More

    ಸರ್ವೀಸ್ ರಸ್ತೆ ಕೆಲಸ ಅಪೂರ್ಣ, ಮಳೆ ನೀರು ನಿಂತು ಸಂಚಾರಕ್ಕೆ ತೊಡಕು

    ಪಡುಬಿದ್ರಿ: ಬೈಪಾಸ್, ಚತುಷ್ಪಥ ಪರ -ವಿರೋಧದ ಬೇಡಿಕೆ ಮಧ್ಯೆ ಹಲವು ವರ್ಷಗಳ ರಾಜಕೀಯ ಹೊಯ್ದಟ ಬಳಿಕ 2015ರಲ್ಲಿ ಪಡುಬಿದ್ರಿ ಪೇಟೆಯಲ್ಲೇ ಚತುಷ್ಪಥ ಕಾಮಗಾರಿಗೆ ಚಾಲನೆ ದೊರೆತು ಐದು ಮುಂಗಾರು ಕಳೆದರೂ ಕೆಲಸ ಇನ್ನೂ ಕುಂಟುತ್ತ ಸಾಗುತ್ತಿದೆ.

    ಎರ್ಮಾಳು ಕಲ್ಸಂಕದಿಂದ ಪಡುಬಿದ್ರಿ ಬಂಟರ ಸಂಘದವರೆಗಿನ ಕೇವಲ ಒಂದೂವರೆ ಕಿ.ಮೀ. ವ್ಯಾಪ್ತಿಯ ಚತುಷ್ಪಥ ಹೆದ್ದಾರಿ ಕಾಮಗಾರಿ ಗ್ರಾಪಂ ಸೇರಿ ಹಲವು ಸಂಘಟನೆಗಳ ಪ್ರತಿಭಟನೆ ಬಳಿಕ ಶೇ.80ರಷ್ಟು ಭಾಗ ನಿಧಾನವಾಗಿಯೇ ಪೂರ್ಣಗೊಂಡಿವೆ. ಆದರೂ ಚರಂಡಿ ಸಹಿತ ಎರ್ಮಾಳು ಕಲ್ಸಂಕದ ಒಂದು ಪಾರ್ಶ್ವದ ಸೇತುವೆ ಹಾಗೂ ಅರ್ಧ ಕಿ.ಮೀ. ಚತುಷ್ಪಥ ಕಾಮಗಾರಿ ಈ ಮಳೆಗಾಲಕ್ಕೂ ಪೂರ್ಣಗೊಳ್ಳುವುದು ಅನುಮಾನ.

    ಲಾಕ್‌ಡೌನ್ ಸಮಯದಲ್ಲಿ ಪಡುಬಿದ್ರಿ ಪೇಟೆ ಭಾಗದಲ್ಲಿ ಸರ್ವೀಸ್ ರಸ್ತೆಗೆ ಡಾಂಬರು ಅಳವಡಿಸಿದ್ದರೂ ಒಂದು ಪಾರ್ಶ್ವದಲ್ಲಿ ಮಳೆ ನೀರು ಹರಿಯುವ ಚರಂಡಿ ಅಪೂರ್ಣವಾಗಿದೆ. ಸರ್ವೀಸ್ ರಸ್ತೆ ನಿರ್ಮಾಣಕ್ಕಾಗಿ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಸಂಪರ್ಕಿಸುವ ರಸ್ತೆಗೆ ಸುಮಾರು 30 ವರ್ಷ ಹಿಂದೆ ನಿರ್ಮಿಸಿದ್ದ ಪ್ರವೇಶ ದ್ವಾರವನ್ನು ಎರಡು ತಿಂಗಳ ಹಿಂದೆ ಕೆಡವಿದ್ದರೂ, ಕೆಲಸ ನಡೆದಿಲ್ಲ. ಈ ಭಾಗದಲ್ಲಿ ಮಳೆ ನೀರು ನಿಂತು ಜನ ಹಾಗೂ ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ.

    ಎರ್ಮಾಳು ಕಲ್ಸಂಕ ಬಳಿ ಕಾಮಿನಿ ಹೊಳೆ ತೋಡಿಗೆ ಅಡ್ಡಲಾಗಿ ಎರಡು ಸೇತುವೆಗಳು 2018ರಲ್ಲಿ ಪೂರ್ಣವಾಗಬೇಕಿದ್ದರೂ, ಕೇವಲ ಒಂದು ಭಾಗದ ಸೇತುವೆ ನಿರ್ಮಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಇನ್ನೊಂದು ಪಾರ್ಶ್ವದ ಸೇತುವೆ ಕೆಲಸ ಮೇ ತಿಂಗಳಲ್ಲಿ ಆರಂಭಿಸಿದ್ದರೂ ಸದ್ಯ ಸ್ಥಗಿತಗೊಂಡಿದೆ. ಸೇತುವೆ ಉತ್ತರ ಭಾಗದ ಹೆದ್ದಾರಿ ಇಕ್ಕೆಲಗಳಲ್ಲಿ ಮಣ್ಣು ರಾಶಿ ಹಾಕಲಾಗಿದ್ದು, ಕೃತಕ ನೆರೆಗೆ ಕಾರಣವಾಗುತ್ತಿದೆ. ಕಳೆದ ಮಳೆಗಾಲದಲ್ಲಿ ನೆರೆಯಿಂದ ಹೆದ್ದಾರಿ ಮುಳುಗಡೆಯಾಗಿ ವಾಹನ ಸಂಚಾರ ಸ್ಥಗಿತಗೊಂಡಿತ್ತು, ರಾಶಿ ಹಾಕಿರುವ ಮಣ್ಣು ತೆರವು ಮಾಡಿ ಮಳೆ ನೀರು ಹರಿಯಲು ಅವಕಾಶ ಕಲ್ಪಿಸದಿದ್ದಲ್ಲಿ ಈ ಬಾರಿಯೂ ಕಂಟಕ ತಪ್ಪಿದ್ದಲ್ಲ. ಪೂರ್ಣಗೊಂಡ ಪೇಟೆ ಭಾಗದ ಕೆಲಸದ ಗುಣಮಟ್ಟ ಕಳಪೆಯಾಗಿದ್ದು, ಈಗಾಗಲೇ ಹಲವೆಡೆ ಡಾಂಬರು ಕಿತ್ತು ಹೋಗಿದೆ.

    ನಿರ್ಮಾಣವಾಗದ ಬಸ್ ನಿಲ್ದಾಣ
    ಮಂಗಳೂರು ಕಡೆಗೆ ಹಾಗೂ ಕಾರ್ಕಳ, ಉಡುಪಿಗೆ ತೆರಳುವ ಪ್ರಯಾಣಿಕರು ಬಸ್ ನಿಲ್ದಾಣವಿಲ್ಲದೆ ಬಿಸಿಲಿನಲ್ಲೇ ನಿಲ್ಲುವಂತಾಗಿದೆ. ಬಸ್ ನಿಲ್ದಾಣ ಎಲ್ಲಿ ನಿರ್ಮಾಣವಾಗಬೇಕು ಎಂಬ ಗೊಂದಲ ಇನ್ನೂ ಮುಗಿದಿಲ್ಲ. ಅಲ್ಲದೆ ಆಟೋರಿಕ್ಷಾ, ಟೂರಿಸ್ಟ್ ಕಾರು, ಟೆಂಪೋ ನಿಲುಗಡೆಗೂ ಇಲ್ಲಿ ಸೂಕ್ತ ಜಾಗವಿಲ್ಲ. ರಿಕ್ಷಾ ಹಾಗೂ ವಾಣಿಜ್ಯ ಮಳಿಗೆಗಳಿಗೆ ಬರುವವರು ವಾಹನಗಳನ್ನು ಸರ್ವೀಸ್ ರಸ್ತೆಯಲ್ಲೇ ನಿಲುಗಡೆ ಮಾಡುತ್ತಿರುವುದರಿಂದ ಬಸ್‌ಗಳು ಹೆದ್ದಾರಿಯಲ್ಲೇ ಪ್ರಯಾಣಿಕರನ್ನು ಹತ್ತಿ ಇಳಿಸುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

    ಎರಡು ವಾರಗಳ ಹಿಂದೆ ಗುತ್ತಿಗೆದಾರ ಕಂಪನಿಯವರನ್ನು ಕರೆಯಿಸಿ ಹೆದ್ದಾರಿ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಆದರೆ ಕರೊನಾದಿಂದ ಕಾರ್ಮಿಕರ ಕೊರತೆಯಿರುವುದಾಗಿ ಕಂಪನಿ ತಿಳಿಸಿದೆ. ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರೂ, ಸಮಯ ಮಿತಿ ತಿಳಿಸಿಲ್ಲ.
    – ಕೆ.ರಾಜು, ಉಪ ವಿಭಾಗಾಧಿಕಾರಿ ಕುಂದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts