More

    ಬಂದ್‌ಗೆ ನೀರಸ ಪ್ರತಿಕ್ರಿಯೆ

    ಮಡಿಕೇರಿ:

    ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ಖಂಡಿಸಿ ಶುಕ್ರವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಕಾವೇರಿ ತವರು ಕೊಡಗಿನಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಕುಶಾಲನಗರ ಮತ್ತು ಗೋಣಿಕೊಪ್ಪದಲ್ಲಿ ಪ್ರತಿಭಟನೆಗಳನ್ನು ಹೊರತುಪಡಿಸಿದರೆ ಪರಸ್ಥಿತಿ ಶಾಂತವಾಗಿತ್ತು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ವಾರದ ಸಂತೆ ದಿನವಾದ ಶುಕ್ರವಾರ ಎಂದಿನಂತೆ ಜನಸಂದಣಿ ಇತ್ತು. ಜನಸಾಮಾನ್ಯರು ಮಾರುಕಟ್ಟೆಯಲ್ಲಿ ತರಕಾರಿ ಸೇರಿದಂತೆ ಗೃಹಬಳಕೆ ವಸ್ತುಗಳನ್ನು ಖರೀದಿಸುವ ದೃಶ್ಯ ಸಾಮಾನ್ಯವಾಗಿತ್ತು. ಬಂದ್ ಬೆಂಬಲಿಸುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ ಗುರುವಾರವೇ ಸ್ಪಷ್ಟಪಡಿಸಿದ್ದರು.

    ಸರ್ಕಾರಿ, ಖಾಸಗಿ ಹಾಗೂ ಅನುದಾನಿಕ ಶಾಲಾ – ಕಾಲೇಜುಗಳು ನಿರಾತಂಕವಾಗಿ ನಡೆದವು. ರಾಜ್ಯದ ವಿವಿಧೆಡೆ ಶಾಲೆಗಳಿಗೆ ರಜೆ ಘೋಷಣೆ ಆಗಿದ್ದ ಕಾರಣ ಕೊಡಗಿನಲ್ಲಿ ಬೆಳಗ್ಗಿನ ತನಕ ಗೊಂದಲ ಇತ್ತು. ಆದರೆ ರಜೆ ಇಲ್ಲದಿರುವ ಬಗೆಗ ವಿದ್ಯಾಸಂಸ್ಥೆಗಳಿಂದಲೇ ನೇರವಾಗಿ ಸಂದೇಶ ರವಾನೆ ಆಗುತ್ತಿದ್ದಂತೆಯೇ ಮಕ್ಕಳು ಶಾಲೆಗಳಿಗೆ ತೆರಳಿದರು.

    ವಾಹನ ಮತ್ತು ಜನರ ಓಡಾಟ ಗಮನಿಸಿದರೆ ಬಂದ್ ಕರೆಯನ್ನು ಸಂಪೂರ್ಣ ನಿರ್ಲಕ್ಷಿಸಿದಂತೆ ಇತ್ತು. ಜಿಲ್ಲೆಯಾದ್ಯಂತ ಖಾಸಗಿ ಬಸ್‌ಗಳು ತಮ್ಮ ಮಾಮೂಲಿ ಮಾರ್ಗಗಳಲ್ಲಿ ಸಂಚರಿಸಿದವು. ಆಟೋ, ಟ್ಯಾಕ್ಸಿಗಳ ಓಡಾಟಕ್ಕೂ ಯಾವುದೇ ಅಡ್ಡಿ ಆಗಿಲ್ಲ. ತುಂತುರು ಮಳೆಯ ವಾತಾವರಣದ ಮಧ್ಯೆ ಪ್ರವಾಸಿಗರು ಕೂಡ ಬಂದ್ ಕರೆ ಮರೆತು ಪ್ರವಾಸಿತಾಣಗಳಿಗೆ ನಿರಾತಂಕವಾಗಿ ಭೇಟಿ ನೀಡಿ ಕೊಡಗಿನ ಸೌಂದರ್ಯ ಸವಿದರು. ಮಧ್ಯಾಹ್ನ ತನಕ ಹಾಸನ ಮತ್ತು ಮೈಸೂರು ಭಾಗಗಳಿಂದ ಆಗಮಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರದಲ್ಲಿ ಸ್ವಲ್ಪ ಅಡಚಣೆ ಆದಂತಿತ್ತು. ಬೆಂಗಳೂರು, ಮೈಸೂರಿಗೆ ಹೋಗಬೇಕಿದ್ದ ಬಸ್‌ಗಳು ಮಡಿಕೇರಿಯಿಂದ ಕುಶಾಲನಗರ ತನಕ ಮಾತ್ರ ತೆರಳಿದವು. ಆದರೆ ಮಧ್ಯಾಹ್ನ ನಂತರ ಈ ಸಮಸ್ಯೆ ಕಂಡುಬಂದಿಲ್ಲ. ಬಸ್‌ಗಳಲ್ಲಿ ಸಾಮಾನ್ಯ ದಿನಗಳಿಗಿಂತ ಕಡಿಮೆ ಸಂಖ್ಯೆಯ ಪ್ರಯಾಣಿಕರು ಕಂಡುಬಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts