More

    ಕೊವೀಡ್ ಹೆಸರಿನಲ್ಲಿ ಭ್ರಷ್ಟಾಚಾರವೆಸಗಿದ ರಾಜ್ಯ ಸರ್ಕಾರ- ಮಾಜಿ ಸಚಿವ ಯು.ಟಿ.ಖಾದರ್ ಆರೋಪ

    ಕೊಪ್ಪಳ: ಕೋವಿಡ್ ಹೆಸರಿನಲ್ಲಿ ರಾಜ್ಯ ಸರ್ಕಾರ ಅವ್ಯವಹಾರ ನಡೆಸಿದ್ದು, ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಆಗ್ರಹಿಸಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಆಶಾ ಕಾರ್ಯಕರ್ತೆಯರಿಗೆ ಸರಿಯಾದ ಸುರಕ್ಷಾ ಸಾಮಗ್ರಿಗಳಿಲ್ಲ. ಸಾವಿಗೂ ಗೌರವವಿಲ್ಲ. ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿವೆ. ತನಿಖೆ ನಡೆಸಿ. ಇಲ್ಲ ಅವ್ಯವಹಾರ ಆಗಿದೆ ಎಂದು ಒಪ್ಪಿಕೊಳ್ಳಲಿ. ಕಾಂಗ್ರೆಸ್ ಸರ್ಕಾರ ಇರುವಾಗ ಆಧಾರ ರಹಿತ ಆರೋಪ ಮಾಡಿದರು. ವಿಪಕ್ಷ ನಾಯಕ ದಾಖಲೆ ಸಹಿತ ಆರೋಪಿಸಿದ್ದಾರೆ. ಎಚ್.ಕೆ.ಪಾಟೀಲ್ ತನಿಖೆ ಮಾಡ್ತಿನಿ ಅಂದ್ರು ಅವಕಾಶ ನೀಡುತ್ತಿಲ್ಲ. ಜನರು ಇದನ್ನು ಪ್ರಶ್ನಿಸಬೇಕು. ಸಕಾರಾತ್ಮಕವಾಗಿ ಟೀಕೆ ಸ್ವೀಕರಿಸಬೇಕು. ಬದಲಿಗೆ ಪ್ರತ್ಯಾರೋಪ ಮಾಡುವುದು ಸರಿಯಲ್ಲ. ನೀವು ಅಧಿಕಾರದಲ್ಲಿದ್ದೀರಿ. ತನಿಖೆ ನಡೆಸಿ, ಜನರಿಗೆ ವರದಿ ಒಪ್ಪಿಸಿ ಎಂದು ಒತ್ತಾಯಿಸಿದರು.

    ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಮೌನವಾಗಿದ್ದಾರೆ. ಖಾಸಗಿ ಆಸ್ಪತ್ರೆಗಳಿಗೆ ಮನಬಂದಂತೆ ದರ ನಿಗದಿ ಮಾಡಿದ್ದು ಯಾಕೆ? ಖಾಸಗಿಯವರನ್ನು ಮಾನಿಟರ್ ಮಾಡಲು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಸಮಿತಿ ಮಾಡಬೇಕು. ದೂರು ಸಲ್ಲಿಸಲು ಅವಕಾಶ ನೀಡಿದರೆ ಸ್ವಲ್ಪ ಹೆದರಿಕೆ ಇರುತ್ತದೆ ಎಂದರು.

    ಮಾಜಿ ಸಚಿವೆ ಉಮಾಶ್ರೀ ಮಾತನಾಡಿ, ಫೆಬ್ರವರಿಯಲ್ಲಿ ರಾಹುಲ್ ಗಾಂಧಿ ಕರೊನಾ ಬಗ್ಗೆ ಎಚ್ಚರಿಸಿದ್ದರು. ಆದರೂ ನಿರ್ಲಕ್ಷಿಸಲಾಯಿತು. ಜವಾಬ್ದಾರಿ ಇದ್ದವರು ಲೆಕ್ಕ ಕೊಡಲಿ. ಅವ್ಯವಹಾರ ಆಗದಿದ್ದರೆ ಹೆದರಿಕೆ ಯಾಕೆ? ಅದರ ಬದಲು ಸಮಾಜಾಯಿಷಿ ನೀಡುತ್ತ ಕಾಲ ಕಳೆಯಲಾಗುತ್ತಿದೆ ಎಂದು ಟೀಕಿಸಿದರು.

    ಡಿಸಿಸಿ ಅಧ್ಯಕ್ಷ ಶಿವರಾಜ ತಂಗಡಗಿ ಮಾತನಾಡಿ, ಮುಂದಿನ ದಿನಗಳಲ್ಲಿ ಹೈಕ ಭಾಗದಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮ ಮಾಡುತ್ತೇವೆ. ಪ್ರತಿ ಗ್ರಾಮದಲ್ಲಿ ಇಬ್ಬರು ಕರೊನಾ ವಾರಿಯರ್ ಮಾಡಿ ಕೆಲಸ ಮಾಡುತ್ತೇವೆ. ಸರ್ಕಾರದ ಅವ್ಯವಹಾರಗಳನ್ನು ಜನತೆಗೆ ತಿಳಿಸುತ್ತೇವೆ ಎಂದರು.

    ಸರ್ಕಾರದ ವೈಫಲ್ಯ ಖಂಡಿಸಿ ಪ್ರತಿಭಟನೆ
    ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ನರದ ಅಶೋಕ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹಿಟ್ನಾಳ ಮಾತನಾಡಿ, ಸರ್ಕಾರ ನಡೆಸಿರುವ ಅವ್ಯವಹಾರ ಕುರಿತು ಕಾಂಗ್ರೆಸ್ ದಾಖಲೆ ಸಮೇತ ಆರೋಪಿಸಿದರೂ ಸ್ಪಷ್ಟನೆ ನೀಡುತ್ತಿಲ್ಲ. ಸರ್ಕಾರದ ಈ ಮೌನವೇ ಅವ್ಯವಹಾರಕ್ಕೆ ಸಾಕ್ಷಿ ಎಂದು ಆರೋಪಿಸಿದರು. ಮಾಜಿ ಸಚಿವರಾದ ಯು.ಟಿ.ಖಾದರ್, ಉಮಾಶ್ರೀ, ಡಿಸಿಸಿ ಅಧ್ಯಕ್ಷ ಶಿವರಾಜ ತಂಗಡಗಿ, ಮುಖಂಡರಾದ ಬಸವರಾಜ ಮಳೆಮಠ, ಹಸನ್‌ಸಾಬ್ ದೋಟಿಹಾಳ, ಜಿಪಂ ಸದಸ್ಯರು ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts