More

    ಕಳೆದ 3 ತಿಂಗಳಲ್ಲಿ ಅತಿ ಕಡಿಮೆ ಹೊಸ ಪ್ರಕರಣ; ದೇಶದಲ್ಲಿ ತಗ್ಗಿದ ಕರೊನಾ ಅಬ್ಬರ…

    ನವದೆಹಲಿ: ದೇಶದಲ್ಲಿ ಕರೊನಾ ತೀವ್ರತೆಯ ಇಳಿಕೆ ಮುಂದುವರಿಯುತ್ತಿದ್ದು, ಕಳೆದ ಮೂರು ತಿಂಗಳಲ್ಲೇ ಅತಿ ಕಡಿಮೆ ಹೊಸ ಪ್ರಕರಣ ಹಾಗೂ ಸಾವಿನ ಸಂಖ್ಯೆ ಭಾನುವಾರ ವರದಿಯಾಗಿವೆ. ಹೊಸದಾಗಿ 55,722 ಪ್ರಕರಣ ವರದಿಯಾಗಿದ್ದು, ಈ ಮೊದಲು ಆಗಸ್ಟ್ 11ರಂದು 56 ಸಾವಿರ ಪ್ರಕರಣಗಳು ಬೆಳಕಿಗೆ ಬಂದಿದ್ದವು. 579 ಮಂದಿ ಕರೊನಾಗೆ ಬಲಿಯಾಗಿದ್ದು, ಈ ಮೊದಲು ಜುಲೈ 19ರಂದು 543 ಸಾವುಗಳು ವರದಿಯಾಗಿದ್ದವು.

    ತಿಂಗಳ ಹಿಂದೆ ಲಕ್ಷದ ಗಡಿ ಸಮೀಪಿಸಿದ್ದ ಹೊಸ ಪ್ರಕರಣಗಳ ಸಂಖ್ಯೆ ಸದ್ಯ ನಿರಂತರವಾಗಿ ಇಳಿಕೆ ಕಾಣುತ್ತಿದೆ. ಗುಣಮುಖರ ಪ್ರಮಾಣ ಹೆಚ್ಚುತ್ತಿರುವುದರಿಂದಾಗಿ ಸಕ್ರಿಯ ಪ್ರಕರಣದಲ್ಲಿ ಗಣನೀಯ ಇಳಿಕೆ ಕಂಡುಬರುತ್ತಿದೆ. ಕಳೆದ ಮೂರು ದಿನಗಳಿಂದಲೂ ಸಕ್ರಿಯ ಪ್ರಕರಣಗಳ ಪ್ರಮಾಣ 8 ಲಕ್ಷಕ್ಕಿಂತ ಕಡಿಮೆ ಇದೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಮಾತ್ರ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದ ರಾಜ್ಯಗಳಿಗೆ ಕೇಂದ್ರ ಸರ್ಕಾರ ತಜ್ಞರ ತಂಡಗಳನ್ನು ರವಾನಿಸಿದ ಬಳಿಕ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಗುಣಮುಖರ ಪ್ರಮಾಣ ಸದ್ಯ ಶೇ. 88.3ಕ್ಕೆ ಏರಿಕೆಯಾಗಿದ್ದು, ಈವರೆಗೆ 66.60 ಲಕ್ಷಕ್ಕೂ ಅಧಿಕ ರೋಗಿಗಳು ಚೇತರಿಸಿಕೊಂಡಿದ್ದಾರೆ.

    ಶೇ.50 ಮಂದಿಗೆ ಸೋಂಕು!

    ಭಾರತದ ಸುಮಾರು 130 ಕೋಟಿ ಜನಸಂಖ್ಯೆಯಲ್ಲಿ ಶೇ. 50 ಜನರು ಫೆಬ್ರವರಿ ವೇಳೆಗೆ ಕರೊನಾ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಕರೊನಾ ನಿರ್ವಹಣೆಗೆ ರಚಿಸಿರುವ ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆ. ಸದ್ಯದ ಅಂದಾಜಿನ ಪ್ರಕಾರ ದೇಶದಲ್ಲಿ ಶೇ. 30 ಜನರು ಈಗಾಗಲೇ ಸೋಂಕಿಗೆ ಒಳಗಾಗಿದ್ದಾರೆ. ಈ ಪ್ರಮಾಣ ಮುಂದಿನ ವರ್ಷ ಫೆಬ್ರವರಿ ವೇಳೆಗೆ ಶೇಕಡ 50ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಸಮಿತಿಯ ಸದಸ್ಯ, ಕಾನ್ಪುರದ ಇಂಡಿಯನ್ ಇನ್​ಸ್ಟಿಟ್ಯೂಟ್ ಫಾರ್ ಟೆಕ್ನಾಲಜಿಯಲ್ಲಿನ ಪ್ರಾಧ್ಯಾಪಕ ಮನೀಂದ್ರ ಅಗರ್​ವಾಲ್ ತಿಳಿಸಿದ್ದಾರೆ. ಶೇ. 14 ಮಂದಿಗೆ ಕರೊನಾ ತಗುಲಿದೆ ಎಂದು ಸರ್ಕಾರದ ಸೆರೋಲಾಜಿಕಲ್ ಸಮೀಕ್ಷೆ ಅಂದಾಜಿಸಿತ್ತು. ಆದರೆ ಸಮಿತಿಯ ವರದಿಯ ಅಂದಾಜು ಹೆಚ್ಚಿದೆ. ಹೆಚ್ಚು ಜನಸಂಖ್ಯೆ ಕಾರಣದಿಂದಾಗಿ ಸೆರೋಲಾಜಿಕಲ್ ಸಮೀಕ್ಷೆಗಳಿಂದ ಸರಿಯಾದ ಪ್ರಮಾಣವನ್ನು ಕಂಡುಹಿಡಿಯಲು ಆಗುವುದಿಲ್ಲ. ಆದರೆ ನಾವು ಹೊಸ ಮಾದರಿಯನ್ನು ಅಭಿವೃದ್ಧಿಪಡಿಸಿದ್ದೇವೆ. ಅದರಿಂದ ವರದಿಯಾಗದ ಪ್ರಕರಣಗಳನ್ನು ಸ್ಪಷ್ಟವಾಗಿ ಗಣನೆಗೆ ತೆಗೆದುಕೊಳ್ಳಬಹುದು ಎಂದು ಮನೀಂದ್ರ ಹೇಳಿದ್ದಾರೆ. ಪ್ರಸ್ತುತ ಭಾರತದಲ್ಲಿ 75 ಲಕ್ಷ ಕರೊನಾ ಪ್ರಕರಣ ದೃಢಪಟ್ಟಿದೆ. ಆದರೆ ಪರೀಕ್ಷೆ ಮಾಡಿರದ, ಸೋಂಕಿನ ಲಕ್ಷಣ ಹೊಂದಿರದ ಲಕ್ಷಾಂತರ ಮಂದಿಗೆ ಈಗಾಗಲೇ ಕರೊನಾ ಬಂದಿದೆ ಎಂದು ಅಂದಾಜು ಮಾಡಲಾಗಿದೆ.

    ಎಐಸಿಟಿಇ ಕ್ಯಾಲೆಂಡರ್ ಪರಿಷ್ಕರಣೆ

    ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಪ್ರಸ್ತುತ ಶೈಕ್ಷಣಿಕ ವರ್ಷದ (2020-21) ಕ್ಯಾಲೆಂಡರನ್ನು ಪರಿಷ್ಕರಿಸಿದೆ. ಇದರ ಅನ್ವಯ ಇಂಜಿನಿಯರಿಂಗ್ ಕೋರ್ಸ್​ಗಳು ಡಿಸೆಂಬರ್ 1 ರಿಂದ ಪ್ರಾರಂಭವಾಗಲಿವೆ. ಪ್ರಥಮ ವರ್ಷದ ಕೋರ್ಸ್​ಗಳಿಗೆ ದಾಖಲಾತಿಯ ಕೊನೆಯ ದಿನಾಂಕವನ್ನು ನವೆಂಬರ್ 30ರವರೆಗೆ ವಿಸ್ತರಣೆ ಮಾಡಲಾಗಿದೆ. ಮೊದಲ ವೇಳಾಪಟ್ಟಿ ಪ್ರಕಾರ ಇಂಜಿನಿಯರಿಂಗ್, ಫಾರ್ಮಸಿ ಸೇರಿ ಇತರ ಕೋರ್ಸ್​ಗಳು ಆಗಸ್ಟ್ 16ರಿಂದ ಹಾಗೂ ಹೊಸ ಬ್ಯಾಚ್​ನ ವಿದ್ಯಾರ್ಥಿಗಳ ತರಗತಿಗಳು ಸೆ.15ರಿಂದ ಪ್ರಾರಂಭವಾಗಬೇಕಿತ್ತು.

    ಭಾರತೀಯ ಮೂಲದ ವಿದ್ಯಾರ್ಥಿನಿಗೆ 25 ಸಾವಿರ ಡಾಲರ್

    ಅಮೆರಿಕದಲ್ಲಿ ಕರೊನಾ ವೈರಸ್ ಚಿಕಿತ್ಸೆ ಕಂಡು ಹಿಡಿಯುವ ಬಗ್ಗೆ ಸಂಶೋಧನೆ ನಡೆಸಿದ್ದ ಭಾರತೀಯ ಮೂಲದ 14 ವರ್ಷದ ಅನಿಕಾ ಚೆಬ್ರೊಲು ಎಂಬ ವಿದ್ಯಾರ್ಥಿನಿಗೆ 25 ಸಾವಿರ ಡಾಲರ್ ಬಹುಮಾನ ನೀಡಲಾಗಿದೆ. ಟೆಕ್ಸಾಸ್​ನ ನಿವಾಸಿಯಾಗಿರುವ ಅನಿಕಾ, ಸಂಭಾವ್ಯ ಕರೊನಾ ಚಿಕಿತ್ಸೆಯ ಕುರಿತು ನಡೆಸಿದ ಸಂಶೋಧನೆಗಾಗಿ 2020 3ಎಂ ಯಂಗ್ ಸೈಂಟಿಸ್ಟ್ ಚಾಲೆಂಜ್ ಎಂಬ ಪ್ರಶಸ್ತಿ ಲಭಿಸಿದೆ. ಅನಿಕಾ ಅವರು ಅಣುವೊಂದನ್ನು (ಮೊಲೆಕ್ಯುಲ್) ಅಭಿವೃದ್ಧಿಪಡಿಸಿದ್ದು, ಅದು ಕರೊನಾ ವೈರಸ್ ನಿಯಂತ್ರಣಕ್ಕೆ ಸಹಾಯಕವಾಗಿದೆ.

    ಜಾಗತಿಕವಾಗಿ 4 ಕೋಟಿ ದಾಟಿದ ಪ್ರಕರಣ

    ವಿಶ್ವದಲ್ಲಿ ಈವರೆಗೆ ಕರೊನಾ ಸೋಂಕಿಗೆ ಒಳಗಾಗಿರುವವರ ಸಂಖ್ಯೆ 4 ಕೋಟಿಗೂ ಅಧಿಕವಾಗಿದೆ. ಕಳೆದ 24 ತಾಸಿನಲ್ಲಿ 3.24 ಲಕ್ಷ ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 4.03 ಕೋಟಿಗೆ ಏರಿಕೆಯಾಗಿದೆ. ಹೊಸದಾಗಿ 3,968 ಜನರು ಸೋಂಕಿಗೆ ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 11.18 ಲಕ್ಷಕ್ಕೆ ಏರಿಕೆಯಾಗಿದೆ. ಅಮೆರಿಕದಲ್ಲಿ 83.87 ಲಕ್ಷ ಪ್ರಕರಣಗಳು ವರದಿಯಾಗಿದ್ದು, 2.24 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಮಿಕ್ಕಂತೆ ಕರೊನಾ ತೀವ್ರತೆಗೆ ತುತ್ತಾಗಿದ್ದ ಬ್ರೆಜಿಲ್, ರಷ್ಯಾ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts