More

    ದೇವರು ಅಪ್ರತ್ಯಕ್ಷ ದೇವರಾದರೆ ಗುರುವು ಪ್ರತ್ಯಕ್ಷ ದೈವ

    ಶಿರಾಳಕೊಪ್ಪ: ದೇವರು ಅಪ್ರತ್ಯಕ್ಷ ದೇವರಾದರೆ ಗುರುವು ಪ್ರತ್ಯಕ್ಷ ದೇವರು. ಗುರು ಸಾನ್ನಿಧ್ಯಕ್ಕೆ ಶರಣಾಗತಿ ಹೊಂದಿದಾಗ ಎಲ್ಲವೂ ಪ್ರಾಪ್ತವಾಗುತ್ತದೆ ಎಂದು ಕಾಶಿ ಜಂಗಮವಾಡಿ ಪೀಠದ ಹಿರಿಯ ಜಗದ್ಗುರು ಡಾ. ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

    ಸಮೀಪದ ಕಡೇನಂದಿಹಳ್ಳಿಯ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಸೋಮವಾರ ಏರ್ಪಡಿಸಿದ್ದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ಪರಶಿವನ ಪಂಚಮುಖಗಳಿಂದ ಅವತರಿಸಿದ ಶ್ರೀ ಜಗದ್ಗುರು ಪಂಚಾಚಾರ್ಯರು, ನಾಲ್ಕೂ ಯುಗಗಳಲ್ಲಿ ಆವಿರ್ಭವಿಸಿ ಸನಾತನ ವೀರಶೈವ ಧರ್ಮ ಸಂಸ್ಥಾಪನೆಯೊಂದಿಗೆ ಜನರಿಗೆ ಧರ್ಮ ಸಂಸ್ಕಾರ ಬೋಧನೆ ಮಾಡಿ ಉದ್ಧರಿಸಿದ್ದಾರೆ. ವಿವಿಧ ಪ್ರಾಂತ್ಯ ಪ್ರದೇಶಗಳಲ್ಲಿ ಸಹಸ್ರಾರು ಶಾಖಾ ಮಠಗಳನ್ನು ಸ್ಥಾಪಿಸಿ ಜನತೆಗೆ ಸಂಸ್ಕಾರ ನೀಡಿದ್ದಾರೆ. ಸದ್ಭಾವನೆ ಇಲ್ಲದೇ ಮಾಡುವ ಯಾವುದೇ ಸೇವೆ ವ್ಯರ್ಥ. ಗುರುವಿಗೆ ವೀರಶೈವ ಧರ್ಮದಲ್ಲಿ ಅಗ್ರಸ್ಥಾನ ನೀಡಿದ್ದು, ಗುರು ಸೇವೆಯನ್ನು ಶ್ರದ್ಧಾ ಭಕ್ತಿಯಿಂದ ಭಾವನಾತ್ಮಕವಾಗಿ ಮಾಡಬೇಕು. ತನಗಾಗಿ, ತನ್ನವರಿಗಾಗಿ ಬದುಕುವವರು ಕೆಲವರಾದರೆ ಪರೋಪಕಾರಕ್ಕಾಗಿ ಬದುಕುವ ಸಾಧು-ಸಜ್ಜನರು ಮಹಾತ್ಮರಾಗಿದ್ದಾರೆ. ಪರಪೀಡೆಯೇ ಪಾಪ, ಪರಹಿತವೇ ಪುಣ್ಯವೆಂದು ತಿಳಿದು ಬದುಕಬೇಕು ಎಂದರು.
    ನೇತೃತ್ವ ವಹಿಸಿದ್ದ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ತಾಯಂದಿರು ಮಕ್ಕಳಿಗೆ ಸಂಸ್ಕಾರ ಬಲ ನೀಡಬೇಕು. ಆ ಸಂಸ್ಕಾರ ಬಲದಿಂದ ಮಕ್ಕಳು ಸದ್ಗುಣಿಗಳಾಗಿ ಸಮಾಜದಲ್ಲಿ ಗೌರವ ಹೊಂದಿ ಬಾಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
    ವಿವಿಧ ಕ್ಷೇತ್ರಗಳ ಗಣ್ಯರಿಗೆ, ಸೇವಾರ್ಥಿಗಳಿಗೆ ಗುರುರಕ್ಷೆ ನೀಡಿ ಗೌರವಿಸಲಾಯಿತು. ರೋಣದ ರೇಣುಕಯ್ಯ ಶಾಸ್ತ್ರಿಗಳಿಂದ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಜರುಗಿತು.
    ನಾಗವಂದ ಶ್ರೀ ಶಿವಯೋಗಿ ಶಿವಾಚಾರ್ಯರು, ಚನ್ನಗಿರಿ ಶ್ರೀ ಕೇದಾರ ಶಿವಶಾಂತವೀರ ಶಿವಾಚಾರ್ಯರು, ಚನ್ನಗಿರಿ ಡಾ. ಶ್ರೀ ಬಸವ ಜಯಚಂದ್ರ ಸಾಮೀಜಿ, ಕಡೇನಂದಿಹಳ್ಳಿ ಶ್ರೀ ವೀರಭದ್ರ ಶಿವಾಚಾರ್ಯರು, ಹಾರನಹಳ್ಳಿ ಶ್ರೀ ಶಿವಯೋಗಿ ಶಿವಾಚಾರ್ಯರು, ಕಾರ್ಜುವಳ್ಳಿ ಶ್ರೀ ಸದಾಶಿವ ಶಿವಾಚಾರ್ಯರು ಇತರರಿದ್ದರು. ವೀರೇಂದ್ರ ಪಾಟೀಲ ಬಂಕವಳ್ಳಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts