More

  ಅರಿಯಬೇಕಿದೆ ವಚನಗಳ ಮೂಲ ತತ್ವ

  ಬಸವಕಲ್ಯಾಣ: ವಚನಗಳಲ್ಲಿನ ಮೂಲ ತತ್ವ ಅರಿಯುವುದು ಅನಿವಾರ್ಯ. ಬಸವಣ್ಣನವರನ್ನು ಧರ್ಮದ ಚೌಕಟ್ಟಿನಾಚೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ನೆಲೆಯಲ್ಲಿ ಶ್ರೇಷ್ಠ ದಾರ್ಶನಿಕರಾಗಿ ನೋಡಿದರೆ ಹೊಸ ಹೊಸ ಚಿಂತನೆಗಳು ತೆರೆದುಕೊಳ್ಳುತ್ತವೆ ಎಂದು ಬೆಂಗಳೂರು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅಭಿಪ್ರಾಯ ಪಟ್ಟರು.

  ಶ್ರೀ ಡಾ.ಶರಣಬಸವಪ್ಪ ಅಪ್ಪ ಮಹಾದಾಸೋಹ ಪೀಠಾರೋಹಣಗೈದು ೪೦ ವರ್ಷ ಸಂದ ಸವಿನೆನಪಿಗಾಗಿ ಕಲಬುರಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಮಹಾತ್ಮ ಶ್ರೀ ಬಸವೇಶ್ವರ ಅಧ್ಯಯನ ಪೀಠ, ಶರಣಬಸವ ವಿಶ್ವವಿದ್ಯಾಲಯ ಸಹಯೋಗದಡಿ ನಗರದ ಎಸ್‌ಎಸ್‌ಕೆ ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ, ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ವಚನ ಸಾಹಿತ್ಯ: ಬಹುಶಿಸ್ತೀಯ ತಾತ್ವಿಕ ನೆಲೆಗಳು ಕುರಿತ ಎರಡು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಬಸವ ಪಥದತ್ತ ಸಾಗುವಂತೆ ಮಾಡಿದರೆ ಈ ಸೆಮಿನಾರ್ ಅರ್ಥಪೂರ್ಣವಾಗುತ್ತದೆ ಎಂದರು.

  ಅನುಭವ ಮಂಟಪವೇ ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವ ನೆಲೆ ಎಂದು ಪ್ರಧಾನಿ ನರೇಂದ್ರ ಮೋದಿ ಜಗತ್ತಿಗೆ ಸಾರಿದ್ದಾರೆ. ವಿಶ್ವದ ಪ್ರಜಾಪ್ರಭುತ್ವಕ್ಕೆ ಬಸವಕಲ್ಯಾಣ ಬೀಜ ಸ್ವರೂಪವಾಗಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಈ ನೆಲದ ಬಗ್ಗೆ ಅಭಿಮಾನವಿರಬೇಕು. ಬದುಕಿನ ಧರ್ಮವನ್ನು ಬಸವಣ್ಣನವರು ಕೊಟ್ಟಿದ್ದಾರೆ. ಬದುಕು ತಿದ್ದುವ ಎಲ್ಲ ನೆಲೆಗಳು ವಚನಗಳಲ್ಲಿವೆ. ಲೋಕದ ಅನುಭವ, ಅನುಭಾವ, ತತ್ವ-ಸಿದ್ಧಾಂತಗಳನ್ನು ಮರ‍್ನಾಲ್ಕು ಸಾಲಿನಲ್ಲಿ ಶರಣರು ವಚನಗಳ ಮೂಲಕ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.

  ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ವಿಕ್ರಮ ವಿಸಾಜಿ ಆಶಯ ಭಾಷಣ ಮಾಡಿ, ಪಶ್ಚಿಮದ ವಿಚಾರಗಳೇ ಶ್ರೇಷ್ಠ ಎಂದು ಒಂದು ಕಾಲದಲ್ಲಿ ತಿಳಿದುಕೊಂಡಿದ್ದ ನಮಗೆ ಅದಕ್ಕಿಂತ ಪ್ರಖರ ವಿಚಾರ, ಚಿಂತನೆಗಳನ್ನು ಸ್ಥಳೀಯವಾದ ವಚನ ಸಾಹಿತ್ಯ ರೂಪಿಸಿವೆ ಎಂಬುದನ್ನು ಅರಿಯಬೇಕಿದೆ. ಪಶ್ಚಿಮದವರು ಕಲಿಯಬೇಕಾದ ಜ್ಞಾನ ಸೃಷ್ಟಿ ನೆಲ ಕಲ್ಯಾಣ. ಶರಣರು ಸ್ಥಳೀಯ ಮತ್ತು ಜಾಗತಿಕ ಮಟ್ಟದ ಚಿಂತಕರು. ವಚನಗಳು ಸ್ಥಳೀಯ ಮತ್ತು ವಿಶ್ವಾತ್ಮಕ ನೆಲೆಗೆ ನಿಲ್ಲುವಂತಹ ಚಿಂತನೆಗಳನ್ನು ರೂಪಿಸಿವೆ ಎಂದು ತಿಳಿಸಿದರು.

  ಅಧ್ಯಕ್ಷತೆ ವಹಿಸಿದ್ದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಬದುಕಿನ ಮಾರ್ಗ ವಚನ ಸಾಹಿತ್ಯದಲ್ಲಿದೆ. ಈ ಸಾಹಿತ್ಯ ರಚನೆಯಾದ ಕಲ್ಯಾಣ ಅಯೋಧ್ಯೆ ಮಾದರಿಯಲ್ಲಿ ಅಭಿವೃದ್ಧಿ ಹೊಂದಬೇಕು. ವಿಶ್ವದ ಜನ ಕಲ್ಯಾಣಕ್ಕೆ ಬಂದು ಬಸವ ತತ್ವ ತಿಳಿಯುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

  See also  ಐಕ್ಯ ಸ್ಥಳಕ್ಕೆ ಬಸವಭೂಮಿ ಜೋಡಿಸಿ

  ಸಾನ್ನಿಧ್ಯ ವಹಿಸಿದ್ದ ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಶರಣಬಸವ ವಿಶ್ವವಿದ್ಯಾಲಯ ಕುಲಸಚಿವ ಡಾ.ಅನೀಲಕುಮಾರ ಬಿಡವೆ ಮಾತನಾಡಿದರು.

  ಬಸವೇಶ್ವರ ದೇವಸ್ಥಾನ ವಿಶ್ವಸ್ಥ ಸಮಿತಿ ಅಧ್ಯಕ್ಷ ಶಶಿಕಾಂತ ದುರ್ಗೆ, ಪ್ರೊ.ಆರ್.ಡಿ. ಬಾಲಿಕಿಲೆ, ಶಾಂತಕುಮಾರ ಬಾಬನಗೋಳ, ಪ್ರೊ.ವಿಠೋಬಾ ಡೊಣ್ಣೇಗೌಡರು, ಪ್ರೊ.ಕಲ್ಯಾಣಪ್ಪ ನಾವದಗಿ, ಸೂರ್ಯಕಾಂತ ನಾಸೆ, ಅಂಬರೀಶ ಭೀಮಾಣೆ, ಸುಮನರೆಡ್ಡಿ, ಜ್ಯೋತಿ ಪಾಟೀಲ್, ಭಾರತಿ ಮಠ, ವೈಶಾಲಿ ಹಾವಶೆಟ್ಟೆ, ಚನ್ನಮ್ಮ ದಾಮಾ, ರಾಧಿಕಾ ಜ್ಯೋತೆಪ್ಪ, ಶರಣು ಮಠಪತಿ, ದೀಪಕ ಕಾಡಾದಿ, ಪ್ರಿಯಾ ಭುರಾಳೆ ಇತರರಿದ್ದರು.

  ಡಾ.ಕಲ್ಯಾಣರಾವ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ.ಬಸವರಾಜ ಎವಲೆ ಸ್ವಾಗತಿಸಿದರು. ಡಾ.ಸಾರಿಕಾದೇವಿ ಕಾಳಗಿ ನಿರೂಪಣೆ ಮಾಡಿದರು. ಡಾ.ಶಿವಕುಮಾರ ಪಾಟೀಲ್ ವಂದಿಸಿದರು. ವಚನ ಸಹಿತ್ಯದ ತಾತ್ವಿಕ ನೆಲೆಗಳು ಎಂಬ ಗ್ರಂಥವನ್ನು ಬಸವರಾಜ ದೇಶಮುಖ ಲೋಕಾರ್ಪಣೆ ಮಾಡಿದರು.

  ವಿಶ್ವ ಸಾಂಸ್ಕೃತಿಕ ಇತಿಹಾಸ ಪುಟಕ್ಕೆ
  ಮೌಲ್ಯ ತುಂಬಿದ ವಚನಕಾರರು

  ವಿಶ್ವಕ್ಕೆ ವಚನ ಸಾಹಿತ್ಯ ಕೊಟ್ಟ ನೆಲ ಬಸವಕಲ್ಯಾಣ. ವಿಶ್ವದ ಸಾಂಸ್ಕೃತಿಕ ಇತಿಹಾಸ ಸಂಪುಟದಲ್ಲಿ ಖಾಲಿ ಉಳಿದಿದ್ದ ಪುಟಗಳನ್ನು ವಚನಗಳ ಮೂಲಕ ಮೌಲ್ಯಗಳನ್ನು ವಚನಕಾರರು ತುಂಬಿದ್ದಾರೆ ಎಂದು ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಹೇಳಿದರು. ೪೦ ವರ್ಷಗಳಿಂದ ಶ್ರೀ ಡಾ.ಶರಣಬಸವಪ್ಪ ಅಪ್ಪ ಅವರು ಶೈಕ್ಷಣಿಕ, ಸಾಹಿತ್ಯಿಕ, ಧಾರ್ಮಿಕ ಸೇರಿ ಅನೇಕ ಕ್ಷೇತ್ರಗಳಲ್ಲಿ ಮಹತ್ವದ ಕಾರ್ಯಗಳನ್ನು ಮಾಡಿ ಜನಮಾನಸಕ್ಕೆ ತಲುಪಿಸಿದ್ದಾರೆ. ದೇಶದ ಸಂಸತ್ ಭವನದ ಎದುರು ಬಸವೇಶ್ವರ ಮೂರ್ತಿ ಅನಾವರಣಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರು ಸಮಾಜಕ್ಕೆ ನೀಡಿದ ಕೊಡುಗೆ ಅನನ್ಯ ಎಂದು ಬಣ್ಣಿಸಿದರು. ದೇವವಾಣಿ ಜನವಾಣಿಯಾಗದಿದ್ದಾಗ ಜನವಾಣಿಯನ್ನೇ ದೇವವಾಣಿ ಮಟ್ಟಕ್ಕೇರಿಸಿದವರು ಶರಣರು. ಮಾನವನ ಬದುಕಿನಲ್ಲಿ ಆತ್ಮಸ್ಥೆÊರ್ಯ ತುಂಬುವ ಕೆಲಸ ಶರಣರು ವಚನ ಸಾಹಿತ್ಯದ ಮೂಲಕ ಮಾಡಿದ್ದಾರೆ. ಅವರು ತೋರಿದ ಮಾರ್ಗದಲ್ಲಿ ಜೀವನ ರೂಪಿಸಿಕೊಳ್ಳುವುದು ಅತಿ ಅಗತ್ಯವಾಗಿದೆ ಎಂದರು.

  ವಚನ ಸಾಹಿತ್ಯ ಸಾರ್ವಕಾಲಿಕವಾದದ್ದು. ಈಗ ಅನುವಾದಗೊಳ್ಳುತ್ತಿರುವ ವಚನ ಸಾಹಿತ್ಯ ಮುಂದಿನ ೧೦-೧೨ ವರ್ಷಗಳಲ್ಲಿ ಜಗತ್ತಿನ ಹಲವೆಡೆ ವಿವಿಧ ಆಯಾಮಗಳಲ್ಲಿ ಅಧ್ಯಯನಕ್ಕೆ ಕಾರಣವಾಗುತ್ತದೆ. ವಚನ ಸಾಹಿತ್ಯ ಎಲ್ಲ ಕಾಲಕ್ಕೂ ಹೊಸ ಚಿಂತನೆ ಮತ್ತು ಹೊಸ ತಿಳಿವಳಿಕೆ ನೀಡುವ ಶಕ್ತಿ ಪಡೆದಿದೆ. ವಚನಗಳು ಹೊಸ ಬದುಕಿನ ವಿದ್ಯೆ ಮತ್ತು ಜೀವನದ ಮಾರ್ಗವೂ ಆಗಿವೆ.
  | ಡಾ.ವಿಕ್ರಮ ವಿಸಾಜಿ

  See also  ಲಾಭದಲ್ಲಿ ಸದಸ್ಯರಿಗೆ ಶೇ.10 ಪಾಲು

  ಕಲ್ಯಾಣದಲ್ಲಿ ವಚನ ಸಾಹಿತ್ಯದ ತಾತ್ವಿಕ ನೆಲೆಗಳ ಕುರಿತು ವೈಚಾರಿಕ ಮತ್ತು ವೈಜ್ಞಾನಿಕವಾಗಿ ವಿದ್ವಾಂಸರಿAದ ವಿಚಾರ ವಿನಿಮಯಕ್ಕೆ ವಿಚಾರ ಸಂಕಿರಣದ ಮೂಲಕ ವೇದಿಕೆ ಕಲ್ಪಿಸಲಾಗಿದೆ. ಬಸವಣ್ಣನವರ ವಿಚಾರಗಳನ್ನು ಮನೆ-ಮನಗಳಿಗೆ ತಲುಪಿಸುವುದೇ ಇದರ ಆಶಯ.
  | ಡಾ.ಕಲ್ಯಾಣರಾವ ಜಿ.ಪಾಟೀಲ್

  ವಚನಗಳು ಸಮೃದ್ಧ ಕುಟುಂಬದ ಕೈಗನ್ನಡಿ: ವಚನಗಳು ಸಮೃದ್ಧವಾದ ಕುಟುಂಬ ಕಟ್ಟಲು ಕೈಗನ್ನಡಿಗಳಾಗಿವೆ ಎಂದು ಕಲಬುರಗಿ ಸರ್ಕಾರಿ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ.ಶಾರದಾದೇವಿ ಜಾಧವ್ ಹೇಳಿದರು. ವಚನಗಳಲ್ಲಿ ಕೌಟುಂಬಿಕ, ಸಾಮಾಜಿಕ ಮತ್ತು ಆರ್ಥಿಕ ವ್ಯಕ್ತಿತ್ವಗಳ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ವಚನಕಾರರು ತಮ್ಮ ವಚನಗಳಲ್ಲಿ ಕುಟುಂಬ ನಿರ್ವಹಣೆ ಬಗ್ಗೆ ಹೇಳಿದ್ದಾರೆ ಎಂದರು. ವಚನಗಳಲ್ಲಿ ಸಾಮಾಜಿಕ ವ್ಯಕ್ತಿತ್ವ ಕುರಿತು ಡಾ.ಸುಮಂಗಲಾ ರೆಡ್ಡಿ, ವಚನಗಳಲ್ಲಿ ಆರ್ಥಿಕ ವ್ಯಕ್ತಿತ್ವ ಕುರಿತು ಕಲಬುರಗಿ ಸರ್ಕಾರಿ ಮಹಾವಿದ್ಯಾಲಯದ(ಸ್ವಾಯತ್ತ) ವಿಶ್ರಾಂತ ಪ್ರಾಧ್ಯಾಪಕ ಡಾ.ಟಿ ಆರ್. ಗುರುಬಸಪ್ಪ, ಅಧ್ಯಕ್ಷತೆ ವಹಿಸಿದ್ದ ಡಾ.ನೀಲಾಂಬಿಕಾ ಪೊಲೀಸ್ ಪಾಟೀಲ್ ಮಾತನಾಡಿದರು. ಎರಡನೇ ಗೋಷ್ಠಿಯಲ್ಲಿ ವಚನಗಳಲ್ಲಿ ಸ್ತ್ರೀ ಪರ ಚಿಂತನೆ, ಸಾಮಾಜಿಕ ನ್ಯಾಯ ಮತ್ತು ಮಾನವ ಸಂಪನ್ಮೂಲ ಕುರಿತು ಡಾ.ಇಂದುಮತಿ ಪಾಟೀಲ್, ಡಾ.ಭೀಮಾಶಂಕರ ಬಿರಾದಾರ, ವಿಜಯಕುಮಾರ ಕಮ್ಮಾರ, ಡಾ.ಜಗನ್ನಾಥ ಹೆಬ್ಬಾಳೆ ಉಪನ್ಯಾಸ ಮಂಡಿಸಿದರು. ೩ನೇ ಗೋಷ್ಠಿ ವಚನಗಳಲ್ಲಿ ಅರಿವು-ಅನುಭಾವ, ಯುಗ-ಶಿವಯುಗ, ಧರ್ಮ-ದೇವರು ಕುರಿತು ಡಾ.ತಿಪ್ಪೇರುದ್ರ ಸಂಡೂರ, ಡಾ.ಪುಷ್ಪಾವತಿ ಶೆಲವಡಿಮಠ ಮತ್ತು ಡಾ.ರಣಧೀರ ಪ್ರಬಂಧ ಮಂಡಿಸಿದರು. ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿ ಸಾವಿತ್ರಿ ಎಸ್.ಸಲಗರ, ಡಾ.ವಿ.ಎಸ್. ಮಾಳಿ, ಬಿ.ಆರ್. ದರೂರ ಮಾತನಾಡಿದರು. ವಿಚಾರ ಸಂಕಿರಣದ ಪರ್ಯಾಯ ಗೋಷ್ಠಿಗಳಲ್ಲಿ ವಿವಿಧ ಕಾಲೇಜಿನ ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಪತ್ರಿಕೆಯನ್ನು ಮಂಡಿಸಿದರು. ಡಾ.ಎಂ.ಜಿ.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ.ಬಸವರಾಜ ಎವಲೆ, ಅಶೋಕಕುಮಾರ ಶ್ರೀವಾಸ್ತವ, ಲಕ್ಷ್ಮೀಬಾಯಿ ಬಿ., ಡಾ.ಸುರೇಶ, ಶಿವಕುಮಾರ ಕೊಳ್ಳೆ, ಅಂಬರೀಶ ಬಿ., ಸುಮನರೆಡ್ಡಿ, ವಿನಾಯಕ ಮುಳ್ಳೂರು, ಉಲ್ಲಾಸ ಬೊಕ್ಕೆ, ದೀಪಕ ಕಾಡಾದಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts