More

    ನೀರು ಪೋಲು ಮಾಡಿದರೆ ಶಿವಮೊಗ್ಗದಲ್ಲಿ ದಂಡ

    ಶಿವಮೊಗ್ಗ: ಮಾರಿಕಾಂಬಾ ಜಾತ್ರೆ ಬಳಿಕ ನಗರದಲ್ಲಿ ಕುಡಿಯುವ ನೀರಿನ ನಿರ್ವಹಣೆಗೆ ಹೆಚ್ಚು ಒತ್ತು ನೀಡುವುದು, ನೀರು ಪೋಲು ಮಾಡದಂತೆ ಜನರಲ್ಲಿ ಜಾಗೃತಿ ಮೂಡಿಸುವ ಕ್ರಮ ಕೈಗೊಳ್ಳಲಾಗುತ್ತದೆ. ರಸ್ತೆ ತೊಳೆಯುವವರು, ನೀರನ್ನು ಪೋಲು ಮಾಡುವವರ ವಿರುದ್ಧ ಅಂತಿಮವಾಗಿ ದಂಡ ವಿಧಿಸಲಾಗುತ್ತದೆ.

    ಬೇಸಿಗೆಯಲ್ಲಿ ಶಿವಮೊಗ್ಗದ ನೀರು ನಿರ್ವಹಣೆಗೆ ಸಂಬಂಧಿಸಿ ಶಾಸಕ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆಯಲ್ಲಿ ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ ಹಲವು ಕಟ್ಟುನಿಟ್ಟಿನ ಕ್ರಮ ಜರುಗಿಸುವ ಬಗ್ಗೆ ಚರ್ಚಿಸಲಾಯಿತು. ಜೂನ್‌ವರೆಗೆ ನೀರಿನ ನಿರ್ವಹಣೆ ಬಗ್ಗೆ ಸುದೀರ್ಘವಾಗಿ ಸಮಾಲೋಚಿಸಲಾಯಿತು.
    ಮಾರಿಕಾಂಬಾ ಜಾತ್ರೆ ಬಳಿಕ ನೀರಿನ ಮಿತ ಬಳಕೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕರಪತ್ರ ವಿತರಣೆ, ಕಸ ಸಂಗ್ರಹಣೆ ಗಾಡಿಗಳ ಮೂಲಕ ಪ್ರಚಾರ ಮಾಡಲು ನಿರ್ಧರಿಸಲಾಯಿತು. ಇದೆಲ್ಲದಕ್ಕೂ ಜನರು ಸ್ಪಂದಿಸದಿದ್ದರೆ ಅಂತಿಮವಾಗ ದಂಡ ವಿಧಿಸಲು ತೀರ್ಮಾನಿಸಲಾಯಿತು.
    ಸಭೆಯ ಆರಂಭದಲ್ಲಿ ಮಾತನಾಡಿದ ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿದ್ದು ಅಪರೂಪ. ನೀರಿನ ಪೂರೈಕೆ ವ್ಯವಸ್ಥೆಯಲ್ಲಿನ ಲೋಪದಿಂದ ತೊಂದರೆಯಾಗಿದೆ. ತುಂಗಾ ಜಲಾಶಯದಲ್ಲಿ ನೀರಿನ ಸಂಗ್ರಹ ಕುಸಿದ ಪರಿಣಾಮ ಒಮ್ಮೆ ಮಾತ್ರ ಎರಡು ದಿನಕ್ಕೊಮ್ಮೆ ನೀರು ಒದಗಿಸುವ ತೀರ್ಮಾನ ಮಾಡಿದ್ದೆವು. ಈ ಬಾರಿ ಜೂನ್ ಎರಡನೇ ವಾರದವರೆಗೂ ನೀರಿನ ನಿರ್ವಹಣೆ ಬಗ್ಗೆ ಮುಂಜಾಗ್ರತೆ ವಹಿಸಬೇಕಿದೆ ಎಂದರು.
    ಮೆಸ್ಕಾಂ, ನೀರು ಸರಬರಾಜು ಮಂಡಳಿ, ತುಂಗಾ ಜಲಾಶಯದ ಇಂಜಿನಿಯರ್‌ಗಳ ನಡುವೆ ನಿರಂತರ ಸಮನ್ವಯ ಇರಬೇಕು. ಇವರೆಲ್ಲರೂ ವಾರಕ್ಕೊಮ್ಮೆ ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸಬೇಕು. ಪರಿಸ್ಥಿತಿಗೆ ಅನುಗುಣವಾಗಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
    ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ಉಪಸ್ಥಿತರಿದ್ದರು. ಮೆಸ್ಕಾಂ, ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಂಜಿನಿಯರ್, ತುಂಗಾ ಮೇಲ್ದಂಡೆ ಇಂಜಿನಿಯರ್‌ಗಳು ಸಭೆಯಲ್ಲಿ ಭಾಗವಹಿಸಿದ್ದರು.
    ಹೀಗಿದೆ ನೀರು ನಿರ್ವಹಣೆ ಲೆಕ್ಕಾಚಾರ:
    ತುಂಗಾ ಜಲಾಶಯದಲ್ಲಿ ಪ್ರಸ್ತುತ ಸಂಗ್ರಹ-2.73 ಟಿಎಂಸಿ
    ಡೆಡ್ ಸ್ಟೋರೇಜ್-0.89 ಟಿಎಂಸಿ
    ವರ್ಷಕ್ಕೆ ಶಿವಮೊಗ್ಗಕ್ಕೆ ಬೇಕಾಗಿರುವುದು-1 ಟಿಎಂಸಿ
    ಪ್ರತಿದಿನ ಬೇಕಾದ ನೀರು 35 ಕ್ಯೂಸೆಕ್
    ಜೂ.15ರವರೆಗೆ ಬೇಕಿರುವುದು -0.35 ಟಿಎಂಸಿ
    ನದಿಗೆ ಹರಿಸುವುದು- 30 ಕ್ಯೂಸೆಕ್
    ಅವಿಯಾಗುವ ನೀರು-30 ಕ್ಯೂಸೆಕ್
    ತೋಟಗಾರಿಕೆ ಬೆಳಗೆ ಮೇ.5ರವರೆಗೂ ಆಫ್ ಆ್ಯಂಡ್ ಆನ್ ಸಿಸ್ಟಂನಲ್ಲಿ ನೀರು
    ಎಚ್ಚೆತ್ತುಕೊಳ್ಳದಿದ್ದರೆ ಅಪಾಯ:ತುಂಗಾ ಜಲಾಶಯದ ಇಂಜಿನಿಯರ್‌ಗಳ ಪ್ರಕಾರ ಜೂ.15ರವರೆಗೆ ಒಟ್ಟು 0.35 ಟಿಎಂಸಿ ನೀರು ಶಿವಮೊಗ್ಗ ನಗರಕ್ಕೆ ಬೇಕಿದೆ. ಆದರೆ ಕುಡಿಯುವ ನೀರು ಸರಬರಾಜು ಮಂಡಳಿ ಸಹಾಯಕ ಅಧೀಕ್ಷಕ ಅಭಿಯಂತ ಸಿದ್ದಣ್ಣ ಪ್ರಕಾರ 0.50 ಟಿಎಂಸಿ ನೀರು ಅವಶ್ಯವಿದೆ. ಇಷ್ಟು ನೀರು ಜಲಾಶಯದಿಂದ ದೊರೆಯುತ್ತದೆ. ಆದರೆ ನಾಗರಿಕರು ಎಚ್ಚೆತ್ತುಕೊಂಡು ನೀರು ಬಳಸದೇ ಇದ್ದರೆ ಅಪಾಯ ತಪ್ಪಿದ್ದಲ್ಲ ಎಂಬ ಅನಿಸಿಕೆ ಸಭೆಯಲ್ಲಿ ವ್ಯಕ್ತವಾಯಿತು.
    ರಸ್ತೆ ತೊಳೆಯುವವರೇ ಎಚ್ಚರ:ಕುಡಿಯುವ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಪೋಲು ಮಾಡಲಾಗುತ್ತಿದೆ. ಜನರು ವಾಹನ ತೊಳೆಯುವುದು, ಮನೆ ಮುಂಭಾಗದ ರಸ್ತೆಗೆ ಯಥೇಚ್ಛವಾಗಿ ನೀರು ಹರಿಸುವುದು ಸಾಮಾನ್ಯವಾಗಿದೆ. ಹೀಗಾಗಿ ನೀರಿನ ಮಿತ ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಮಾರಿಕಾಂಬಾ ಜಾತ್ರೆ ಮುಕ್ತಾಯದ ಬಳಿಕ ಪಾಲಿಕೆಯಿಂದ ಇದಕ್ಕೆ ವ್ಯವಸ್ಥೆ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts