ಇಳಕಲ್ಲ(ಗ್ರಾ): ಇಲ್ಲಿಯ ಜೇಸಿ ಸಿಲ್ಕ್ ಸಿಟಿ ವತಿಯಿಂದ ಮೊದಲ ಬಾರಿ ನಗರದಲ್ಲಿ ಭಾನುವಾರ ಬೆಳಗ್ಗೆ 6 ಗಂಟೆಗೆ ಆಯೋಜಿಸಿದ್ದ ಮ್ಯಾರಥಾನ್ ಓಟಕ್ಕೆ ಶಾಸಕ ದೊಡ್ಡನಗೌಡ ಪಾಟೀಲ ಚಾಲನೆ ನೀಡಿದರು. ಬಸವೇಶ್ವರ ಸರ್ಕಲ್‌ದಿಂದ ಆರಂಭವಾದ ಮೊದಲ ಮ್ಯಾರಥಾನ್ ರಾಷ್ಟ್ರೀಯ ಹೆದ್ದಾರಿ ಹಾಗೂ ತೊಂಡಿಹಾಳ ಗ್ರಾಮದ ಮಾರ್ಗವಾಗಿ ರಿಲಾಯನ್ಸ್ ಪೆಟ್ರೋಲ್ ಬಂಕ್ ಆವರಣ ತಲುಪಿತು.
ಮ್ಯಾರಥಾನ್ ದ್ವಿತೀಯ ಓಟ ಬಸವೇಶ್ವರ ವೃತ್ತದಿಂದ ಆರಂಭವಾಗಿ ವಿವೇಕಾನಂದ ಶಾಲೆ ಮಾರ್ಗವಾಗಿ ನಡೆದು ರಿಲಾಯನ್ಸ್ ಪೆಟ್ರೋಲ್ ಬಂಕ್‌ಗೆ ತಲುಪಿತು. ಎಲ್ಲರಿಗೂ ಮೆಡಲ್ ವಿತರಿಸಲಾಯಿತು.
ಜೇಸಿ ಸಿಲ್ಕ್ ಸಿಟಿ ಮಹಿಳೆಯರು, ನಿಸರ್ಗ ವಾಯು ವಿಹಾರ ತಂಡ, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಅಕ್ಕನ ಬಳಗ, ಸರ್ವವಿಜಯ ಸೇವಾ ಸಂಸ್ಥೆ ಮತ್ತಿತರರ ಸಂಘ ಸಂಸ್ಥೆಗಳು ಕೈಜೋಡಿಸಿದ್ದವು. ಸಿಲ್ಕ್ ಸಿಟಿಯ ಅಧ್ಯಕ್ಷೆ ಸಲ್ಮಾ ಕಂದಗಲ್ಲ, ಕಾರ್ಯದರ್ಶಿ ಲಕ್ಷ್ಮೀ ಕುಟಗಮರಿ, ಕಾರ್ಯಕ್ರಮ ಸಂಯೋಜಕಿ ಡಾ.ಶುಭಾರಾಣಿ ಕಡಪಟ್ಟಿ ಸೇರಿ ಸಂಸ್ಥೆಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
ಮಕ್ಕಳಿಂದ ವೃದ್ಧರವರೆಗೂ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡಿದ್ದರು. ಉಪಾಹಾರ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿತ್ತು. ಪಿಎಸ್‌ಐ ಆರ್.ವೈ. ಜಲಗೇರಿ ಮತ್ತು ಸಂಸ್ಥೆ ಸಿಬ್ಬಂದಿ ವರ್ಗ ಮ್ಯಾರಥಾನ್ ಮಾರ್ಗದುದ್ದಕ್ಕೂ ಸಾಗಿ ಯಾವುದೇ ತೊಂದರೆಯಾಗದಂತೆ ನಿರ್ವಹಣೆ ಮಾಡಿದರು.