More

    ಬಳ್ಕುಂಜೆ ಕಬ್ಬಿಗೆ ಹೆಚ್ಚಿದ ಬೇಡಿಕೆ

    ನಿಶಾಂತ್ ಶೆಟ್ಟಿ ಕಿಲೆಂಜೂರು

    ಕರೊನಾ ಆತಂಕದ ಮಧ್ಯೆಯೂ ಬೆಳೆದ ಎಲ್ಲ ಕಬ್ಬು ಉತ್ತಮ ಬೆಲೆಗೆ ಮಾರಾಟವಾಗಿದ್ದು, ಈ ಬಾರಿ ಬಳ್ಕುಂಜೆ ಕಬ್ಬು ಬೆಳೆಗಾರರ ಮೊಗದಲ್ಲಿ ನಗು ಅರಳಿದೆ.
    ಚೌತಿ ಹಬ್ಬ ಹತ್ತಿರವಾಗುತ್ತಿದ್ದು, ಈ ಹಬ್ಬದಲ್ಲಿ ಕಬ್ಬು ಪ್ರಮುಖ ಸ್ಥಾನ ಪಡೆದಿದೆ. ಕಬ್ಬಿನ ಜತೆ ಗಣೇಶ ಚತುರ್ಥಿ ಆಚರಿಸುವ ಕಾರಣ ಪ್ರತಿಯೊಂದು ಮನೆಯಲ್ಲೂ ಕಬ್ಬು ಖರೀದಿ ಮಾಡಲಾಗುತ್ತದೆ.

    ಕಬ್ಬು ಬೆಳೆಯಲ್ಲಿ ಕಿನ್ನಿಗೋಳಿ ಸಮೀಪದ ಬಳ್ಕುಂಜೆ ಪ್ರಸಿದ್ಧಿ ಪಡೆದಿದ್ದು, ಗಣೇಶ ಚತುರ್ಥಿ ಸಂದರ್ಭ ದ.ಕ., ಉಡುಪಿ ಜಿಲ್ಲೆಗೆ ಸಾಕಷ್ಟು ಪ್ರಮಾಣದಲ್ಲಿ ಕಬ್ಬು ಬಳ್ಕುಂಜೆಯಿಂದಲೇ ಸರಬರಾಜಾಗುತ್ತದೆ. ಹೆಚ್ಚಾಗಿ ಕಪ್ಪು ಕಬ್ಬು ಬೆಳೆಯಲಾಗುತ್ತಿದ್ದು, ಸ್ವಲ್ಪ ಪ್ರಮಾಣದಲ್ಲಿ ಬಿಳಿ ಕಬ್ಬು (ನಾಮದ) ಕೂಡ ಬೆಳೆಯುತ್ತಾರೆ. ಹಲವು ವರ್ಷಗಳಿಂದ ಬಳ್ಕುಂಜೆಯಲ್ಲಿ ಚೌತಿ ಮತ್ತು ಕ್ರೈಸ್ತರ ತೆನೆ ಹಬ್ಬಕ್ಕಾಗಿ ಕಬ್ಬು ಬೆಳೆಯುತ್ತಿದ್ದು, ಈ ಬಾರಿ 50ಕ್ಕಿಂತ ಹೆಚ್ಚಿನ ರೈತರು ಸುಮಾರು ಎರಡು ಲಕ್ಷದಷ್ಟು ಕಬ್ಬು ಬೆಳೆದಿದ್ದಾರೆ.

    ಕಬ್ಬು ಬೆಳೆಗಾರರ ಸಂಘ: ಇಲ್ಲಿನ ಜಮೀನಿನ ಕಪ್ಪು ಹೊಯ್ಗೆ ಮಣ್ಣು ಕಬ್ಬು ಬೆಳೆಗೆ ಉತ್ತಮವಾಗಿದ್ದು, ಹೇರಳ ಬೆಳೆ ಬೆಳೆಯಬಹುದು. ಈ ಬಾರಿ ತೆನೆ ಹಬ್ಬ ಮತ್ತು ಚೌತಿ ಹಬ್ಬ ಎರಡು ದಿನಗಳ ಅಂತರದಲ್ಲಿ ಬಂದಿರುವುದರಿಂದ ಕಬ್ಬಿಗೆ ಸಾಕಷ್ಟು ಬೇಡಿಕೆಯೂ ಇದೆ. ಬಳ್ಕುಂಜೆಯ ಎಲ್ಲ ಬೆಳೆಗಾರರು ಒಟ್ಟಾಗಿ ಕಬ್ಬು ಬೆಳೆಗಾರರ ಸಂಘ ರಚಿಸಿದ್ದು, ಒಂದಕ್ಕೆ 25 ರೂ.ಗಿಂತ ಕಡಿಮೆಗೆ ಮಾರಾಟವಾಗದಂತೆ ನಿರ್ಣಯಿಸಲಾಗಿದೆ. ಈ ಮೂಲಕ ಬೆಳೆಗಾರರಿಗೆ ನಷ್ಟ ಆಗುವುದನ್ನು ತಡೆಯಲಾಗಿದೆ. ಕಬ್ಬು ಖರೀದಿಗೆ ಮಾರಾಟಗಾರರು ಚೌತಿ ಹಬ್ಬಕ್ಕಿಂತ ಸುಮಾರು ಆರು ತಿಂಗಳ ಹಿಂದೆಯೇ ಬಂದು ಮಾತುಕತೆ ನಡೆಸುತ್ತಾರೆ. ಕಳೆದ ಬಾರಿ ಕರೊನಾದಿಂದ ಯಾರೂ ಖರೀದಿಗೆ ಆಸಕ್ತಿ ವಹಿಸದ ಕಾರಣ ಕೊನೆಯ ಹಂತಕ್ಕೆ 15 ರೂ.ಗೆ ಮಾರಾಟ ಮಾಡಿ ಬೆಳೆಗಾರರು ನಷ್ಟ ಅನುಭವಿಸಿದ್ದರು.

    ಜಿಲ್ಲೆಯ ಹೆಚ್ಚಿನ ಚರ್ಚ್‌ಗಳಲ್ಲಿ ಚೌತಿ ಹಬ್ಬಕ್ಕೆ ಬಳ್ಕುಂಜೆ ಕಬ್ಬಿಗೆ ಬೇಡಿಕೆ ಇದ್ದು, ಒಂದೆರಡು ರೂಪಾಯಿ ಹೆಚ್ಚಾದರೂ ಡಿಮಾಂಡ್ ಇದೆ. ಮಂಗಳೂರು, ಉಡುಪಿ, ಬಂಟ್ವಾಳ, ಪುತ್ತೂರು, ಸುರತ್ಕಲ್ ಮತ್ತಿತರ ಕಡೆಗಳಿಗೆ ಇಲ್ಲಿಂದ ಸರಬರಾಜಾಗುತ್ತಿದ್ದು, ಬಂಟ್ವಾಳ, ಕಡಬ, ನೆಲ್ಯಾಡಿ, ನಕ್ರೆ ಅಜೆಕಾರು ಮತ್ತಿತರ ಸುಮಾರು 25ಕ್ಕಿಂತಲೂ ಹೆಚ್ಚಿನ ಚರ್ಚ್‌ಗಳಿಗೆ ಈ ಬಾರಿ ಕಬ್ಬು ಸರಬರಾಜು ಮಾಡಲಾಗುತ್ತಿದೆ.

    ಭತ್ತವೂ ಉತ್ತಮ ಫಸಲು: ಕಬ್ಬು ಬೆಳೆಯಿಂದ ಭತ್ತದಲ್ಲಿ ಉತ್ತಮ ಪಸಲು ತೆಗೆಯಲು ಸಾಧ್ಯವಾಗಿದೆ. ಈ ಬಾರಿ ಕಬ್ಬು ಬೆಳೆದ ಜಮೀನಿನಲ್ಲಿ ಮುಂದಿನ ಬಾರಿ ಭತ್ತ ಬೆಳೆಯಲಾಗುತ್ತದೆ. ಇದರಿಂದ ಉತ್ತಮ ಫಸಲು ಪಡೆಯಬಹುದು.

    ಸುಮಾರು 45 ವರ್ಷಗಳಿಂದ ಕಬ್ಬು ಬೆಳೆಯುತ್ತಿದ್ದೇವೆ. ಕರೊನಾದಿಂದ ಕಬ್ಬು ಬೆಳೆಯಲ್ಲಿ ಕಳೆದ ಬಾರಿ ನಷ್ಟ ಅನುಭವಿಸಿದ್ದೇವೆ. ಈ ಬಾರಿ ತೃಪ್ತಿದಾಯಕ ಬೆಲೆ ಸಿಕ್ಕಿದೆ. ಕಳೆದ ಬಾರಿಗಿಂತ ಚ್ಚಿನ ಬೇಡಿಕೆ ಇದೆ.

    ಇಲಿಯಾಸ್ ಬಳ್ಕುಂಜೆ
    ಕಬ್ಬು ಬೆಳೆದ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts