More

    ಹಲವು ಅಧಿಕಾರಿಗಳು ಗೈರಾಗಿದ್ದಕ್ಕೆ ಗರಂ

    ಶೃಂಗೇರಿ: ಸಮಯಕ್ಕೆ ಸರಿಯಾಗಿ ಬಾರದ, ಪರಿಪೂರ್ಣ ಮಾಹಿತಿ ನೀಡದ, ಒಂದು ವಾರಕ್ಕೂ ಮುಂಚೆ ದಿನಾಂಕ ತಿಳಿಸಿದರೂ ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ಧ ತಾಪಂ ಅಧ್ಯಕ್ಷರು ಮತ್ತು ಸದಸ್ಯರು ಬುಧವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.

    ಸಭೆಗೆ ಬರುವಾಗ ಸಮಯಪ್ರಜ್ಞೆ ಇರಬೇಕು. ಇಲಾಖೆ ಅಧಿಕಾರಿಗಳು ನೀಡುವ ಬೇಕಾಬಿಟ್ಟಿ ಮಾಹಿತಿ ಕೇಳಲು ನಾವು ಕುಳಿತಿಲ್ಲ. ಇಲಾಖೆಗಳ ಅಭಿವೃದ್ಧಿ ಕುರಿತು ನೀಡುವ ಮಾಹಿತಿ ಸರಿಯಾಗಿರಬೇಕು ಎಂದು ತಾಪಂ ಅಧ್ಯಕ್ಷೆ ಜಯಶೀಲಾ ಚಂದ್ರಶೇಖರ್ ಅವರು ಕೃಷಿ ಅಧಿಕಾರಿ ಜಯರಾಜ್​ಗೆ ತಾಕೀತು ಮಾಡಿದರು.

    ಮೀನುಗಾರಿಕೆ ಇಲಾಖೆ ಅಧಿಕಾರಿ ನಾಪತ್ತೆಯಾಗಿದ್ದಾರೆ. ಅರಣ್ಯ ಹಾಗೂ ಕೃಷಿ ಇಲಾಖೆಯವರಿಗೆ ಯಾವಾಗ, ಎಷ್ಟು ಗಂಟೆಗೆ ಸಭೆ ಪ್ರಾರಂಭವಾಗುವುದೆಂಬ ಬಗ್ಗೆ ಏಳು ದಿನಗಳ ಹಿಂದೆಯೇ ನೋಟಿಸ್ ಕಳಿಸುತ್ತೇವೆ. ಆದರೂ ಸಭೆಗೆ ಬರಲ್ಲ. ಇಂತಹ ವರ್ತನೆ ಅಧಿಕಾರಿಗಳಿಗೆ ಶೋಭೆ ತರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಿ.ಪ್ರವೀಣ್ ಮಾತನಾಡಿ, ಕೃಷಿ ಇಲಾಖೆಯ ಆತ್ಮ ಹಾಗೂ ನರೇಗಾ ಯೋಜನೆ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಕೂಡಲೇ ಕಚೇರಿಗೆ ಹೋಗಿ ಮಾಹಿತಿಯನ್ನು ತಂದು ಕೊಡಿ. ನೀವು ಹೆಚ್ಚಾಗಿ ತರೀಕೆರೆಯಲ್ಲೇ ಇರುತ್ತೀರಿ, ನಾಲ್ಕು ದಿನ ಶೃಂಗೇರಿಯಲ್ಲಿ ಇರಬೇಕು. ಇಲ್ಲಿನ ರೈತರ ಸಮಸ್ಯೆಗೆ ಸ್ಪಂದಿಸುವವರು ಯಾರು ಎಂದು ಜಯರಾಜ್ ಅವರನ್ನು ಪ್ರಶ್ನಿಸಿದರು.

    ಇಲಾಖೆ ಸಿಬ್ಬಂದಿ ಕೃಷಿಕರ ಜತೆ ಸೌಹಾರ್ದದಿಂದ ವರ್ತಿಸಬೇಕು. ಇಲಾಖೆಯಲ್ಲಿ ಕೆಲಸ ಮಾಡುವರು ಯಾರೂ ಇಲ್ಲವಾದರೆ ತಿಳಿಸಿ.ನಾವು ರೈತರನ್ನು ಕರೆದುಕೊಂಡು ಬಂದು ಬೀಗ ಹಾಕುತ್ತೇವೆ ಎಂದು ಪ್ರವೀಣ್ ಹರಿಹಾಯ್ದರು.

    ಒಬ್ಬ ಫಲಾನುಭವಿಗೆ ನಾಲ್ಕು ಬಾರಿ ಹಣ: ನೆಮ್ಮಾರ್ ಗ್ರಾಪಂ ವ್ಯಾಪ್ತಿಯ ಒಬ್ಬ ಫಲಾನುಭವಿ ವಸತಿ ಯೋಜನೆಯಡಿ ನಾಲ್ಕು ಬಾರಿ ಹಣ ಪಡೆದಿದ್ದಾನೆ. ಫಲಾನುಭವಿಗಳಿಗೆ ಹಣ ನೀಡುವಾಗ ಗ್ರಾಮ ಸಭೆಯಲ್ಲಿ ಚರ್ಚೆಯಾಗುತ್ತದೆ. ಫಲಾನುಭವಿ ಒಂದು ಬಾರಿ ವಸತಿ ಯೋಜನೆಯಡಿ ಹಣ ಪಡೆದ ಬಳಿಕ 15 ವರ್ಷಗಳವರೆಗೆ ಪಡೆಯುವಂತಿಲ್ಲ. ಫಲಾನುಭವಿಗಳಿಗೆ ಯೋಜನೆ ಕುರಿತು ಮಾಹಿತಿ ನೀಡುವವರು ಯಾರು ಎಂದು ಇಒ ಜಯರಾಂ ಅವರನ್ನು ಜಯಶೀಲಾ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಯರಾಂ, ಪಿಡಿಒಗಳು ಈ ಬಗ್ಗೆ ಗಮನ ಹರಿಸಬೇಕು. ಅವರು ವರ್ಗಾವಣೆಯಾದರೆ ಹೊಸ ಪಿಡಿಒಗೆ ಕಡತಗಳ ಕುರಿತು ಮಾಹಿತಿ ನೀಡಬೇಕು ಎಂದರು.

    ಜಯಶೀಲಾ ಮಾತನಾಡಿ, ಬಡ್ಡಿ ಸಮೇತ ಸರ್ಕಾರಕ್ಕೆ ಒಂದು ಲಕ್ಷ ರೂ. ಪಾವತಿಸಬೇಕು ಎಂದು ಫಲಾನುಭವಿಗೆ ನೋಟಿಸ್ ಬಂದಿದೆ. ಆರ್ಥಿಕವಾಗಿ ಹಿಂದುಳಿದ ಅವರು ಅಷ್ಟು ಮೊತ್ತ ಕಟ್ಟುವುದು ಸುಲಭದ ಮಾತಲ್ಲ. ಗ್ರಾಮೀಣ ಭಾಗದ ಜನರಿಗೆ ಪಿಡಿಒಗಳು ಮಾಹಿತಿ ನೀಡುವುದಿಲ್ಲ. ಗೊತ್ತಿಲ್ಲದವರು ತಪ್ಪು ಮಾಡಿದರೆ ಕ್ಷಮಿಸಬಹುದು. ಆದರೆ ಗೊತ್ತಿದ್ದವರೇ ತಪ್ಪು ಮಾಡಿದರೆ ಯಾರು ಹೊಣೆ ಎಂದು ಮರು ಪ್ರಶ್ನಿಸಿದರು.

    ಸಮರ್ಪಕ ಮಾಹಿತಿ ಇಲ್ಲ: ಉಪ್ಪಿನ ಮಾದರಿ ಪರೀಕ್ಷೆ, ಬಾವಿಗಳಿಗೆ ಕ್ಲೋರಿನೇಶನ್ ಮಾಡಿರುವ ಹಾಗೂ ಎಚ್​ಐವಿ ಪರೀಕ್ಷೆ ಮಾಡಿರುವ ಬಗ್ಗೆ ಆರೋಗ್ಯ ಕಾರ್ಯಕ್ರಮದ ವರದಿ ನೀಡಿದ್ದೀರಿ. ಆದರೆ ಇದರ ಕುರಿತು ಜನಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕು. ಇಲ್ಲವಾದರೆ ಸಭೆಯಲ್ಲಿ ನಾವು ನಿಮ್ಮ ಕಾರ್ಯಕ್ರಮದ ಕುರಿತು ಮಾಹಿತಿ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಜಯಶೀಲಾ ಅವರು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಮಂಜುನಾಥ್​ಗೆ ಸಲಹೆ ನೀಡಿದರು.

    ಗುತ್ತಿಗೆದಾರ ಜತೆ ಸಭೆ ನಾಳೆ: ರಸ್ತೆ, ಬಾವಿ ಮತ್ತಿತರ ಮೂಲ ಸೌಲಭ್ಯ ಕಲ್ಪಿಸುವ ಕಾಮಗಾರಿಗಳು ತಾಲೂಕಿನಲ್ಲಿ ಸ್ಥಗಿತಗೊಂಡಿವೆ. ಕೂತುಗೋಡು, ಧರೇಕೊಪ್ಪ, ಬೇಗಾರು, ಯಡದಳ್ಳಿ, ಶೃಂಗೇರಿ ಗ್ರಾಮಾಂತರ, ಕೆರೆ, ಮೆಣಸೆ ಮುಂತಾದೆಡೆ ಅಭಿವೃದ್ಧಿ ಕಾರ್ಯ ನಡೆದಿಲ್ಲ ಎಂದು ಜಯಶೀಲಾ ಮತ್ತು ಬಿ.ವಿ.ಪ್ರವೀಣ್ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಕಿರಿಯ ಅಭಿಯಂತ ಭುವನೇಂದ್ರ, ಗುತ್ತಿಗೆದಾರರು ಹಾಗೂ ಇಲಾಖೆ ನಡುವೆ ಇನ್ನೂ ಕಾಮಗಾರಿ ಒಪ್ಪಂದ ಆಗಿಲ್ಲ ಎಂದರು. ಪ್ರವೀಣ್ ಮಾತನಾಡಿ, ನ.13ರ ಬೆಳಗ್ಗೆ 10 ಗಂಟೆಗೆ ಗುತ್ತಿಗೆದಾರರ ಸಭೆ ಕರೆಯುತ್ತೇವೆ. ನೀವು ಭಾಗವಹಿಸಬೇಕು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts