More

    ‘ಹಿಮ್ಸ್’ ಭವ್ಯ ಕಟ್ಟಡ ಉದ್ಘಾಟನೆ ಸನ್ನಿಹಿತ

    ಕೇಶವಮೂರ್ತಿ ವಿ.ಬಿ. ಹಾವೇರಿ
    ದೇವಗಿರಿ ಯಲ್ಲಾಪುರದಲ್ಲಿ ನಿರ್ಮಾಣಗೊಳ್ಳುತ್ತಿರುವ ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಹಿಮ್ಸ್)ಯ ಕಟ್ಟಡದ ಕಾಮಗಾರಿ ಶೇ. 80ರಷ್ಟು ಪೂರ್ಣಗೊಂಡಿದ್ದು, ಉದ್ಘಾಟನೆಗೆ ಕಾಲ ಸನ್ನಿಹಿತವಾಗಿದೆ.

    2020ರ ಜನವರಿಯಲ್ಲಿ ಸರ್ಕಾರ ಹಿಮ್ಸ್ ಆರಂಭಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿತು. ಒಟ್ಟು 478 ಕೋಟಿ ರೂ. ವೆಚ್ಚದ ಯೋಜನೆಯಲ್ಲಿ ಸಿವಿಲ್ ಕಾಮಗಾರಿಗಾಗಿ 365 ಕೋಟಿ ರೂ. ಮೀಸಲಿಡಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರ 195 ಕೋಟಿ ರೂ., ರಾಜ್ಯ ಸರ್ಕಾರದ ಪಾಲು 170 ಕೋಟಿ ರೂಪಾಯಿ ಇದೆ.

    ಬೆಂಗಳೂರಿನ ಕೆಬಿಆರ್ ಇನ್‌ಫ್ರಾಟೆಕ್ ಕಂಪನಿಗೆ ಕಟ್ಟಡ ನಿರ್ಮಾಣದ ಗುತ್ತಿಗೆ ನೀಡಲಾಗಿದ್ದು, 2022ರ ನವೆಂಬರ್‌ಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಈವರೆಗೂ ಪೂರ್ಣಗೊಂಡಿಲ್ಲ. ಕೋವಿಡ್- 19, ಮಳೆ, ಇತರ ಕಾರಣದಿಂದಾಗಿ ಕಾಮಗಾರಿ ವಿಳಂಬವಾಗಿದೆ. 2023 ನವೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ.

    56 ಎಕರೆ ವಿಶಾಲವಾದ ಆವರಣದಲ್ಲಿ ಮುಖ್ಯ ಆಡಳಿತ ಕಚೇರಿ, ಶೈಕ್ಷಣಿಕ ಕಟ್ಟಡ, ವಿದ್ಯಾರ್ಥಿಗಳ ಹಾಸ್ಟೆಲ್, ಸಿಬ್ಬಂದಿ ವಸತಿ ಗೃಹ, ಡೀನ್ ಹಾಗೂ ಪ್ರಾಚಾರ್ಯರ ವಸತಿ ಗೃಹ ಸೇರಿ ಐದು ಬಹುಮಹಡಿ ಕಟ್ಟಡಗಳು ತಲೆ ಎತ್ತುತ್ತಿವೆ. ಆಡಳಿತ ಕಚೇರಿ ಕಟ್ಟಡ ನೆಲಮಹಡಿ ಸೇರಿ ನಾಲ್ಕು ಅಂತಸ್ತು ಹೊಂದಿದೆ. ಒಟ್ಟು 187 ಕೊಠಡಿಗಳು ಇರಲಿವೆ. 374 ಬಾಲಕರ, 374 ಬಾಲಕಿಯರ ಪ್ರತ್ಯೇಕ ಹಾಸ್ಟೆಲ್‌ಗಳು, 32 ಬೋಧಕರ, 48 ಬೋಧಕೇತರ ಸಿಬ್ಬಂದಿ ವಸತಿ ಗೃಹಗಳು ನಿರ್ಮಾಣಗೊಳ್ಳುತ್ತಿವೆ. ಆವರಣವನ್ನು ಪರಿಸರ ಸ್ನೇಹಿಯನ್ನಾಗಿಸಲು 2,800 ಸಸಿ ನೆಡಲು ಉದ್ದೇಶಿಸಲಾಗಿದೆ. 365 ಕೋಟಿ ರೂ. ವೆಚ್ಚದ ಹಿಮ್ಸ್ ಭವ್ಯ ಕಟ್ಟಡಗಳು ತಲೆ ಎತ್ತುತ್ತಿದ್ದು, ನವೆಂಬರ್ ವೇಳೆಗೆ ಬಾಕಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

    ಇತ್ತೀಚೆಗೆ ಜಿಲ್ಲೆಯ ಐವರು ಕಾಂಗ್ರೆಸ್ ಶಾಸಕರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆರ್. ವಿಶಾಲ ಹಾಗೂ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಭೇಟಿ ಸ್ಥಳಕ್ಕೆ ನೀಡಿ ಪರಿಶೀಲಿಸಿದ್ದಾರೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಿದ್ದಾರೆ. ಇದರ ಜತೆಗೆ ವಿವಿಧ ರಾಜಕೀಯ ಪಕ್ಷಗಳ, ಸಂಘಟನೆಗಳ ಮುಖಂಡರು ಕಾಲೇಜಿಗೆ ಭೇಟಿ ನೀಡುತ್ತಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳ್ಳಲಿ ಎಂಬ ಆಶಯ ವ್ಯಕ್ತಪಡಿಸುತ್ತಿದ್ದಾರೆ.

    ಜಿ ಪ್ಲಸ್ ಮಾದರಿ: ಅಕಾಡೆಮಿಕ್ ಬ್ಲಾಕ್‌ಗಳನ್ನು ಜಿ ಪ್ಲಸ್ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ. ಎ ಬ್ಲಾಕ್‌ನಲ್ಲಿ ಅನಾಟೆಮಿ, ಸೈಕಾಲಜಿ, ಪೆಥಾಲಜಿ, ಮೈಕ್ರೋಬಯಾಲಜಿ, ಬಿ ಬ್ಲಾಕ್‌ನಲ್ಲಿ ಸ್ಕಿಲ್ ಲ್ಯಾಬ್, ಬಯೋಕೆಮಿಸ್ಟ್ರಿ, ಪೆಥಾಲಜಿ, ಮೈಕ್ರೋ ಬಯಾಲಜಿ, ಸಿ ಬ್ಲಾಕ್‌ನಲ್ಲಿ ಆಡಳಿತಾತ್ಮಕ ಕಚೇರಿ, ಕಮ್ಯೂನಿಟಿ ಮೆಡಿಸಿನ್ ಡಿಪಾರ್ಟ್‌ಮೆಂಟ್ ವಿಭಾಗ, ಫಾರೆನ್ಸಿಕ್ ಮೆಡಿಸಿನ್, ಫಾರ್ಮಾಲಜಿ ವಿಭಾಗಗಳು ಇರಲಿವೆ.

    ತರಗತಿ ಕೊಠಡಿ, ಹಾಸ್ಟೆಲ್ ಕಟ್ಟಡ ಶೀಘ್ರ ಪೂರ್ಣ: ಮೆಡಿಕಲ್ ಕಾಲೇಜಿನ ಮೊದಲ ವರ್ಷದ 150 ವಿದ್ಯಾರ್ಥಿಗಳಿಗೆ ತರಗತಿಗಳು ಈಗಾಗಲೇ ದೇವಗಿರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ನಡೆಯುತ್ತಿವೆ. ಎರಡನೇ ವರ್ಷದ ಎಂಬಿಬಿಎಸ್ ಕೌನ್ಸೆಲಿಂಗ್ ಜು. 20ರಂದು ಆರಂಭವಾಗಲಿದ್ದು, ಸುಮಾರು ಒಂದು ತಿಂಗಳಲ್ಲಿ ಸೀಟು ಹಂಚಿಕೆಯಾಗಲಿದೆ. ಆಗಸ್ಟ್ 15ರೊಳಗೆ ತರಗತಿ ನಡೆಸಲು ಅಗತ್ಯವಿರುವ 2 ಕೊಠಡಿ, 3 ಪ್ರಯೋಗಾಲಯಗಳು, 2 ಗ್ರಂಥಾಲಯ ಕೊಠಡಿಗಳು ಹಾಗೂ 300 ವಿದ್ಯಾರ್ಥಿಗಳಿಗೆ ಅಗತ್ಯವಿರುವ ಹಾಸ್ಟೆಲ್ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಜಿಲ್ಲಾಡಳಿತ ಸೂಚಿಸಿದೆ ಎನ್ನುತ್ತಾರೆ ಹಿಮ್ಸ್ ಡೀನ್ ಡಾ.ಉದಯ ಮುಳಗುಂದ.

    ಮೆಡಿಕಲ್ ಕಾಲೇಜ್ ಕಟ್ಟಡ ಕಾಮಗಾರಿ ವೇಗ ಹೆಚ್ಚಿಸಲಾಗಿದ್ದು, ಆಗಸ್ಟ್ 15ರೊಳಗೆ ತರಗತಿ ಆರಂಭಿಸಲು ಅಗತ್ಯವಿರುವ ಕೊಠಡಿಗಳನ್ನು ಡೀನ್‌ಗೆ ಹಸ್ತಾಂತರಿಸಲಾಗುವುದು. ಅಕ್ಟೋಬರ್ 31ರೊಳಗಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು.
    I ಕಿರಣಕುಮಾರ, ಯೋಜನಾ ಮುಖ್ಯಸ್ಥ, ಕೆಬಿಆರ್ ಸಂಸ್ಥೆ

    ಎರಡನೇ ಬ್ಯಾಚ್‌ನ ಸರ್ಕಾರಿ ಮೆಡಿಕಲ್ ಸೀಟ್‌ಗಳ ಕೌನ್ಸೆಲಿಂಗ್ ಜು. 20ರಂದು ಆರಂಭವಾಗಲಿದ್ದು, ಒಂದು ತಿಂಗಳಲ್ಲಿ ಸೀಟ್‌ಗಳ ಹಂಚಿಕೆ ಪೂರ್ಣಗೊಳ್ಳಲಿದೆ. ಆಗಸ್ಟ್ 15ರೊಳಗೆ ಅಗತ್ಯ ಕೊಠಡಿಗಳನ್ನು ಹಸ್ತಾಂತರಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಅಷ್ಟರೊಳಗೆ ಕೊಠಡಿ ಹಸ್ತಾಂತರಿಸಿದರೆ ಹೊಸ ಕಟ್ಟಡದಲ್ಲಿ ಆಗಸ್ಟ್ 15ರಿಂದಲೇ ತರಗತಿ ಆರಂಭಿಸಲಾಗುವುದು.
    I ಡಾ.ಉದಯ ಮುಳಗುಂದ, ಡೀನ್, ಹಿಮ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts