More

    ವಾಂಖೆಡೆಯಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಶತಕದ ಮೋಡಿ

    ಮುಂಬೈ: ಅನುಭವಿ ಹಾಗೂ ಸ್ಟಾರ್ ಆಟಗಾರರ ವೈಫಲ್ಯದ ನಡುವೆಯೂ ಏಕಾಂಗಿ ನಿರ್ವಹಣೆ ತೋರಿದ ಕರ್ನಾಟಕದ ಬ್ಯಾಟರ್ ಮಯಾಂಕ್ ಅಗರ್ವಾಲ್ (120*ರನ್, 246 ಎಸೆತ, 14 ಬೌಂಡರಿ, 4 ಸಿಕ್ಸರ್) ಮನಮೋಹಕ ಶತಕದ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಆಸರೆಯಾಗಿದ್ದಾರೆ. ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಉತ್ತಮ ಆರಂಭದ ನಡುವೆಯೂ ಪ್ರವಾಸಿ ತಂಡದ ಎಡಗೈ ಸ್ಪಿನ್ನರ್ ಅಜಾಜ್ ಪಟೇಲ್ (73ಕ್ಕೆ 4) ಮಾರಕ ದಾಳಿಗೆ ತತ್ತರಿಸಿತು. ಬಳಿಕ ಮಯಾಂಕ್ ಏಕಾಂಗಿ ನಿರ್ವಹಣೆ ಫಲವಾಗಿ ಭಾರತ ತಂಡ ಮೊದಲ ದಿನದಂತ್ಯಕ್ಕೆ 70 ಓವರ್‌ಗಳಲ್ಲಿ 4 ವಿಕೆಟ್‌ಗೆ 221 ರನ್ ಕಲೆಹಾಕಿದೆ. ಹಿಂದಿನ ದಿನ ಸುರಿದ ಮಳೆಯಿಂದ ಮೈದಾನ ಒದ್ದೆಯಾಗಿದ್ದ ಕಾರಣ ಮೊದಲ ದಿನದಾಟ ತಡವಾಗಿ ಆರಂಭಗೊಂಡಿತು ಮತ್ತು ಮೊದಲ ಅವಧಿಯ ಆಟ ನಷ್ಟಗೊಂಡಿತು.

    *ಅಜಾಜ್ ಪಟೇಲ್ ಬ್ರೇಕ್
    ಆರಂಭಿಕರಾದ ಮಯಾಂಕ್ ಅಗರ್ವಾಲ್ ಹಾಗೂ ಶುಭಮಾನ್ ಗಿಲ್ (44ರನ್, 71 ಎಸೆತ, 7 ಬೌಂಡರಿ, 1 ಸಿಕ್ಸರ್) ಉತ್ತಮ ಆರಂಭ ನೀಡಲು ಯಶಸ್ವಿಯಾದರು. ದಿನದಾಟ ಆರಂಭ ವಿಳಂಬಗೊಂಡರೂ ಭಾರತದ ಜೋಡಿ ಸಮರ್ಥವಾಗಿ ಕಿವೀಸ್ ಬೌಲರ್‌ಗಳನ್ನು ಎದುರಿಸಿತು. ಮಯಾಂಕ್-ಶುಭಮಾನ್ ಜೋಡಿ ಮೊದಲ ವಿಕೆಟ್‌ಗೆ 80 ರನ್ ಪೇರಿಸಿತು. ಉತ್ತಮ ಸ್ಥಿತಿಯಲ್ಲಿದ್ದ ಭಾರತ ತಂಡಕ್ಕೆ ಅಜಾಜ್ ಪಟೇಲ್ ಆಘಾತ ನೀಡಿದರು. ಅರ್ಧಶತಕದಂಚಿನಲ್ಲಿದ್ದ ಗಿಲ್, ಅಜಾಜ್ ಎಸೆತದಲ್ಲಿ ರಾಸ್ ಟೇಲರ್‌ಗೆ ಕ್ಯಾಚ್ ನೀಡಿದರು. ತಮ್ಮ ಮರು ಓವರ್‌ನಲ್ಲಿ ಟೆಸ್ಟ್ ತಜ್ಞ ಚೇತೇಶ್ವರ ಪೂಜಾರ (0) ಹಾಗೂ ನಾಯಕ ವಿರಾಟ್ ಕೊಹ್ಲಿ (0) ಜೋಡಿಗೆ ಅಜಾಜ್ ಪೆವಿಲಿಯನ್ ದಾರಿ ತೋರಿದರು. ಕೇವಲ 15 ಎಸೆತಗಳ ಅಂತರದಲ್ಲಿ ಯಾವುದೇ ರನ್ ಪೇರಿಸದೆ ಭಾರತ ತಂಡ ಮೂರು ವಿಕೆಟ್ ಕಳೆದುಕೊಂಡು ದಿಢೀರ್ ಕುಸಿತ ಕಂಡಿತು.

    * ಮಯಾಂಕ್ ಅಗರ್ವಾಲ್ ಶತಕದಾಟ
    ಸ್ಟಾರ್ ಆಟಗಾರರ ವೈಫಲ್ಯದಿಂದಾಗಿ ದಿಢೀರ್ ಕುಸಿತಕ್ಕೆ ಒಳಗಾಗಿದ್ದ ತಂಡದ ಇನಿಂಗ್ಸ್ ಚೇತರಿಕೆಯಲ್ಲಿ ಮಯಾಂಕ್ ಅಗರ್ವಾಲ್ ಪ್ರಮುಖ ಪಾತ್ರವಹಿಸಿದರು. ಆರಂಭಿಕ ಹಂತದಿಂದಲೂ ಬ್ಯಾಟಿಂಗ್ ಜವಾಬ್ದಾರಿಯನ್ನು ನಿಭಾಯಿಸಿದ 30 ವರ್ಷದ ಮಯಾಂಕ್ ಹಿಂದಿನ ಟೆಸ್ಟ್‌ನಲ್ಲಿ ಅನುಭವಿಸಿದ ವೈಫಲ್ಯವನ್ನು ತಿದ್ದಿಕೊಂಡವರಂತೆ ಬ್ಯಾಟ್ ಬೀಸಿದರು. ಪಂದ್ಯ ಆರಂಭಗೊಳ್ಳುವುದಕ್ಕೂ ಮುನ್ನ ಹನ್ನೊಂದರ ಬಳಗದಲ್ಲಿ ಮಯಾಂಕ್ ಸ್ಥಾನ ಪಡೆಯುವುದೇ ಖಚಿತತೆ ಇರಲಿಲ್ಲ. ರಹಾನೆ ಗಾಯದ ಸಮಸ್ಯೆ ಎದುರಿಸಿದ ಹಿನ್ನೆಲೆಯಲ್ಲಿ ಮಯಾಂಕ್ ಹಾದಿ ಸುಗಮವಾಯಿತು. ದಿನಪೂರ್ತಿ ಕ್ರೀಸ್‌ನಲ್ಲಿ ನಿಲ್ಲುವ ಮೂಲಕ ಆಯ್ಕೆ ಸಮರ್ಥಿಸಿದರು. ಸ್ಥಳೀಯ ಪ್ರತಿಭೆ ಶ್ರೇಯಸ್ ಅಯ್ಯರ್ (18ರನ್, 41 ಎಸೆತ, 3 ಬೌಂಡರಿ) ಜತೆಗೂಡಿ 4ನೇ ವಿಕೆಟ್‌ಗೆ 80 ರನ್ ಪೇರಿಸಿದರು. ಬಳಿಕ ತಂಡದ ಹಿರಿಯ ಸದಸ್ಯ ವೃದ್ಧಿಮಾನ್ ಸಾಹ (25*ರನ್, 53 ಎಸೆತ, 3 ಬೌಂಡರಿ, 1 ಸಿಕ್ಸರ್) ಜತೆಗೂಡಿ ಮುರಿಯದ 5ನೇ ವಿಕೆಟ್‌ಗೆ 61 ರನ್ ಪೇರಿಸಿದ್ದಾರೆ. ಅಂತಿಮ ಅವಧಿಯಲ್ಲಿ ಎಚ್ಚರಿಕೆ ನಿರ್ವಹಣೆ ತೋರಿದ ಮಯಾಂಕ್-ಸಾಹ 2ನೇ ದಿನಕ್ಕೆ ಬ್ಯಾಟಿಂಗ್ ವಿಸ್ತರಿಸಿದರು.

    ಭಾರತ: 70 ಓವರ್‌ಗಳಲ್ಲಿ 4 ವಿಕೆಟ್‌ಗೆ 221 (ಮಯಾಂಕ್ ಅಗರ್ವಾಲ್ 120*, ಶುಭಮಾನ್ ಗಿಲ್ 44, ಪೂಜಾರ 0, ಕೊಹ್ಲಿ 0, ಶ್ರೇಯಸ್ ಅಯ್ಯರ್ 18, ವೃದ್ಧಿಮಾನ್ ಸಾಹ 25*, ಅಜಾಜ್ ಪಟೇಲ್ 73ಕ್ಕೆ 4).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts