More

    ಉದ್ಯೋಗ ಕೌಶಲ ಕಲಿಯದಿದ್ದರೆ ನಿಷ್ಫಲ!

    ಸುಮಾರು ಮೂರು ದಶಕಗಳ ನಂತರ ಶಿಕ್ಷಣ ಕ್ಷೇತ್ರ ತನ್ನ ಹಾದಿಯನ್ನೇ ಬದಲಾಯಿಸಿಕೊಳ್ಳಲು ಸಿದ್ಧವಾಗಿದೆ. 1986ರ ಶಿಕ್ಷಣ ನೀತಿಗೆ ಬದಲಾವಣೆಗಳನ್ನು ತಂದು ನೂತನ ಶಿಕ್ಷಣ ನೀತಿಯ ಮೂಲಕ ಸದೃಢ ಯುವ ಭಾರತ ನಿರ್ವಣಕ್ಕೆ ಅಡಿಗಲ್ಲು ಹಾಕಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 (ಎನ್​ಇಪಿ) ಭಾರತವನ್ನು ಅಭಿವೃದ್ಧಿಯ ಪಥಕ್ಕೆ ಕರೆದೊಯ್ಯುವುದಷ್ಟೇ ಅಲ್ಲದೆ ವಿಶ್ವದಲ್ಲಿ ಭಾರತದ ಹೆಸರನ್ನು ಉನ್ನತ ಮಟ್ಟಕ್ಕೆ ಏರಿಸಲಿದೆ ಎನ್ನುವುದು ಬಹುತೇಕ ತಜ್ಞರ ಅಭಿಪ್ರಾಯ.

    | ಮಂದಾರ ಸಾಗರ

    ಭಾರತ ಅದೆಷ್ಟೇ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದರೂ ನಿರುದ್ಯೋಗದ ಸಮಸ್ಯೆಯಿಂದ ಬಿಡಿಸಿಕೊಳ್ಳುವುದು ಮಾತ್ರ ಕಷ್ಟದ ಕೆಲಸವಾಗಿಬಿಟ್ಟಿದೆ. ದೇಶದಲ್ಲಿ ಸುಶಿಕ್ಷಿ್ಷರ ನಿರುದ್ಯೋಗ ಪ್ರಮಾಣ ಶೇ. 11.4ರಷ್ಟಿದೆ. ಪದವಿ ಪಡೆದ ಅದೆಷ್ಟೋ ಯುವಕ/ಯುವತಿಯರು ಕೆಲಸವಿಲ್ಲದೆ ಕಾಲ ಕಳೆಯುವಂತಾಗಿದೆ. ಇದಕ್ಕೆಲ್ಲ ಮುಖ್ಯ ಕಾರಣನಮ್ಮ ಶಿಕ್ಷಣ ನೀತಿ. ಪ್ರಾಯೋಗಿಕ ಅನುಭವವಿಲ್ಲದೆ ಕೇವಲ ಪುಸ್ತಕದ ಓದಿನೊಂದಿಗೆ ಕಾಲೇಜಿನಿಂದ ಹೊರಬಿದ್ದ ವಿದ್ಯಾರ್ಥಿಗಳನ್ನು ಎಲ್ಲ ಕ್ಷೇತ್ರಗಳು ದೂರವಿರಿಸುತ್ತಲೇ ಬಂದಿವೆ. ಅನುಭವ ಇರುವವರಿಗೆ ಮಾತ್ರ ಕೆಲಸ ಎನ್ನುವ ನೆಪ ಮುಂದೊಡ್ಡುತ್ತಿವೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ, ವಿದ್ಯಾರ್ಥಿಯನ್ನೇ ಒಂದು ರೆಡಿ ಪ್ರಾಡಕ್ಟ್ ರೀತಿಯಲ್ಲಿ ಮಾರ್ಪಾಡು ಮಾಡಲು ಬಂದಿರುವ ಅಸ್ತ್ರವೇ ಎನ್​ಇಪಿ 2020.

    2027ಕ್ಕೆ ಯುವ ಭಾರತ: ದೇಶದ ಜನಸಂಖ್ಯೆಯ ಶೇ. 50 ಭಾಗ ಯುವಜನರೇ ಇದ್ದಾರೆ. 35 ವರ್ಷಕ್ಕಿಂತ ಕೆಳಗಿರುವವರ ಸಂಖ್ಯೆ ಒಟ್ಟಾರೆ ಜನಸಂಖ್ಯೆಯ ಶೇ. 66ರಷ್ಟಿದೆ. ಇನ್ನು ಆರು ವರ್ಷಗಳಲ್ಲಿ, ಅಂದರೆ 2027ರ ವೇಳೆಗೆ ಭಾರತವು ಗ್ಲೋಬಲ್ ವರ್ಕ್​ಫೋರ್ಸ್​ನಲ್ಲಿ ಶೇ. 18 ಪಾಲನ್ನು ಹೊಂದಿರಲಿದೆ. ಪೂರ್ತಿ ವಿಶ್ವಕ್ಕೇ ಭಾರತ ಒಂದು ಮಾದರಿ ಯುವ ದೇಶವಾಗಿ ಹೊರಹೊಮ್ಮಲಿದೆ. ಅತಿ ಹೆಚ್ಚು ಯುವಜನರನ್ನು ಹೊಂದಿರುವ ದೇಶ ಸಹಜವಾಗಿಯೇ ಎಲ್ಲ ಕ್ಷೇತ್ರಗಳಲ್ಲೂ ಮುಂದುವರಿಯುವ ನಿರೀಕ್ಷೆಯಿದ್ದು, ಅದಕ್ಕೆ ಎನ್​ಇಪಿ ಒಂದು ಪೂರಕ ವ್ಯವಸ್ಥೆಯಾಗಲಿದೆ.

    ಇಲ್ಲೇ ಕಲೀರಿ, ಇಲ್ಲೇ ದುಡೀರಿ!: ವಿವಿಧ ದೇಶಗಳ ಶಿಕ್ಷಣ ತಜ್ಞರ ಸಲಹೆ ಪಡೆದು ಎನ್​ಇಪಿ 2020 ರೂಪಿಸಲಾಗಿದೆ. ಅದಲ್ಲದೆ ವಿಶ್ವದ ಅಗ್ರ 100 ವಿಶ್ವವಿದ್ಯಾಲಯಗಳಿಗೆ ಭಾರತದಲ್ಲಿ ಕ್ಯಾಂಪಸ್ ತೆರೆಯಲು ಅನುವು ಮಾಡಿಕೊಡಲಾಗಿದೆ. ಭಾರತೀಯ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳದೆ, ನಮ್ಮ ದೇಶದಲ್ಲಿಯೇ ವಿದ್ಯಾಭ್ಯಾಸ ಮುಗಿಸಿ, ನಮ್ಮ ದೇಶಕ್ಕಾಗಿಯೇ ದುಡಿಯಲು ಇದೊಂದು ಅದ್ಭುತ ಅವಕಾಶ.

    6ನೇ ತರಗತಿಯಿಂದಲೇ ವೃತ್ತಿಪರ ಶಿಕ್ಷಣಕ್ಕೆ ಒತ್ತು: ಮಕ್ಕಳಲ್ಲಿ ತಾಂತ್ರಿಕ ಜ್ಞಾನವನ್ನು ಹೆಚ್ಚಿಸುವ ಸಲುವಾಗಿ ಎನ್​ಇಪಿನಲ್ಲಿ ಹೊಸ ಆಯಾಮವನ್ನು ಸೇರಿಸಲಾಗಿದೆ. ಆರನೇ ತರಗತಿಯಿಂದಲೇ ವೃತ್ತಿಪರ ಶಿಕ್ಷಣಕ್ಕೆ ಒತ್ತು ಕೊಡಲಾಗಿದೆ. ವಿದ್ಯಾರ್ಥಿಗಳು ಕೋಡಿಂಗನ್ನೂ ಒಂದು ವಿಷಯವಾಗಿ ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸ ಮಾಡಬಹುದಾಗಿದೆ. ವೃತ್ತಿಪರ ಕೌಶಲ್ಯ ಮತ್ತು ಪ್ರಾಯೋಗಿಕ ತರಗತಿಗಳನ್ನು 6ನೇ ತರಗತಿಯಿಂದಲೇ ಹೇಳಿ ಕೊಡಲಾಗುತ್ತದೆ. ಹಾಗಾಗಿ ಕಾಲೇಜು ವಿದ್ಯಾಭ್ಯಾಸ ಮುಗಿಸುವಷ್ಟರಲ್ಲಿ ವಿದ್ಯಾರ್ಥಿಯು ವೃತ್ತಿಗೆ ಬೇಕಾದ ಸಕಲ ಕೌಶಲಗಳನ್ನೂ ಕಲಿತು ಸಿದ್ಧನಾಗಿರುತ್ತಾನೆ. ಅದೇ ತರಗತಿಯಿಂದ ಇಂಟರ್ನ್ ಶಿಪ್​ಗಳೂ ಸೇರಿಕೊಳ್ಳಲಿವೆ.

    ಉನ್ನತ ಶಿಕ್ಷಣ ದಾಖಲಾತಿ ಏರಿಕೆ ಗುರಿ: ಉನ್ನತ ಶಿಕ್ಷಣದಲ್ಲಿ ದಾಖಲಾತಿಯ ಪ್ರಮಾಣವನ್ನು ಏರಿಸುವ ಗುರಿ ಎನ್​ಇಪಿಗೆ ಇದೆ. ಪ್ರಸ್ತುತ ಉನ್ನತ ಶಿಕ್ಷಣದಲ್ಲಿ ದಾಖಲಾತಿ ಪ್ರಮಾಣ ಶೇ. 26.3 ಇದೆ. ಇದನ್ನು 2035ರ ವೇಳೆಗೆ ಶೇ. 50ಕ್ಕೆ ಏರಿಸಲಾಗುವುದು. ಅದಕ್ಕೆಂದು 3.5 ಕೋಟಿ ಉನ್ನತ ಶಿಕ್ಷಣ ಸೀಟುಗಳನ್ನು ಹೆಚ್ಚಿಸಲಾಗುವುದು. ಅದರಲ್ಲಿ ಇ-ಲರ್ನಿಂಗ್​ಗೆ ಹೆಚ್ಚಿನ ಒತ್ತು ನೀಡಲಾಗುವುದು.

    ಮಲ್ಟಿಪಲ್ ಎಂಟ್ರಿ, ಎಕ್ಸಿಟ್: ಎನ್​ಇಪಿಯಲ್ಲಿ ಹೊಸದಾಗಿ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ (ಎಬಿಸಿ) ಸ್ಥಾಪನೆ ಮಾಡುವುದಾಗಿ ಹೇಳಲಾಗಿದೆ. ಈಗಿರುವ ಪದವಿ ವಿದ್ಯಾಭ್ಯಾಸವನ್ನು ನಾಲ್ಕು ವರ್ಷಗಳ ಪದವಿಯಾಗಿ ಬದಲಿಸಲಾಗುತ್ತದೆ. ಯಾವುದೇ ವಿದ್ಯಾರ್ಥಿ ದೇಶದ ಯಾವುದೇ ಮೂಲೆಯಲ್ಲಿ ತನ್ನಿಷ್ಟದ ವಿಷಯವನ್ನು ಆಯ್ಕೆ ಮಾಡಿಕೊಂಡು ಅದರಲ್ಲೇ ರಿಸರ್ಚ್ ಮಾಡಬಹುದಾಗಿದೆ.

    ಪ್ರಾದೇಶಿಕ ಭಾಷೆಗಳಲ್ಲೇ ಪರೀಕ್ಷೆ: ಸರ್ಕಾರಿ ವಲಯದ ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ನೇಮಕಾತಿ ನಡೆಸಲು ರಾಷ್ಟ್ರೀಯ ನೇಮಕಾತಿ ಸಂಸ್ಥೆಯನ್ನು ತೆರೆಯಲಾಗಿದೆ. ಎಲ್ಲ ಕ್ಷೇತ್ರದ ಹುದ್ದೆಗಳಿಗೆ ಒಂದೇ ರೀತಿಯ ಸಾಮಾನ್ಯ ಪರೀಕ್ಷೆಯನ್ನು ಈ ಸಂಸ್ಥೆ ನಡೆಸಲಿದೆ. ಪ್ರಾದೇಶಿಕ ಭಾಷೆಗಳಲ್ಲೇ ಎನ್​ಆರ್​ಇ ಸಿಇಟಿ ನಡೆಯಲಿದ್ದು, ನಂತರದ ಹಂತದಲ್ಲಿ ಹುದ್ದೆಗೆ ಸಂಬಂಧಪಟ್ಟಂತೆ ಪರೀಕ್ಷೆ ನಡೆಸಲಾಗುವುದು. ಅದರಂತೆಯೇ ಎಲ್ಲ ಪದವಿಗಳಿಗೂ ಒಂದೇ ಸಾಮಾನ್ಯ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್​ಟಿಎ) ಆ ಪರೀಕ್ಷೆ ನಡೆಸಲಿದೆ.

    ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿಗಳಲ್ಲಿ ಜೀವನ ಕೌಶಲಗಳನ್ನ ಬೆಳೆಸಲಿದೆ. ವಿಶೇಷವಾಗಿ ಪದವಿ ಹಂತದಲ್ಲಿ ಲಿಬರಲ್ ಆರ್ಟ್ ಶಿಕ್ಷಣದ ಮೂಲಕ ಪ್ರತಿ ವಿದ್ಯಾರ್ಥಿಯೂ ಎಲ್ಲ ರೀತಿಯ ವಿಷಯಗಳನ್ನು, ಕೌಶಲಗಳನ್ನು ಕಲಿಯುವಂತಹ ವ್ಯವಸ್ಥೆಯನ್ನು ರೂಪಿಸಲಿದೆ. ಉದ್ಯೋಗ ಮಾತ್ರವಲ್ಲದೆ ಜೀವನದ ಭವಿಷ್ಯ ರೂಪಿಸಿಕೊಳ್ಳುವುದಕ್ಕೂ ಅವಕಾಶ ಮಾಡಿಕೊಡುತ್ತದೆ.

    | ಎಂ.ಕೆ. ಶ್ರೀಧರ್ ಶಿಕ್ಷಣ ತಜ್ಞ, ಎನ್​ಇಪಿ ಕರಡು ಸಮಿತಿ ಸದಸ್ಯ

    ಅಶೋಕವನದಲ್ಲಿ ಮನರಂಜನೆಯ ಜೋಕಾಲಿ; ಹೀರೋ ಸಿನಿಮಾ ವಿಮರ್ಶೆ

    ಸಾವಿರ ಮಹಿಳೆಯರ ಬಾಯಲ್ಲಿ ಶಿವ ತಾಂಡವ! ಶಿವನ ಭಕ್ತಿಯಲ್ಲಿ ಮಿಂದೆದ್ದ ವಾರಣಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts