More

    ಕರಗಾಂವದಲ್ಲಿ ಅವಿರೋಧ ಆಯ್ಕೆಯೇ ಅಸ್ತ್ರ!

    ನಾಗರಮುನ್ನೋಳಿ : ಅಧಿಕಾರ ವಿಕೇಂದ್ರಿಕರಣದ ಸದುದ್ದೇಶದಿಂದ ರಚಿತವಾದ ಗ್ರಾಮ ಪಂಚಾಯಿತಿಗಳು ಕಾಲಾಂತರದಲ್ಲಿ ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆಯಾಗಿ ಬದಲಾಗಿರುವುದು ವಾಸ್ತವ. ಗ್ರಾಮ ಮಟ್ಟದಲ್ಲಿ ಅಭಿವೃದ್ಧಿ ಹಾಗೂ ಮೂಲ ಸೌಕರ್ಯ ವೃದ್ಧಿಸುವ ಆಶಯ ಹೊಂದಿರುವ ಗ್ರಾಮ ಪಂಚಾಯಿತಿಗಳು ಈಗ ಚುನಾವಣೆಯ ಅಬ್ಬರದಲ್ಲಿ ಮಿಂದೆದ್ದಿವೆ. ಇಂಥ ಬೆಳವಣಿಗೆಗಳ ಮಧ್ಯೆಯೂ ಗ್ರಾಮಾಭಿವೃದ್ಧಿಗಾಗಿ ಅವಿರೋಧ ಆಯ್ಕೆ ಎಂಬ ಅನುಕೂಲಕರ ಹಾದಿ ಹುಡುಕಿಕೊಳ್ಳುವ ಗ್ರಾಮಗಳೂ ಇವೆ. ಅಂಥ ಗ್ರಾಮಗಳ ಪೈಕಿ ಚಿಕ್ಕೋಡಿ ತಾಲೂಕಿನ ಕರಗಾಂವ ಕೂಡ ಒಂದು.

    ಗ್ರಾಮ ಪಂಚಾಯಿತಿ ಚುನಾವಣೆ ಎಂಬುದು ಗ್ರಾಮೀಣ ಭಾಗದಲ್ಲಿ ವೈಮನಸ್ಸು ಹಾಗೂ ಒಗ್ಗಟ್ಟನ್ನು ಏಕಕಾಲಕ್ಕೆ ದರ್ಶನ ಮಾಡಿಸುವ ಅಖಾಡ. ಸ್ನೇಹಿತರ ಮಧ್ಯೆ, ಕುಟುಂಬದವರ ಮಧ್ಯೆ ಜಿದ್ದಾಜಿದ್ದಿ ನಡೆಯುವುದು ಸಾಮಾನ್ಯ. ಆದರೆ, ಕರಗಾಂವ ಗ್ರಾಮದಲ್ಲಿ ಒಮ್ಮೆ ಮಾತ್ರ ಈವರೆಗೆ ಚುನಾವಣೆ ನಡೆದಿದ್ದು ಬಿಟ್ಟರೆ ಇನ್ನುಳಿದ ಎಲ್ಲ ಅವಧಿಯಲ್ಲೂ ಅವಿರೋಧ ಆಯ್ಕೆ ನಡೆದಿರುವುದು ವಿಶೇಷ.

    ಗ್ರಾಮದ ಹಿರಿಯರ ಪ್ರಯತ್ನ: ಕರಗಾಂವ, ಡೋಣವಾಡ, ಹಂಚಿನಾಳ ಸೇರಿ ಮೂರು ಗ್ರಾಮಗಳು ಪಂಚಾಯಿತಿ ವ್ಯಾಪ್ತಿಯಲ್ಲಿವೆ. 16 ಸದಸ್ಯ ಸ್ಥಾನ ಹೊಂದಿರುವ ಪಂಚಾಯಿತಿಯಲ್ಲಿ ಆರು ವಾರ್ಡ್‌ಗಳಿವೆ. 1962ರಿಂದ ರಚನೆಯಾದ ಕರಗಾಂವ ಪಂಚಾಯಿತಿ ವ್ಯಾಪ್ತಿಯ ಕರಗಾಂವ ವಾರ್ಡ್‌ಗಳಲ್ಲಿ 2015ರಲ್ಲಿ ಮಾತ್ರ ಚುನಾವಣೆ ನಡೆದಿತ್ತು. ಅದು ಬಿಟ್ಟರೆ 58 ವರ್ಷ ಅವಿರೋಧ ಆಯ್ಕೆ ನಡೆಯುತ್ತ ಬಂದಿದೆ. 1962ರಲ್ಲಿ ಗ್ರುಪ್ ಗ್ರಾಮ ಪಂಚಾಯಿತಿ ಇತ್ತು. 1985ರಲ್ಲಿ ಮಂಡಲ ಪಂಚಾಯಿತಿ ಇದ್ದವು. 1992ರಲ್ಲಿ ಅವುಗಳನ್ನು ಗ್ರಾಮ ಪಂಚಾಯಿತಿಗಳನ್ನಾಗಿ ಸರ್ಕಾರ ಮಾರ್ಪಾಡು ಮಾಡಿದೆ. ಆದರೆ, ಯಾವುದೇ ಸ್ವರೂಪದ ಆಡಳಿತ ಇದ್ದರೂ ಸತತ ಅವಿರೋಧ ಆಯ್ಕೆ ನಡೆದಿದೆ. ಅದಕ್ಕೆ ಕರಗಾಂವ ಗ್ರಾಮದ ಹಿರಿಯ ಮುಖಂಡ ಡಿ.ಟಿ. ಪಾಟೀಲ (ಕಾಕಾ) ಹಾಗೂ ಡೋಣವಾಡದ ಹಿರಿಯ ವಕೀಲ ಟಿ.ವೈ. ಕಿವಡ ಸತತ ಪ್ರಯತ್ನಪಟ್ಟಿದ್ದಾರೆ.

    25 ವರ್ಷಗಳಿಂದೀಚೆಗೆ ಚುನಾವಣೆ: ಕರಗಾಂವ ಗ್ರಾಪಂಗೆ ಒಳಪಡುವ ಪಕ್ಕದ ಡೊಣವಾಡ ಹಾಗೂ ಹಂಚಿನಾಳ ಗ್ರಾಮಗಳಲ್ಲಿ 25 ವರ್ಷಗಳಿಂದಷ್ಟೇ ಚುನಾವಣೆ ನಡೆದಿದೆ. ಅದಕ್ಕಿಂತ ಮೊದಲು ಈ ಗ್ರಾಮಗಳಲ್ಲೂ ಚುನಾವಣೆ ನಡೆದಿಲ್ಲ. ಆದರೆ, ಕರಗಾಂವ ಗ್ರಾಮದಲ್ಲಿ ಮಾತ್ರ ಅವಿರೋಧ ಆಯ್ಕೆ ನಡೆಯುತ್ತಿದೆ.

    ಸಮುದಾಯಗಳ ಬಲಾಬಲ ಪ್ರದರ್ಶನ

    ಒಂದೊಂದು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯುವುದು ದೊಡ್ಡ ಸಾಧನೆ. ಅಂಥದ್ದರಲ್ಲಿ ಗ್ರಾಮದ ಎಲ್ಲ ಸದಸ್ಯರ ಅವಿರೋಧ ಆಯ್ಕೆ ನಡೆಯುವುದು ಸಣ್ಣ ಮಾತಲ್ಲ. ಅಸಾಧ್ಯವನ್ನು ಸಾಧ್ಯವಾಗಿಸಿದ ಕರಗಾಂವ ಗ್ರಾಮ ಅವಿರೋಧ ಆಯ್ಕೆಯ ಮೂಲಕ ಗಮನ ಸೆಳೆದಿರುವುದು ಗಮನಾರ್ಹ. ಪ್ರಸಕ್ತ ಚುನಾವಣೆಯಲ್ಲಿಯೂ ಅವಿರೋಧ ಆಯ್ಕೆ ಮಾಡಲು ಹಿರಿಯ ಮುಖಂಡರ ಪ್ರಯತ್ನ ಜೋರಾಗಿದೆ. ಆದರೆ, ರಾಜಕೀಯ ಪಕ್ಷಗಳು ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವುದರಿಂದ ಹಾಗೂ ಯುವಕರ ಉತ್ಸಾಹ, ಆಯಾ ಸಮುದಾಯಗಳ ಬಲಾಬಲ ಪ್ರದರ್ಶನದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ನಡೆಯುವುದು ಕಷ್ಟ ಎನ್ನುವುದು ಸ್ಥಳೀಯ ಕೆಲ ಮುಖಂಡರ ಅನಿಸಿಕೆ.

    ಕರಗಾಂವ ಗ್ರಾಮ ಪಂಚಾಯಿತಿಗೆ ಈ ಸಲ ಚುನಾವಣೆ ನಡೆದೇ ನಡೆಯುತ್ತದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ವಿಶ್ವಾಸದಿಂದ ನಾಮಪತ್ರ ಸಲ್ಲಿಸುತ್ತಿರುವುದರಿಂದ ಅವಿರೋಧ ಆಯ್ಕೆ ಕಷ್ಟದ ಮಾತು. ಹಾಗಾಗಿ ಚುನಾವಣೆ ನಡೆಯಲಿದೆ.
    | ಶಂಕರಗೌಡ ಪಾಟೀಲ ತಾಪಂ ಸದಸ್ಯ, ಚಿಕ್ಕೋಡಿ

    ಗ್ರಾಮಗಳ ಅಭಿವೃದ್ಧಿ ದೃಷ್ಟಿಯಿಂದ ಅವಿರೋಧ ಆಯ್ಕೆಗೆ ಗ್ರಾಮದ ಹಿರಿಯರು ಹಾಗೂ ಯುವಕರು ಗಮನಹರಿಸಬೇಕು. ಅವಿರೋಧ ಆಯ್ಕೆಯಾದರೆ ವೈಮನಸ್ಸು ಹಾಗೂ ಭಿನ್ನಾಭಿಪ್ರಾಯ ಕ್ಷೀಣಿಸಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ಸಿಗುತ್ತದೆ. ಮಾದರಿ ಅಡಳಿತ ನೀಡಲು ಸಾಧ್ಯವಾಗುತ್ತದೆ.
    | ಕಾಡಗೌಡ ಪಾಟೀಲ ಯುವ ಮುಖಂಡ, ಕರಗಾಂವ

    | ಲಾಲಸಾಬ ತಟಗಾರ, ನಾಗರಮುನ್ನೋಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts