More

    ಆತಂಕದಲ್ಲಿ ಖಾಕಿಯೊಳಗಿನ ಮನುಷ್ಯ!

    ಬೆಳಗಾವಿ: ಮಹಾಮಾರಿಯಾಗಿ ಕಾಡುತ್ತಿರುವ ಕರೊನಾ ವೈರಸ್ ನಿಯಂತ್ರಣ ಹಾಗೂ ಸಾರ್ವಜನಿಕರ ರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿರುವ ಪೊಲೀಸರು ಇದೀಗ ಕುಟುಂಬ ಹಾಗೂ ತಮ್ಮ ಬಗ್ಗೆ ಅಭದ್ರತೆ ಎದುರಿಸುತ್ತಿದ್ದಾರೆ. ಕರೊನಾ ವೈರಸ್ ಸದೆಬಡಿಯುವ ಹೋರಾಟದಲ್ಲಿ ತೊಡಗಿಕೊಂಡಿರುವ ಅವರು ತಮ್ಮನ್ನೇ ಅಪಾಯಕ್ಕೆ ಒಡ್ಡಿಕೊಳ್ಳುತ್ತಿದ್ದಾರೆ. ಅಲ್ಲದೆ, ‘ಅತ್ತ ದರಿ ಇತ್ತ ಪುಲಿ’ ಎಂಬ ಪರಿಸ್ಥಿತಿ ಎದುರಿಸುತ್ತಿದ್ದಾರೆ.

    ರಾಜ್ಯದಲ್ಲಿಯೂ ಕರೊನಾ ವೈರಸ್ ಸೋಂಕಿತರ ಪ್ರಕರಣ ಹೆಚ್ಚಾಗುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದ್ದರೆ, ಇತ್ತ ದಿನದ 24 ಗಂಟೆ ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಹೇಳಿಕೊಳ್ಳಲಾಗದ ಹೀನಾಯ ಸ್ಥಿತಿ ಅನುಭವಿಸುತ್ತಿದ್ದಾರೆ. ಪೊಲೀಸರು ಮತ್ತು ಗೃಹದಳ ಸಿಬ್ಬಂದಿಯ ದಿನಚರಿಯೇ ಸಂಪೂರ್ಣ ಬದಲಾಗಿ ಹೋಗಿದೆ.

    ಉಪಾಹಾರ ಸೇವಿಸಲೂ ಭಯ: ಕರೊನಾ ವೈರಸ್ ನಿಯಂತ್ರಣಕ್ಕೆ ಸರ್ಕಾರ 21 ದಿನದ ಲಾಕ್‌ಡೌನ್ ಘೋಷಣೆ ಮಾಡಿದ್ದರೂ ಜನರು ವಾಹನಗಳೊಂದಿಗೆ ಬೀದಿಗೆ ಇಳಿಯುತ್ತಿದ್ದು, ಅದನ್ನು ತಡೆಯಬೇಕಿದೆ. ಜತೆಗೆ ಸೋಂಕಿತರ ಪ್ರದೇಶಗಳಲ್ಲಿ ದಿನದಲ್ಲಿ ನಾಲ್ಕೈದು ಬಾರಿ ಸುತ್ತುಹಾಕಿ ಜನರು ಓಡಾಡದಂತೆ ನೋಡಿಕೊಳ್ಳಬೇಕು. ಈ ವೇಳೆ ಯಾರಾದರೂ ಉಪಹಾರ ನೀಡಿದರೂ ಅದನ್ನು ಸೇವಿಸಲು ಸಹ ಪೊಲೀಸ್ ಸಿಬ್ಬಂದಿ ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.

    ನೀರೇ ಗತಿ: ಬೆಳಗ್ಗೆ ಮನೆಯಿಂದ ಹೊರಬಂದರೆ ವಾಪಸ್ ಮನೆಗೆ ಯಾವಾಗ ಮರಳುತ್ತಾರೋ ಗೊತ್ತಿಲ್ಲ. ಈ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವರು, ವಿವಿಧ ಇಲಾಖೆ ಸಚಿವರು ರಸ್ತೆ ಮಾರ್ಗಗಳ ಮೂಲಕ ವಿವಿಧ ಕಡೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕರೊನಾ ಬಂದೋಬಸ್ತ್ ಜತೆಗೆ ಸಚಿವರ ಎಸ್ಕಾರ್ಟ್ ಕೂಡ ನೋಡಿಕೊಳ್ಳಬೇಕು. ಸಚಿವರು, ಹಿರಿಯ ಅಧಿಕಾರಿಗಳಿಗೆ ಸೋಂಕು ಹರಡದಂತೆ ಜನರನ್ನು ದೂರ ನಿಲ್ಲಿಸಬೇಕು. ಈ ಎಲ್ಲ ಜವಾಬ್ದಾರಿ ನಿಭಾಯಿಸುವಷ್ಟರಲ್ಲಿ ಆರಕ್ಷರು ಹೈರಾಣಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹೊಟ್ಟೆ ಹಸಿದರೂ ನೀರು ಕುಡಿದು ಸಮಾಧಾನಪಟ್ಟುಕೊಳ್ಳಬೇಕು.

    ಕರೊನಾ ವೈರಸ್ ಹರಡುವುದನ್ನು ತಡೆಯುವಲ್ಲಿ ಪೊಲೀಸರ ಜವಾಬ್ದಾರಿ ಹೆಚ್ಚಿದೆ. ಹೀಗಾಗಿ ಜನರೂ ಸಹ ಸ್ವಯಂಪ್ರೇರಣೆಯಿಂದ ಮನೆಯಲ್ಲಿಯೇ ಇದ್ದರೆ ಪೊಲೀಸರಿಗೂ ಕರೊನಾ ವೈರಸ್ ಹರಡುವುದಿಲ್ಲ. ಜನರ ಕೈಯಲ್ಲಿಯೇ ಪೊಲೀಸರ ಆರೋಗ್ಯ ಇದೆ. ಹಾಗಾಗಿ ಜನರು ಸಹಕಾರ ನೀಡಬೇಕು ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು.

    ಕುಟುಂಬಸ್ಥರೊಂದಿಗೆ ಬೆರೆಯಲು ಆತಂಕ

    ಕರ್ತವ್ಯದ ವೇಳೆ ಸಾರ್ವಜನಿಕರ ಜತೆ ಮಾತನಾಡುತ್ತೇವೆ, ವಾಹನ ತಪಾಸಣೆ ನಡೆಸುತ್ತೇವೆ. ಒಂದೊಂದು ಬಾರಿ ಯಾರ‌್ಯಾರದೋ ವಾಹನದಲ್ಲಿ ಓಡಾಡುತ್ತೇವೆ. ಕೊನೆಗೆ ಕೆಲಸ ಮುಗಿಸಿಕೊಂಡು ವಾಪಸ್ ಮನೆ ಹೋಗಬೇಕು ಎಂದರೆ ತಾಯಿ, ಪತ್ನಿ, ಮಕ್ಕಳು ನೆನಪಾಗಿ ಭಯವಾಗುತ್ತಿದೆ. ಮನೆ ಸುತ್ತಮುತ್ತಲಿನ ಜನರು ಪೊಲೀಸರು ಎಂಬ ಕಾರಣಕ್ಕೆ ನಮ್ಮ ಬಗ್ಗೆ ಯಾರೂ ಮಾತನಾಡುವುದಿಲ್ಲ. ಆದರೆ, ಮನೆಯಲ್ಲಿನ ಮಕ್ಕಳು, ಪತ್ನಿ, ತಾಯಿ ಯಾರಾದರೂ ಸ್ವಲ್ಪ ಕೆಮ್ಮಿದರೆ, ಮೈ ಬಿಸಿಯಾದರೆ ಭಯ ಆಗುತ್ತಿದೆ. ನಮ್ಮಿಂದ ಕರೊನಾ ಸೋಂಕು ತಗುಲಿರಬಹುದೇ ಎಂಬ ಆತಂಕ ಕಾಡುತ್ತಿದೆ. ನಮ್ಮ ಸಮಸ್ಯೆ ಯಾರಿಗೆ ಹೇಳಬೇಕು? ಹಿರಿಯ ಅಧಿಕಾರಿಗಳೇ ವಿಶ್ರಾಂತಿ ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ನಾವೆಲ್ಲ ರಜೆ ಕೇಳಲೂ ಆಗುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಸಿಬ್ಬಂದಿ ದುಃಖ ತೋಡಿಕೊಂಡಿದ್ದಾರೆ.

    ಮಹಾರಾಷ್ಟ್ರ, ಗೋವಾ ರಾಜ್ಯಗಳ ಗಡಿಯಲ್ಲಿ ಬೆಳಗಾವಿ ಜಿಲ್ಲೆ ಹೊಂದಿಕೊಂಡಿರುವುದರಿಂದ ಇಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲಾಗುತ್ತಿದ್ದು, ಹಲವೆಡೆ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್ ನೀಡಲಾಗುತ್ತಿದೆ. ಆಯಾ ಠಾಣೆಯ ಪೊಲೀಸ್ ಸಿಬ್ಬಂದಿ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ.
    | ಅಮರನಾಥ ರೆಡ್ಡಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ

    ಆಯಾ ಠಾಣೆಯ ವ್ಯಾಪ್ತಿಯಲ್ಲಿಯೇ ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿ, ಸಿಬ್ಬಂದಿಯ ಆರೋಗ್ಯ ತಪಾಸಣೆ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ಮನೆಗೆ ಹೋಗಲು ಸಾಧ್ಯವಾಗದಿರುವ ಸಿಬ್ಬಂದಿಗೆ ಉಪಾಹಾರ, ಊಟದ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬ ಸಿಬ್ಬಂದಿ ಆರೋಗ್ಯದ ಮೇಲೆ ವಿಶೇಷ ನಿಗಾ ವಹಿಸಲಾಗುತ್ತಿದೆ.
    | ಬಿ.ಎಸ್. ಲೋಕೇಶಕುಮಾರ್, ಪೊಲೀಸ್ ಆಯುಕ್ತ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts