More

    ಏಷ್ಯನ್​ ಪ್ಯಾರಾ ಗೇಮ್ಸ್​ನಲ್ಲಿ 2 ದಿನಗಳಲ್ಲೇ 34 ಪದಕ ಗೆದ್ದ ಭಾರತ!

    ಹಾಂಗ್​ರೆೌ: ಏಷ್ಯನ್ಸ್​ ಗೇಮ್ಸ್​ನಲ್ಲಿ ಪದಕಗಳ ಶತಕ ಸಿಡಿಸಿ ಬೀಗಿರುವ ಭಾರತ, 4ನೇ ಆವೃತ್ತಿಯ ಏಷ್ಯನ್​ ಪ್ಯಾರಾ ಗೇಮ್ಸ್​ನಲ್ಲೂ ಅದೇ ಸಾಧನೆಯನ್ನು ಪುನರಾವರ್ತಿಸುವತ್ತ ಮುನ್ನಡೆದಿದೆ. ಕ್ರೀಡಾಕೂಟದ ಮೊದಲ 2 ದಿನಗಳಲ್ಲೇ ಭಾರತದ ಪ್ಯಾರಾ ಕ್ರೀಡಾಪಟುಗಳು ಬರೋಬ್ಬರಿ 34 ಪದಕಗಳನ್ನು ಗೆದ್ದು ಬೀಗಿದ್ದಾರೆ. ಇದರಲ್ಲಿ 9 ಚಿನ್ನ, 12 ಬೆಳ್ಳಿ ಮತ್ತು 13 ಕಂಚಿನ ಪದಕಗಳು ಸೇರಿವೆ. ಕ್ರೀಡಾಕೂಟದ ಪದಕ ಸ್ಪರ್ಧೆಯ ಮೊದಲ ದಿನವಾದ ಸೋಮವಾರ 17 ಪದಕ ಗೆದ್ದಿದ್ದ ಭಾರತ, ಮಂಗಳವಾರ ಮತ್ತೆ 17 ಪದಕಗಳನ್ನು ಗೆದ್ದು ವಿಜೃಂಭಿಸಿತು. ಇದರಲ್ಲಿ 3 ಚಿನ್ನ, 6 ಬೆಳ್ಳಿ ಮತ್ತು 8 ಕಂಚಿನ ಪದಕಗಳು ಸೇರಿವೆ. ಇದರೊಂದಿಗೆ ಭಾರತ ಪದಕಪಟ್ಟಿಯಲ್ಲಿ 5ನೇ ಸ್ಥಾನ ಅಲಂಕರಿಸಿದೆ.

    ಮಂಗಳವಾರ ನಡೆದ ಮಹಿಳೆಯರ 400 ಮೀ. ಓಟದ ಟಿ20 ವಿಭಾಗದಲ್ಲಿ ದೀಪ್ತಿ ಜೀವಂಜಿ ಮತ್ತು ಪುರುಷರ ಡಿಸ್ಕಸ್​ ಥ್ರೋ ಎಫ್​​54/55/56 ವಿಭಾಗದಲ್ಲಿ ನೀರಜ್​ ಯಾದವ್​ ಚಿನ್ನದ ಪದಕಕ್ಕೆ ಮುತ್ತಿಟ್ಟರು. ನೀರಜ್​ ಏಷ್ಯನ್​ ದಾಖಲೆಯನ್ನೂ ನಿರ್ಮಿಸಿದರೆ, ಯೋಗೇಶ್​ ಕಥುನಿಯಾ ಬೆಳ್ಳಿ ಮತ್ತು ಮುತ್ತುರಾಜ ಕಂಚು ಗೆಲ್ಲುವುದರೊಂದಿಗೆ ಭಾರತ ಈ ಸ್ಪರ್ಧೆಯಲ್ಲಿ ಪದಕಗಳ ಕ್ಲೀನ್​ಸ್ವೀಪ್​ ಸಾಧಿಸಿತು.

    ಪುರುಷರ ಶಾಟ್​ಪುಟ್​ ಎಫ್​​40 ವಿಭಾಗದಲ್ಲಿ ರವಿ ರೊಂಗಲಿ, 1,500 ಮೀ. ಓಟದ ಟಿ46 ವಿಭಾದಲ್ಲಿ ಪ್ರಮೋದ್​, 400 ಮೀ. ಓಟದ ಟಿ64 ವಿಭಾಗದಲ್ಲಿ ಅಜಯ್​ ಕುಮಾರ್​, ಮಹಿಳೆಯರ 100 ಮೀ. ಓಟದ ಟಿ12 ವಿಭಾಗದಲ್ಲಿ ಸಿಮ್ರಾನ್​ ಶರ್ಮ ಬೆಳ್ಳಿ ಪದಕ ಜಯಿಸಿದರು. 1,500 ಮೀ. ಓಟದ ಟಿ46 ವಿಭಾಗದಲ್ಲಿ ರಾಕೇಶ್​ ಬೈರಾ ಕಂಚು ಗೆದ್ದರು.

    ಪ್ಯಾರಾ ಶೂಟಿಂಗ್​ನಲ್ಲಿ ರುದ್ರಾಂಕ್ಷ್​ ಖಂಡೇಲ್​ವಾಲ್​ ಮತ್ತು ಮನೀಷ್​ ನರ್ವಾಲ್​ ಪಿ1 ಪುರುಷರ 10 ಮೀ. ಏರ್​ ಪಿಸ್ತೂಲ್​ ಎಸ್​ಎಚ್​1 ವಿಭಾಗದಲ್ಲಿ ಬೆಳ್ಳಿ, ಕಂಚು ಗೆದ್ದರೆ, ರುಬಿನಾ ಫ್ರಾನ್ಸಿಸ್​ ಮಹಿಳೆಯರ 10 ಮೀ. ಏರ್​ಪಿಸ್ತೂಲ್​ನಲ್ಲಿ, ಅಶೋಕ್​ ಪುರುಷರ 65 ಕೆಜಿ ಪವರ್​ಲಿಫ್ಟಿಂಗ್​ನಲ್ಲಿ ಏಕ್ತಾ ಭಯಾನ್​ ಮಹಿಳೆಯರ ಕ್ಲಬ್​ ಥ್ರೋ ಎ್​32/51 ವಿಭಾಗದಲ್ಲಿ ಕಂಚು ಜಯಿಸಿದರು.

    ಪ್ರಾಚಿಗೆ ಅವಳಿ ಪದಕ
    ಪ್ರಾಚಿ ಯಾದವ್​ ಮಹಿಳೆಯರ ಕನೋಯಿಂಗ್​ ಸ್ಪರ್ಧೆಯಲ್ಲಿ ಮೊದಲ ದಿನ ವಿಎಲ್​2 ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರೆ, 2ನೇ ದಿನ ಕೆಎಲ್​2 ವಿಭಾಗದಲ್ಲಿ ಸ್ವರ್ಣ ಪದಕಕ್ಕೆ ಕೊರಳೊಡ್ಡಿದರು. ಈ ಮೂಲಕ ಪ್ಯಾರಾ ಏಷ್ಯನ್​ ಗೇಮ್ಸ್​ನಲ್ಲಿ ಅವಳಿ ಪದಕ ಗೆಲುವಿನ ಸಾಧನೆ ಮಾಡಿದರು. ಪ್ರಾಚಿ ಅವರ ಪತಿ ಮನೀಷ್​ ಕೌರವ್​ ಪುರುಷರ ಕನೋಯಿ ಕೆಎಲ್​3 ವಿಭಾಗದಲ್ಲಿ ಕಂಚು ಜಯಿಸಿದರು.

    ಶರತ್​ ಕೈಜಾರಿದ ಚಿನ್ನ
    ಪುರುಷರ ಟಿ13 ಓಟದ 5 ಸಾವಿರ ಮೀ. ಓಟದಲ್ಲಿ ಶರತ್​ ಶಂಕರಪ್ಪ ಮಕನಹಳ್ಳಿ ಅಗ್ರಸ್ಥಾನಿಯಾಗಿ ಸ್ಪರ್ಧೆ ಮುಗಿಸಿದರೂ, ಚಿನ್ನದ ಪದಕ ನೀಡಲಿಲ್ಲ. ಸ್ಪರ್ಧೆಯಲ್ಲಿ ಕೇವಲ ಇಬ್ಬರೇ ಓಟಗಾರರು ಭಾಗವಹಿಸಿದ್ದು ಇದಕ್ಕೆ ಕಾರಣ, ಏಷ್ಯನ್​ ಪ್ಯಾರಾಲಿಂಪಿಕ್​ ಸಮಿತಿಯ ನಿಯಮಾವಳಿ ಪ್ರಕಾರ, 2ಕ್ಕಿಂತ ಕಡಿಮೆ ಸ್ಪರ್ಧಿಗಳಿದ್ದಾಗ ಪದಕ ನೀಡುವುದು ಅಥವಾ ನೀಡದಿರುವುದು ತಾಂತ್ರಿಕ ಸಮಿತಿಯ ನಿರ್ಧಾರಕ್ಕೆ ಸೇರಿದ್ದಾಗಿರುತ್ತದೆ.

    ಮೊದಲ ದಿನವೇ 17 ಪದಕಗಳ ಸಾಧನೆ
    ಭಾರತದ ಕ್ರೀಡಾಪಟುಗಳು ಪ್ಯಾರಾ ಏಷ್ಯನ್​ ಗೇಮ್ಸ್​ನ ಮೊದಲ ದಿನವೇ 17 ಪದಕಗಳನ್ನು ಗೆದ್ದು ಭರ್ಜರಿ ಆರಂಭ ನೀಡಿದ್ದರು. ಈ ಪೈಕಿ 6 ಚಿನ್ನ, 6 ಬೆಳ್ಳಿ, 5 ಕಂಚಿನ ಪದಕಗಳು ಸೇರಿದ್ದವು. ಈ ಪೈಕಿ 11 ಪದಕಗಳು (5 ಚಿನ್ನ) ಅಥ್ಲೆಟಿಕ್ಸ್​ನಲ್ಲೇ ಒಲಿದವು. ಶೂಟಿಂಗ್​ನಲ್ಲಿ ಅವನಿ ಲೇಖರ ಮಹಿಳೆಯರ 10 ಮೀ. ಏರ್​ ಸ್ಟ್ಯಾಂಡ್​ ಎಸ್​ಎಚ್​1 ವಿಭಾಗದಲ್ಲಿ ಕೂಟದಾಖಲೆಯೊಂದಿಗೆ ಚಿನ್ನ ಗೆದ್ದುಕೊಂಡರೆ ಅಥ್ಲೆಟಿಕ್ಸ್​ನಲ್ಲಿ ಪ್ರಣವ್​ ಸೂರ್ಮ ಕ್ಲಬ್​ ಥ್ರೋ (ಎಫ್​​51), ಅಂಕುರ್​ ಧಾಮಾ 5 ಸಾವಿರ ಮೀ. (ಟಿ11) ಓಟದಲ್ಲಿ ಚಿನ್ನದ ಪದಕ ಗೆದ್ದರು. ಪುರುಷರ ಹೈಜಂಪ್​ನಲ್ಲಿ ಶೈಲೇಶ್​ ಕುಮಾರ್​ (ಟಿ63), ನಿಶಾದ್​ ಕುಮಾರ್​ (ಟಿ47), ಪ್ರವಿಣ್​ ಕುಮಾರ್​ (ಟಿ64) ಪ್ರತ್ಯೇಕ ವಿಭಾಗಗಳಲ್ಲಿ ಚಿನ್ನ ಜಯಿಸಿದರು. ಕ್ಲಬ್​ ಥ್ರೋನಲ್ಲಿ ಧರಂವೀರ್​ ಬೆಳ್ಳಿ ಮತ್ತು ಅಮಿತ್​ ಕುಮಾರ್​ ಕಂಚು ಗೆಲ್ಲುವುದರೊಂದಿಗೆ ಭಾರತ ಪದಕಗಳ ಕ್ಲೀನ್​ಸ್ವೀಪ್​ ಸಾಧಿಸಿತು. ಪುರುಷರ ಪಿ4 ಮಿಶ್ರ 50 ಮೀ. ಪಿಸ್ತೂಲ್​ ಎಸ್​ಎಚ್​1 ವಿಭಾಗದಲ್ಲಿ ರುದ್ರಾಂಕ್ಷ್​ ಖಂಡೇಲ್​ವಲ್​ ಬೆಳ್ಳಿಗೆ ಕೊರಳೊಡ್ಡಿದರು. ಹೈಜಂಪ್​ ಟಿ63 ವಿಭಾಗದಲ್ಲಿ ಮರಿಯಪ್ಪನ್​ ತಂಗವೇಲು ಮತ್ತು ಟಿ47 ವಿಭಾಗದಲ್ಲಿ ರಾಮ್​ಪಾಲ್​ ಬೆಳ್ಳಿ ಒಲಿಸಿಕೊಂಡರು. ಜುಡೋದಲ್ಲಿ ಪುರುಷರ 60 ಕೆಜಿ ವಿಭಾಗದಲ್ಲಿ ಕಪಿಲ್​ ಪಾರ್ಮರ್​ ಬೆಳ್ಳಿ ಜಯಿಸಿದರು. ಹೈಜಂಪ್​ ಟಿ64 ವಿಭಾಗದಲ್ಲಿ ಉನ್ನಿ ರೇಣು ಕಂಚಿನ ಪದಕ ಗೆದ್ದರು. ಶಾಟ್​ಪುಟ್​ ಎಫ್​11 ವಿಭಾಗದಲ್ಲಿ ಮೋನು ಂಘಾಸ್​, ಜುಡೋ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಕೋಕಿಲಾ, ಟೇಕ್ವಾಂಡೊದಲ್ಲಿ ಮಹಿಳೆಯರ 47 ಕೆಜಿ ವಿಭಾಗದಲ್ಲಿ ಅರುಣಾ ಕಂಚಿನ ಪದಕ ಜಯಿಸಿದರು.

    ಪ್ರಧಾನಿ ಮೋದಿ ಅಭಿನಂದನೆ
    ಏಷ್ಯನ್​ ಪ್ಯಾರಾ ಗೇಮ್ಸ್​ನಲ್ಲಿ ಭರ್ಜರಿ ಪದಕ ಬೇಟೆಯಾಡುತ್ತಿರುವ ಭಾರತದ ಕ್ರೀಡಾಪಟುಗಳನ್ನು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಲ್ಲಿ ಅಭಿನಂದಿಸಿದ್ದಾರೆ. 2 ದಿನಗಳಿಂದ ಸರಣಿ ಪೋಸ್ಟ್​ಗಳ ಮೂಲಕ ಭಾರತದ ಪ್ರತಿ ಸ್ಪರ್ಧಿಗೂ ಅವರು ಅಭಿನಂದನೆ ಸಲ್ಲಿಸುತ್ತಿದ್ದಾರೆ.

    ಹಾಲಿ ಚಾಂಪಿಯನ್ ಇಂಗ್ಲೆಂಡ್​ ಸೆಮೀಸ್​ ಹಾದಿ ದುರ್ಗಮ; ಇನ್ನು ಪ್ರತಿ ಪಂದ್ಯವೂ ಕ್ವಾರ್ಟರ್​ಫೈನಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts