More

    ಕಾಂಗ್ರೆಸ್‌ನ ಇಂಡಿಯಾ ಒಕ್ಕೂಟ ದೇಶಕ್ಕೆ ಮಾರಕ

    ರಬಕವಿ-ಬನಹಟ್ಟಿ: ಪ್ರಧಾನಿ ಸ್ಥಾನಕ್ಕೆ ವ್ಯಕ್ತಿಯನ್ನೇ ಆಯ್ಕೆ ಮಾಡದ ಇಂಡಿಯಾ ಒಕ್ಕೂಟದಲ್ಲಿ ಇಂದಿಗೂ ಹಗ್ಗಜಗ್ಗಾಟ ಮುಂದುವರಿದಿದೆ. ಕಾಂಗ್ರೆಸ್‌ನ ಇಂಡಿಯಾ ಒಕ್ಕೂಟ ದೇಶಕ್ಕೆ ಮಾರಕವಾಗಿದ್ದು, ಎಂದಿಗೂ ಗೆಲ್ಲಿಸಬೇಡಿಯೆಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

    ಅವಳಿ ನಗರದ ದಾನೇಶ್ವರಿ ಸಮುದಾಯ ಭವನದಲ್ಲಿ ಗುರುವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್‌ನಲ್ಲಿ ಕೇವಲ ಗಾಂಧಿ, ಖರ್ಗೆ ಸೇರಿ ಪರಿವಾರದೊಂದಿಗೆ ವೈಯಕ್ತಿಕ ರಾಜಕೀಯವಾಗಿದೆ. ಜನಸಾಮಾನ್ಯರ ಮಧ್ಯೆ ರಾಜಕೀಯ ಎಳೆದು ತರುವಲ್ಲಿ ಬಿಜೆಪಿಯ ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆ ಅಪಾರವಾಗಿದ್ದು, ಇದೀಗ ಎಂದೂ ಎಲ್ಲೂ ಗುರುತಿಸದ ವ್ಯಕ್ತಿಗಳನ್ನು ಅಚ್ಚರಿಯೊಂದಿಗೆ ರಾಜಕೀಯಕ್ಕೆ ತಂದು ದೇಶವನ್ನಾಳಲು ಸಾಮಾನ್ಯ ಪ್ರಜೆಯಿಂದಲೂ ಸಾಧ್ಯ ಎಂದು ತೋರಿಸುವಲ್ಲಿ ಮೋದಿ ಮೋಡಿ ಮಾಡಿದ್ದಾರೆ ಎಂದರು.

    ಕೇಂದ್ರ ಸರ್ಕಾರ ನಮ್ಮದಾದರೆ 20 ಗ್ಯಾರಂಟಿಗಳನ್ನು ನೀಡಿರುವ ಕಾಂಗ್ರೆಸ್ ನೇತೃತ್ವದ ರಾಹುಲ್ ಗಾಂಧಿ, ಮೊದಲು ಎಷ್ಟು ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದಾರೆಂಬುದನ್ನು ನೋಡಬೇಕಿದೆ. ಕೇವಲ 217 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ. ಸರ್ಕಾರ ರಚನೆಗೆ ಕನಿಷ್ಠ 276 ಬೇಕು. ಹೀಗಿರುವಾಗ ಶೇ.40 ರಷ್ಟು ಮಾತ್ರ ಕಣದಲ್ಲಿದ್ದು, ಗ್ಯಾರಂಟಿಗಳ ಹೊಳೆ ಹರಿಸುತ್ತಿರುವುದನ್ನು ಜನ ನಂಬುತ್ತಾರೆಯೇ? ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು.

    ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಸೌಮ್ಯ ಹಾಗೂ ಕ್ರಿಯಾಶೀಲ ವ್ಯಕ್ತಿಯಾಗಿದ್ದು, 5ನೇ ಬಾರಿ ಗೆಲ್ಲಿಸುವ ಮೂಲಕ ಜಿಲ್ಲೆಯ ಹೊಸ ದಾಖಲೆ ತರುವಂತೆ ಅಣ್ಣಾಮಲೈ ಮನವಿ ಮಾಡಿದರು.

    ಶಾಸಕ ಸಿದ್ದು ಸವದಿ ಮಾತನಾಡಿ, ಗದ್ದಿಗೌಡರಿಗೆ ತೇರದಾಳ ಕ್ಷೇತ್ರದಿಂದ ಸತತ ಹೆಚ್ಚಿನ ಮತಗಳ ಅಂತರದ ಗೆಲುವಿಗೆ ಮೊದಲ ಪ್ರಾಶಸ್ತ್ಯ ಪಡೆದಿದೆ. ಈ ಬಾರಿಯೂ ಅಂದಾಜು 40 ಸಾವಿರ ಮತಗಳ ಅಂತರದ ಗೆಲುವು ಕ್ಷೇತ್ರವೊಂದರಿಂದಲೇ ಆಗಲಿದೆ ಎಂದರು.

    ಶಾಸಕ ಧೀರಜ್ ಮುನಿರಾಜು ಮಾತನಾಡಿ, ಕೇವಲ ಅಲ್ಪಸಂಖ್ಯಾತರ ಓಲೈಕೆಯಿಂದ ರಾಜಕಾರಣ ನಡೆಸುತ್ತಿರುವ ಕಾಂಗ್ರೆಸ್‌ಗೆ ಮತ ನೀಡುವುದು ದೇಶದ ವಿರುದ್ಧ ಮತ ನೀಡಿದಂತೆ ಎಂದರಲ್ಲದೆ, ಸಾಮಾನ್ಯ ಕಾರ್ಯಕರ್ತರ ಹಾಗೂ ರಾಜಕೀಯ ಅನುಭವ ಹೊಂದಿರದ ವಿದ್ಯಾವಂತ ಯುವಕರಿಗೂ ಅವಕಾಶ ಕಲ್ಪಿಸುವಲ್ಲಿ ಬಿಜೆಪಿ ಕಾರಣವಾಗಿದೆ. ಜನಸಾಮಾನ್ಯರ ಕನಸು ನನಸಾಗಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು.

    ಮುಖಂಡರಾದ ಡಿ.ಆರ್. ಪಾಟೀಲ, ಬಸವರಾಜ ತೆಗ್ಗಿ, ಪ್ರಭು ಬಿಳ್ಳೂರ, ಸುರೇಶ ಚಿಂಡಕ, ಮಹಾವೀರ ದಾನಿಗೊಂಡ, ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ಶ್ರೀಶೈಲ ಬೀಳಗಿ, ಪುಂಡಲೀಕ ಪಾಲಭಾಂವಿ, ಸವಿತಾ ಹೊಸೂರ, ಧರೆಪ್ಪ ಉಳ್ಳಾಗಡ್ಡಿ, ಸಂಜಯ ತೆಗ್ಗಿ, ಸಿದಗಿರೆಪ್ಪ ಸುಂಕದ, ವರ್ಧಮಾನ ಕೋರಿ, ನಂದು ಗಾಯಕವಾಡ, ಲಕ್ಕಪ್ಪ ಪಾಟೀಲ, ಸುರೇಶ ಅಕ್ಕಿವಾಟ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts