ಕುಂದಾಪುರ: ನದಿ ಮುಖಜಭೂಮಿ, ಜಲಾನಯನ ಪ್ರದೇಶ ಒತ್ತುವರಿಗೆ ನಿಷೇಧವಿದ್ದರೂ ಪುರಸಭೆಯೇ ಸಂಗಮ ಪರಿಸರದಲ್ಲಿ ಹೊಳೆ ಒತ್ತುವರಿ ಮಾಡಿ ಹಿಂದೆ ಡಂಪಿಂಗ್ ಯಾರ್ಡ್ ನಿರ್ಮಿಸಿದ್ದು, ಪ್ರಸಕ್ತ ಮೀನು ಮಾರುಕಟ್ಟೆಗೆ ಗುದ್ದಲಿ ಪೂಜೆ ನಡೆಸಿದೆ. ಇದರಿಂದ ಪ್ರೇರಣೆ ಪಡೆದ ಖಾಸಗಿ ವ್ಯಕ್ತಿಗಳು ಇಲ್ಲಿನ ಮದ್ದುಗುಡ್ಡೆ ಖಾಸಗಿ ಸಾಮಿಲ್ ಹಿಂಭಾಗದಲ್ಲಿ ನದಿ ತೀರದ ಸರ್ಕಾರಿ ಜಾಗ ಒತ್ತುವರಿ ಮಾಡಿ ವಲಸೆ ಕಾರ್ಮಿಕರು ಶೆಡ್ ನಿರ್ಮಿಸಿದ್ದಾರೆ.
ಕೋಡಿ ಸಂಪರ್ಕ ಸೇರುವ ಬಳಿಯಿಂದ ಸಂಗಮಕ್ಕೆ ಸಂಪರ್ಕ ನೀಡುವ ರಿಂಗ್ ರಸ್ತೆ ಬಳಿ ಒತ್ತುವರಿ ನಡೆದಿದ್ದು, ಪುರಸಭೆ ಮಾತ್ರ ಏನೂ ಗೊತ್ತಿಲ್ಲದಂತೆ ಇದೆ. ಕುಂದಾಪುರ ರಿಂಗ್ ರಸ್ತೆ ಅಭಿವೃದ್ಧಿ ಬಗ್ಗೆ ಪುರಸಭೆಯಲ್ಲಿ ಹಲವು ಬಾರಿ ಚರ್ಚೆ ನಡೆದಿದ್ದರೂ ಪ್ರಯೋಜನವಾಗಿಲ್ಲ. ಅಲ್ಲದೆ ಕುಂದಾಪುರ ಪೇಟೆ ಸಂಚಾರ ದಟ್ಟಣೆ ಕಡಿಮೆ ಮಾಡಲೂ ರಿಂಗ್ ರಸ್ತೆ ಸಹಕಾರಿಯಾಗಿದ್ದು, ರಿಂಗ್ ರೋಡ್ ನಿರ್ಮಾಣಕ್ಕೆ ಉಂಟಾಗಿರುವ ಸಮಸ್ಯೆ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ ಎಂದು ಪರಿಸರದ ಜನ ಪುರಸಭೆ ಕಾರ್ಯ ವೈಖರಿಗೆ ಲೇವಡಿ ಮಾಡುತ್ತಿದ್ದಾರೆ. ಮರಳು ತೆಗೆಯಲು ಪರವಾನಗಿ ಕೊಟ್ಟು ಬೆರಳೆಣಿಕೆ ದಿನ ಕಳೆದಿಲ್ಲವಾದರೂ ನಿಧಾನವಾಗಿ ಮರಳು ಮಾಫಿಯಾ ಆರಂಭವಾಗುತ್ತಿದೆ. ಇಲ್ಲಿ ಮರಳು ಕಡವಿಗೆ ಪರವಾನಗಿ ನೀಡಿದ ಮೇಲೆ ನದಿ ತೀರ ಒತ್ತುವರಿ ಮಾಡಿ ಶೆಡ್ ಕಟ್ಟಿ ವಲಸೆ ಕಾರ್ಮಿಕರನ್ನು ಉಳಿಸಿಕೊಳ್ಳಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಮತ್ತು ಕುಂದಾಪುರ ಪುರಸಭೆ ಅಧಿಕಾರಿಗಳು ಕೂಡಲೇ ಈ ಅನಧಿಕೃತ ಶೆಡ್ ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸರ್ವಋತು ರಸ್ತೆ ಅಭಿವೃದ್ಧಿಗೆ ಆಗ್ರಹ: ರಿಂಗ್ ರಸ್ತೆ ಆರಂಭದಿಂದ ಅಂತ್ಯದವರೆಗೆ ಒಮ್ಮೆ ತಿರುಗಿದರೆ ಸಾಕು ಪಂಚಗಂಗಾವಳಿ ಎಷ್ಟು ಮಲೀನವಾಗುತ್ತದೆ ಎನ್ನುವುದು ಕಣ್ಣಾರೆ ಕಾಣಬಹುದು. ರಸ್ತೆ ಒತ್ತುವರಿ ಒಂದು ಕಡೆಯಾದರೆ, ಅಪೂರ್ಣ ರಸ್ತೆ ಕಾಮಗಾರಿ, ಗೃಹೋಪಯೋಗಿ ತ್ಯಾಜ್ಯ, ಕೊಚ್ಚೆ ನೀರು, ಪರಿಸರದ ತ್ಯಾಜ್ಯ ಹೊಳೆಯಲ್ಲಿ ತೇಲಿ ನೀರಂತೂ ಗಬ್ಬೆದ್ದು ಹೋಗಿದೆ. ವಲಸೆ ಕಾರ್ಮಿಕರ ಪಾಪ ಕೂಡ ಪಂಚಗಂಗಾವಳಿಯಲ್ಲಿ ಲೀನವಾಗಲಿದೆ. ರಿಂಗ್ ರೋಡ್ ಸರ್ವಋತು ರಸ್ತೆಯಾಗಿ ಅಭಿವೃದ್ಧಿಪಡಿಸಿ, ವಾಯು ವಿಹಾರಕ್ಕೆ ಸಂಜೆ ಸೊಬಗು ಸವಿಯಲು ಅನೂಕೂಲ ಮಾಡಿಕೊಡಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಮದ್ದುಗುಡ್ಡೆ ರಿಂಗ್ ರಸ್ತೆ ಬಳಿ ನಿರ್ಮಿಸಿದ ಶೆಡ್ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಬರುತ್ತಿದ್ದು, ಇದರ ನಿರ್ಮಾಣಕ್ಕೆ ಅನುಮತಿ ಪಡೆದಿದ್ದಾರೋ ಎಂಬ ಬಗ್ಗೆ ಮಾಹಿತಿ ಇಲ್ಲದಿದ್ದರೂ ಅಕ್ರಮ ಶೆಡ್ ಕುರಿತು ಈಗ ಮಾಹಿತಿ ಸಿಕ್ಕಿದೆ. ತಕ್ಷಣ ಶೆಡ್ ತೆರವು ಮಾಡುವಂತೆ ಪುರಸಭೆ ನೋಟಿಸ್ ನೀಡಲಿದ್ದು, ಸಿಆರ್‌ಝಡ್ ವಿಭಾಗಕ್ಕೂ ಮಾಹಿತಿ ನೀಡಲಾಗುತ್ತದೆ.
| ಗೋಪಾಲಕೃಷ್ಣ ಶೆಟ್ಟಿ ಮುಖ್ಯಾಧಿಕಾರಿ ಪುರಸಭೆ ಕುಂದಾಪುರ