More

    ಯೂರಿಯಾ ಗೊಬ್ಬರ ಅಕ್ರಮ ಸಾಗಣೆ ಲಾರಿ ವಶ

    ಹಾವೇರಿ: ಕೃಷಿಗೆ ಬಳಸುವ 696 ಚೀಲ ಯೂರಿಯಾ ಗೊಬ್ಬರವನ್ನು ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿದ್ದ ಜಾಲವನ್ನು ಜಿಲ್ಲಾ ಪೊಲೀಸರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಭಾನುವಾರ ರಾತ್ರಿ ಪತ್ತೆ ಮಾಡಿದ್ದಾರೆ.

    ರೈತರಿಗೆ ಸಬ್ಸಿಡಿ ದರದಲ್ಲಿ ನೀಡುವ ಯೂರಿಯಾ ರಸಗೊಬ್ಬರವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಒಂದು ಲಾರಿ ಹಾಗೂ 7.20 ಲಕ್ಷ ರೂ. ಮೌಲ್ಯದ ಗೊಬ್ಬರವನ್ನು ವಶಪಡಿಸಿಕೊಳ್ಳಲಾಗಿದೆ.

    ಈ ಕುರಿತು ಸೋಮವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಎಸ್​ಪಿ ಹನುಮತರಾಯ, ಸೇಲಂ ಮೂಲದ ಲಾರಿ ಚಾಲಕ ಶಬರಿ ಮುರುಗನ್ ಹಾಗೂ ಹಿರೇಲಿಂಗದಹಳ್ಳಿಯ ಮಹೇಶ ಶಿವಬಸಪ್ಪ ಬಂಕಾಪುರ ಅವರನ್ನು ಬಂಧಿಸಲಾಗಿದೆ ಎಂದರು.

    ನಗರದ ಹಳೆ ಪಿಬಿ ರಸ್ತೆಯಲ್ಲಿ ಭಾನುವಾರ ರಾತ್ರಿ ಹುಬ್ಬಳ್ಳಿ ಕಡೆಗೆ ಹೊರಟಿದ್ದ ತಮಿಳುನಾಡು ಮೂಲದ ಲಾರಿಯನ್ನು(ನಂ: ಟಿಎನ್-86, ಸಿ-5789) ಪರಿಶೀಲಿಸಿದಾಗ ಈ ಪ್ರಕರಣ ಬಯಲಾಗಿದೆ. ಸರ್ಕಾರದಿಂದ ಪ್ರತಿ ಚೀಲಕ್ಕೆ 266.50 ರೂ.ಗೆ ನೀಡುವ ನೀಮ್ ಕೋಟೆಡ್ ಯೂರಿಯಾ ಗೊಬ್ಬರವನ್ನು ಆರೋಪಿಗಳು ವಿವಿಧೆಡೆ 300ರಿಂದ 305ರೂ.ಗಳಿಗೆ ಖರೀದಿಸಿದ್ದಾರೆ. ಅದನ್ನು ಗೋದಾಮಿಗೆ ತಂದು ನೈಟ್ರೋಜಿಯಸ್ ಕೆಮಿಕಲ್ ಕಾಂಪೌಂಡ್ ಎಂಬ(ಕೈಗಾರಿಕಾ ಉದ್ದೇಶಕ್ಕೆ ಬಳಸುವ) ಚೀಲಕ್ಕೆ ತುಂಬಿಸಿದ್ದಾರೆ. ಅದನ್ನು 1,200ರೂ.ಗಳಿಂದ 1,500ರೂ.ಗೆ ಕೇರಳ ಮತ್ತು ತಮಿಳುನಾಡಿನಲ್ಲಿ ಮಾರಾಟ ಮಾಡಲು ಉದ್ದೇಶಿಸಿದ್ದರು ಎಂಬ ಮಾಹಿತಿ ಸಿಕ್ಕಿದೆ. ಆರೋಪಿಗಳು ರೈತರ ಆಧಾರ್ ಕಾರ್ಡ್ ಹೆಸರಿನಲ್ಲಿ ವಿವಿಧ ಸೊಸೈಟಿ, ವ್ಯಾಪಾರಸ್ಥರಿಂದ ಸಬ್ಸಿಡಿ ದರದ ರಸಗೊಬ್ಬರವನ್ನು ಖರೀದಿಸಿದ್ದಾರೆ. ಇದರಲ್ಲಿ ಮಾರಾಟಗಾರರೂ ಶಾಮೀಲಾಗಿರುವ ಶಂಕೆಯಿದೆ. ಸರ್ಕಾರ ಮತ್ತು ರೈತರಿಗೆ ಮೋಸ ಮಾಡಿ ಲಾಭ ಮಾಡುವ ಉದ್ದೇಶದಿಂದ ಆರೋಪಿಗಳು ಅಕ್ರಮ ಎಸಗಿರುವುದು ಸ್ಪಷ್ಟವಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸಲು ಹಾವೇರಿ ಶಹರ ಠಾಣೆ ಇನ್ಸ್​ಪೆಕ್ಟರ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ ಎಂದು ತಿಳಿಸಿದರು.

    ಪ್ರಕರಣಕ್ಕೆ ಸಂಬಂಧಿಸಿದಂತೆ ಗೊಬ್ಬರ ಸಂಗ್ರಹಿಸಿ ಬದಲಿ ಚೀಲಕ್ಕೆ ತುಂಬಿಸಿದ ಗೋದಾಮಿನ ಮಾಲೀಕ ಮಹದೇವಗೌಡ ಗಾಜಿಗೌಡ್ರ ಹಾಗೂ ಲಾರಿ ಮಾಲೀಕರು ಪರಾರಿಯಾಗಿದ್ದಾರೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಯೂರಿಯಾ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ. ಆದರೆ, ಈ ರೀತಿ ಅಕ್ರಮವಾಗಿ ಬೇರೆ ಕಡೆ ಸಾಗಿಸುತ್ತಿರುವುದರಿಂದ ಇಲ್ಲಿ ಕೊರತೆಯಾಗುತ್ತದೆ. ಈ ಬಗ್ಗೆ ದೂರು ಕೇಳಿಬರುತ್ತಿತ್ತು. ಆದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು.

    ಎಎಸ್​ಪಿ ವಿಜಯಕುಮಾರ ಸಂತೋಷ, ಡಿಎಸ್​ಪಿ ಶಂಕರ ಮಾರಿಹಾಳ, ಪಿಎಸ್​ಐ ವೈ.ಟಿ. ಹಿರಗಣ್ಣನವರ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts