More

    ಭ್ರಷ್ಟಾಚಾರಿಗಳಿಗೆ ಜೈಲುವಾಸವೇ ಗತಿ; ಬೆದರಿಕೆಗೆ ಮಣಿಯಲ್ಲ ಎಂದ ಪ್ರಧಾನಿ

    ಜೈಪುರ: ಭ್ರಷ್ಟರನ್ನು ಜೈಲಿಗೆ ಕಳುಹಿಸುವುದೇ ಮೋದಿ ಗ್ಯಾರಂಟಿ. ಭ್ರಷ್ಟರ ಯಾವುದೇ ಬೆದರಿಕೆಗಳಿಗೂ ತಾವು ಮಣಿಯುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ. ರಾಜಸ್ಥಾನದ ಕರೌಲಿಯಲ್ಲಿ ಗುರುವಾರ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ನಡೆಸಿದ್ದನ್ನು ಪ್ರಸ್ತಾಪಿಸಿ ವಿಪಕ್ಷಗಳತ್ತ ತೀವ್ರ ವಾಗ್ದಾಳಿ ನಡೆಸಿದರು. ವಿಪಕ್ಷ ಎಷ್ಟರಮಟ್ಟಿಗೆ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ ಎಂದರೆ ಯುವಕರ ಉದ್ಯೋಗದಲ್ಲೂ ಲೂಟಿ ಮಾಡುವ ಅವಕಾಶ ಕಂಡುಕೊಂಡಿದೆ ಎಂದರು.

    ರಾಜಸ್ಥಾನವೂ ಸೇರಿ ದೇಶಾದ್ಯಂತ ಇರುವ ಭ್ರಷ್ಟರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದೇ ಕಾರಣಕ್ಕೆ ಅವರೆಲ್ಲ ಜೊತೆಯಾಗಿ ತಮ್ಮ ವಿರುದ್ಧ ಇಂಡಿಯಾ ಒಕ್ಕೂಟ ರಚಿಸಿಕೊಂಡಿದ್ದಾರೆ. ಅವರೆಲ್ಲ ಒಂದಾಗಿ ಭ್ರಷ್ಟಾಚಾರಿಗಳನ್ನು ಉಳಿಸಲು ಮುಂದಾಗಿದ್ದಾರೆ. ಅವರು ಮೋದಿಗೆ ಎಷ್ಟೇ ಬೆದರಿಕೆಗಳನ್ನು ಒಡ್ಡಿದರೂ ಭ್ರಷ್ಟಾಚಾರಿಗಳು ಜೈಲಿಗೆ ಹೋಗಲೇಬೇಕು. ಇದು ಮೋದಿ ಗ್ಯಾರಂಟಿ ಎಂದು ಪ್ರಧಾನಿ ಮೋದಿ ಹೇಳಿದರು.ಕಚ್ಚತೀವು ದ್ವೀಪ ಪ್ರಕರಣವನ್ನು ಉಲ್ಲೇಖಿಸಿದ ಮೋದಿ, ಕಾಂಗ್ರೆಸ್​ನ ಇತಿಹಾಸ ಮಾತ್ರವಲ್ಲ, ಅದರ ಉದ್ದೇಶವೂ ಅಪಾಯಕಾರಿ ಆಗಿದೆ ಎಂದರು.

    ಈ ಲೋಕಸಭಾ ಚುನಾವಣೆ ಯಾರು ಸಂಸದರಾಗುತ್ತಾರೆ, ಆಗುವುದಿಲ್ಲ ಎಂಬ ಬಗ್ಗೆಯಲ್ಲ. ಈ ಚುನಾವಣೆ ವಿಕಸಿತ ಭಾರತ ಸಂಕಲ್ಪಕ್ಕೆ ಹೊಸ ಚೈತನ್ಯ ನೀಡಲು ಎಂದು ಮೋದಿ ಹೇಳಿದರು. ರಾಜಸ್ಥಾನದಲ್ಲಿ ಓಲೈಕೆ ಸಲುವಾಗಿ ಕಾಂಗ್ರೆಸ್ ಕೆಟ್ಟದಾಗಿ ನಡೆದುಕೊಂಡಿದೆ. ಕಾಂಗ್ರೆಸ್ ನಾಯಕರು ದೇವಸ್ಥಾನಗಳನ್ನು ಕೆಡವಿ ಅದರ ಜಾಗಗಳನ್ನು ವಶಪಡಿಸಿಕೊಂಡಿದ್ದಾರೆೆ. ಇಲ್ಲಿ ರಾಮನವಮಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಲಾಗಿದೆ ಎಂಬುದನ್ನೆಲ್ಲ ನೆನಪಿಸಿ ಮೋದಿ ಮತ ಯಾಚನೆ ನಡೆಸಿದರು. ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದಕ್ಕೆ ವಿರುದ್ಧವಾಗಿ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗುರಿಯಾಗಿಸಿದ ಮೋದಿ, ರಾಜಸ್ಥಾನದ ಧೀರ ಹುತಾತ್ಮರ ಮನೆಗಳಿಗೆ ತೆರಳಿ ಖರ್ಗೆ ಅದನ್ನು ಪ್ರಶ್ನಿಸಬೇಕು ಎಂದರು.

    ಗೇಮರ್ಸ್ ಜತೆ ಪಿಎಂ ಸಂವಾದ: ಗೇಮ್ ಉದ್ಯಮಕ್ಕೆ ಸಂಬಂಧಿತ ಹಲವು ವಿಷಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಶ್ರೇಷ್ಠ ಗೇಮರ್​ಗಳ ಜತೆಗೆ ಸಂವಾದ ನಡೆಸಿದರು ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ತಿಳಿಸಿದ್ದಾರೆ. ಭಾರತದ ಗೇಮಿಂಗ್ ಇಂಡಸ್ಟ್ರಿಯನ್ನು ಪ್ರಚುರಪಡಿಸುವಲ್ಲಿ ಗೇಮರ್​ಗಳ ಸೃಜನಶೀಲತೆಯನ್ನು ಮೋದಿ ಸರ್ಕಾರ ಹೇಗೆ ಗುರುತಿಸಿದೆ ಹಾಗೂ ಗೇಮಿಂಗ್ ಇಂಡಸ್ಟ್ರಿ ಕುರಿತ ಹೊಸ ಬೆಳವಣಿಗೆಗಳ ಕುರಿತು ಈ ವೇಳೆ ರ್ಚಚಿಸಲಾಯಿತು. ಅಲ್ಲದೆ, ಗೇಮಿಂಗ್ ಇಂಡಸ್ಟ್ರಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕುರಿತು ರ್ಚಚಿಸುವಾಗ ಗೇಮ್ ವಿರುದ್ಧದ ಗ್ಯಾಂಬ್ಲಿಂಗ್ ಬಗ್ಗೆಯೂ ಮಾತುಕತೆ ನಡೆಯಿತು ಎಂದಿದ್ದಾರೆ. ಭಾರತದ ಶ್ರೇಷ್ಠ ಗೇಮರ್​ಗಳಾದ ತೀರ್ಥ ಮೆಹ್ತಾ, ಪಾಯಲ್ ಧಾರೆ, ಅನಿಮೇಶ್ ಅಗರ್​ವಾಲ್, ಅಂಶು ಬಿಷ್ತ್, ನಮನ್ ಮಾತೂರ್, ಮಿಥಿಲೇಶ್ ಪಠಾಣ್ಕರ್, ಗಣೇಶ್ ಗಂಗಾಧರ್ ಅವರ ಜತೆ ಮೋದಿ ಪಿಸಿ ಮತ್ತು ವಿಆರ್ ಗೇಮ್ಳನ್ನು ಆಡಿದರು ಎಂದು ಮಾಳವೀಯ ತಿಳಿಸಿದ್ದಾರೆ.

    ಮೋದಿ ಬಿಡಲ್ಲ…: ಹಿಂದಿನ ಕಾಂಗ್ರೆಸ್ ಸರ್ಕಾರವು ಸ್ವಾತಂತ್ರ್ಯ ಹೋರಾಟಗಾರರಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಹಾಗೂ ವೀರ ಸಾವರ್ಕರ್ ಅವರನ್ನು ಜನರು ಮರೆಯುವಂತೆ ಮಾಡಲು ಯತ್ನಿಸಿತ್ತು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆರೋಪಿಸಿದ್ದಾರೆ. ಆದರೆ ಪ್ರಧಾನಿ ಮೋದಿ ಸರ್ಕಾರ ಅದನ್ನು ಸಾಧ್ಯವಾಗಿಸಲು ಎಂದಿಗೂ ಬಿಡುವುದಿಲ್ಲ ಎಂದ ಅವರು, ಮುಂದಿನ ಐದು ವರ್ಷಗಳಲ್ಲಿ ಮೋದಿ ನಾಯಕತ್ವದಲ್ಲಿ ಆಗಲಿರುವ ‘ಸಮುದ್ರ ಬದಲಾವಣೆ’ಗೆ ದ್ವೀಪ ಸಮೂಹ ಸಾಕ್ಷಿಯಾಗಲಿದೆ ಎಂದು ಅಂಡಮಾನ್-ನಿಕೋಬಾರ್​ನಲ್ಲಿ ನಡೆದ ರ್ಯಾಲಿಯಲ್ಲಿ ಹೇಳಿದರು.

    ರಾಹುಲ್ ಗಾಂಧಿಗೆ ಪಿಎಫ್​ಐ ಬೆಂಬಲ: ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ರಾಹುಲ್ ಗಾಂಧಿ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ) ಬೆಂಬಲವನ್ನು ಪಡೆಯುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ. ಹಿಂದುಗಳ ಹತ್ಯೆಗೆ ಪಟ್ಟಿ ಮಾಡಿರುವಂಥ ಉಗ್ರ ಸಂಘಟನೆ ಪಿಎಫ್​ಐ ಬೆಂಬಲ ಪಡೆದು ರಾಹುಲ್ ಗಾಂಧಿ ವಯನಾಡಿನಲ್ಲಿ ಗೆಲ್ಲಲು ಯತ್ನಿಸುತ್ತಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts