More

    ಮೂರು ತಿಂಗಳಲ್ಲಿ ರೂ. 24 ಕೋಟಿ ನಷ್ಟ

    ಹಾವೇರಿ: ಕರೊನಾ ಮಹಾಮಾರಿ ಬಂದ ನಂತರ ಸಾರಿಗೆ ಸಂಸ್ಥೆ ಅಪಾರ ಪ್ರಮಾಣದಲ್ಲಿ ನಷ್ಟ ಅನುಭವಿಸುತ್ತಿದ್ದು, ವಾಕರಸಾ ಸಂಸ್ಥೆ ಹಾವೇರಿ ವಿಭಾಗಕ್ಕೆ ಏಪ್ರಿಲ್- ಜೂನ್ ಅವಧಿಯಲ್ಲಿ ಸರಾಸರಿ 24.52 ಕೋಟಿ ರೂ. ನಷ್ಟವಾಗಿದೆ.

    ನೌಕರರಿಗೆ ವೇತನ ನೀಡಲು ಆಗದಷ್ಟು ನಷ್ಟವಾಗುತ್ತಿದ್ದು, ಏಪ್ರಿಲ್, ಮೇ ತಿಂಗಳಲ್ಲಿ ಸರ್ಕಾರವೇ ನೌಕರರಿಗೆ ವೇತನದ ಹಣ ನೀಡಿದೆ. ಜೂನ್ ತಿಂಗಳ ವೇತನ ನೀಡುವ ಕುರಿತು ಸರ್ಕಾರ ಇನ್ನೂ ಯಾವುದೇ ಅನುದಾನ ನೀಡದೇ ಇರುವುದರಿಂದ ಜುಲೈ ತಿಂಗಳು ಅರ್ಧ ಕಳೆದರೂ ನೌಕರರಿಗೆ ವೇತನ ಪಾವತಿಯಾಗಿಲ್ಲ.

    ಜಿಲ್ಲೆಯಲ್ಲಿ ಲಾಕ್​ಡೌನ್ ಸಡಿಲವಾಗುತ್ತಿದ್ದಂತೆ ಮೇ 4ರಿಂದ ಬಸ್ ಸಂಚಾರ ಆರಂಭಿಸಲಾಗಿದೆ. ಆದರೆ, ನಿರೀಕ್ಷಿತ ಸಂಖ್ಯೆಯಲ್ಲಿ ಪ್ರಯಾಣಿಕರು ಬಾರದೇ ಇರುವುದರಿಂದ ಕಳೆದ ಮೂರು ತಿಂಗಳ ಅವಧಿಯಲ್ಲಿ ಹಾವೇರಿ ವಿಭಾಗಕ್ಕೆ 24.52 ಕೋಟಿ ರೂ.ಗಳಷ್ಟು ನಷ್ಟವಾಗಿದೆ.

    ಜಿಲ್ಲಾ ವ್ಯಾಪ್ತಿಯಲ್ಲಿ ಸಾರಿಗೆ ಸಂಸ್ಥೆಯ ಒಟ್ಟು 7 ಡಿಪೋಗಳಿದ್ದು, ಎಲ್ಲ ಡಿಪೋಗಳಲ್ಲಿಯೂ ಬಸ್ ಸಂಚಾರ ಆರಂಭಗೊಂಡಿದೆ. ಮೇ 4ರಿಂದ 19ರವರೆಗೆ ಜಿಲ್ಲೆಯೊಳಗೆ ಮಾತ್ರ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಹೀಗಾಗಿ 70 ಬಸ್​ಗಳ ಸಂಚಾರ ಆರಂಭಿಸಲಾಗಿತ್ತು. ಇದಾದ ನಂತರ ಮೇ 19ರಿಂದ ರಾಜ್ಯಾದ್ಯಂತ ಸಂಚಾರ ಆರಂಭಿಸಲು ಸರ್ಕಾರ ಅನುಮತಿ ನೀಡಿತು. ಆಗ ಮತ್ತೆ ಹೆಚ್ಚುವರಿಯಾಗಿ 140 ಬಸ್​ಗಳನ್ನು ವಿವಿಧ ರೂಟ್​ಗಳಿಗೆ ಬಿಡಲಾಯಿತು. ಒಟ್ಟು 210 ಬಸ್​ಗಳನ್ನು ಮೇ ನಲ್ಲಿ ಆರಂಭಿಸಲಾಗಿದೆ. ಆದರೆ, ಸಾರ್ವಜನಿಕರು ಬಸ್ ಪ್ರಯಾಣಕ್ಕೆ ಹಿಂಜರಿದಿದ್ದರಿಂದ ಸಂಸ್ಥೆಗೆ ಮತ್ತೆ ನಷ್ಟವಾಯಿತು. ಸರ್ಕಾರ ಒಂದು ಬಸ್​ನಲ್ಲಿ 30 ಜನರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಿತ್ತು. ಚಾಲಕ, ನಿರ್ವಾಹಕರು ಬಸ್ ನಿಲ್ದಾಣದಲ್ಲಿ ತಾಸುಗಟ್ಟಲೆ ಕಾಯ್ದರೂ 30 ಜನ ಬಂದಿರಲಿಲ್ಲ. ಹೀಗಾಗಿ ನಷ್ಟ ಮುಂದುವರಿಯಿತು.

    502 ಬಸ್​ಗಳಲ್ಲಿ ಅರ್ಧಕ್ಕಿಂತ ಕಡಿಮೆ ಬಸ್​ಗಳ ಸಂಚಾರ: ರಾಜ್ಯದಲ್ಲಿ ಕರೊನಾ ವೈರಸ್ ಹರಡುವುದಕ್ಕೂ ಮುಂಚಿನ ದಿನಗಳಲ್ಲಿ ಹಾವೇರಿ ವಿಭಾಗದಲ್ಲಿ ಒಟ್ಟು 502 ಬಸ್​ಗಳು ಸಂಚರಿಸುತ್ತಿದ್ದವು. ಪ್ರತಿದಿನ ವಿವಿಧ ರೂಟ್​ಗಳಲ್ಲಿ 1,81,482 ಕಿಮೀ ನಷ್ಟು ಸಂಚಾರ ನಡೆಸುತ್ತಿದ್ದವು. ಪ್ರತಿ ಕಿಮೀಗೆ 33 ರೂ.ಗಳಿಗಿಂತಲೂ ಹೆಚ್ಚಿನ ಆದಾಯ ಸಿಗುತ್ತಿತ್ತು. ಆದರೆ, ಈಗ ಅರ್ಧಕ್ಕಿಂತ ಹೆಚ್ಚು ಬಸ್​ಗಳು ಡಿಪೋದಲ್ಲಿಯೇ ನಿಂತುಕೊಂಡಿವೆ. ಮೇ ತಿಂಗಳಲ್ಲಿ 211 ಬಸ್​ಗಳು, ಜೂನ್​ನಲ್ಲಿ 292 ಬಸ್​ಗಳು ಮಾತ್ರ ಸಂಚರಿಸಿವೆ.

    ಬರುತ್ತಿಲ್ಲ ನಿರೀಕ್ಷಿತ ಆದಾಯ: ಜೂನ್ ಅಂತ್ಯದ ವೇಳೆಗೆ 292 ಬಸ್​ಗಳು ನಿತ್ಯ ಪ್ರಯಾಣ ಆರಂಭಿಸಿದ್ದು, ಪ್ರತಿ ಕಿಮೀ ಸಂಚಾರಕ್ಕೆ 23 ರೂ.ಗಳಷ್ಟು ಹಣ ಬಂದಿದೆ. ಇದು ಸಾಮಾನ್ಯ ದಿನಗಳಿಗಿಂತ 10 ರೂ.ಗಳಷ್ಟು ಕಡಿಮೆಯಾಗಿದೆ. ರಸ್ತೆಗಿಳಿದಿರುವ ಬಸ್​ಗಳ ಜೊತೆಗೆ ಖಾಲಿ ಇರುವ ಬಸ್​ಗಳ ಚಾಲಕ, ನಿರ್ವಾಹಕರಿಗೂ ವೇತನ ನೀಡುವುದು ಅನಿವಾರ್ಯವಾದ್ದರಿಂದ ಕಳೆದ 3 ತಿಂಗಳ ಅವಧಿಯಲ್ಲಿ ಹಾವೇರಿ ವಿಭಾಗಕ್ಕೆ ಭಾರಿ ನಷ್ಟ ಉಂಟಾಗಿದೆ.

    ಬೆಂಗಳೂರು ಲಾಕ್​ಡೌನ್​ನಿಂದ ಬರೆ: ಬೆಂಗಳೂರು, ಧಾರವಾಡ ಸೇರಿ ಹಲವು ಕಡೆಗಳಲ್ಲಿ ಮತ್ತೆ ಲಾಕ್​ಡೌನ್ ಘೊಷಣೆಯಾಗಿರುವುದರಿಂದ ಬೆಂಗಳೂರು, ಹುಬ್ಬಳ್ಳಿ ಮಾರ್ಗದ ಬಸ್​ಗಳನ್ನು ಸ್ಥಗಿತಗೊಳಿಸಲಾಗಿದೆ. ಪ್ರಯಾಣಿಕರ ಸಂಖ್ಯೆಯಾಧರಿಸಿ ಅಕ್ಕಪಕ್ಕದ ಜಿಲ್ಲೆಗಳಿಗೆ ಮಾತ್ರ ಬಸ್​ಗಳು ಸಂಚಾರ ನಡೆಸಿವೆ. ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುವುದರಿಂದ ಚಾಲಕ, ನಿರ್ವಾಹಕರು ಡಿಪೋಗಳಿಂದ ಬಸ್ ನಿಲ್ದಾಣಕ್ಕೆ ಬಸ್​ಗಳನ್ನು ತಂದು ಪ್ರಯಾಣಿಕರಿಗಾಗಿ ಕಾಯುವ ಸ್ಥಿತಿ ನಿರ್ವಣವಾಗಿದೆ.

    ಡಿಪೋವಾರು ನಷ್ಟದ ವಿವರ: ಕಳೆದ ಮೂರು ತಿಂಗಳಲ್ಲಿ ಹಾವೇರಿ ಡಿಪೋದಿಂದ 4.70 ಕೋಟಿ, ಹಿರೇಕೆರೂರ 4.47, ರಾಣೆಬೆನ್ನೂರ 5.66, ಹಾನಗಲ್ಲ 4.05, ಬ್ಯಾಡಗಿ 3.28, ಸವಣೂರ 2.77 ಕೋಟಿ ರೂಪಾಯಿ ನಷ್ಟವಾಗಿದೆ.

    ಪ್ರಯಾಣಿಕರಿಗೆ ತೊಂದರೆಯಾಗಬಾರದೆಂದು ನಷ್ಟವಾದರೂ ಬಸ್​ಗಳನ್ನು ಓಡಿಸಲಾಗುತ್ತಿದೆ. ಕಳೆದ 3 ತಿಂಗಳ ಅವಧಿಯಲ್ಲಿ 24.52 ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಏಪ್ರಿಲ್, ಮೇ ವೇತನ ನೀಡಿದ್ದೇವೆ. ಜೂನ್ ತಿಂಗಳ ವೇತನಕ್ಕೆ ಸರ್ಕಾರದ ಅನುದಾನಕ್ಕಾಗಿ ಕಾಯುತ್ತಿದ್ದೇವೆ. ಪ್ರತಿದಿನ ಬಸ್​ಗಳನ್ನು ಸ್ಯಾನಿಟೈಸೇಶನ್ ಮಾಡಲಾಗುತ್ತಿದೆ. ಸಿಬ್ಬಂದಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಿದ್ದು, ಸುರಕ್ಷತಾ ಕ್ರಮಗಳಿಗೂ ಹೆಚ್ಚಿನ ಆದ್ಯತೆ ನೀಡಿದ್ದೇವೆ.

    | ವಿ.ಎಸ್. ಜಗದೀಶ, ವಿಭಾಗೀಯ ನಿಯಂತ್ರಣಾಧಿಕಾರಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts