More

    ಮರಾಠಿಯಾದರೂ ಕನ್ನಡ ಭಾಷೆಯಲ್ಲಿ ಅ‘ಪೂರ್ವ’ತೆ

    ಬೆಳಗಾವಿ: ಮಾತೃಭಾಷೆ ಮರಾಠಿಯಾದರೂ ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಮಾಡಿದ ವಿದ್ಯಾರ್ಥಿನಿಯೊಬ್ಬಳು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ
    125ಕ್ಕೆ 125 ಅಂಕ ಗಳಿಸಿ ಎಲ್ಲರ ಗಮನ ಸೆಳೆದಿದ್ದಾಳೆ. ನಗರದ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಪೂರ್ವಾ ಮುತಗೇಕರ, ಪರೀಕ್ಷೆಯಲ್ಲಿ 625ಕ್ಕೆ 613(ಶೇ.98.08) ಅಂಕ ಗಳಿಸಿ, ಕನ್ನಡ ಮಾಧ್ಯಮದಲ್ಲಿ ಬೆಳಗಾವಿ ನಗರ ವಲಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ.

    ವಿದ್ಯಾರ್ಥಿನಿ ಗಣಿತ, ಹಿಂದಿ, ಸಮಾಜ ವಿಜ್ಞಾನದಲ್ಲಿ ತಲಾ 100, ವಿಜ್ಞಾನದಲ್ಲಿ 96 ಮತ್ತು ಇಂಗ್ಲಿಷ್‌ನಲ್ಲಿ 92 ಅಂಕ ಗಳಿಸಿದ್ದಾಳೆ. ಪೂರ್ವಾಳ ತಂದೆ ಅನೂಪ ಮುತಗೇಕರ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದಾರೆ. ತಾಯಿ ಸುಜಾತಾ ಗೃಹಿಣಿ. ಕಿರಿಯ ಸಹೋದರಿ ಚೈತನ್ಯಾ ಕೂಡ ಕನ್ನಡ ಮಾಧ್ಯಮದಲ್ಲೇ 6ನೇ ತರಗತಿ ಓದುತ್ತಿದ್ದಾಳೆ.
    ಶಿಕ್ಷಕಿಯಾಗುವಾಸೆ: ನನ್ನ ತಾಯಿ ಕನ್ನಡ ಮಾಧ್ಯಮದಲ್ಲೇ ಓದಿದ್ದಾರೆ. ಹಾಗಾಗಿ ನನಗೂ ಕನ್ನಡದಲ್ಲೇ ಕಲಿಯ ಬೇಕೆಂಬ ಇಚ್ಛೆ ಇತ್ತು. ಮೇಲಾಗಿ, ಕನ್ನಡ ಮಾಧ್ಯಮ
    ದಲ್ಲಿ ವ್ಯಾಸಂಗ ಮಾಡಿದವರಿಗೆ ಹೆಚ್ಚಿನ ಉದ್ಯೋಗಾವ ಕಾಶಗಳಿವೆ. ಹಾಗಾಗಿ ಪೂರ್ವ ಪ್ರಾಥಮಿಕ ಹಂತದಿಂದಲೂ ಕನ್ನಡ ಮಾಧ್ಯಮದಲ್ಲೇ ಓದುತ್ತಿದ್ದೇನೆ.

    ಯಾವುದೇ ಮಾಧ್ಯಮವಾದರೂ, ಶ್ರದ್ಧೆ ಮತ್ತು ಸತತ ಪರಿಶ್ರಮವಿದ್ದರೆ ಸಾಧನೆ ಮಾಡಬಹುದು. ಕನ್ನಡದಲ್ಲಿ ಪೂರ್ಣ ಅಂಕ ಗಳಿಸಿರುವುದು ಖುಷಿಯಾಗಿದೆ. ಮುಂದೆ ಪಿಯುಸಿ ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆಯುತ್ತೇನೆ. ವಿಜ್ಞಾನ ಶಿಕ್ಷಕಿಯಾಗುವ ಆಸೆ ಇದೆ ಎನ್ನುತ್ತಾಳೆ ಪೂರ್ವಾ.

    ಶಿಕ್ಷಣ ಇಲಾಖೆಯಿಂದ ಸನ್ಮಾನ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿನಿ ಪೂರ್ವಾ ಮುತಗೇಕರ್ ಅವಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಇತ್ತೀಚೆಗೆ ಸತ್ಕರಿಸಲಾಯಿತು. ಈ ವೇಳೆ ನಗರ ಬಿಇಒ ರವಿ ಭಜಂತ್ರಿ ಮಾತನಾಡಿ, ಮಕ್ಕಳು ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಮಾಡಿ ಉಜ್ವಲ ಭವಿಷ್ಯ ಕಟ್ಟಿಕೊಳ್ಳಬೇಕು. ವಿವಿಧ ರಂಗಗಳಲ್ಲಿ ಮಿಂಚಿ ನಾಡಿನ ಹಿರಿಮೆ ಹೆಚ್ಚಿಸಬೇಕು ಎಂದು ಸಲಹೆ ನೀಡಿದ್ದಾರೆ. ಕ್ಷೇತ್ರ ಸಮನ್ವಯ ಅಧಿಕಾರಿ ಡಾ.ರಾಜಶೇಖರ ಚಳಗೇರಿ, ಮುಖ್ಯಾಧ್ಯಾಪಕ ಎಂ.ಕೆ.ಮಾದಾರ, ಬಿ.ಸಿ.ಸವಣೂರ, ಪರ್ವೀನ್ ನದಾಫ್, ಸಂಜಯ ಪಾಟೀಲ, ಎಚ್.ಎ. ಮುಲ್ಲಾ ವಿದ್ಯಾರ್ಥಿನಿ ಸಾಧನೆಗೆ ಮೆಚ್ಚುಗೆ ವ್ಯಪಡಿಸಿದ್ದಾರೆ.

    ರಾಜ್ಯದಲ್ಲಿ ಕನ್ನಡ ಭಾಷೆಗೆ ಮೊದಲ ಪ್ರಾಶಸ್ತ್ಯವಿದೆ. ಹಾಗಾಗಿ ನಾನು ಮರಾಠಿ ಮಾಧ್ಯಮದಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಪಡೆದಿದ್ದರೂ ನನ್ನ ಇಬ್ಬರೂ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲೇ ಓದಿಸುತ್ತಿದ್ದೇನೆ. ಪುತ್ರಿ ಪೂರ್ವಾಳ ಸಾಧನೆ ನನಗೆ ಹಾಗೂ ಕುಟುಂಬಸ್ಥರಿಗೆ ಸಂತಸದ ಜತೆಗೆ ಹೆಮ್ಮೆ ತಂದಿದೆ.
    |ಅನೂಪ ಮುತಗೇಕರ ಪೂರ್ವಾಳ ತಂದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts