More

    ರಾಷ್ಟ್ರೀಯ ಹೆದ್ದಾರಿ ಬಂದ್

    ಇಂಡಿ: ಇಂಡಿ ತಾಲೂಕು ಸಮಗ್ರ ನೀರಾವರಿ ಮಾಡುವಂತೆ ಒತಾಯಿಸಿ ರೈತರು ಝಳಕಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಸೋಮವಾರ ಪ್ರತಿಭಟನೆ ನಡೆಸಿದರು.

    ಎತ್ತಿನಬಂಡಿಗಳು ಮತ್ತು ಟ್ರಾೃಕ್ಟರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಹೆದ್ದಾರಿಯ ಎರಡೂ ಕಡೆ ಅಂದಾಜು ಎರಡು ಕಿಮೀಗೂ ಹೆಚ್ಚು ವಾಹನಗಳು ನಿಂತಿದ್ದರಿಂದ ಜನರು ಪರದಾಡುವಂತಾಯಿತು.

    ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಜಿ. ಪಾಟೀಲ ಹಲಸಂಗಿ ಮಾತನಾಡಿ, 20 ದಿನಗಳಿಂದ ಹೋರಾಟ ಮಾಡುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಜಲಸಂಪನ್ಮೂಲ ಸಚಿವರಾಗಲಿ ಭೇಟಿ ನೀಡದಿರುವುದು ಪ್ರಜಾಪ್ರಭುತ್ವದ ದುರ್ದೈವ ಎಂದರು.

    ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಮಾತನಾಡಿ, ಕಾಲುವೆಗೆ ನೀರು ಕೊಡಿ ಇಲ್ಲವೆ ಮೊದಲು ನನಗೆ ಗುಂಡು ಹಾಕಿ. ಜೈಲಿಗೆ ಹಾಕಿ. ಆದರೆ, ಹೋರಾಟ ತೀವ್ರಗೊಳಿಸುತ್ತೇವೆ ವಿನಃ ಹಿಂದೆ ಸರಿಯುವುದಿಲ್ಲ. ರೈತರು ತಾಳ್ಮೆ ಕಳೆದುಕೊಳ್ಳುವ ಮೊದಲು ಸರ್ಕಾರ ಹೋರಾಟಕ್ಕೆ ಸ್ಪಂದಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

    ಮಾಜಿ ಶಾಸಕ ರವಿಕಾಂತ ಪಾಟೀಲ ಮಾತನಾಡಿ, ಆಲಮಟ್ಟಿ ಅಣೆಕಟ್ಟಿನ ಎತ್ತರ 524 ಮೀ. ಆಗಬೇಕು. ಇಂಡಿ ತಾಲೂಕಿನ ಎಲ್ಲ ಕಾಲುವೆಗಳಲ್ಲಿ ನೀರು ಹರಿಯಬೇಕು. ಅಲ್ಲಿಯವರೆಗೆ ಹೋರಾಟ ಮುಂದುವರಿಸುತ್ತೇವೆ ಎಂದರು.

    ಜೆಡಿಎಸ್ ಮುಖಂಡ ವಿಜಯಕುಮಾರ ಭೋಸಲೆ ಮಾತನಾಡಿ, ಗುತ್ತಿ ಬಸವಣ್ಣ ಕಾಲುವೆ 97 ಕಿ.ಮೀಯಿಂದ 147 ಕಿ.ಮೀ. ಕಾರ್ಯ ಮುಗಿದಿದ್ದು, ಇಂಡಿ ತಾಲೂಕಿನಲ್ಲಿ ನೀರೇ ಬರುವುದಿಲ್ಲ. ಈ ದಿಶೆಯಲ್ಲಿ ನೀರು ಹರಿಸುವ ಅಗತ್ಯತೆ ಇದೆ ಎಂದರು.

    ಜಿಪಂ ಸದಸ್ಯ ರಾಮು ರಾಠೋಡ, ಶ್ರೀಶೈಲಗೌಡ ಪಾಟೀಲ, ಸಿದ್ದು ಡಂಗಾ, ಮರೆಪ್ಪ ಗಿರಣಿವಡ್ಡರ, ಬಸವರಾಜ ಹಂಜಗಿ, ನಾಗೇಶ ತಳಕೇರಿ, ಮಹಿಬೂಬ ಬೇವನೂರ, ಮಾಣಿಕ ಜನಾಬ, ವಿಠ್ಠಲ ಅಂಕಲಗಿ, ಶಿವಪುತ್ರ ದುದ್ದಗಿ, ಮನೋಹರ ಬಿರಾದಾರ, ನಾನಾಗೌಡ ಪಾಟೀಲ, ತಾನಾಜಿ ಪವಾರ, ಶಿವಕುಮಾರ ಭೋಸಲೆ, ಅಂಬಣ್ಣ ವಾಗೆ, ರಾಜಕುಮಾರ ಬನಗೊಂಡೆ, ಬಸವರಾಜ ದುದ್ದಗಿ, ವಿಕಾಸ ನಿಕ್ಕಂ ಸೇರಿ ಸಾವಿರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts