More

    ಮರಳು ಅಕ್ರಮ ದಂಧೆ ಬೆಳಕಿಗೆ

    ಉಳ್ಳಾಲ: ಕೇರಳಕ್ಕೆ ಮರಳು ಅಕ್ರಮ ಸಾಗಾಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತ, ಉಪ ಆಯುಕ್ತರು ಜತೆಗೂಡಿ ಮಧ್ಯರಾತ್ರಿ ಬಳಿಕ ಸ್ಕೂಟರ್‌ನಲ್ಲಿ ತೆರಳಿ ಕಾರ್ಯಾಚರಣೆ ನಡೆಸಿದ್ದು, ಮರಳು ಸಹಿತ ಟಿಪ್ಪರನ್ನು ವಶಕ್ಕೆ ಪಡೆದಿದ್ದಾರೆ.

    ಸೋಮೇಶ್ವರ ಬೀಚ್, ಉಚ್ಚಿಲ ಮೊದಲಾದೆಡೆ ಕೆಲವು ದಿನಗಳಿಂದ ರಾತ್ರಿ ವೇಳೆ ಮರಳು ತೆಗೆದು ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿರುವ ದೂರುಗಳು ಬಂದಿದ್ದವು. ಅಪರೂಪಕ್ಕೊಮ್ಮೆ ಪೊಲೀಸರು ಮತ್ತು ಗಣಿ ಇಲಾಖೆ ದಾಳಿ ನಡೆಸಿದರೂ ಒಂದೆರೆಡು ದಿನಗಳ ಬಳಿಕ ದಂಧೆ ಮುಂದುವರಿಯುತ್ತಿತ್ತು. ಹಗಲು ಒಳರಸ್ತೆಯಾಗಿ ಮರಳು ಸಾಗಿಸಿದರೂ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ಆರೋಪವೂ ಕೇಳಿ ಬಂದಿದ್ದವು.

    ಇದನ್ನು ಗಂಭೀರವಾಗಿ ಪರಿಗಣಿಸಿದ ಕಮಿಷನರ್ ಶಶಿಕುಮಾರ್, ಡಿಸಿಪಿ ಹರಿರಾಮ್ ಶಂಕರ್ ಜತೆಗೂಡಿ ಉಳ್ಳಾಲ ಪೊಲೀಸರಿಗೂ ಮಾಹಿತಿ ನೀಡದೆ ಶನಿವಾರ ಬೆಳಗ್ಗಿನ ಜಾವ ರಹಸ್ಯ ಕಾರ್ಯಾಚರಣೆ ನಡೆಸಿದ್ದಾರೆ. ಮೂರು ಗಂಟೆ ರಾತ್ರಿಗೆ ಸ್ಕೂಟರ್‌ನಲ್ಲಿ ಸಾಮಾನ್ಯ ನಾಗರಿಕರಂತೆ ಗಡಿಭಾಗ ತಲಪಾಡಿ ಟೋಲ್‌ಗೇಟ್‌ಗೆ ಇಬ್ಬರೂ ತಲುಪಿದ್ದಾರೆ. ಇದೇ ಸಂದರ್ಭ ಮರಳು ಅಕ್ರಮ ಸಾಗಾಟದ ಟಿಪ್ಪರ್ ಅನಾಯಾಸವಾಗಿ ಟೋಲ್‌ಗೇಟ್ ದಾಟಿದೆ. ಅದರ ಹಿಂದೆಯೇ ಎರಡು ಬೆಂಗಾವಲು ಕಾರುಗಳೂ ಇದ್ದವು. ಕಾರನ್ನು ತಡೆದು ಅಧಿಕಾರಿಗಳು ತಪಾಸಣೆಗೆ ಮುಂದಾದಾಗ ಟಿಪ್ಪರ್ ಮತ್ತು ಬೆಂಗಾವಲು ಕಾರಿನಲ್ಲಿದ್ದವರು ಗದರಿಸಿದ್ದಾರೆ. ಈ ವೇಳೆ ಕಮಿಷನರ್ ಉಳ್ಳಾಲ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಟಿಪ್ಪರ್ ಜತೆ ಅದರಲ್ಲಿದ್ದ ಮೂವರನ್ನು ವಶಕ್ಕೆ ಪಡೆದರು. ಬೆಂಗಾವಲು ಕಾರುಗಳನ್ನು ವಶಕ್ಕೆ ಪಡೆಯಲು ಮುಂದಾದಾಗ ಅದರಲ್ಲಿದ್ದವರು ಪೊಲೀಸರನ್ನು ದೂಡಿ ಹಾಕಿ ಪರಾರಿಯಾಗಿದ್ದು, ಕಾರನ್ನು ವಶಕ್ಕೆ ಪಡೆಯಲಾಗಿದೆ.

    ಈ ದಂಧೆ ಹಲವು ಸಮಯಗಳಿಂದ ನಡೆಯುತ್ತಿದ್ದು, ಟೋಲ್‌ಗೇಟ್ ದಾಟಲು ಅಲ್ಲಿನ ಸಿಬ್ಬಂದಿ ಸಹಕರಿಸುತ್ತಿದ್ದುದು ಕೂಡ ಇದೇ ಸಂದರ್ಭ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಟೋಲ್‌ಗೇಟ್ ಸಿಬ್ಬಂದಿ ವಿರುದ್ಧವೂ ಪ್ರಕರಣ ದಾಖಲಿಸುವಂತೆ ಉಳ್ಳಾಲ ಠಾಣಾಧಿಕಾರಿಗೆ ಆಯುಕ್ತರು ಸೂಚನೆ ನೀಡಿದ್ದಾರೆ. ಓಡಿಹೋದ ಬೆಂಗಾವಲು ಕಾರಿನ ಚಾಲಕರ ವಿರುದ್ಧವೂ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts