More

    ಜಿಲ್ಲೆಯಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ

    ಬಳ್ಳಾರಿ: ಕನ್ನಡಪರ ವಿವಿಧ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬಳ್ಳಾರಿ ನಗರ ಸೇರಿ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ ಹೊರತುಪಡಿಸಿ ಯಾವುದೇ ಬಂದ್ ಆಗಿರಲಿಲ್ಲ.

    ಇದನ್ನೂ ಓದಿ: ಬಂದ್‌ಗೆ ನೀರಸ ಪ್ರತಿಕ್ರಿಯೆ

    ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು, ಸಾರಿಗೆ ಬಸ್ ಎಂದಿನಂತೆ ಕಾರ್ಯನಿರ್ವಹಿಸಿದವು. ಅಂಗಡಿ-ಮುಂಗಟ್ಟು ತೆರೆದಿದ್ದವು. ಜನಸಾಮಾನ್ಯರ ಓಡಾಟ ಎಂದಿನಂತೆ ಕಂಡು ಬಂದಿತು.

    ಕರವೇ (ನಾರಾಯಣಗೌಡ ಬಣ) ಕಾರ್ಯಕರ್ತರು ಹೊಸಪೇಟೆಗೆ ಹೋಗುವ ಎನ್‌ಎಚ್-63ರಲ್ಲಿ ಟೈರ್ ಸುಟ್ಟು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರ ಮತ್ತು ಕಾವೇರಿ ನಿರ್ವಹಣಾ ಮಂಡಳಿ ವಿರುದ್ಧ ಘೋಷಣೆ ಕೂಗಿದರು.

    ಕರವೇ ಬಳ್ಳಾರಿ ತಾಲೂಕು ಅಧ್ಯಕ್ಷ ಡಿ.ಕಗ್ಗಲ್ ಶಂಕರ್ ಮಾತನಾಡಿ, ನೆಲ-ಜಲ ವಿಚಾರದ ರಕ್ಷಣೆಗೆ ಕರವೇ ಬದ್ಧ. ಕಾವೇರಿ ನಮ್ಮದು, ಮಹದಾಯಿ ಮತ್ತು ತುಂಗಭದ್ರಾ ಕೂಡ ನಮ್ಮದು. ಇದರಲ್ಲಿ ಭಿನ್ನತೆಯಿಲ್ಲ.

    ಕಾವೇರಿ ನೀರು ಬಿಟ್ಟಿರುವ ರಾಜ್ಯ ಸರ್ಕಾರದ ನಿರ್ಧಾರ ಸರಿಯಲ್ಲ. ಮಾಜಿ ಸಿಎಂ ಬಂಗಾರಪ್ಪ ತೆಗೆದುಕೊಂಡ ನಿರ್ಣಯ ಈಗೇಕೆ ಆಗಲಿಲ್ಲ ? ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಒತ್ತಾಯಿಸಿದರು.

    ರಾಜ್ಯದಲ್ಲಿ ಬರಗಾಲದ ನಿರ್ಮಾಣವಾಗಿದೆ. 236ರ ಪೈಕಿ 192 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಕಾವೇರಿ ಕಣಿವೆ ಭಾಗದಲ್ಲಿ ತೀವ್ರ ಸ್ವರೂಪದ ಬರ ನಿರ್ಮಾಣವಾಗಿದೆ.

    ನದಿ ನೀರು ನಿರ್ವಹಣಾ ಪ್ರಾಧಿಕಾರ ಸುಮಾರು ಏಳ ಟಿಎಂಸಿ ಅಡಿಯಷ್ಟು ನೀರು ತಮಿಳುನಾಡಿಗೆ ಹರಿಸಲು ಆದೇಶಿಸಿರುವುದು ಆಘಾತಕಾರಿ ಎಂದರು. ರಾಜ್ಯ ಸರ್ಕಾರ ಮತ್ತೆ ನೀರು ಬಿಟ್ಟರೆ ಕುಡಿಯಲೂ ಇಲ್ಲದೆ ಹಾಹಾಕಾರ ಉಂಟಾಗಲಿದೆ. ಅದರಿಂದ ಆಗುವ ಅನಾಹುತಗಳನ್ನು ಊಹಿಸಲೂ ಸಾಧ್ಯವಿಲ್ಲ.

    ರಾಜ್ಯದ ಸಂಸದರೂ ದೆಹಲಿಯಲ್ಲಿ ಧರಣಿ ನಡೆಸಬೇಕು. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು, ರಾಜೀನಾಮೆ ನೀಡಲೂ ಸಿದ್ಧವಾಗಿರಬೇಕು. ಯಾವುದೇ ಕಾರಣಕ್ಕೂ ಪ್ರಾಧಿಕಾರದ ಆದೇಶವನ್ನು ಸರ್ಕಾರ ಪಾಲಿಸಬಾರದು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts