More

    ನಗರದಲ್ಲಿ ಮುಂದುವರಿದ ಮಳೆಯಾಟ

    ಬೆಳಗಾವಿ: ನಗರ ಸೇರಿ ತಾಲೂಕಿನಲ್ಲಿ ಸೋಮವಾರವೂ ವರುಣನ ಆರ್ಭಟ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಬಸವನ ಕುಡಚಿಯಲ್ಲಿ ಬಸವೇಶ್ವರ ಮತ್ತು ಕಲ್ಮೇಶ್ವರ ದೇವಸ್ಥಾನಗಳು ಜಲಾವೃತವಾಗಿವೆ. ಹಾಲಗಾ ಗ್ರಾಮದ ಬೈಪಾಸ್ ರಸ್ತೆ ಮುಳುಗಡೆಯಾಗಿದ್ದು, ಮಾರ್ಕಂಡೇಯ ನದಿ ನೀರು ತುರಮರಿ ಗ್ರಾಮದಲ್ಲಿ ಮನೆಗಳಿಗೆ ನುಗ್ಗಿದೆ.

    ಧಾರಾಕಾರ ಮಳೆಯಿಂದಾಗಿ ಬೆಳಗಾವಿಯ ಪ್ರಮುಖ ರಸ್ತೆಗಳಲ್ಲಿ ಭಾರಿ ಪ್ರಮಾಣದ ನೀರು ನಿಂತ ಪರಿಣಾಮ ಸಂಚರಿಸಲು ವಾಹನ ಸವಾರರು ಪರದಾಡಿದರು. ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರ-ವಹಿವಾಟಿಗೂ ತೊಡಕಾಯಿತು. ಕೇಂದ್ರ ಬಸ್ ನಿಲ್ದಾಣದಲ್ಲಿರುವ ರಸ್ತೆ ಅಧೋಗತಿಗೆ ತಲುಪಿದ್ದು, ಬಸ್ ಓಡಿಸಲು ಚಾಲಕರು ಪ್ರಯಾಸಪಟ್ಟರು.

    ಕೆರೆಯಂತಾದ ರಸ್ತೆ: ಸತತ ಮಳೆಯಿಂದಾಗಿ ನಗರದ ಕಾಂಗ್ರೆಸ್ ರಸ್ತೆಯು ಕೆರೆ ಸ್ವರೂಪ ಪಡೆದುಕೊಂಡಿತ್ತು. ಇದೇ ಮಾರ್ಗದಲ್ಲಿ ಮಿಲಿಟರಿ ಮಹಾದೇವ ದೇವಸ್ಥಾನವಿದ್ದು, ಶ್ರಾವಣ ಕಡೇ ಸೋಮವಾರದ ಅಂಗವಾಗಿ ದೇವಸ್ಥಾನಕ್ಕೆ ತೆರಳಲು ಭಕ್ತರು ಪರದಾಡುವಂತಾಯಿತು.

    ಬೈಕ್ ಸವಾರನ ರಕ್ಷಣೆ: ನಿರಂತರ ಮಳೆಯಿಂದಾಗಿ ತಾಲೂಕಿನ ಮಂಡೊಳ್ಳಿ-ಸಾವಗಾವ ಮಾರ್ಗದ ಸೇತುವೆ ಜಲಾವೃತವಾಗಿದ್ದರೂ, ಅಪಾಯ ಲೆಕ್ಕಿಸದೇ ಸವಾರರು ಸಂಚರಿಸುತ್ತಿದ್ದಾರೆ. ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರನನ್ನು ಸ್ಥಳೀಯ ಯುವಕರು ರಕ್ಷಿಸಿದರು. ಮಳೆಯಿಂದ ರಾಜಹಂಸಗಡ ಗ್ರಾಮದಲ್ಲಿ ಭಾನುವಾರದಂದು ಲಕ್ಷ್ಮಣ ನಾವಗೇಕರ ಮನೆ ಕುಸಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts