More

    ಬದುಕಿನ ಗಾಯಗಳಿಗೆ ದಿವ್ಯೌಷಧಿ ಗಾಯತ್ರಿ

    ಶ್ರೀ ಅಖಿಲ ಹವ್ಯಕ ಮಹಾಸಭಾ ಮಲ್ಲೇಶ್ವರಂನಲ್ಲಿರುವ ಹವ್ಯಕ ಭವನದಲ್ಲಿ ಇದೇ ಪ್ರಪ್ರಥಮ ಬಾರಿಗೆ ಗಾಯತ್ರಿ ಮಹೋತ್ಸವವನ್ನು ಇಂದು ಆಯೋಜಿಸಿದೆ. ಇಡೀ ದಿನ ಗಾಯತ್ರಿ ಮಂತ್ರ ಸಂಬಂಧಿತ ಹವನ, ಪೂಜೆ, ತತ್ತ್ವ ಚಿಂತನೆ, ಉಪದೇಶ, ಸಂಶೋಧನ, ನಾದನಮನ, ಯಕ್ಷಗಾನ ತಾಳಮದ್ದಲೆ ರೂಪದಲ್ಲಿ ಗಾಯತ್ರಿ ದರ್ಶನ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಗಾಯತ್ರಿ ಮಂತ್ರದ ಹಿನ್ನೆಲೆ, ಮಹತ್ವ, ಪ್ರಭಾವ, ನಿತ್ಯಜೀವನದಲ್ಲಿ ಅದರ ಅಳವಡಿಕೆ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

    ‘ಗಾಯತ್ರಿ ಜಪ’ ಎನ್ನುವ ಪದವನ್ನು ಲೋಕದಲ್ಲಿ ಕೇಳದವರಿಲ್ಲ. ಆತ ಆಸ್ತಿಕನಾಗಿರಲಿ, ನಾಸ್ತಿಕನಾಗಿರಲಿ, ಭಾರತೀಯ ಸಂಸ್ಕೃತಿ – ಪರಂಪರೆಯ ಬಗ್ಗೆ ಗೌರವವಿರಲಿ, ಇಲ್ಲದೇ ಇರಲಿ, ಗಾಯತ್ರಿ ಜಪ ಎನ್ನುವ ಪದ ಒಂದಿಲ್ಲೊಂದು ಸಂದರ್ಭದಲ್ಲಿ ಕಿವಿಗೆ ಬಿದ್ದೇ ಬಿದ್ದಿರುತ್ತದೆ. ಅದು ಒಂದಿಷ್ಟು ಮಂದಿಗೆ ನಿತ್ಯಾನುಷ್ಠಾನದ ಸಾಧನವಾಗಿ, ಇನ್ನೊಂದಿಷ್ಟು ಮಂದಿಗೆ ಸಂಸ್ಕಾರದ ಭಾಗವಾಗಿ, ಮತ್ತೊಂದಿಷ್ಟು ಜನರಿಗೆ ಈ ನಿತ್ಯಕರ್ಮವು ನೈಮಿತ್ತಕವಾಗಿ, ಮಗದೊಂದಿಷ್ಟು ಜನರಿಗೆ ಕಾಮ್ಯಕರ್ಮವಾಗಿ, ಇನ್ನುಳಿದವರಿಗೆ ಆಡುಮಾತಿನಲ್ಲಿ ಬಂದು ಹೋಗುವ ಪದವಾಗಿ ಗಾಯತ್ರಿ ಮಂತ್ರ ಉಳಿದಿದೆ.

    ಸಂಸ್ಕೃತಿ ಪದದಷ್ಟೆ ಪ್ರಖ್ಯಾತಿ ಪಡೆದ ಈ ಗಾಯತ್ರಿಮಂತ್ರ ಅಂದರೆ ಏನು? ಇತರ ಜಪಗಳಿಗಿರದ ಪ್ರಸಿದ್ಧಿ ಇದಕ್ಕೆ ಯಾಕೆ? ಈ ಮಂತ್ರ ಏನನ್ನು ಹೇಳುತ್ತದೆ? ಏನಿದರ ಶಕ್ತಿ? ತತ್ತ್ವವೇನು? ಉದ್ದೇಶವೇನು? ಎಂಬ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರ ಕಂಡುಕೊಳ್ಳುವುದಾದರೆ. . .

    ಓಂ ಭೂಃ ಭುವಃ ಸುವಃ ತತ್ಸವಿತುರ್ವರೇಣ್ಯಂ ಭಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ |

    ಇದು ಗಾಯತ್ರೀ ಮಂತ್ರ. ಇದು ಪ್ರತಿ ಪಾದದಲ್ಲಿ 8 ಅಕ್ಷರಗಳುಳ್ಳ, 3 ಪಾದಗಳಿರುವ, ಇಪ್ಪತ್ತನಾಲ್ಕು ಅಕ್ಷರಗಳನ್ನು ಹೊಂದಿರುವ ಗಾಯತ್ರಿ ಛಂದಸ್ಸಿನಲ್ಲಿರುವುದರಿಂದ ಈ ಮಂತ್ರ ಗಾಯತ್ರೀಮಂತ್ರ ಎಂದೇ ಪ್ರಸಿದ್ಧವಾಗಿದೆ. ಅದೆಷ್ಟೋ ಮಂತ್ರಗಳು ಗಾಯತ್ರಿ ಛಂದಸ್ಸಿನಲ್ಲಿಯೇ ಇದ್ದರೂ, ಗಾಯತ್ರಿ ಎಂದರೆ ಈ ಮಂತ್ರವೇ ಮನಸ್ಸಿಗೆ ಬರುವಷ್ಟು ಪ್ರಚಲಿತವಾಗಿದೆ.

    ಗಾಯತ್ರಿ ಅರ್ಥ: ಪ್ರಣವ ಸ್ವರೂಪಿಯಾಗಿರುವ ಭೂಮಿ, ಆಕಾಶ, ಅಂತರಿಕ್ಷಗಳನ್ನು ಆವರಿಸಿರುವ, ಆ ದೇವನಾದ ಸವಿತೃವಿನ ಶ್ರೇಷ್ಠವಾದ ತೇಜಸ್ಸನ್ನು ಧ್ಯಾನಿಸುತ್ತೇವೆ. ಆ ಸವಿತೃದೇವನು ನಮ್ಮ ಬುದ್ಧಿಯನ್ನು ಪ್ರಚೋದಿಸಲಿ.

    ಈ ಗಾಯತ್ರಿ ಮಂತ್ರವನ್ನು ಮಂತ್ರಗಳ ರಾಜನೆಂದು ತಂತ್ರಶಾಸ್ತ್ರಗಳು ಕೊಂಡಾಡುತ್ತವೆ. ಸರ್ವವೇದೋದ್ಧ ೃಃ ಸಾರಃ ಮಂತ್ರೋಯಂ ಸಮುದಾಹೃತಃ ಅಂದರೆ ಎಲ್ಲ ವೇದಗಳ ಸಾರವೇ ಗಾಯತ್ರಿಮಂತ್ರವೆಂದು ಶಾರದಾತಿಲಕ ಉಲ್ಲೇಖಿಸುತ್ತದೆ. ಪರಬ್ರಹ್ಮವಸ್ತು ಶಬ್ದ ಮತ್ತು ಅರ್ಥರೂಪವಾಗಿ ವಿಸ್ತಾರವಾಗಿ, ಶಬ್ದಬ್ರಹ್ಮ ಓಂಕಾರ ರೂಪವಾಗಿ, ಅನಂತರ ವ್ಯಾಹೃತಿಯಾಗಿ, ಅನಂತರ ಗಾಯತ್ರಿಯಾಗಿ, ಅನಂತರ ವೇದವಾಗಿ ವಿಸ್ತಾರವಾಯಿತು ಎಂದು ಹೇಳುವ ಸಂಸ್ಕೃತಿ, ಗಾಯತ್ರಿಯಿಂದಲೇ ವೇದಗಳು ವಿಸ್ತಾರವಾಯಿತು ಎಂದು ಗಾಯತ್ರಿಯ ಹಿರಿಮೆಯನ್ನು ಎತ್ತಿ ಹಿಡಿಯುತ್ತವೆ. ಗಾಯತ್ರಿಯಲ್ಲಿ 24 ಅಕ್ಷರಗಳಿರುವುದನ್ನು ಪರಿಗ್ರಹಿಸಿ, ಅದರ ಸಾರವನ್ನೇ ವಾಲ್ಮೀಕಿಗಳು 24 ಸಾವಿರ ಶ್ಲೋಕಗಳ ಮೂಲಕ ರಾಮಾಯಣವನ್ನು ಬರೆದರು ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

    ಇದರ ಅರ್ಥವನ್ನು ಗಮನಿಸಿದರೆ ಬುದ್ಧಿಯನ್ನು ಪ್ರಚೋದಿಸಲಿ ಎಂಬ ಅಂಶವನ್ನು ಹೇಳುತ್ತಿದೆ. ಕೇವಲ ಇಷ್ಟೇ ಅರ್ಥವನ್ನು ಹೇಳುವ ಇದಕ್ಕೆ ಮಂತ್ರಗಳ ರಾಜ ಎನ್ನುವ ಪಟ್ಟ ಬೇಕಿತ್ತೇ ಎನ್ನುವ ಪ್ರಶ್ನೆ ಮೂಡುತ್ತದೆ.

    ಸೂಕ್ಷ್ಮವಾಗಿ ಗಮನಿಸುವುದಾದರೆ ನಮ್ಮ ಜೀವನದ ಏಳು – ಬೀಳುಗಳು ನಮ್ಮ ಬುದ್ಧಿಯ ಮೇಲೆ ನಿಂತಿದೆ. ಬುದ್ಧಿ ಎಂದರೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿ. ನಮ್ಮ ಜೀವನದಲ್ಲಿ ಮಾಡುವ ಎಲ್ಲ ರೀತಿಯ ಕಾರ್ಯಗಳು ಬುದ್ಧಿಯ ನಿಶ್ಚಯದ ಮೇಲೆ ನಿಂತಿದೆ. ಬುದ್ಧಿ ಕೆಟ್ಟರೆ, ಕೆಟ್ಟ ನಿರ್ಣಯವನ್ನು ತೆಗೆದುಕೊಳ್ಳುತ್ತದೆ. ಕೆಟ್ಟ ನಿರ್ಣಯ ನಮ್ಮ ಜೀವನವನ್ನೇ ನಾಶ ಮಾಡುತ್ತದೆ. ಹಾಗೆಯೇ ಬುದ್ಧಿಯೊಂದು ಸರಿಯಿದ್ದರೆ, ಜೀವನವನ್ನು ಉತ್ತುಂಗಕ್ಕೊಯ್ಯುತ್ತದೆ.

    ಶ್ರಿಯಃ ಪ್ರದುಗ್ಧೇ ವಿಪದೋ ರುಣದ್ಧಿ

    ಯಶಾಂಸಿ ಸೂತೇ ಮಲಿನಂ ಪ್ರಮಾಷಿರ್r|

    ಸಂಸ್ಕಾರಶೌಚೇನ ಪರಂ ಪುನೀತೇ

    ಶುದ್ಧಾ ಹಿ ಬುದ್ಧಿಃ ಕಿಲ ಕಾಮಧೇನುಃ ||

    ಈ ಸೂಕ್ತಿ ಹೇಳುವಂತೆ, ಶುದ್ಧವಾದ ಬುದ್ಧಿ ಶ್ರೇಯಸ್ಸನ್ನು ಕೊಡುತ್ತದೆ. ವಿಪತ್ತನ್ನು ದೂರ ಮಾಡುತ್ತದೆ. ಯಶಸ್ಸನ್ನು ಹುಟ್ಟಿಸುತ್ತದೆ. ಕೊಳೆಯನ್ನು ತೊಳೆಯುತ್ತದೆ. ತನ್ನ ಸಂಸ್ಕಾರದಿಂದಾಗಿ ಇನ್ನೊಬ್ಬರನ್ನು ಪಾವನ ಮಾಡುತ್ತದೆ. ಹಾಗಾಗಿ ಶುದ್ಧವಾದ ಬುದ್ಧಿ ಕೇಳಿದ್ದೆಲ್ಲವನ್ನು ಕೊಡುವ ಕಾಮಧೇನು. ಹಾಗಾಗಿ ಬುದ್ಧಿಯನ್ನು ಪ್ರಚೋದಿಸಲಿ ಎಂದು ಸವಿತೃದೇವನನ್ನು ಕೇಳುವುದು ಎಂದರೆ, ಜೀವನಕ್ಕೆ ಬೇಕಾದ ಎಲ್ಲವನ್ನೂ ಕೊಟ್ಟು, ಬೇಡವಾದದ್ದನ್ನು ಎಲ್ಲವನ್ನೂ ದೂರಮಾಡಿ, ಇಹದ ಸುಖ – ಪರದ ಆನಂದವನ್ನು ಕೊಟ್ಟು, ಜೀವನವನ್ನು ಸರ್ವಾಂಗ ಸುಂದರಗೊಳಿಸು ಎಂದು ಕೇಳಿಕೊಂಡಂತೆಯೇ ಆಗುತ್ತದೆ.

    ಮಂಕುತಿಮ್ಮನ ಕಗ್ಗದಲ್ಲಿ-

    ಶ್ರೀಯನಾಯುವ ಬಲವ ಜಯವ ಬೇಡಿರ್ದೊಡಂ

    ಗಾಯತ್ರಿಯನೆ ಪರಮಮಂತ್ರವೆಂದಾರ್ಯರ್

    ಧೀಯಂ ಪ್ರಚೋಧಿಸಿಸೆಂದನುದಿನದಿ ಬೇಡಿದರು

    ಶ್ರೇಯಸ್ಸು ಧೀಮಹಿಮೆ -ಮಂಕುತಿಮ್ಮ

    ನಮ್ಮ ಹಿಂದಿನ ಪೂಜ್ಯ ಋಷಿಗಳು ಶ್ರೇಯಸ್ಸನ್ನು ಬಯಸಿ, ಶಕ್ತಿಯನ್ನು, ಜಯವನ್ನು ಬೇಡುವಾಗ ಗಾಯತ್ರಿಯನ್ನೇ ಶ್ರೇಷ್ಠವಾದ ಮಂತ್ರವೆಂದು ಕರೆದರು. ಬುದ್ಧಿಯನ್ನು ಪ್ರಚೋದಿಸು ಎಂದು ಪ್ರತಿನಿತ್ಯವೂ ಬೇಡಿದರು. ಯಾಕೆಂದರೆ ಸದ್ಬುದ್ಧಿಯೇ ಶ್ರೇಯಸ್ಸಿಗೆ ದಾರಿ ಎಂದು ಕಗ್ಗದ ಕವಿ ಅಭಿಪ್ರಾಯ ಪಡುತ್ತಾರೆ. ಹಾಗಾಗಿ ಎಲ್ಲವನ್ನೂ ನೀಡುವ ಬುದ್ಧಿಯನ್ನು ಪ್ರಚೋದಿಸುವ ಮಂತ್ರವಾದ ಈ ಗಾಯತ್ರಿ ಮಂತವನ್ನು ಮಂತ್ರಗಳ ರಾಜನೆಂದು ಕರೆದಿರುವುದು ಸಮುಚಿತವೇ ಸರಿ.

    ಗಾಯತ್ರಿಜಪದ ಫಲ: ಗಾಯತ್ರಿಜಪದ ಫಲ ಅನಂತ. ಈಗಾಗಲೇ ಹೇಳಿದಂತೆ ಬುದ್ಧಿಯನ್ನು ಪ್ರಚೋದಿಸುವಂತದ್ದು. ಇದರ ಜಪವನ್ನು ಪ್ರತಿದಿನ ಸಂಧ್ಯಾಕಾಲದಲ್ಲಿ ಮಾಡುವುದರಿಂದ ಅಂದಿನ ಪಾಪವು ಅಂದೇ ನಾಶವಾಗುತ್ತದೆ. ಯಜ್ಞದಲ್ಲಿ ಎಳ್ಳು ಮತ್ತು ತುಪ್ಪವನ್ನು ಈ ಗಾಯತ್ರಿಮಂತ್ರದೊಂದಿಗೆ ಹೋಮಿಸಿದರೆ ಪ್ರಾಯಶ್ಚಿತ್ತ, ಪಾಯಸವನ್ನು ಹೋಮಿಸಿದರೆ ಸಕಲ ಇಷ್ಟಾರ್ಥಸಿದ್ಧಿ ಮತ್ತು ಪಂಚಗವ್ಯವನ್ನು ಹೋಮಿಸಿದರೆ ಶುದ್ಧಿಯಾಗುತ್ತದೆಂದು ಕರ್ಮಸಿದ್ಧಾಂತ ಉಲ್ಲೇಖಿಸುತ್ತದೆ.

    ಗಾಯತ್ರೀ ಪರಮೋ ಮಂತ್ರಃ ತಂ ಜಪ್ತಾ್ವ ಭುಕ್ತಿಮುಕ್ತಿಭಾಕ್ ಎಂದು ಪುರಾಣವು ಕೊಂಡಾಡಿದಂತೆ, ಈ ಲೋಕದ ಸುಖ – ಸಂತೋಷಗಳನ್ನು ನೀಡುವುದಲ್ಲದೇ, ಈ ಜಡ ಲೋಕದ ಬದುಕಿನ ಜಂಜಡದಿಂದ ಬಿಡುಗಡೆಗೊಳಿಸುವ ಮೋಕ್ಷವನ್ನೂ ಕೂಡ ಕರುಣಿಸುತ್ತದೆ. ಈ ಮಂತ್ರಕ್ಕೆ ಬೇಡದ್ದನ್ನು ಕಳೆವ, ಕೇಳಿದ್ದನ್ನು ಕೊಡುವ, ಕೇಳದಿದ್ದರೂ ಕೊಡಬೇಕಾದ್ದನ್ನು ಕೊಟ್ಟೇ ಕೊಡುವ ಶಕ್ತಿ ಇರುವುದು ಸರ್ವವೇದ್ಯ.

    ಗಾಯತ್ರೀ ಎನ್ನುವ ಪದಕ್ಕೆ ಇದು ಜಪಿಸುವವರನ್ನು ಕಾಪಾಡುವುದು ಎನ್ನುವ ಅರ್ಥ ಇದೆ. ವಿಶ್ವಾಮಿತ್ರರು ಪ್ರಪಂಚಕ್ಕೆ ಕೊಟ್ಟ ಈ ಮಂತ್ರ, ಇದರ ಅಧಿದೇವತೆಯಾದ ಸೂರ್ಯದೇವನಷ್ಟೇ ಲೋಕೋಪಕಾರಕ. ಎಲ್ಲ ಇಷ್ಟಾರ್ಥಗಳ ಭಂಡಾರದ ಕೀಲಿಕೈಯಾಗಿರುವ ಈ ಮಂತ್ರದ ಪ್ರಯೋಜನವನ್ನು ಪಡೆದುಕೊಳ್ಳುವ ಬುದ್ಧಿಯನ್ನು ಆ ದೇವರೇ ಪ್ರಚೋದಿಸಲಿ.

    – ಕೃಷ್ಣಾನಂದಶರ್ವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts