More

    ಪ್ಲೇಆಫ್​ಗಾಗಿ ಸನ್​ರೈಸರ್ಸ್​-ಲಖನೌ ಫೈಟ್; ​ಹೈದರಾಬಾದ್​ನಲ್ಲಿ ಗೆಲುವಿನ ಲಯಕ್ಕೆ ಮರಳಲು ಪೈಪೋಟಿ

    ಹೈದರಾಬಾದ್​: ಪ್ಲೇಆಫ್​ ರೇಸ್​ನಲ್ಲಿ ಮೇಲುಗೈ ಸಾಧಿಸಲು ಗೆಲುವಿನ ಅನಿವಾರ್ಯತೆಯಲ್ಲಿರುವ ತಂಡಗಳಾದ ಸನ್​ರೈಸರ್ಸ್​ ಹೈದರಾಬಾದ್​ ಮತ್ತು ಲಖನೌ ಸೂಪರ್​ಜೈಂಟ್ಸ್​, ಐಪಿಎಲ್-17ರಲ್ಲಿ ಬುಧವಾರ ಸೆಣಸಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ಪ್ಲೇಆಫ್​ ಸನಿಹ ತಲುಪಲಿದ್ದರೆ, ಸೋತ ತಂಡದ ಹಾದಿ ಕಠಿಣವಾಗಲಿದೆ.

    ಉಭಯ ತಂಡಗಳು ಇದುವರೆಗೆ ಆಡಿರುವ ತಲಾ 11 ಪಂದ್ಯಗಳಲ್ಲಿ ತಲಾ 6 ಜಯ ಮತ್ತು 5 ಸೋಲಿನೊಂದಿಗೆ ಒಂದೇ ಸ್ಥಿತಿಯಲ್ಲಿವೆ. ಆದರೆ ಸನ್​ರೈಸರ್ಸ್​ ತಂಡ ರನ್​ರೇಟ್​ನಲ್ಲಿ ಅಲ್ಪ ಮುನ್ನಡೆ ಸಾಧಿಸಿದೆ. ಉಭಯ ತಂಡಗಳು ಕಳೆದ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದು, ಪುಟಿದೇಳುವ ಹಂಬಲದಲ್ಲಿವೆ.

    ಲಖನೌ ತಂಡ ಕೆಕೆಆರ್​ ವಿರುದ್ಧ 98 ರನ್​ಗಳಿಂದ ಸೋತು ಲಯ ತಪ್ಪಿದ್ದರೆ, ಸನ್​ರೈಸರ್ಸ್​ ತಂಡ ಮುಂಬೈ ವಿರುದ್ಧ ಮೊದಲು ಬ್ಯಾಟಿಂಗ್​ ಮಾಡಿದರೂ ರನ್​ ಪ್ರವಾಹ ಹರಿಸಲಾಗದೆ 7 ವಿಕೆಟ್​ಗಳಿಂದ ಸೋತಿತ್ತು. ಹೀಗಾಗಿ ಪ್ಲೇಆಫ್​ ರೇಸ್​ನಲ್ಲಿ ಅವಕಾಶ ವೃದ್ಧಿಸಿಕೊಳ್ಳಲು ಉಭಯ ತಂಡಗಳಿಗೂ ಗೆಲುವಿನ ಅಗತ್ಯವಿದೆ. ಕೆಎಲ್​ ರಾಹುಲ್​ ಪಡೆ ಗೆದ್ದರೆ ಅಂಕಪಟ್ಟಿಯಲ್ಲಿ ಅಗ್ರ 4ರೊಳಗೆ ಮರಳಿ 3ನೇ ಸ್ಥಾನಕ್ಕೇರುವ ಅವಕಾಶ ಹೊಂದಿದೆ.

    ಏಕೈಕ ಮುಖಾಮುಖಿ
    ಲಖನೌ&ಸನ್​ರೈಸರ್ಸ್​ ತಂಡಗಳು ಹಾಲಿ ಆವೃತ್ತಿಯ ಲೀಗ್​ ಹಂತದಲ್ಲಿ ಏಕಮಾತ್ರ ಬಾರಿ ಮುಖಾಮುಖಿ ಆಗುತ್ತಿವೆ. ಕಳೆದ 2 ಆವೃತ್ತಿಗಳಲ್ಲಿ ಉಭಯ ತಂಡಗಳು 3 ಬಾರಿ ಮುಖಾಮುಖಿ ಆಗಿದ್ದು, 3ರಲ್ಲೂ ಲಖನೌ ತಂಡವೇ ಗೆದ್ದು ಅಜೇಯವಾಗಿದೆ. ಹೀಗಾಗಿ ಸನ್​ರೈಸರ್ಸ್​ ಪ್ಲೇಆಫ್​​ ಆಸೆ ಹೆಚ್ಚಿಸಲು ಈ ಇತಿಹಾಸವನ್ನು ಬದಲಾಯಿಸಬೇಕಾದ ಅಗತ್ಯವಿದೆ.

    ಪ್ಲೇಆಫ್​​ ಲೆಕ್ಕಾಚಾರ…
    ಉಭಯ ತಂಡಗಳಿಗೂ ಇನ್ನು 3 ಪಂದ್ಯ ಬಾಕಿ ಇದ್ದು, ಈ 3ರಲ್ಲೂ ಗೆದ್ದರೆ ಬೇರಾವ ಲೆಕ್ಕಾಚಾರವೂ ಅಗತ್ಯವಿಲ್ಲದೆ 18 ಅಂಕಗಳೊಂದಿಗೆ ಸರಾಗವಾಗಿ ಪ್ಲೇಆ್​ಗೇರಲಿವೆ. 2 ಪಂದ್ಯ ಗೆದ್ದರೂ ಪ್ಲೇಆಫ್​ ಅವಕಾಶವಿದೆ. ಆಗ ರನ್​ರೇಟ್​ನಲ್ಲೂ ಮೇಲುಗೈ ಸಾಧಿಸುವ ಅಗತ್ಯ ಎದುರಾಗಬಹುದು. ಇನ್ನು ಉಳಿದ 1 ಪಂದ್ಯ ಮಾತ್ರ ಗೆದ್ದರೆ, ಆಗ ಇತರ ಲಿತಾಂಶಗಳೂ ಅನುಕೂಲಕರವಾಗಿ ಬರಬೇಕಾದ ಮತ್ತು ರನ್​ರೇಟ್​ನಲ್ಲಿ ಮೇಲುಗೈ ಸಾಧಿಸಬೇಕಾದ ಒತ್ತಡ ಎದುರಾಗಲಿದೆ. ಉಳಿದ 3ರಲ್ಲೂ ಸೋತರೆ ಪ್ಲೇಆಫ್​​ ಆಸೆ ಭಗೊಳ್ಳಲಿದೆ. ಸದ್ಯ ಸನ್​-ಲಖನೌ ಎರಡೂ ತಂಡಗಳ ರನ್​ರೇಟ್​ ಮೈನಸ್​ನಲ್ಲಿವೆ. ಹೀಗಾಗಿ ದೊಡ್ಡ ಅಂತರದಿಂದ ಗೆದ್ದರೆ ಉಭಯ ತಂಡಗಳಿಗೂ ಹೆಚ್ಚಿನ ಅನುಕೂಲತೆಗಳಿವೆ. ಲಖನೌ ತಂಡ ಡೆಲ್ಲಿ (ಮೇ 14), ಮುಂಬೈ (ಮೇ 17) ವಿರುದ್ಧ ಮತ್ತು ಸನ್​ರೈಸರ್ಸ್​ ತಂಡ ಗುಜರಾತ್​ (ಮೇ 16), ಪಂಜಾಬ್​ (ಮೇ 19) ವಿರುದ್ಧ ತನ್ನ ಕೊನೇ 2 ಪಂದ್ಯಗಳನ್ನು ಆಡಲಿದೆ.

    ಮುಖಾಮುಖಿ: 3
    ಲಖನೌ: 3
    ಸನ್​ರೈಸರ್ಸ್​: 0
    ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋಸಿನಿಮಾ.

    ಸನ್​ ಪವರ್​ ಕಟ್​!
    ಪ್ಯಾಟ್​ ಕಮ್ಮಿನ್ಸ್​ ಬಳಗ ಪವರ್​ಪ್ಲೇನಲ್ಲೇ ಅಬ್ಬರಿಸುತ್ತ ಬಹುತೇಕ ಪಂದ್ಯ ವಶಪಡಿಸಿಕೊಳ್ಳುವ ಮೂಲಕ ಗಮನಸೆಳೆದಿತ್ತು. ಆದರೆ ಕಳೆದ ಕೆಲ ಪಂದ್ಯಗಳಿಂದ ಪವರ್​ಪ್ಲೇನಲ್ಲೇ ಪವರ್​ ಕಳೆದುಕೊಳ್ಳುತ್ತಿದೆ. ಇದರಿಂದಾಗಿ ಸನ್​ರೈಸರ್ಸ್​ ಯಶಸ್ಸಿಗೆ ಪವರ್​ಪ್ಲೇನಲ್ಲೇ ಸ್ಫೋಟಿಸುವುದು ಅನಿವಾರ್ಯವೆನಿಸಿದೆ. ಸನ್​ರೈಸರ್ಸ್​ ತಾನಾಡಿರುವ ಕಳೆದ 4 ಪಂದ್ಯಗಳಲ್ಲಿ 3ರಲ್ಲಿ ಸೋತು ಒತ್ತಡದಲ್ಲಿದೆ. ಬ್ಯಾಟಿಂಗ್​ ವಿಭಾಗ ಕೈಕೊಟ್ಟಿರುವುದೇ ಇದಕ್ಕೆ ಪ್ರಮುಖ ಕಾರಣವೆನಿಸಿದೆ. ಪ್ರಮುಖವಾಗಿ ಟ್ರಾವಿಸ್​ ಹೆಡ್​, ಅಭಿಷೇಕ್​ ವರ್ಮ, ಹೆನ್ರಿಕ್​ ಕ್ಲಾಸೆನ್​, ನಿತೀಶ್​ ಕುಮಾರ್​ ರೆಡ್ಡಿ ಆಟವನ್ನೇ ಸನ್​ ಅವಲಂಬಿಸಿದೆ. ಬೌಲಿಂಗ್​ ವಿಭಾಗದಲ್ಲಿ ಕಮ್ಮಿನ್ಸ್​ ಪಡೆ ಹೆಚ್ಚಿನ ವೈವಿಧ್ಯತೆ ಹೊಂದಿದೆ.

    ಲಖನೌಗೆ ಲಕ್​ ನಿರೀಕ್ಷೆ
    ಲಖನೌ ತಂಡ ತನ್ನ ಕೊನೇ 3 ಲೀಗ್​ ಪಂದ್ಯಗಳನ್ನು ಎದುರಾಳಿ ನೆಲದಲ್ಲೇ ಆಡಲಿದೆ. ಇದು ಪ್ಲೇಆ್​ ಸವಾಲನ್ನು ತುಸು ಕಠಿಣಗೊಳಿಸಿದೆ. ಕೆಕೆಆರ್​ ವಿರುದ್ಧದ ಕಳೆದ ಪಂದ್ಯದಲ್ಲಿ ತವರಿನಲ್ಲೇ 200 ಪ್ಲಸ್​ ಮೊತ್ತ ಬಿಟ್ಟುಕೊಟ್ಟಿದ್ದ ಎಲ್​ಎಸ್​ಜಿ ಬಳಿಕ ಬ್ಯಾಟಿಂಗ್​ನಲ್ಲಿ ದಯನೀಯ ವೈಫಲ್ಯ ಅನುಭವಿಸಿತ್ತು. ಇದರಿಂದ ಪುಟಿದೆದ್ದು ಬರಬೇಕಾದರೆ ನಾಯಕ ಕೆಎಲ್​ ರಾಹುಲ್​, ಮಾರ್ಕಸ್​ ಸ್ಟೋಯಿನಿಸ್​ ಮತ್ತು ನಿಕೋಲಸ್​ ಪೂರನ್​ ಇನ್ನಷ್ಟು ಜವಾಬ್ದಾರಿಯುತ ಆಟವಾಡುವುದು ಅಗತ್ಯವಾಗಿದೆ. ಬೌಲಿಂಗ್​ ವಿಭಾಗದಲ್ಲಿ ಯುವ ವೇಗಿ ಮಯಾಂಕ್​ ಯಾದವ್​ ಮತ್ತು ಮೊಹ್ಸಿನ್​ ಖಾನ್​ ಗಾಯದ ಸಮಸ್ಯೆ ತಂಡಕ್ಕೆ ಹಿನ್ನಡೆ ತಂದಿದೆ.

    ಅನಾರೋಗ್ಯದ ನಡುವೆಯೂ ಆಡಿ ಆರ್​ಸಿಬಿ ಗೆಲುವಿನ ರೂವಾರಿ ಎನಿಸಿದ ಮೊಹಮದ್​ ಸಿರಾಜ್!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts