More

    “ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ, ಇಲ್ಲದಿದ್ದರೆ ರಸ್ತೆಯಲ್ಲಿ ಹೆಣಗಳು ಬೀಳುತ್ತವೆ”

    ನವದೆಹಲಿ : ‘ದೆಹಲಿಯಲ್ಲಿ ಕರೊನಾ ಅಬ್ಬರ ಹೆಚ್ಚುತ್ತಿರುವ ಸಂದರ್ಭದಲ್ಲಿ ಹಿರಿಯ ಶಾಸಕನಾಗಿ ಜನರಿಗೆ ಏನೂ ಸಹಾಯ ಮಾಡಲಾಗುತ್ತಿಲ್ಲ. ಸರ್ಕಾರದಿಂದಲೂ ಏನೂ ಸಾಧ್ಯವಾಗುತ್ತಿಲ್ಲ. ದೆಹಲಿಯಲ್ಲಿ ಕೂಡಲೇ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಬೇಕು. ಇಲ್ಲದಿದ್ದರೆ ರಸ್ತೆ ಮೇಲೆ ಹೆಣಗಳು ಬೀಳುತ್ತವೆ’ ಎಂದು ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಶಾಸಕ ಶೋಯಬ್ ಇಖ್ಬಾಲ್ ಹೇಳಿದ್ದಾರೆ.

    ವೈರಲ್​ ಆಗಿರುವ ವಿಡಿಯೋ ಸಂದೇಶದಲ್ಲಿ ಕರೊನಾ ಚಿಕಿತ್ಸೆಗೆ ಸೂಕ್ತ ಸೌಲಭ್ಯವಿಲ್ಲದೆ ಜನ ತತ್ತರಿಸುತ್ತಿರುವಾಗ ತಮ್ಮಿಂದ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದೆಹಲಿಯ ಮಾತಿಯಾ ಮಹಲ್ ವಿಧಾನಸಭಾ ಸದಸ್ಯರಾಗಿರುವ ಇಖ್ಬಾಲ್ ಅಲವತ್ತುಕೊಂಡಿದ್ದಾರೆ ಎನ್ನಲಾಗಿದೆ. “ದೆಹಲಿಯ ಪರಿಸ್ಥಿತಿ ನೋಡಿ ನನಗೆ ನೋವಾಗುತ್ತಿದೆ. ಚಿಂತೆಯಿಂದ ನನಗೆ ನಿದ್ದೆ ಬರುತ್ತಿಲ್ಲ. ಜನರಿಗೆ ಆಕ್ಸಿಜನ್ ಮತ್ತು ಔಷಧಿಗಳು ಸಿಗುತ್ತಿಲ್ಲ. ನನ್ನ ಸ್ನೇಹಿತ ನರಳುತ್ತಿದ್ದಾನೆ. ಆಸ್ಪತ್ರೆಯಲ್ಲಿದ್ದಾನೆ ಆದರೆ ಆಕ್ಸಿಜನ್ ಅಥವಾ ವೆಂಟಿಲೇಟರ್ ಸಿಗ್ತಾ ಇಲ್ಲ. ವೈದ್ಯರು ಅವನಿಗೆ ರೆಮ್​ಡೆಸಿವಿರ್ ಬರೆದುಕೊಟ್ಟಿದ್ದಾರೆ. ನನ್ನ ಬಳಿ ಪ್ರಿಸ್​​ಕ್ರಿಪ್ಷನ್ ಇದೆ. ಆದರೆ ನಾನದನ್ನು ಎಲ್ಲಿಂದ ತರಲಿ ? ಅವನ ಮಕ್ಕಳು ಎಲ್ಲಾ ಕಡೆ ಅಲೆದಾಡುತ್ತಿದ್ದಾರೆ” ಎಂದು ತಮ್ಮ ಅಸಮಾಧಾನಕ್ಕೆ ಕಾರಣವನ್ನು ಇಖ್ಬಾಲ್ ಹೇಳಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ನಾಳೆ ಲಸಿಕಾ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಲ್ಲಬೇಡಿ : ಸಿಎಂ

    ಮುಂದುವರೆದು, “ಇಂದು, ನನಗೆ ಒಬ್ಬ ಶಾಸಕನಾಗಿರುವ ಬಗ್ಗೆ ನಾಚಿಕೆಯಾಗುತ್ತಿದೆ. ಏಕೆಂದರೆ ನಮಗೆ ಸಹಾಯ ಮಾಡಲು ಆಗುತ್ತಿಲ್ಲ. ಸರ್ಕಾರಕ್ಕೂ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ. ನಾನು ಆರು ಬಾರಿ ಶಾಸಕನಾಗಿದ್ದೇನೆ, ಅತ್ಯಂತ ಹಿರಿಯ. ಆದರೂ ಕೂಡ ಯಾರೂ ಸ್ಪಂದಿಸುತ್ತಿಲ್ಲ. ಯಾವ ನೋಡಲ್​ ಅಧಿಕಾರಿಯನ್ನೂ ನೀವು ಸಂಪರ್ಕಿಸುವಂತಿಲ್ಲ. ಈ ಸನ್ನಿವೇಶದಲ್ಲಿ ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಬೇಕೆಂದು ನಾನು ದೆಹಲಿ ಹೈಕೋರ್ಟನ್ನು ಕೇಳಿಕೊಳ್ಳುತ್ತೇನೆ. ಇಲ್ಲದಿದ್ದರೆ ರಸ್ತೆ ಮೇಲೆ ಶವಗಳು ಬೀಳುವ ಸ್ಥಿತಿ ಬರುತ್ತದೆ” ಎಂದು ಶಾಸಕ ಇಖ್ಬಾಲ್ ಹೇಳಿದ್ದಾರೆ ಎನ್ನಲಾಗಿದೆ.

    ಈ ವಿಷಮ ಪರಿಸ್ಥಿತಿಯಲ್ಲಿ ದೆಹಲಿಯ ಆರೋಗ್ಯ ಸಚಿವರು ಕಾಣೆಯಾಗಿದ್ದಾರೆ ಎಂದೂ ಇಖ್ಬಾಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ, “ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ಘರ್ಷಣೆ ನಡೆಯುತ್ತಿದೆ. ಆದ್ದರಿಂದ ಮೂರು ತಿಂಗಳ ಮಟ್ಟಿಗೆ ದೆಹಲಿ ಹೈಕೋರ್ಟ್​ನ ಮೇಲ್ವಿಚಾರಣೆಯಲ್ಲಿ ರಾಷ್ಟ್ರಪತಿ ಆಳ್ವಿಕೆ ವಿಧಿಸಿದರೆ ಸಮಸ್ಯೆ ಪರಿಹಾರವಾಗುತ್ತದೆ” ಎಂದಿದ್ದಾರೆ. (ಏಜೆನ್ಸೀಸ್)

    VIDEO | ನಕಲಿ ರೆಮ್​ಡೆಸಿವಿರ್ ತಯಾರಿಸುತ್ತಿದ್ದ ಫ್ಯಾಕ್ಟರಿ! 2000 ಜನರನ್ನು ವಂಚಿಸಿರುವ ಖದೀಮರು !

    ಮದುವೆ ಮಂಟಪ ದಾಳಿ : ಎರ್ರಾಬಿರ್ರಿ ವರ್ತಿಸಿದ ಡಿಎಂ ಸಸ್ಪೆಂಡ್

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts