More

    ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ

    ತುಮಕೂರು: ಕೊಬ್ಬರಿ ಬೆಲೆ ಪಾತಾಳಕ್ಕಿಳಿಯುತ್ತಿರುವ ಆತಂಕದಲ್ಲಿ ಬೆಂಬಲ ಬೆಲೆ ಹೆಚ್ಚಿಸಲು ಹೋರಾಟಗಳು ತೀವ್ರವಾದ ಹಿನ್ನೆಲೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಆದರೆ 380 ರೂ. ಹೆಚ್ಚಿಸಿರುವುದು ಬೆಳೆಗಾರರಲ್ಲಿ ಭಾರಿ ನಿರಾಸೆ ಉಂಟುಮಾಡಿದೆ.

    ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿರುವ, ‘ತಿಪಟೂರು ಕೊಬ್ಬರಿ’ ಎಂದೇ ಖ್ಯಾತವಾಗಿರುವ ಜಿಲ್ಲೆಯ ಜನರ ಪಾಲಿನ ಹೆಮ್ಮೆಯ ಉತ್ಪನ್ನಕ್ಕೆ ಕೇಂದ್ರ ಸರ್ಕಾರ 2020ನೇ ಸಾಲಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿದ್ದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನಿಸಿದೆ.

    2019ರಲ್ಲಿ ಕ್ವಿಂಟಾಲ್ ಕೊಬ್ಬರಿಗೆ 9,920 ರೂ. ಬೆಂಬಲ ಬೆಲೆ ನೀಡಿದ್ದ ಸರ್ಕಾರ ಪ್ರಸ್ತುತ ಹೋರಾಟಗಳು, ಮನವಿಗಳು ಮತ್ತಿತರ ಒತ್ತಡಕ್ಕೆ ಮಣಿದು ಪೂರ್ವದ ಬೆಲೆಗೆ 380 ರೂ. ಸೇರಿಸಿ 10,300 ರೂ. ಘೋಷಿಸಿದೆ. ಪ್ರಪಂಚದಲ್ಲೇ ಅತೀ ಉತೃಷ್ಟವಾದ, ವಿಶೇಷವಾದ ಹಾಗೂ ಸಾಂಪ್ರದಾಯಿಕವಾಗಿ ತಯಾರಿಸಿದ ಉಂಡೆ ಕೊಬ್ಬರಿಯ ಉತ್ಪಾದನಾ ವೆಚ್ಚ ಕ್ವಿಂಟಾಲ್ ಒಂದಕ್ಕೆ 15 ಸಾವಿರ ರೂ.ಆಸುಪಾಸಿನಲ್ಲಿದೆ. ಆದರೂ, ಕೇಂದ್ರ ಸರ್ಕಾರ ಅವೈಜ್ಞಾನಿಕವಾಗಿ ಕೊಬ್ಬರಿಗೆ ಬೆಲೆ ಘೋಷಿಸಿರುವುದು ರೈತನಿಗೆ ಅನ್ಯಾಯವಾದಂತಾಗಿದೆ.

    ಬೆಲೆ ನೀಡದೆ ವಂಚನೆ: ಉತ್ಪಾದನಾ ವೆಚ್ಚಕ್ಕೆ ಹೋಲಿಸಿಕೊಂಡು ವೈಜ್ಞಾನಿಕ ರೀತಿಯಲ್ಲಿ ಅವಲೋಕಿಸಿ ರೈತ ಕುಟುಂಬವನ್ನು ಉಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕನಿಷ್ಠ 15 ಸಾವಿರ ಘೋಷಿಸಿದ್ದರೂ ರೈತರು ಖುಷಿಪಡುತ್ತಿದ್ದರು, ಆದರೆ ರೈತರ ಕೂಗಿ ಬೆಲೆ ನೀಡದೆ ವಂಚಿಸಿರುವುದು ತೆಂಗು ಬೆಳೆಗಾರರನ್ನು ಮತ್ತಷ್ಟು ಆತಂಕಕ್ಕೆದೂಡಿದೆ.

    10,300 ರೂ.ಗೆ ಇಳಿದರಷ್ಟೇ ನಫೆಡ್!: ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಇಲಾಖೆ ಪ್ರಸ್ತುತ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆಗಿಂತ ಮಾರುಕಟ್ಟೆ ಬೆಲೆ ಕಡಿಮೆಯಾದರೆ ಸರ್ಕಾರ ಖರೀದಿ ಕೇಂದ್ರ ಆರಂಭಿಸಿ ರೈತರಿಂದ ಕೊಬ್ಬರಿ ಕೊಂಡುಕೊಳ್ಳಲಿದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೂಡ ಪ್ರೋತಾಹಧನವಾಗಿ ಕೆಲವೊಂದು ಸಾವಿರ ಕೊಟ್ಟು ರೈತರಿಗೆ ನೆರವಾಗಲು ಅವಕಾಶವಿದೆ. ಆದರೆ, ವರ್ತಕರು ಬೆಂಬಲ ಬೆಲೆಗಿಂತ ಮಾರುಕಟ್ಟೆಯಲ್ಲಿ ಬೆಲೆ ಕೆಳಗಿಳಿಯದಂತೆ ನೋಡಿಕೊಂಡು ರೈತರಿಗೆ ಸಿಗುವ ಒಂದೆರಡು ಸಾವಿರಕ್ಕೂ ಕೊಕ್ಕೆ ಹಾಕುತ್ತಾರೆ.

    ಡಾ. ಎಂ.ಎಸ್.ಸ್ವಾಮಿನಾಥನ್ ನೇತೃತ್ವದ ರಾಷ್ಟ್ರೀಯ ರೈತ ಆಯೋಗದ ಶಿಫಾರಸಿನಂತೆ ಬೆಂಬಲ ಬೆಲೆ ಕನಿಷ್ಠ 30 ಸಾವಿರ ರೂ ಘೋಷಿಸಬೇಕು. ಕೇಂದ್ರದ ಕೃಷಿ ಬೆಲೆ ಮತ್ತು ವೆಚ್ಚ ಆಯೋಗ ಉಂಡೆ ಕೊಬ್ಬರಿಯ ಉತ್ಪಾದನಾ ವೆಚ್ಚವನ್ನು ಸರಿಯಾಗಿ ಪರಿಗಣಿಸದೆ ಶಿಪಾರಸು ಮಾಡಿ ಅನ್ಯಾಯವೆಸಗಿದೆ. ನಮ್ಮ ಜನಪ್ರತಿನಿಧಿಗಳು ನ್ಯಾಯ ಒದಗಿಸುವಲ್ಲಿ ಸೋತಿದ್ದಾರೆ. ಈ ಹೊಸ ಬೆಲೆಗೆ ಮಾರುಕಟ್ಟೆ
    ಸ್ಥಿರತೆಗೆ ಬರುವುದು ಕನಸು.
    ಶ್ರೀಕಾಂತ್ ಕೆಳಹಟ್ಟಿ
    ರಾಜ್ಯ ಕಾರ್ಯದರ್ಶಿ, ಬೆಲೆ ಕಾವಲು ಸಮಿತಿ, ತಿಪಟೂರು.

    ಕೊಬ್ಬರಿಗೆ ಕನಿಷ್ಠ 20 ಸಾವಿರ ರೂ. ಬೆಂಬಲ ಬೆಲೆ ನಿಗದಿ ಮಾಡಿದರಷ್ಟೇ ರೈತರ ಬದುಕು ಉಳಿಯುವುದು. ಈ ಹಿನ್ನೆಲೆಯಲ್ಲಿ ಒಂದು ದಿನದ ಸಾಂಕೇತಿಕ ಧರಣಿ ಕೂಡ ನಡೆಸಿದ್ದೆವು. ಆದರೆ, ಕೇಂದ್ರ ಒಂದು ಕೆಜಿಗೆ 3.80 ರೂ. ಹೆಚ್ಚಿಸಿರುವುದು ದುರಂತ. ಹೋರಾಟದ ಸ್ವರೂಪ ಬದಲಾಯಿಸಿ ಸರ್ಕಾರದ ಗಮನಸೆಳೆಯಬೇಕಷ್ಟೇ.
    ಎಸ್.ಪಿ. ಮುದ್ದಹನುಮೇಗೌಡ
    ಮಾಜಿ ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts