More

    ಏಳನೇ ವೇತನ ಆಯೋಗ ಜಾರಿಗೆ ಒತ್ತಡ

    ಚಿತ್ರದುರ್ಗ: ಏಳನೇ ವೇತನ ಆಯೋಗ ಜಾರಿ ಕುರಿತು ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು. ಜಿಲ್ಲಾಡಳಿತ, ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದಿಂದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಈ ನಿಟ್ಟಿನಲ್ಲಿ ಫೆ.21ರಂದು ರಾಜ್ಯದ 6 ಸಾವಿರ ನೌಕರರನ್ನು ಒಳಗೊಂಡ ಸಂಘದ ಚುನಾಯಿತ ಪ್ರತಿನಿಧಿಗಳ ಸಭೆಯನ್ನು ಬೆಂಗಳೂರಿನಲ್ಲಿ ಕರೆದಿದ್ದು, ಸಭೆಯಲ್ಲಿ ಚರ್ಚೆ ಬಳಿಕ ಸಂಧಾನವೇ ಅಥವಾ ಹೋರಾಟವೇ ಎಂಬ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ನೌಕರರಿಗೆ ನಗದು ರಹಿತ ಆರೋಗ್ಯ ಸೇವೆ ಯೋಜನೆ ಜಾರಿಗೊಳಿಸಬೇಕು. ಹಳೆಯ ಪಿಂಚಣಿ ಜಾರಿಗೆ ಸರ್ಕಾರಕ್ಕೆ ಕೋರಲಾಗುವುದು. ಸಂಘದಿಂದ ಪ್ರತಿ ವರ್ಷ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ 10 ಸಾವಿರ ನೌಕರರ ಮಕ್ಕಳಿಗೆ 1 ಕೋಟಿ ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. ಇದನ್ನು 2 ಕೋಟಿ ರೂ.ಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

    ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ವೇತನ ಆಯೋಗ ಜಾರಿ ಕುರಿತು ಹಲವು ಶಾಸಕರು, ಮುಖ್ಯಮಂತ್ರಿ ಜತೆ ಖಾಸಗಿಯಾಗಿ ಚರ್ಚಿಸುತ್ತೇವೆ ಎಂದು ಭರವಸೆ ನೀಡಿದರು.

    ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಯೋಜನೆಗಳನ್ನು ಅನುಷ್ಠಾನಗೊಳಿಸಿ ಸಾರ್ವಜನಿಕರಿಗೆ ತಲುಪಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಅನನ್ಯವಾಗಿದೆ. ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ರಾಜ್ಯದ ಅಭಿವೃದ್ಧಿಗೆ ನೌಕರರ ಪರಿಶ್ರಮ ಕಾರಣ. ಹೀಗಾಗಿ ನಿಮ್ಮಗಳ ಹಿತಕಾಯಲು ಸಿಎಂ ಅನೇಕ ಯೋಜನೆ ಜಾರಿಗೊಳಿಸಿದ್ದಾರೆ ಎಂದರು.

    ಒತ್ತಡದಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ನೌಕರರಿಗೆ ಕ್ರೀಡೆ ಸೇರಿ ಇತರೆ ಚಟುವಟಿಕೆಗಳ ಅಗತ್ಯವಿದೆ. ಹೀಗಾಗಿ ನಗರದಲ್ಲಿ ನಿವೇಶನ ಪಡೆದು ಸುಸಜ್ಜಿತ ಕಟ್ಟಡ ನಿರ್ಮಿಸಿಕೊಂಡರೆ ಅನುಕೂಲವಾಗಲಿದೆ. ಇದಕ್ಕೆ ಅನುದಾನ ನೀಡಲು ಸಿದ್ಧನಿದ್ದೇನೆ ಎಂದು ತಿಳಿಸಿದರು.

    ಸರ್ಕಾರಿ ನೌಕರರ ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ಜಿಪಂ ಸಿಇಒ ಎಂ.ಎಸ್.ದಿವಾಕರ್, ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಡಿ.ಟಿ.ಜಗನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ತಿಪ್ಪೇಸ್ವಾಮಿ, ಕ್ಷೇತ್ರ ಸಮನ್ವಯಾಧಿಕಾರಿ ಸಂಪತ್‌ಕುಮಾರ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಆರ್.ಜಯಲಕ್ಷ್ಮ್ಮಿಬಾಯಿ, ಸಂಘದ ವಿಶೇಷಾಧಿಕಾರಿ ಆರ್.ಮೋಹನ್‌ಕುಮಾರ್, ರಾಜ್ಯ ಪರಿಷತ್ ಸದಸ್ಯ ಕೆ.ಟಿ ತಿಮ್ಮಾರೆಡ್ಡಿ, ಖಜಾಂಚಿ ಬಿ.ವೀರೇಶ್, ವಿವಿಧ ತಾಲೂಕು ಅಧ್ಯಕ್ಷರಾದ ಲೋಕೇಶ್, ಆರ್.ಲಕ್ಷ್ಮಯ್ಯ, ಎಸ್.ಈರಣ್ಣ, ಆರ್.ಶಿವಕುಮಾರ್, ಪಿ.ಎಲ್.ಲಿಂಗೇಗೌಡ ಇತರರಿದ್ದರು.

    *ಕೋಟ್
    ಶೇ.1ರಷ್ಟು ಇರುವ ಸರ್ಕಾರಿ ನೌಕರರು ಶೇ.99ರಷ್ಟು ಜನರ ಸಮಸ್ಯೆ ಪರಿಹರಿಸಬೇಕಿದೆ. ಹೀಗಾಗಿ ಚೈತನ್ಯದಾಯಕವಾಗಿ ಬೆಳಗ್ಗೆಯಿಂದ ಕೆಲಸ ಆರಂಭಿಸಬೇಕು.
    ಜಿ.ಆರ್.ಜೆ.ದಿವ್ಯಾಪ್ರಭು ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts