More

    ಡಬ್ಲ್ಯುಟಿಸಿ ಫೈನಲ್‌ಗೆ ಬೆಂಬಿಡದ ಮಳೆ, 4ನೇ ದಿನದಾಟವೂ ರದ್ದು

    ಸೌಥಾಂಪ್ಟನ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದ 4ನೇ ದಿನದಾಟ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದುಗೊಂಡಿತು. ನಾಲ್ಕು ದಿನದಾಟದಲ್ಲಿ ಇದುವರೆಗೂ ಕೇವಲ 141.1 ಓವರ್‌ಗಳಷ್ಟೇ ಪಂದ್ಯ ನಡೆದಿದ್ದು, ಚೊಚ್ಚಲ ವಿಶ್ವಕಪ್ ಟೆಸ್ಟ್ ಪಂದ್ಯವೇ ಡ್ರಾ ಹಾದಿ ಹಿಡಿದಿದೆ. ಪಂದ್ಯ ಮೊದಲ ದಿನದಾಟ ಕೂಡ ರದ್ದುಗೊಂಡಿತ್ತು. ನಾಲ್ಕು ದಿನದಾಟದಲ್ಲಿ ಎರಡು ದಿನ ಸಂಪೂರ್ಣ ಮಳೆಗೆ ಆಹುತಿಯಾದಂತಾಗಿದೆ. ಸ್ಥಳೀಯ ಹವಾಮಾನ ಇಲಾಖೆಯ ಮಾಹಿತಿಯಂತೆ ಸೋಮವಾರ ಬೆಳಗ್ಗೆಯಿಂದಲೇ ವರುಣನ ಆರ್ಭಟ ನಡೆಯಿತು. ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ (ಸ್ಥಳೀಯ ಕಾಲಮಾನ ಬೆಳಗ್ಗೆ 10.30ಕ್ಕೆ) ಪಂದ್ಯ ಆರಂಭಗೊಳ್ಳಬೇಕಿತ್ತು. ಸತತವಾಗಿ ಮಳೆ ಬೀಳುತ್ತಿದ್ದ ಪರಿಣಾಮ ಸುಮಾರು 4 ಗಂಟೆ 30 ನಿಮಿಷಗಳ ಬಳಿಕ ಮೈದಾನದ ಅಂಪೈರ್‌ಗಳು ದಿನದಾಟ ರದ್ದುಗೊಳಿಸುವ ತೀರ್ಮಾನಕ್ಕೆ ಬಂದರು. ಪಂದ್ಯ ಆರಂಭಗೊಳ್ಳುವ ಭರವಸೆಯೊಂದಿಗೆ ಕೆಲ ಅಭಿಮಾನಿಗಳು ಮೈದಾನದಲ್ಲೇ ಕಾದುಕುಳಿತಿದ್ದರೂ ಪ್ರಯೋಜನವಾಗಲಿಲ್ಲ.

    ಇದನ್ನೂ ಓದಿ: ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಬಿಸಿಸಿಐ ಭರ್ಜರಿ ಕೊಡುಗೆ

    * ಡ್ರಾದತ್ತ ಚೊಚ್ಚಲ ಟೆಸ್ಟ್ ವಿಶ್ವಕಪ್?
    ನಾಲ್ಕು ದಿನದಾಟ ಮುಕ್ತಾಯಗೊಂಡರೂ ಪಂದ್ಯದ ಅರ್ಧದಷ್ಟು ಆಟ ಕೂಡ ನಡೆದಿಲ್ಲ. ಚೊಚ್ಚಲ ಡಬ್ಲ್ಯುಟಿಸಿ ಫೈನಲ್ ಪಂದ್ಯವೇ ಡ್ರಾನಲ್ಲಿ ಕೊನೆಗೊಳ್ಳುವ ಸಾಧ್ಯತೆಯೇ ಹೆಚ್ಚಿಸಿದೆ. ಉಳಿದ ಎರಡು ದಿನಗಳಲ್ಲಿ ನಾಟಕೀಯ ತಿರುವು ಪಡೆದರಷ್ಟೇ ಪಂದ್ಯದಲ್ಲಿ ಫಲಿತಾಂಶ ಕಾಣಬಹುದು. ಆದರೂ 5 ಹಾಗೂ 6ನೇ (ಮೀಸಲು ದಿನ) ದಿನದಾಟದ ಮೂರು ಅವಧಿಯೂ ಸಂಪೂರ್ಣ ನಡೆಯಬೇಕಿದೆ. ಕಡೇ 2 ದಿನದಾಟದಲ್ಲಿ 196 ಓವರ್‌ಗಳಷ್ಟೇ ಬಾಕಿ ಉಳಿದಿವೆ. ಮೊದಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಎರಡು ತಂಡಗಳು ಟ್ರೋಫಿ ಹಂಚಿಕೊಳ್ಳುವ ಗೌರವಕ್ಕೆ ಭಾರತ-ನ್ಯೂಜಿಲೆಂಡ್ ತಂಡಗಳು ಬಹುತೇಕ ಪಾತ್ರವಾಗಲಿವೆ. ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 217 ರನ್ ಪೇರಿಸಿದ್ದರೆ, ನ್ಯೂಜಿಲೆಂಡ್ ತಂಡ 2 ವಿಕೆಟ್‌ಗೆ 101 ರನ್‌ಗಳಿಸಿದ್ದು, ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನು 116 ರನ್ ಪೇರಿಸಬೇಕಿದೆ.

    * ಮೀಸಲು ದಿನದ ಟಿಕೆಟ್ ದರ ಇಳಿಕೆ
    ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಮೀಸಲು ದಿನದ (ಬುಧವಾರ) ಟಿಕೆಟ್‌ಗಳ ದರವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಕಡಿತಗೊಳಿಸಿದೆ. ಮಳೆಯಿಂದಾಗಿ ಮೊದಲ ದಿನದಾಟ ಸಂಪೂರ್ಣ ರದ್ದುಗೊಂಡಿತ್ತು. ಎರಡನೇ ದಿನದಾಟದಲ್ಲಿ ಕೇವಲ 64.4 ಓವರ್‌ಗಳು ನಡೆದಿದ್ದರೆ, ಮೂರನೇ ದಿನದಾಟದಲ್ಲಿ 76.3 ಓವರ್‌ಗಳಷ್ಟೇ ನಡೆದಿದ್ದವು. ನಾಲ್ಕನೇ ದಿನದಾಟಕ್ಕೂ ಮಳೆ ಅಡಚಣೆ ಉಂಟು ಮಾಡಿದೆ. ಪಂದ್ಯಕ್ಕೆ ಮೂರು ಹಂತದಲ್ಲಿ ಟಿಕೆಟ್ ದರ ನಿಗದಿಪಡಿಸಲಾಗಿದೆ. 15,444 ರೂ (150 ಜಿಬಿಪಿ), 10,296 ರೂ. (100ಜಿಬಿಪಿ) ಹಾಗೂ 7,722 ರೂಪಾಯಿ (75ಜಿಬಿಪಿ) ಮೌಲ್ಯದ ಟಿಕೆಟ್‌ಗಳನ್ನು ಕ್ರಮವಾಗಿ 10,296 ರೂ (100 ಜಿಬಿಪಿ), 7,722 ರೂ (75 ಜಿಬಿಪಿ) ಹಾಗೂ 5,148 ರೂಪಾಯಿಗೆ (50 ಜಿಬಿಪಿ) ಕಡಿತಗೊಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts