More

    ಸಿಡ್ನಿಯಲ್ಲಿ ಭಾರತ-ಆಸೀಸ್ ನಡುವೆ 3ನೇ ಟೆಸ್ಟ್ ಕದನ

    ಸಿಡ್ನಿ: ಬಾಕ್ಸಿಂಗ್ ಡೇ ಟೆಸ್ಟ್ ಜಯಿಸಿದ 10 ದಿನಗಳ ಬಳಿಕ ಭಾರತ ತಂಡ ಬಾರ್ಡರ್-ಗಾವಸ್ಕರ್ ಟ್ರೋಫಿಯ ಮತ್ತೊಂದು ಹೋರಾಟಕ್ಕೆ ಸಜ್ಜಾಗಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಗುರುವಾರ 4 ಪಂದ್ಯಗಳ ಟೆಸ್ಟ್ ಸರಣಿಯ 3ನೇ ಕದನ ಆರಂಭವಾಗಲಿದೆ. ಸರಣಿಯಲ್ಲಿ ಉಭಯ ತಂಡಗಳು 1-1ರಿಂದ ಸಮಬಲ ಸಾಧಿಸಿದ್ದು, ಮುನ್ನಡೆ ದೃಷ್ಟಿಯಿಂದ ಈ ಪಂದ್ಯ ಮಹತ್ವ ಪಡೆದಿದೆ. ಎರಡು ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿರುವ ಭಾರತ ತಂಡ ಮತ್ತೊಂದು ಗೆಲುವಿನ ಉತ್ಸಾಹದಲ್ಲಿದೆ. ಭಾರತ ತಂಡ ಸಿಡ್ನಿ ಮೈದಾನದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 42 ವರ್ಷಗಳಿಂದ ಗೆಲುವು ದಾಖಲಿಸಿಲ್ಲ. ಹಿಂದಿನ 6 ಮುಖಾಮುಖಿಯಲ್ಲೂ ಜಯ ದಾಖಲಿಸದ ಭಾರತ ತಂಡ ಇತಿಹಾಸ ಬದಲಿಸಲು ಹೋರಾಡಬೇಕಿದೆ.
    ಕಳೆದ 8 ಇನಿಂಗ್ಸ್‌ಗಳಲ್ಲಿ 7 ಇನಿಂಗ್ಸ್‌ನಲ್ಲಿ ವೈಫಲ್ಯ ಅನುಭವಿಸಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಬದಲಿಗೆ ಉಪನಾಯಕ ರೋಹಿತ್ ಶರ್ಮ ತಂಡಕ್ಕೆ ವಾಪಸಾಗಿದ್ದಾರೆ. ಪ್ರಸಕ್ತ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ. ಮತ್ತೋರ್ವ ಗಾಯಾಳು ಉಮೇಶ್ ಯಾದವ್ ಸರಣಿಯಿಂದ ಹೊರಬಿದ್ದ ಹಿನ್ನೆಲೆಯಲ್ಲಿ ದೆಹಲಿ ವೇಗಿ ನವದೀಪ್ ಸೈನಿಗೆ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಉಳಿದಂತೆ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ. ಮೆಲ್ಬೋರ್ನ್‌ನಲ್ಲಿ ತೋರಿದ ನಿರ್ವಹಣೆಯನ್ನೇ ಮರುಕಳಿಸಲು ರಹಾನೆ ಪಡೆ ಸನ್ನದ್ಧವಾಗಿದೆ.

    * ಭಾರತಕ್ಕೆ ರೋಹಿತ್ ಶರ್ಮ ಬಲ
    ಯುಎಇಯಲ್ಲಿ ನಡೆದ ಐಪಿಎಲ್ ಮುಕ್ತಾಯಗೊಂಡ ಬಳಿಕ ಫಿಟ್ನೆಸ್ ಸಮಸ್ಯೆಯಿಂದಾಗಿ ತವರಿಗೆ ವಾಪಸಾಗಿದ್ದ ರೋಹಿತ್ ಶರ್ಮ ಇದೀಗ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾಗಿದ್ದಾರೆ. ನಿಗದಿತ ಓವರ್‌ಗಳ ಸರಣಿ, ಆರಂಭಿಕ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ರೋಹಿತ್ ಶರ್ಮ ಇನಿಂಗ್ಸ್ ಆರಂಭಿಸುವುದು ಪಕ್ಕಾಗಿದೆ. ಪದಾರ್ಪಣೆ ಪಂದ್ಯದಲ್ಲೇ ಗಮನಾರ್ಹ ನಿರ್ವಹಣೆ ತೋರಿದ್ದ 20ರ ಹರೆಯದ ಶುಭಮಾನ್ ಗಿಲ್ ಸ್ಟಾರ್ ಕ್ರಿಕೆಟಿಗನೊಂದಿಗೆ ಇನಿಂಗ್ಸ್ ಆರಂಭಿಸಲಿದ್ದಾರೆ. ಕಳೆದ ನಾಲ್ಕು ಇನಿಂಗ್ಸ್‌ಗಳಿಂದಲೂ ರನ್‌ಗಳಿಸಲು ಪರದಾಡುತ್ತಿರುವ ಅನುಭವಿ ಚೇತೇಶ್ವರ್ ಪೂಜಾರ ಕಳಪೆ ಫಾರ್ಮ್ ತಂಡಕ್ಕೆ ತಲೆನೋವಾಗಿದೆ. ಅನುಭವಿ ಆರ್.ಅಶ್ವಿನ್, ರವೀಂದ್ರ ಜಡೇಜಾ ತಂಡದ ಪಾಲಿಗೆ ಟ್ರಂಪ್ ಕಾರ್ಡ್ ಆಗಿದ್ದಾರೆ. ಅಲ್ಲದೆ, ಪದಾರ್ಪಣೆ ಪಂದ್ಯದಲ್ಲಿ ಮಿಂಚಿದ್ದ ಮೊಹಮದ್ ಸಿರಾಜ್, ಜಸ್‌ಪ್ರೀತ್ ಬುಮ್ರಾ ಜೋಡಿ ಮತ್ತೊಮ್ಮೆ ಆತಿಥೇಯ ತಂಡಕ್ಕೆ ಟಾಂಗ್ ಕೊಡಲು ಸಜ್ಜಾಗಿದ್ದರೆ, ಇವರಿಗೆ ಮೊದಲ ಪಂದ್ಯದಲ್ಲಿ ಆಡಲು ಎದುರು ನೋಡುತ್ತಿರುವ ನವದೀಪ್ ಸೈನಿ ಸಾಥ್ ನೀಡಲಿದ್ದಾರೆ.

    * ಉತ್ತಮ ಆರಂಭದ ನಿರೀಕ್ಷೆಯಲ್ಲಿ ಆಸೀಸ್
    ಗಾಯದ ಸಮಸ್ಯೆಯಿಂದಾಗಿ ಕಡೇ ಏಕದಿನ, 3 ಟಿ20 ಹಾಗೂ ಆರಂಭಿಕ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದ ಡೇವಿಡ್ ವಾರ್ನರ್ ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದು, ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವು ಖಚಿತವಾಗಿದೆ. ಡೇವಿಡ್ ವಾರ್ನರ್ ಆಗಮನದಿಂದಾಗಿ ಆಸ್ಟ್ರೇಲಿಯ ತಂಡದ ಆರಂಭಿಕ ಹಂತದಲ್ಲಿ ಇದ್ದ ಕೊರತೆ ನೀಗಿದಂತಾಗಿದೆ. ಡೇವಿಡ್ ವಾರ್ನರ್ ಹಾಗೂ ವಿಲ್ ಪುಕೊವಸ್ಕಿ ಆಗಮನದಿಂದಾಗಿ ಜೋ ಬರ್ನ್ಸ್ ಹಾಗೂ ಟ್ರಾವಿಸ್ ಹೆಡ್ ಹೊರಗುಳಿಯಲಿದ್ದಾರೆ. ಅನುಭವಿ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್ ಕಳಪೆ ನಿರ್ವಹಣೆ ತಂಡಕ್ಕೆ ದೊಡ್ಡ ತಲೆನೋವಾಗಿದೆ. ಪ್ರತಿಷ್ಠಿತ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಅನುಭವಿಸಿದ ಸೋಲಿಗೆ ಆಸೀಸ್ ತಂಡ ಸೇಡಿನ ತವಕದಲ್ಲಿದೆ. ಮಿಚೆಲ್ ಸ್ಟಾರ್ಕ್, ಜೋಸ್ ಹ್ಯಾಸಲ್‌ವುಡ್, ನಾಥನ್ ಲ್ಯಾನ್‌ರಂಥ ಬಲಿಷ್ಠ ಬೌಲರ್‌ಗಳನ್ನು ಹೊಂದಿರುವ ಆತಿಥೇಯ ತಂಡ ಟೀಮ್ ಇಂಡಿಯಾ ಸವಾಲಿಗೆ ಸಜ್ಜಾಗಿದೆ.

    ಟೀಮ್ ನ್ಯೂಸ್:
    ಭಾರತ :
    ಭಾರತ ತಂಡ ಎರಡು ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ. ಮಯಾಂಕ್ ಅಗರ್ವಾಲ್ ಬದಲಿಗೆ ರೋಹಿತ್ ಶರ್ಮ, ಉಮೇಶ್ ಯಾದವ್ ಬದಲಿಗೆ ನವದೀಪ್ ಸೈನಿ ಕಣಕ್ಕಿಳಿಯಲಿದ್ದಾರೆ. ಇದರಿಂದಾಗಿ ರೋಹಿತ್ ಶರ್ಮ ಆರಂಭಿಕರಾಗಿ ಕಣಕ್ಕಿಳಿಯುವುದು ಪಕ್ಕಾ ಆಗಿದೆ. ಕಳೆದ ನಾಲ್ಕು ಇನಿಂಗ್ಸ್‌ಗಳಲ್ಲೂ ವೈಫಲ್ಯ ಅನುಭವಿಸಿದ್ದ ಹನುಮ ವಿಹಾರಿ ಸ್ಥಾನ ಉಳಿಸಿಕೊಳ್ಳುವ ಮೂಲಕ ಜೀವದಾನ ಪಡೆದಿದ್ದಾರೆ.

    ಆಸ್ಟ್ರೇಲಿಯಾ:
    ಆಸ್ಟ್ರೇಲಿಯಾ ತಂಡ ಹನ್ನೊಂದರ ಬಳಗ ಪ್ರಕಟಿಸಿಲ್ಲ. ಬಲಿಷ್ಠ ಬೌಲಿಂಗ್ ಹೊಂದಿದ್ದರೂ ಬ್ಯಾಟಿಂಗ್ ವಿಭಾಗದಲ್ಲಿ ಹಿನ್ನಡೆ ಅನುಭವಿಸುತ್ತಿದೆ. ರನ್‌ಗಳಿಸಲು ಪರದಾಡುತ್ತಿರುವ ಜೋ ಬರ್ನ್ಸ್ ಹಾಗೂ ಟ್ರಾವಿಡ್ ಹೆಡ್ ಹೊರಗುಳಿಯಲಿದ್ದು, ಡೇವಿಡ್ ವಾರ್ನರ್ ಹಾಗೂ ವಿಲ್ ಪುಕೊವಸ್ಕಿ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಿದ್ದಾರೆ.

    * ಪಿಚ್ ರಿಪೋರ್ಟ್:
    ಪಿಚ್ ಹಾರ್ಡ್ ಆಗಿದ್ದು, ಹೆಚ್ಚು ಹಸಿರು ಬಿಡಲಾಗಿದೆ ಎಂದು ಪಿಚ್ ಕ್ಯೂರೇಟರ್ ಆಡಂ ಲೆವಿಸ್ ಹೇಳಿಕೊಂಡಿದ್ದಾರೆ. ಹೀಗಾಗಿ ಸ್ಪಿನ್ ಬೌಲರ್‌ಗಳಿಗೆ ಸಹಕಾರಿಯಾಗುವ ನಿರೀಕ್ಷೆಗಳಿವೆ. ಎರಡು ವರ್ಷಗಳ ಹಿಂದೆ ನಡೆದ ಪಂದ್ಯದಲ್ಲಿ ಕುಲದೀಪ್ ಯಾದವ್ 5 ವಿಕೆಟ್ ಕಬಳಿಸಿದ್ದರೆ, ಕಳೆದ ವರ್ಷ ನಾಥನ್ ಲ್ಯಾನ್ ನ್ಯೂಜಿಲೆಂಡ್ ಎದುರು 10 ವಿಕೆಟ್ ಪಡೆದಿದ್ದರು. ಪಂದ್ಯಕ್ಕೆ ಮಳೆ ಬಿಡುವು ನೀಡಿದರೆ ಲಿತಾಂಶ ನಿರೀಕ್ಷಿಸಬಹುದು. ಸಿಡ್ನಿಯಲ್ಲಿ ನಡೆದ ಕಡೇ 6 ಟೆಸ್ಟ್ ಪಂದ್ಯಗಳಲ್ಲಿ ಮೂರು ಪಂದ್ಯಗಳು ಡ್ರಾಗೊಂಡಿವೆ. ಆರಂಭಿಕ ಎರಡು ದಿನ ತುಂತುರು ಮಳೆ ಅಡ್ಡಿಪಡಿಸುವ ಸಾಧ್ಯತೆಗಳಿವೆ.

    * 12: ಭಾರತ ತಂಡ ಸಿಡ್ನಿಯಲ್ಲಿ ಇದುವರೆಗೂ ಆಡಿರುವ 12 ಟೆಸ್ಟ್ ಪಂದ್ಯಗಳಲ್ಲಿ ಏಕೈಕ ಗೆಲುವು ದಾಖಲಿಸಿದೆ. 1978ರ ಜನವರಿಯಲ್ಲಿ ನಡೆದ ಪಂದ್ಯದಲ್ಲಿ ಬಿಷನ್‌ಸಿಂಗ್ ಬೇಡಿ, ಕನ್ನಡಿಗರಾದ ಬಿಎಸ್ ಚಂದ್ರಶೇಖರ್, ಪ್ರಸನ್ನ ಒಳಗೊಂಡ ಸ್ಪಿನ್ ಪಡೆದ ಆಸೀಸ್ ತಂಡಕ್ಕೆ ಕಡಿವಾಣ ಹಾಕಿತ್ತು.

    * 6 : ನಥಾನ್ ಲ್ಯಾನ್, ಇನ್ನು 6 ವಿಕೆಟ್ ಕಬಳಿಸಿದರೆ ಟೆಸ್ಟ್ ಕ್ರಿಕೆಟ್‌ನಲ್ಲಿ 400 ವಿಕೆಟ್ ಪೂರೈಸಿದಂತಾಗುತ್ತದೆ.

    * 97 : ಚೇತೇಶ್ವರ್ ಪೂಜಾರ 97 ರನ್ ಬಾರಿಸಿದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ 6 ಸಾವಿರ ರನ್ ಗಡಿ ದಾಟಲಿದ್ದಾರೆ. ರವೀಂದ್ರ ಜಡೇಜಾ 74 ರನ್‌ಗಳಿಸಿದರೆ 2 ಸಾವಿರ ರನ್ ಪೂರೈಸಲಿದ್ದಾರೆ.

    * 4: ನವದೀಪ್ ಸೈನಿ, ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ನಾಲ್ಕನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲು ಕುಲದೀಪ್ ಯಾದವ್, ಶುಭಮಾನ್ ಗಿಲ್ ಹಾಗೂ ಮೊಹಮದ್ ಸಿರಾಜ್ ಪದಾರ್ಪಣೆ ಮಾಡಿದ್ದರು.

    * 215: ಪೂಜಾರ ಇನ್ನು 215 ರನ್‌ಗಳಿಸಿದರೆ, ಆಸ್ಟ್ರೇಲಿಯಾ ವಿರುದ್ಧ ಆಸ್ಟ್ರೇಲಿಯಾ ನೆಲದಲ್ಲೇ ಸಾವಿರ ರನ್ ಪೂರೈಸಿದಂತಾಗುತ್ತದೆ. ಇದುವರೆಗೂ 9 ಪಂದ್ಯಗಳಿಂದ 17 ಇನಿಂಗ್ಸ್‌ಗಳಿಂದ 785 ರನ್ ಕಲೆಹಾಕಿದ್ದಾರೆ.

    * 4: ಭಾರತ ತಂಡದ ಜಯ ದಾಖಲಿಸಿದರೆ, ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಸತತ ನಾಲ್ಕು ಜಯ ಕಂಡಂತಾಗುತ್ತದೆ. ಇದರೊಂದಿಗೆ ಎಂಎಸ್ ಧೋನಿ ದಾಖಲೆಯನ್ನು ರಹಾನೆ ಸರಿಗಟ್ಟಲಿದ್ದಾರೆ.

    * 3: ರಹಾನೆ ನಾಯಕತ್ವದಲ್ಲಿ ಭಾರತ ಇದುವರೆಗೂ ಆಡಿರುವ ಮೂರು ಪಂದ್ಯಗಳಲ್ಲೂ ಜಯ ದಾಖಲಿಸಿದೆ. ಇದಕ್ಕೂ ಮೊದಲು 2017ರಲ್ಲಿ ಆಸ್ಟ್ರೇಲಿಯಾ ಎದುರು, 2019ರಲ್ಲಿ ಅ್ಘಾನಿಸ್ತಾನ ಎದುರು, ಪ್ರಸಕ್ತ ಸರಣಿಯ ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಭಾರತ ಗೆಲುವು ದಾಖಲಿಸಿತ್ತು.

    * 203: ಅಜಿಂಕ್ಯ ರಹಾನೆ 203 ರನ್ ಗಳಿಸಿದರೆ, ಆಸ್ಟ್ರೇಲಿಯಾ ನೆಲದಲ್ಲಿ ಆಸೀಸ್ ವಿರುದ್ಧವೇ 10 ಸಾವಿರ ರನ್ ಪೂರೈಸಿದಂತಾಗುತ್ತಿದೆ. ಅಲ್ಲದೆ, 109ರನ್ ಗಳಿಸಿದರೆ, ವಿದೇಶಿ ನೆಲದಲ್ಲಿ 3 ಸಾವಿರ ರನ್ ಗಳಿಸಿದಂತಾಗುತ್ತದೆ.

    ಪಂದ್ಯ ಆರಂಭ: ಬೆಳಗ್ಗೆ 5 ಗಂಟೆಗೆ
    ನೇರ ಪ್ರಸಾರ: ಸೋನಿ ಸಿಕ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts