More

    ರಾಜಧಾನಿಯಲ್ಲಿ ಐಷರಾಮಿ ಮನೆಗಳಿಗೆ ಹೆಚ್ಚಿದ ಬೇಡಿಕೆ: 9 ತಿಂಗಳಲ್ಲಿ 9,220 ಗೃಹ ಮಾರಾಟ

    ಬೆಂಗಳೂರು:ರಾಜಧಾನಿಯಲ್ಲಿ ಐಷರಾಮಿ ಮನೆಗಳ ಮಾರಾಟದಲ್ಲಿ ಹೆಚ್ಚಳವಾಗಿದೆ. 2023ರ ಜ.1ರಿಂದ ಸೆ.31ರವರೆಗೆ ನಗರದಲ್ಲಿ 1.5 ಕೋಟಿ ರೂ.ಗಿಂತ ಅಧಿಕ ಮೌಲ್ಯದ 9,220 ಐಷರಾಮಿ ಮನೆಗಳ ಮಾರಾಟವಾಗಿದ್ದು. ಇದರಿಂದಾಗಿ ಮನೆಗಳ ಮಾರಾಟದಲ್ಲಿ ಶೇ.142 ಏರಿಕೆಯಾಗಿದೆ.

    ಕಳೆದ ವರ್ಷ ಇದೇ ಅವಧಿಯಲ್ಲಿ 3,810 ಮನೆ ಮಾರಾಟವಾಗಿತ್ತು ಎಂದು ಅಂಕಿಅಂಶಗಳಿಂದ ತಿಳಿದುಬಂದಿದೆ. ಬೆಂಗಳೂರು, ಮುಂಬೈ, ಪುಣೆ, ಹೈದರಾಬಾದ್, ಚೆನ್ನೈ, ಕೊಲ್ಕತ್ತಾ ಸೇರಿ ದೇಶದ ಏಳು ನಗರಗಳಲ್ಲಿ 84,400 ಐಷರಾಮಿ ಮನೆಗಳ ಮಾರಾಟವಾಗಿವೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು, ಪುಣೆ, ಮುಂಬೈ ಹಾಗೂ ಚೆನ್ನೈಯಲ್ಲಿ ಮನೆಗಳ ಮಾರಾಟದಲ್ಲಿ ಹೆಚ್ಚಾಗಿರುವುದು ಗಮನಾರ್ಹ. ಕಳೆದ 9 ತಿಂಗಳಲ್ಲಿ ಏಳು ನಗರಗಳಲ್ಲಿ 3.5 ಲಕ್ಷ ವಸತಿ ಮಾರಾಟವಾಗಿದೆ. ಇದರಲ್ಲಿ ಶೇ.24ರಷ್ಟು 1.5 ಕೋಟಿ ರೂ.ಗಿಂತ ಅಧಿಕ ಬೆಲೆಯ 84,400 ಐಷರಾಮಿ ಮನೆಗಳನ್ನು ಜನರು ಖರೀದಿಸಿದ್ದಾರೆ.

    ಕರೊನಾದಿಂದ ಉದ್ಯಾನ ನಗರಿಯಲ್ಲಿ ಲಕ್ಷಾಂತರ ಮನೆಗಳು ಖಾಲಿಯಾಗಿತ್ತು. ಲಾಕ್‌ಡೌನ್ ಸಂದರ್ಭದಲ್ಲಿ ಪ್ರಾಣ ಉಳಿಸಿಕೊಳ್ಳಲು ಲಕ್ಷಾಂತರ ವಲಸಿಗರು ಹಾಗೂ ಕಾರ್ಪೋರೇಟ್ ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ನಗರದಿಂದ ತಮ್ಮ ಊರುಗಳಿಗೆ ವಲಸೆ ಹೋಗಿದ್ದರು. ಇದರಿಂದಾಗಿ ಬ್ಯಾಂಕ್‌ನಲ್ಲಿ ಸಾಲ ಪಡೆದು ಮನೆ ಕಟ್ಟಿರುವ ಮಾಲೀಕರು ಪರದಾಡುವಂತಾಗಿತ್ತು. ಕರೊನಾದಿಂದ ಜೀವಹಾನಿಗಿಂತಲೂ ಸಾಮಾಜಿಕ ವ್ಯವಸ್ಥೆ ಮತ್ತು ಜನಜೀವನದ ಸಹಜತೆಯನ್ನು ಬುಡಮೇಲು ಮಾಡಿದ್ದೇ ಹೆಚ್ಚಾಗಿತ್ತು. ಸಾವಿರಾರು ಜನರು ಕಟ್ಟಿಕೊಂಡಿದ್ದ ಆರ್ಥಿಕ ವ್ಯವಸ್ಥೆ ಬುಡವೇ ಶಿಥಿಲವಾಗುವ ಸ್ಥಿತಿ ಉಂಟಾಗಿತ್ತು.
    ಕಾರ್ಪೋರೇಟ್ ಕಂಪನಿಗಳಿಂದ ಉದ್ಯೋಗ ಕಡಿತ, ಸಣ್ಣಪುಟ್ಟ ಉದ್ಯೋಗಳನ್ನು ನೆಚ್ಚಿಕೊಂಡು ಜೀವನ ನಡೆಸುತ್ತಿದ್ದ ಲಕ್ಷಾಂತರ ಮಂದಿ ತಾವು ಕೆಲಸ ಮಾಡುತ್ತಿದ್ದ ನಗರ ಪಟ್ಟಣಗಳಿಂದ ಮನೆ ಖಾಲಿ ಮಾಡಿ ಹುಟ್ಟೂರಿಗೆ ಮರುವಲಸೆ ಹೋಗಿದ್ದರು. ಕಾರ್ಪೋರೇಟ್ ಕಂಪನಿಗಳು ಸಿಬ್ಬಂದಿ ಕಡಿತದ ಜತೆಗೆ ಇರುವ ಸಿಬ್ಬಂದಿಯನ್ನು ವರ್ಕ್ ್ರಂ ಹೋಮ್ ವ್ಯವಸ್ಥೆಗೆ ಒಳಪಡಿಸಿದ್ದವು. ಕೋವಿಡ್ ಬಳಿಕ ಮನೆಯಿಂದಲೇ ಕೆಲಸ ಮಾಡುವ ಪ್ರವೃತ್ತಿ ಹೆಚ್ಚಾಯಿತು. ಈ ಹಿನ್ನೆಲೆಯಲ್ಲಿ ಖರೀದಿದಾರರು ವಿಶಾಲವಾದ ಮನೆಗಳಿಗೆ ಹೆಚ್ಚು ಆದ್ಯತೆ ನೀಡುವಂತಾಗಿದೆ. ಬಾಡಿಗೆ ಮನೆಯ ಬದಲು ಖರೀದಿಗೆ ಹೆಚ್ಚು ಆಸಕ್ತಿ ತೋರುತ್ತಿರುವುದು ಕಂಡುಬಂದಿದೆ. ಕೋವಿಡ್ ಮುನ್ನ 2ಬಿಎಚ್‌ಕೆ ಮನೆಗಳಿಗೆ ಬೇಡಿಕೆ ಇತ್ತು.

    ಇದನ್ನೂ ಓದಿ:ವೈಶಿಷ್ಟ್ಯವಾಗಿ ಕನ್ನಡ ರಾಜ್ಯೋತ್ಸವ ಆಚರಿಸುವಂತೆ ನಾಗರಿಕರಿಗೆ ಬಿಬಿಎಂಪಿ ಮನವಿ

    ಹೂಡಿಕೆ ಹೆಚ್ಚಳ:
    ಬೆಂಗಳೂರು,ಮುಂಬೈ, ಹೈದರಾಬಾದ್, ಪುಣೆ, ಹೈದರಾಬಾದ್, ಅಹಮದಾಬಾದ್, ಚೆನ್ನೈ, ಕೊಲ್ಕತ್ತಾ ಹಾಗೂ ದೆಹಲಿಯಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ವರ್ಷದಿಂದ ವರ್ಷಕ್ಕೆ ಹೂಡಿಕೆಯು ಹೆಚ್ಚಳವಾಗುತ್ತಿದೆ. ದೇಶದ ಪ್ರಮುಖ ಐಟಿ ಕಂಪನಿಗಳಿರುವ, ರಿಯಾಲ್ಟಿ ಕ್ಷೇತ್ರದಲ್ಲಿ ಅತಿ ಹೆಚ್ಚು ಹೂಡಿಕೆಗೆ ಆದ್ಯತೆ ನೀಡುವ ನಗರ ಬೆಂಗಳೂರು. ಐಟಿ ಮತ್ತು ಮೂಲಸೌಕರ್ಯದಿಂದ ಸ್ಥಿರವಾದ ಪ್ರಗತಿ ಕಾಣುತ್ತಿರುವ ಬೆಂಗಳೂರು ರಿಯಾಲ್ಟಿ ಕ್ಷೇತ್ರದಲ್ಲಿ ಮತ್ತಷ್ಟು ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಇದರಿಂದ ದಿನದಿಂದ ದಿನಕ್ಕೆ ಮನೆಗಳ ಬೇಡಿಕೆ ಕೂಡ ಹೆಚ್ಚುತ್ತಲೇ ಇದೆ. ಕೇವಲ ನಗರ ಮಾತ್ರವಲ್ಲದೆ ಹೊರ ವಲಯದಲ್ಲೂ ಸಾಕಷ್ಟು ಬೇಡಿಕೆ ಬರಲಾರಂಭಿಸಿದೆ. ನಗರದ ಹೊರವಲಯದಲ್ಲಿ ವಸತಿ, ವಾಣಿಜ್ಯ ಎರಡೂ ವಿಭಾಗಗಳೂ ಬೆಳೆಯುತ್ತಿದೆ. ನಿವೇಶನಗಳು ಹಾಗೂ ಮನೆಗಳ ಮೇಲೆ ಬಂಡವಾಳ ಹಾಕುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಗ್ರಾಹಕರ ಅಭಿಲಾಷೆಗೆ ತಕ್ಕಂತೆ ಡೆವಲಪರ್‌ಗಳು ವಿಶಾಲ ಮನೆಗಳ ನಿರ್ಮಾಣ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts