More

    ಸಮಸ್ಯೆ ಇದ್ದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು

    ಸಾಗರ: ತಾಲೂಕಿನ ಹಿನ್ನೀರಿನ ಕರೂರು ಬಾರಂಗಿ ಹೋಬಳಿಯ ಕೆಲವು ಪ್ರದೇಶಗಳಲ್ಲಿ ಈಗಾಗಲೇ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದ್ದು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಗ್ರಾಪಂ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಾಗರ ತಾಪಂ ಕಾರ್ಯನಿರ್ವಹಣಾಧಿಕಾರಿ ಎ.ಎಸ್.ಸುನೀತಾ ಹೇಳಿದರು.
    ತಾಪಂ ಸಭಾಂಗಣದಲ್ಲಿ ಮಂಗಳವಾರ ಕುಡಿಯುವ ನೀರಿನ ಸಮಸ್ಯೆಗಳ ಕುರಿತಂತೆ ಪಿಡಿಒಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು.
    ತಾಲೂಕಿನ ಅನೇಕ ಗ್ರಾಪಂಗಳಲ್ಲಿ ಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಈ ಬಗ್ಗೆ ಕೂಲಂಕಷ ಮಾಹಿತಿ ಪಡೆಯಲಾಗಿದೆ. ನೀರಿನ ಕೊರತೆ ಉಂಟಾಗಲಿರುವ ಭೀಮನಕೋಣೆ, ಮತ್ತಿಕೊಪ್ಪ, ಬ್ಯಾಡರಕೊಪ್ಪ, ಎಲಕನಗದ್ದೆ, ಒಳಗೊಂಡಂತೆ ಹೆಗ್ಗೋಡು ಗ್ರಾಪಂನ 12 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ ಎನ್ನುವ ಮಾಹಿತಿ ಪಡೆದಿದ್ದು ಅಂತಹ ಕಡೆಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದರು.
    ಬರ ಪರಿಹಾರಕ್ಕೆ ಸಂಬಂಧಿಸಿ 45 ಲಕ್ಷ ರೂ. ಬಿಡುಗಡೆಯಾಗಿದ್ದು ಜಲಜೀವನ್ ಮಿಷನ್ ಯೋಜನೆಯಲ್ಲಿ ಪ್ರತಿ ಪಂಚಾಯಿತಿಯಲ್ಲಿ 7 ಲಕ್ಷ ರೂ. ತೆಗೆದಿಡಲಾಗಿದೆ. ಈ ಬಗ್ಗೆ ಯೋಜನೆ ರೂಪಿಸಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
    ಶರಾವತಿ ಹಿನ್ನೀರಿನ ಪ್ರದೇಶದ ಕರೂರು ಬಾರಂಗಿ ಹೋಬಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಈಗಾಗಲೇ ಸಮಸ್ಯೆ ಉಲ್ಬಣವಾಗಿದೆ. ಹಿನ್ನೀರಿನ ಹೊನ್ನಳ್ಳಿ ಎನ್ನುವ ಗುಡ್ಡದ ಪ್ರದೇಶದಲ್ಲಿ 9 ಕುಟುಂಬಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಇಲ್ಲಿಗೆ ಯಾವುದೇ ಪೈಪ್‌ಲೈನ್‌ಗಳಾಗಲಿ, ವಾಹನಗಳಾಗಲಿ ಹೋಗುವ ಸಾಧ್ಯತೆಗಳಿಲ್ಲ. ಆದರೂ ಇವರಿಗೆ ನೀರು ಒದಗಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದ್ದು ಅಧಿಕಾರಿಗಳಿಗೆ ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ನಾನೇ ಈ ಪ್ರದೇಶಕ್ಕೆ ತುರ್ತು ಭೇಟಿ ನೀಡುತ್ತೇನೆ ಎಂದರು.
    ಸಭೆಯಲ್ಲಿ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹಮ್ಮದ್ ಹನ್ೀ, ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕಿ ಪೂರ್ಣಿಮಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts