More

    ಮಾರಿ ಹೊಡೆದೋಡಿಸಲು ವಾರ ಆಚರಣೆ

    ಪರಶುರಾಮ ಭಾಸಗಿ ವಿಜಯಪುರ

    ಮಹಾಮಾರಿ ಕರೊನಾ ನಿಯಂತ್ರಣಕ್ಕೆ ವೈದ್ಯಕೀಯ ಲೋಕ ಅನವರತ ಶ್ರಮಿಸುತ್ತಿದ್ದರೆ ಇತ್ತ ಗ್ರಾಮೀಣ ಜನ ತಮ್ಮದೇ ಆದ ನಂಬಿಕೆ ಮತ್ತು ಸಂಪ್ರದಾಯಗಳ ಮೊರೆ ಹೋಗಿದ್ದಾರೆ. ಹಳ್ಳಿ ಹಾಗೂ ತಾಂಡಾಗಳಲ್ಲೀಗ ಕರೊನಾ ಬಾರದಿರಲೆಂದು ದಿನಕ್ಕೊಂದು ಆಚರಣೆ ಹಮ್ಮಿಕೊಳ್ಳಲಾಗುತ್ತಿದೆ. ಈಗಾಗಲೇ ಕೆಲ ತಾಂಡಾಗಳಲ್ಲಿ ‘ವಾರ’ ಆಚರಿಸಲಾಗುತ್ತಿದೆ. ಮಹಿಳೆಯರು, ಮಕ್ಕಳು, ವೃದ್ಧರಾದಿಯಾಗಿ ಎಲ್ಲರೂ ವಾರ ಪದ್ಧತಿಗೆ ಬದ್ಧರಾಗಿದ್ದಾರೆ. ಗ್ರಾಮದ ಪುರೋಹಿತರು ಹಾಗೂ ಹಿರಿಯರ ಸಲಹೆ ಮೇರೆಗೆ ವಿಶೇಷ ಆಚರಣೆ ಕೈಗೊಳ್ಳುತ್ತಿದ್ದಾರೆ.

    ಏನಿದು ವಾರ ಆಚರಣೆ?

    ವಾರಕ್ಕೊಂದು ವಿಶೇಷ ಆಚರಣೆ ಹಮ್ಮಿಕೊಳ್ಳುವುದೇ ‘ವಾರ’ ಪದ್ಧತಿ. ಐದು ವಾರಗಳಲ್ಲಿ ನಿರ್ದಿಷ್ಟ ದಿನದಂದು ಎಲ್ಲರೂ ಒಗ್ಗೂಡಿ ಪುರೋಹಿತರ ಅಣತಿಯಂತೆ ನಡೆದುಕೊಳ್ಳುವುದು ಈ ಆಚರಣೆ ವಿಶೇಷ. ಅಂದರೆ, ಒಂದು ದಿನ ಅಡುಗೆ ಮಾಡದಿರುವುದು, ಮತ್ತೊಂದು ದಿನ ಗ್ರಾಮ ದೇವತೆಗಳಿಗೆ ನೈವೇದ್ಯ, ಮಗದೊಂದು ದಿನ ಮನೆ ಸಾರಿಸಿ, ರಂಗೋಲಿ ಹಾಕುವುದು, ಬೇವಿನ ತೋರಣ ಕಟ್ಟುವುದು, ವಿಶೇಷ ಖಾದ್ಯ ತಯಾರಿಸುವುದು ಹೀಗೆ ಹತ್ತು ಹಲವು ರೀತಿ ವಾರ ಆಚರಿಸಲಾಗುತ್ತಿದೆ. ವಾರ ಆಚರಣೆ ಸಂದರ್ಭ ಯಾವುದೇ ಕೃಷಿ ಕಾರ್ಯ ಮಾಡುವಂತಿಲ್ಲ. ಎತ್ತು ಹೂಡುವಂತಿಲ್ಲ. ಹಿಂದಿನ ದಿನವೇ ಗ್ರಾಮದಲ್ಲಿ ಡಂಗುರ ಸಾರಲಾಗುತ್ತದೆ. ಆ ಪ್ರಕಾರ ಚಾಚೂ ತಪ್ಪದೇ ಎಲ್ಲರೂ ಪಾಲಿಸುತ್ತಾರೆ.

    ನಂಬಿಕೆಯ ಪ್ರತೀಕ

    ವಿಶೇಷವಾಗಿ ತಾಂಡಾಗಳಲ್ಲಿ ಇಂಥ ಆಚರಣೆ ಹೆಚ್ಚು. ಅನಾದಿ ಕಾಲದಿಂದಲೂ ಇಂಥ ಹಲವು ಸಂಪ್ರದಾಯಗಳು ತಾಂಡಾಗಳಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಹಾಗೆ ಮಾಡಿದರೆ ಯಾವುದೇ ರೋಗರುಜಿನ ಹತ್ತಿರ ಸುಳಿಯುವುದಿಲ್ಲವೆಂಬ ನಂಬಿಕೆ ಮನೆ ಮಾಡಿದೆ. ಮಳೆ ಬಾರದಿದ್ದರೆ, ಸಾಂಕ್ರಮಿಕ ಕಾಯಿಲೆ ಹರಡಿದರೆ, ಮಕ್ಕಳು ಕಾಯಿಲೆ ಬಿದ್ದರೆ, ಜಾನುವಾರು ಸಾವು-ನೋವಿಗೆ ತುತ್ತಾಗುತ್ತಿದ್ದರೆ ಇಂಥ ಆಚರಣೆಗಳ ಮೊರೆ ಹೋಗುವುದು ವಾಡಿಕೆ.
    ಇದೀಗ ಕರೊನಾ ಹಿನ್ನೆಲೆ ತಾಂಡಾ ನಿವಾಸಿಗಳು ಇಂಥದ್ದೊಂದು ಆಚರಣೆ ಮೊರೆ ಹೋಗಿದ್ದಾರೆ. ನಂಬಿಕೆಯೋ? ಮೂಢ ನಂಬಿಕೆಯೋ? ಒಟ್ಟಿನಲ್ಲಿ ಮಹಾಮಾರಿ ಎದುರಿಸುವಲ್ಲಿ ಇಂಥ ಆಚರಣೆಗಳು ಆತ್ಮಸ್ಥೈರ್ಯ ತುಂಬಲಿವೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.

    ದನಪೀಡಾ-ಜನಪೀಡಾ ಹೋಗಲಿ ಎಂದು ನಮ್ಮಲ್ಲಿ ವಾರ ಪದ್ಧತಿ ಮತ್ತು ಥಂಡಿ ಪದ್ಧತಿ ಆಚರಿಸಲಾಗುತ್ತಿದೆ. ಥಂಡಿ ಎಂದರೆ ದೇವರು ತಣ್ಣಗೆ ಇದ್ದರೆ ಊರು ತಣ್ಣಗೆ ಇರುತ್ತದೆ ಎಂಬ ನಂಬಿಕೆ. ಲಕ್ಷ್ಮಿ, ಮರಗಮ್ಮ ಹೀಗೆ ಹಲವು ದೇವತೆಗಳಿಗೆ ನೈವೇದ್ಯ ಹಿಡಿಯುತ್ತೇವೆ. ಐದು ವಾರ ಪಾಲಿಸಲಾಗುವುದು. ಯಾರೂ ಮನೆಯಲ್ಲಿ ರೊಟ್ಟಿ ಮಾಡುವಂತಿಲ್ಲ. ಒಲೆ ಹೊತ್ತಿಸುವಂತಿಲ್ಲ. ಕೊನೇ ವಾರ ಅಂಬಲಿ, ಕಿಚಡಿ ನೈವೇದ್ಯ ಮಾಡುತ್ತೇವೆ.
    ರೇವಣಸಿದ್ದ ಗೋಡಕೆ, ಸೊನಕನಹಳ್ಳಿ ಗ್ರಾಮಸ್ಥ

    ಮಾರಿ ಹೊಡೆದೋಡಿಸಲು ವಾರ ಆಚರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts