More

    ಓವಲ್‌ನಲ್ಲಿ ಕಠಿಣ ಸವಾಲೆಸೆದ ಭಾರತ, ಅಂತಿಮ ದಿನದಾಟ ಕುತೂಹಲ

    ಲಂಡನ್: ಆಲ್ರೌಂಡರ್ ಆಗಿ ರೂಪುಗೊಳ್ಳುತ್ತಿರುವ ಶಾರ್ದೂಲ್ ಠಾಕೂರ್ (60 ರನ್, 72 ಎಸೆತ, 7 ಬೌಂಡರಿ, 1 ಸಿಕ್ಸರ್) ಹಾಗೂ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ (50ರನ್, 106 ಎಸೆತ, 4 ಬೌಂಡರಿ) ಜೋಡಿಯ ಭರ್ಜರಿ ಜತೆಯಾಟದಿಂದ ಭಾರತ ತಂಡ 4ನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ಗೆ 368 ರನ್‌ಗಳ ಬೃಹತ್ ಸವಾಲು ನೀಡಿದೆ. ಸರಣಿಯಲ್ಲಿ ಮುನ್ನಡೆ ಸಾಧಿಸಲು ಉಭಯ ತಂಡಗಳು ಜಿದ್ದಾಜಿದ್ದಿಗೆ ಬಿದ್ದಿದ್ದು, ಅಂತಿಮ ದಿನದಾಟ ಕುತೂಹಲ ಹುಟ್ಟಿಸಿದೆ.

    ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 3 ವಿಕೆಟ್‌ಗೆ 270 ರನ್‌ಗಳಿಂದ 4ನೇ ದಿನದಾಟ ಆರಂಭಿಸಿದ ಭಾರತ ತಂಡ 466 ರನ್‌ಗಳಿಗೆ 2ನೇ ಇನಿಂಗ್ಸ್ ಮುಗಿಸಿತು. ಪ್ರತಿಯಾಗಿ ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೆ 77 ರನ್ ಗಳಿಸಿದ್ದು, ರೋರಿ ಬರ್ನ್ಸ್ (31) ಮತ್ತು ಹಸೀಬ್ ಹಮೀದ್ (43) ಕ್ರೀಸ್‌ನಲ್ಲಿದ್ದಾರೆ. ದಿನದ ಕೊನೆಯಲ್ಲಿ ಆಂಗ್ಲ ಆರಂಭಿಕರನ್ನು ಬೇರ್ಪಡಿಸಲು ಭಾರತ ನಡೆಸಿದ ಪ್ರಯತ್ನ ಲ ನೀಡಲಿಲ್ಲ. ಅಂತಿಮ ದಿನ ಭಾರತದ ಗೆಲುವಿಗೆ 10 ವಿಕೆಟ್ ಅಗತ್ಯವಿದ್ದರೆ, ಆಂಗ್ಲರು ಇನ್ನೂ 291 ರನ್ ಗಳಿಸಬೇಕಾಗಿದೆ.

    ಮೊತ್ತ ಹಿಗ್ಗಿಸಿದ ಶಾರ್ದೂಲ್-ಪಂತ್
    ಮೊದಲ ಇನಿಂಗ್ಸ್‌ನಲ್ಲಿ ತಂಡಕ್ಕೆ ಆಸರೆಯಾಗಿದ್ದ ವೇಗಿ ಶಾರ್ದೂಲ್ ಠಾಕೂರ್ ಮತ್ತೊಮ್ಮೆ ತಂಡದ ಮೊತ್ತ ಹಿಗ್ಗಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ರಿಷಭ್ ಪಂತ್ ಜತೆಗೂಡಿ ತಂಡಕ್ಕೆ ಅದ್ಭುತ ಇನಿಂಗ್ಸ್ ಕಟ್ಟಿಕೊಟ್ಟರು. ಭೋಜನ ವಿರಾಮಕ್ಕೂ ಮೊದಲೇ ನಾಯಕ ವಿರಾಟ್ ಕೊಹ್ಲಿ (44), ರವೀಂದ್ರ ಜಡೇಜಾ (17) ಹಾಗೂ ಅಜಿಂಕ್ಯ ರಹಾನೆ (0) ವಿಕೆಟ್ ಕಳೆದುಕೊಂಡ ಭಾರತ ಸಾಧಾರಣ ಮೊತ್ತದತ್ತ ಮುಖಮಾಡಿತು. ಈ ವೇಳೆ ರಿಷಭ್ ಪಂತ್ ಹಾಗೂ ಶಾರ್ದೂಲ್ ಠಾಕೂರ್ ಜೋಡಿ ಬಿರುಸಿನ ಬ್ಯಾಟಿಂಗ್ ಮೂಲಕವೇ ತಂಡದ ಮೊತ್ತ ಏರಿಸಿತು. ಈ ಜೋಡಿ 7ನೇ ವಿಕೆಟ್ ಉಪಯುಕ್ತ 100 ರನ್ ಕಲೆಹಾಕಿತು.

    ಶಾರ್ದೂಲ್ ವಿಕೆಟ್ ಕಬಳಿಸುವ ಮೂಲಕ ಜೋ ರೂಟ್ ಈ ಜೋಡಿಗೆ ಬ್ರೇಕ್ ಹಾಕಿದರು. ಇದರ ಬೆನ್ನಲ್ಲೇ ಅರ್ಧಶತಕ ಪೂರೈಸಿ ರಿಷಭ್ ಪಂತ್ ಕೂಡ ಪೆವಿಲಿಯನ್ ಸೇರಿಕೊಂಡರು. ಕಡೇ ಹಂತದಲ್ಲಿ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಉಮೇಶ್ ಯಾದವ್ (25ರನ್, 23 ಎಸೆತ, 1 ಬೌಂಡರಿ, 2 ಸಿಕ್ಸರ್) ಹಾಗೂ ಜಸ್‌ಪ್ರೀತ್ ಬುಮ್ರಾ (24ರನ್, 38 ಎಸೆತ, 4 ಬೌಂಡರಿ) 9ನೇ ವಿಕೆಟ್‌ಗೆ 36 ರನ್ ಕಲೆಹಾಕಿತು. ಚಹಾ ವಿರಾಮದವರೆಗೂ ಬ್ಯಾಟಿಂಗ್ ಕಾಯ್ದುಕೊಂಡ ಈ ಜೋಡಿ ತಂಡದ ಮೊತ್ತವನ್ನು 450ರ ಗಡಿ ದಾಟಿಸಿತು. 10ನೇ ವಿಕೆಟ್ ಉಮೇಶ್ ಯಾದವ್ ಸಿರಾಜ್ ಜತೆಗೂಡಿ 16 ರನ್ ಕಲೆಹಾಕಿದರು.

    ಮುಂದುವರಿದ ರಹಾನೆ ವೈಫಲ್ಯ
    ಬೆಳಗ್ಗೆ ಕ್ರಮವಾಗಿ 22 ಮತ್ತು 9 ರನ್‌ಗಳಿಂದ ಆಟ ಆರಂಭಿಸಿದ ನಾಯಕ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಜೋಡಿ ಬೇಗನೆ ಬೇರ್ಪಟ್ಟಿತು. ಶನಿವಾರದ ಮೊತ್ತಕ್ಕೆ 26 ರನ್ ಪೇರಿಸಿದ್ದ ವೇಳೆ ಜಡೇಜಾ, ವೋಕ್ಸ್ ಎಸೆತದಲ್ಲಿ ಎಲ್‌ಬಿಯಾದರು. ವೋಕ್ಸ್ ಎಸೆದ ಮರು ಓವರ್‌ನಲ್ಲೇ ಅಜಿಂಕ್ಯ ರಹಾನೆ ಕೂಡ ಎಲ್‌ಬಿಯಾದರು. ಅರ್ಧಶತಕದ ಗಡಿಯಲ್ಲಿದ್ದ ಕೊಹ್ಲಿ, ಮೊಯಿನ್ ಎಸೆತದಲ್ಲಿ ರಕ್ಷಣಾತ್ಮಕವಾಗಿ ಆಡಲು ಯತ್ನಿಸಿ ಓವರ್‌ಟನ್‌ಗೆ ಕ್ಯಾಚ್ ನೀಡಿದರು.

    ಟೀಮ್ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಕರೊನಾ ಪಾಸಿಟಿವ್, ಓವಲ್ ಟೆಸ್ಟ್‌ಗೆ ಅಡ್ಡಿ ಇಲ್ಲ

    ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ 5 ತಿಂಗಳ ಗರ್ಭಿಣಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts