More

    ಆಹಾರ, ಪಾನೀಯ ಘಟಕಕ್ಕೆ ಹೂಡಿಕೆ ಹೆಚ್ಚಳ

    ಉಡುಪಿ: ಜಿಲ್ಲೆಯ ಕೈಗಾರಿಕೆ ವಲಯ ಎರಡೆರಡು ಬಾರಿ ಲಾಕ್‌ಡೌನ್ ಹೊಡೆತಕ್ಕೆ ಸಿಲುಕಿ ನಲುಗಿದರೂ ಆಹಾರ ಸಂಸ್ಕರಣೆ ಮತ್ತು ಉತ್ಪಾದನೆ ಘಟಕಗಳಿಗೆ ಸಮಸ್ಯೆಯಾಗಿ ಪರಿಣಮಿಸಿಲ್ಲ. ಬದಲಾಗಿ ಆಹಾರ, ಪಾನೀಯ ಘಟಕಕ್ಕೆ ಬಂಡವಾಳ ಹೆಚ್ಚಳವಾಗಿದೆ. ಕೋವಿಡ್ ಎರಡನೇ ಅಲೆ ಲಾಕ್‌ಡೌನ್ ಬಳಿಕ ಕೈಗಾರಿಕೆ ಚಟುವಟಿಕೆಗಳು ಮತ್ತೆ ವೇಗ ಪಡೆದುಕೊಂಡಿವೆ.

    ಆಹಾರ ಮತ್ತು ಪಾನೀಯ ಘಟಕಗಳ ಸಂಖ್ಯೆ ಜಿಲ್ಲೆಯಲ್ಲಿ ಅತ್ಯಧಿಕವಾಗಿರುವ ಕಾರಣ ಎಂಎಸ್‌ಎಂಇ ಕೈಗಾರಿಕೆಗೆ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಶಿವಳ್ಳಿ, ನಂದಿಕೂರು, ಬೆಳಪು, ಮಿಯ್ಯರು ಸೇರಿದಂತೆ ಒಟ್ಟು 4 ಕೈಗಾರಿಕೆ ಪ್ರದೇಶ ಹಾಗೂ ಶಿವಳ್ಳಿ, ಕಾರ್ಕಳ, ಕೋಟೇಶ್ವರ ಸೇರಿದಂತೆ ಒಟ್ಟು 3 ಕೈಗಾರಿಕೆ ವಸಾಹತುಗಳಿವೆ. 2020ರ ಮಾಹಿತಿಯಂತೆ 15,280 ಘಟಕಗಳಿದ್ದು, 1,91,552.52 ಲಕ್ಷ ರೂ, ಬಂಡವಾಳ ಹೂಡಲಾಗಿದೆ. 1,17,085 ಮಂದಿಗೆ ಉದ್ಯೋಗಾವಕಾಶ ದೊರೆತಿದೆ.

    ಆಹಾರೋತ್ಪನ್ನಗಳಿಗೆ ಬಂಡವಾಳ ಹೂಡಿಕೆ: ಜಿಲ್ಲೆಯ ಆಹಾರೋತ್ಪನ್ನಗಳ ಬೇಡಿಕೆ ಹೆಚ್ಚಿದ್ದು, ಗೋಡಂಬಿ, ತೆಂಗಿನ ಎಣ್ಣೆ, ತಿಂಡಿ- ತಿನಿಸುಗಳು ಅಪಾರ ಪ್ರಮಾಣದಲ್ಲಿ ಸರಬರಾಜು, ರಫ್ತಾಗುತ್ತಿವೆ. ಈ ಕಾರಣಕ್ಕೆ ಬಂಡವಾಳಗಾರರು ಈ ರೀತಿಯ ಆಹಾರ ಉತ್ಪನ್ನ ಘಟಕಗಳಿಗೆ ಹೆಚ್ಚಿನ ಹೂಡಿಕೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸರ್ಕಾರದ ವಿವಿಧ ಯೋಜನೆಗಳನ್ನು ಬಳಸಿಕೊಂಡು ಯುವ ಉದ್ಯಮಿಗಳು ಹೂಡಿಕೆ ಮಾಡುತ್ತಿದ್ದಾರೆ. ವೋಕಲ್ ಫಾರ್ ಲೋಕಲ್ ಮೂಲಕ ಸ್ಥಳೀಯ ಉತ್ಪನ್ನಗಳ ಮಾರುಕಟ್ಟೆ ವೃದ್ಧಿಸುವ ಕೆಲಸ ನಡೆಯುತ್ತಿದೆ.

    ಹೆಚ್ಚು ಬಂಡವಾಳದ ಘಟಕಗಳು: ಆಹಾರ ಮತ್ತು ಪಾನೀಯದ 4,050 ಘಟಕಗಳಿದ್ದು, 85,247.36 ಲಕ್ಷ ರೂ. ಬಂಡವಾಳ ಹೂಡಲಾಗಿದೆ. ಜವಳಿ ಉದ್ಯಮಕ್ಕೆ 7,555.20 ಲಕ್ಷ ರೂ., ಮುದ್ರಣ ಮತ್ತು ಸಾಮಗ್ರಿಗೆ 11,553.4 ಲಕ್ಷ ರೂ., ರಬ್ಬರ್ ಮತ್ತು ಪ್ಲಾಸ್ಟಿಕ್‌ಗೆ 13,390.03 ಲಕ್ಷ ರೂ., ಸೇವಾ ವಲಯಕ್ಕೆ 11,557.06 ಲಕ್ಷ ರೂ., ಇತರ ಉತ್ಪನ್ನಗಳಿಗೆ 14,188.88 ಲಕ್ಷ ರೂ, ಬಂಡವಾಳ ಹೂಡಲಾಗಿದೆ.

    ಉದ್ಯಮ್ ಆ್ಯಪ್‌ನಲ್ಲಿ 758 ನೋಂದಣಿ: ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಎಂಎಸ್‌ಎಂಇ 2020ರ ಜುಲೈ 1ರಂದು ಉದ್ಯಮ್ ನೋಂದಣಿ ಹೆಸರಿನಲ್ಲಿ ಎಂಎಸ್‌ಎಂಇ ಉದ್ಯಮಗಳ ವರ್ಗೀಕರಣ ಮತ್ತು ನೋಂದಣಿ ಹೊಸ ಪ್ರಕ್ರಿಯೆ ಪರಿಚಯಿಸಿದೆ. ಇದರಲ್ಲಿ ಪ್ರಸ್ತುತ ಇರುವ ಹಾಗೂ ಹೊಸ ಉದ್ಯಮ ಆರಂಭಿಸುವವರು ಈ ಆ್ಯಪ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು ಇದರಲ್ಲಿ ಜಿಲ್ಲೆಯ 758 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ.

    ಆಹಾರ ಉತ್ಪನ್ನ ಪೂರಕವಾಗಿ ಉದ್ಯಮಗಳು ರೂಪುಗೊಂಡಿದ್ದು, ಆಹಾರ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಉತ್ಪಾದನೆಯಾಗುತ್ತಿವೆ. ಕ್ಯಾಶ್ಯೂ ಕಾರ್ಖಾನೆಗಳು ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸುತ್ತಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೃಹತ್ ಕೈಗಾರಿಕೆಗಳು ಜಿಲ್ಲೆಯಲ್ಲಿ ಆರಂಭಗೊಳ್ಳಲಿದೆ.
    ಗೋಕುಲ್‌ದಾಸ್ ನಾಯಕ್, ಜಂಟಿ ನಿರ್ದೇಶಕ
    ಬೃಹತ್ ಮತ್ತು ಸಣ್ಣ ಕೈಗಾರಿಕೆ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts