More

    ಬಜೆಟ್​ನಲ್ಲಿ ಆದಾಯ ತೆರಿಗೆ ಯಥಾಸ್ಥಿತಿ: ಚುನಾವಣೆ ಹೊಸ್ತಿಲಲ್ಲೇ ಮಧ್ಯಮ ವರ್ಗದವರಿಗೆ ನಿರಾಸೆ ಆಗಿದ್ದೇಕೆ?

    ನವದೆಹಲಿ: ಆದಾಯ ತೆರಿಗೆ ಮಿತಿಯಲ್ಲಿ ಹೆಚ್ಚಳ ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದ ಆದಾಯ ತೆರಿಗೆ ಪಾವತಿದಾರರಿಗೆ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್​ ನಿರಾಸೆ ಮೂಡಿಸಿದೆ. ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಬಜೆಟ್​ ಭಾಷಣದಲ್ಲಿ ಸ್ಪಷ್ಟವಾಗಿಯೇ ಘೋಷಣೆ ಮಾಡಿದ್ದಾರೆ.

    ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆದಾಯ ತೆರಿಗೆದಾರರ, ಅದರಲ್ಲೂ ವಿಶೇಷವಾಗಿ ಮಧ್ಯಮ ವರ್ಗದವರ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಆದಾಯ ತೆರಿಗೆ ಸ್ಲ್ಯಾಬ್​ ಮಿತಿ ಹೆಚ್ಚಿಸಲು ಬಜೆಟ್​ನಲ್ಲಿ ಘೋಷಣೆ ಹೊರಬೀಳಬಹುದು ಎಂಬ ನಿರೀಕ್ಷೆ ಈ ಮೂಲಕ ಹುಸಿಯಾಗಿದೆ.

    ಹೊಸ ತೆರಿಗೆ ಪಾವತಿ ಪದ್ಧತಿಯಲ್ಲಿ ತೆರಿಗೆ ಮಿತಿಯ ಹೆಚ್ಚಳವನ್ನು ಜನರು ನಿರೀಕ್ಷಿಸಿದ್ದರು. ಇದರ ಜತೆಗೆ ಹಳೆಯ ಪದ್ಧತಿಯನ್ನೇ ಮುಂದುವರಿಸಿರುವ ತೆರಿಗೆದಾರರು, ಕನಿಷ್ಠ ಪಕ್ಷ ಸ್ಟ್ಯಾಂಡರ್ಡ್ ಡಿಡಕ್ಷನ್ ಸ್ಲ್ಯಾಬ್​ನಲ್ಲಿ ಕೊಂಚ ಏರಿಕೆ ಮಾಡಬಹುದು ಎಂದು ಅಪೇಕ್ಷೆ ಹೊಂದಿದ್ದರು. ಆದರೆ, ಚುನಾವಣೆ ಹೊಸ್ತಿಲಲ್ಲಿ ಕೂಡ ಕೇಂದ್ರ ಸರ್ಕಾರವು ಮಧ್ಯಮ ವರ್ಗದವರಿಗೆ ನೆಮ್ಮದಿ ನೀಡುವ ಇಂತಹ ಕ್ರಮವನ್ನು ಕೈಗೊಂಡಿಲ್ಲ. ಹಿಂದಿನ ತೆರಿಗೆ ನೀತಿಯನ್ನೇ ಯಥಾಸ್ಥಿತಿಯಲ್ಲಿ ಮುಂದುವರಿಸಿದೆ.

    ಗುರುವಾರ ಮಧ್ಯಂತರ ಬಜೆಟ್​ ಮಂಡಿಸಿದ ನಿರ್ಮಲಾ ಸೀತಾರಾಮನ್​ ಅವರು, ಆಮದು ಸುಂಕ ಸೇರಿದಂತೆ ನೇರ ಮತ್ತು ಪರೋಕ್ಷ ತೆರಿಗೆಗಳ ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದರು.

    ಸರ್ಕಾರವು ತೆರಿಗೆ ದರಗಳನ್ನು ಕಡಿಮೆ ಮಾಡಿದೆ ಮತ್ತು ತರ್ಕಬದ್ಧಗೊಳಿಸಿದೆ. ಹೊಸ ತೆರಿಗೆ ಯೋಜನೆಯಡಿ ರೂ. 2.2 ಲಕ್ಷದಿಂದ 7 ಲಕ್ಷದವರೆಗೆ ಆದಾಯ ಹೊಂದಿರುವವರಿಗೆ ಯಾವುದೇ ತೆರಿಗೆ ಬಾಧ್ಯತೆ ಇರುವುದಿಲ್ಲ. ಚಿಲ್ಲರೆ ವ್ಯಾಪಾರಕ್ಕೆ ಅಂದಾಜು ತೆರಿಗೆ (presumptive taxation) ಮಿತಿಯನ್ನು 2 ಕೋಟಿಯಿಂದ 3 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಇದೇ ರೀತಿ ಅಂದಾಜು ತೆರಿಗೆಗೆ ಅರ್ಹರಾದ ವೃತ್ತಿಪರರಿಗೆ ತೆರಿಗೆ ಮಿತಿಯನ್ನು 50 ಲಕ್ಷದಿಂದ 75 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಅಲ್ಲದೆ, ಕಾರ್ಪೊರೇಟ್ ತೆರಿಗೆ ದರವನ್ನು ಅಸ್ತಿತ್ವದಲ್ಲಿರುವ ದೇಶೀಯ ಕಂಪನಿಗಳಿಗೆ 30% ರಿಂದ 22% ಕ್ಕೆ ಇಳಿಸಲಾಗಿದೆ. ಅಲ್ಲದೆ, ಹೊಸ ಉತ್ಪಾದನಾ ಕಂಪನಿಗಳಿಗೆ ಇದನ್ನು 15 ಪ್ರತಿಶತಕ್ಕೆ ಕಡಿತ ಮಾಡಲಾಗಿದೆ ಎಂದು ಅವರು ಹೇಳಿದರು.

    ತೆರಿಗೆದಾರರ ಕೊಡುಗೆಗಳನ್ನು ದೇಶದ ಅಭಿವೃದ್ಧಿ ಮತ್ತು ಅದರ ಜನರ ಕಲ್ಯಾಣಕ್ಕಾಗಿ ಬುದ್ಧಿವಂತಿಕೆಯಿಂದ ಬಳಸಲಾಗಿದೆ ಎಂದು ಸೀತಾರಾಮನ್ ಭರವಸೆ ನೀಡಿದರು. “ತೆರಿಗೆದಾರರರು ನೀಡುತ್ತಿರುವ ಬೆಂಬಲಕ್ಕಾಗಿ ನಾನು ಅವರನ್ನು ಶ್ಲಾಘಿಸುತ್ತೇನೆ” ಎಂದು ಅವರು ಹೇಳಿದರು.

    ತೆರಿಗೆ ಪಾವತಿಸುವವರ ಸಂಖ್ಯೆ 2.4 ಪಟ್ಟು ಹೆಚ್ಚಾಗಿದೆ. ಅಲ್ಲದೆ, 2014 ರಿಂದ ನೇರ ತೆರಿಗೆ ಸಂಗ್ರಹವು ಮೂರು ಪಟ್ಟು ಹೆಚ್ಚಾಗಿದೆ. ತೆರಿಗೆ ರಿಟರ್ನ್‌ಗಳ ಪ್ರಕ್ರಿಯೆಯ ಸಮಯವನ್ನು 2014ನೇ ಹಣಕಾಸು ವರ್ಷದಲ್ಲಿ 93 ದಿನಗಳಿಂದ 10 ದಿನಗಳಿಗೆ ಕಡಿತ ಮಾಡಲಾಗಿದೆ. ಮರುಪಾವತಿ ಪ್ರಕ್ರಿಯೆಯನ್ನೂ ತ್ವರಿತಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

    2025-26ರಲ್ಲಿ ವಿತ್ತೀಯ ಕೊರತೆಯನ್ನು ಶೇಕಡಾ 4.5ಕ್ಕೆ ತಗ್ಗಿಸಲು ಸರ್ಕಾರವು ವಿತ್ತೀಯ ಬಲವರ್ಧನೆಯ ಹಾದಿಯಲ್ಲಿದೆ. 2014ರಿಂದ ಸರಕು ಮತ್ತು ಸೇವಾ ತೆರಿಗೆಯ (ಜಿಎಸ್​ಟಿ) ತೆರಿಗೆ ಮೂಲವು ಎರಡು ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts