More

    ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೇರಿದ ಭಾರತ

    ಭುವನೇಶ್ವರ: ಹಾಲಿ ಚಾಂಪಿಯನ್ ಹಾಗೂ ಆತಿಥೇಯ ಭಾರತ ತಂಡ ಜೂನಿಯರ್ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸೆಮಿಫೈನಲ್‌ಗೆ ದಿಟ್ಟವಾಗಿ ಮುನ್ನಡೆದಿದೆ. ಶರ್ದಾನಂದ ತಿವಾರಿ (21ನೇ ನಿಮಿಷ) ಸಿಡಿಸಿದ ಗೋಲಿನ ನೆರವಿನಿಂದ ಭಾರತ ತಂಡ ಕ್ವಾರ್ಟರ್​ಫೈನಲ್ ಪಂದ್ಯದಲ್ಲಿ ಯುರೋಪಿಯನ್ ದೈತ್ಯ ಬೆಲ್ಜಿಯಂ ತಂಡವನ್ನು 1-0ಯಿಂದ ಮಣಿಸಿತು. ಶುಕ್ರವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಭಾರತ ತಂಡಕ್ಕೆ ಬಲಿಷ್ಠ ಜರ್ಮನಿ ತಂಡದ ಸವಾಲು ಎದುರಾಗಲಿದೆ.

    ಕಳಿಂಗಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಬಲಿಷ್ಠ ನಿರ್ವಹಣೆ ತೋರಿದ ಭಾರತ ತಂಡ ಬೆಲ್ಜಿಯಂ ತಂಡದ ಪ್ರಶಸ್ತಿ ಕನಸು ಭಗ್ನಗೊಳಿಸಿತು. ಈ ಮೂಲಕ ಕಳೆದ ಆವೃತ್ತಿಯ ಫೈನಲ್ ಫಲಿತಾಂಶವನ್ನೂ ಭಾರತ ಪುನರಾವರ್ತಿಸಿತು. 2016ರಲ್ಲಿ ಲಖನೌದಲ್ಲಿ ನಡೆದ ಟೂರ್ನಿಯಲ್ಲಿ ಬೆಲ್ಜಿಯಂ ತಂಡವನ್ನೇ 2-1ರಿಂದ ಮಣಿಸಿ ಭಾರತ ತಂಡ ಪ್ರಶಸ್ತಿ ಜಯಿಸಿತ್ತು. ಇದೀಗ 3ನೇ ಬಾರಿ ವಿಶ್ವಕಪ್ ಗೆಲುವಿನ ಕನಸು ನನಸು ಮಾಡಿಕೊಳ್ಳುವುದರಿಂದ ಭಾರತ ಕೇವಲ 2 ಹೆಜ್ಜೆ ದೂರದಲ್ಲಿದೆ.
    ಶರ್ದಾನಂದ ತಿವಾರಿ 2ನೇ ಕ್ವಾರ್ಟರ್‌ನಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ಅನ್ನು ಗೋಲಾಗಿ ಪರಿವರ್ತಿಸುವ ಮೂಲಕ ಭಾರತಕ್ಕೆ 21ನೇ ನಿಮಿಷದಲ್ಲಿ ಮುನ್ನಡೆ ತಂದುಕೊಟ್ಟರು. ಪಂದ್ಯದಲ್ಲಿ ಉಭಯ ತಂಡಗಳೂ ರಕ್ಷಣಾ ವಿಭಾಗದಲ್ಲಿ ಬಲಿಷ್ಠ ಆಟವನ್ನೇ ಪ್ರದರ್ಶಿಸಿದವು. ಆದರೆ ಬೆಲ್ಜಿಯಂ ತಂಡದ ರಕ್ಷಣಾ ಕೋಟೆಯನ್ನು ಒಂದು ಬಾರಿ ಭೇದಿಸಿದ್ದು ಭಾರತದ ಗೆಲುವಿಗೆ ಸಾಕಾಯಿತು.

    ಬೆಲ್ಜಿಯಂ ತಂಡ ಆರಂಭದಲ್ಲಿ ಆಕ್ರಮಣಕಾರಿ ಆಟವಾಡುವ ಮೂಲಕ ಭಾರತದ ಮೇಲೆ ಒತ್ತಡ ಹೇರಿತ್ತು. 13ನೇ ನಿಮಿಷದಲ್ಲಿ ಬೆಲ್ಜಿಯಂ ಗೋಲು ದಾಖಲಿಸುವ ಸನಿಹವೂ ಬಂದಿತ್ತು. ಆದರೆ ಭಾರತದ ಗೋಲುಕೀಪರ್ ಪ್ರಶಾಂತ್ ಚೌಹಾಣ್ ಭದ್ರಗೋಡೆಯಾಗಿ ನಿಂತರು. ಪಂದ್ಯ ಮುಂದುವರಿದಂತೆ ಭಾರತೀಯರು ಹೆಚ್ಚಿನ ಆತ್ಮವಿಶ್ವಾಸದ ಆಟ ಪ್ರದರ್ಶಿಸಿದರು.

    ಉಪಾಂತ್ಯಕ್ಕೆ ಜರ್ಮನಿ, ಅರ್ಜೆಂಟೀನಾ
    ಆರು ಬಾರಿಯ ಚಾಂಪಿಯನ್ ಜರ್ಮನಿ ಮತ್ತು ಅರ್ಜೆಂಟೀನಾ ತಂಡಗಳು ಹೋರಾಟಯುತ ಗೆಲುವಿನೊಂದಿಗೆ ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಉಪಾಂತ್ಯಕ್ಕೇರಿವೆ. ಜರ್ಮನಿ ತಂಡ ದಿನದ ಮೊದಲ ಕ್ವಾರ್ಟರ್​ಫೈನಲ್ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಶೂಟೌಟ್‌ನಲ್ಲಿ 3-1ರಿಂದ ಗೆಲುವು ದಾಖಲಿಸಿತು. ಈ ಮುನ್ನ ಪಂದ್ಯ ನಿಗದಿತ ಸಮಯದಲ್ಲಿ 1-1ರಿಂದ ಸಮಬಲಗೊಂಡಿತ್ತು. ಇನ್ನೊಂದು ಪಂದ್ಯದಲ್ಲಿ ಅರ್ಜೆಂಟೀನಾ ತಂಡ ನೆದರ್ಲೆಂಡ್ಸ್ ವಿರುದ್ಧ 2-1ರಿಂದ ಗೆಲುವು ದಾಖಲಿಸಿತು. ಟೂರ್ನಿಯಲ್ಲಿ ಅಚ್ಚರಿಯ ನಿರ್ವಹಣೆಯೊಂದಿಗೆ ಮುನ್ನಡೆಯುತ್ತಿರುವ ಫ್ರಾನ್ಸ್ ತಂಡ ಎಂಟರ ಘಟ್ಟದಲ್ಲಿ ಮಲೇಷ್ಯಾ ತಂಡವನ್ನು 4-0 ಗೋಲುಗಳಿಂದ ಭರ್ಜರಿಯಾಗಿ ಮಣಿಸಿತು. ಟೂರ್ನಿ ಇತಿಹಾಸದ ಅತ್ಯಂತ ಯಶಸ್ವಿ ತಂಡವೆನಿಸಿರುವ ಜರ್ಮನಿ 2013ರ ಬಳಿಕ ಮತ್ತೊಮ್ಮೆ ಪ್ರಶಸ್ತಿ ಜಯಿಸುವ ಹಂಬಲದಲ್ಲಿದೆ.

    ಶುಕ್ರವಾರ ಸೆಮಿಫೈನಲ್ಸ್
    ಅರ್ಜೆಂಟೀನಾ-ಫ್ರಾನ್ಸ್
    ಆರಂಭ: ಸಂಜೆ 4.30
    ಭಾರತ-ಜರ್ಮನಿ
    ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿ ವೇಳಾಪಟ್ಟಿ ಪ್ರಕಟ, ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಕಣಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts