಸಾಕ್ಷರರಾಗಿಸುವತ್ತ ಇನ್ನಷ್ಟು ಪ್ರಯತ್ನಗಳು ನಡೆಯಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts