More

    ಉದ್ಯೋಗಿಗಳು ಕರೊನಾಕ್ಕೆ ಬಲಿಯಾದರೆ 2 ವರ್ಷದ ಸಂಬಳ ನೀಡಲು ಮುಂದಾಗಿರುವ ಖಾಸಗಿ ಕಂಪನಿ!

    ನವದೆಹಲಿ: ಕೋವಿಡ್​-19 ವೈರಸ್​ ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಿದ್ದು, ನಿತ್ಯವೂ ದೊಡ್ಡ ಪ್ರಮಾಣದಲ್ಲೇ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ನಮಗೇನಾದರೂ ಆದರೆ ಮುಂದೆ ನಮ್ಮನ್ನು ನಂಬಿದ ಸಂಸಾರದ ಕಥೆ ಏನು ಎಂದು ಸೋಂಕಿತರಿಗೆ ಹಾಗೂ ಸೋಂಕಿತರಲ್ಲದವರಿಗೂ ಚಿಂತೆ ಕಾಡುವುದು ಸಹಜ. ಆದರೆ ಇಲ್ಲೊಂದು ಕಂಪನಿಯ ಉದ್ಯೋಗಿಗಳಿಗೆ ಹಾಗೆ ಆಗಬಾರದ್ದೇನಾದರೂ ಆದ್ರೆ ಎಂಬಂಥ ಚಿಂತೆ ಇರದಿರಬಹುದು. ಏಕೆಂದರೆ ಈ ಕಂಪನಿ ತನ್ನ ಉದ್ಯೋಗಿಗಳಿಗೆ ದೊಡ್ಡ ಭರವಸೆಯನ್ನೇ ನೀಡಿದೆ.

    ಇಲ್ಲೊಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ತಮ್ಮ ಕಂಪನಿಯ ಉದ್ಯೋಗಿಗಳಿಗೆ ಭಾರಿ ಭರವಸೆಯನ್ನೇ ನೀಡಿದ್ದಾರೆ. ನಮ್ಮ ಕಂಪನಿಯ ಉದ್ಯೋಗಿ ಒಂದು ವೇಳೆ ಕರೊನಾ ಕಾಯಿಲೆಗೆ ತುತ್ತಾಗಿ ಮೃತಪಟ್ಟರೆ, ಅವರ ಕುಟುಂಬದವರಿಗೆ ಮುಂದಿನ 2 ವರ್ಷಗಳ ಕಾಲ ಆ ಉದ್ಯೋಗಿಯ ಸಂಬಳ ಸಿಗಲಿದೆ ಎಂದು ಆಶ್ವಾಸನೆ ನೀಡಿದ್ದಾರೆ.

    ನಮ್ಮ ಕಂಪನಿ ಕೋವಿಡ್​ನಿಂದಾಗಿ ಈಗಾಗಲೇ ನಾಲ್ವರು ಉದ್ಯೋಗಿಗಳನ್ನು ಕಳೆದುಕೊಂಡಿದೆ. ಸಂತೋಷ್​ ಚಳ್ಕೆ, ವಿಜಯ್ ಶಿರ್ಸತ್​, ತುಷಾರ್ ಪಾಂಚಾಲ್ ಹಾಗೂ ಶಿವಶಂಕರ್ ಬಿಷ್ತ್ ಎಂಬವರು ಕರೊನಾದಿಂದಾಗಿ ಮೃತಪಟ್ಟಿದ್ದು, ಅವರ ಅಗಲಿಕೆಯಿಂದಾಗಿರುವ ನಷ್ಟವನ್ನು ವಿವರಿಸಿ ಹೇಳಲಾಗದು. ಹೀಗೆ ನಾಲ್ವರು ಕರೊನಾಗೆ ಬಲಿಯಾಗಿರುವುದರಿಂದ ನಮ್ಮ ಉಳಿದ ಎಲ್ಲ ಉದ್ಯೋಗಿಗಳಿಗೆ ಈ ಭರವಸೆ ನೀಡಲಾಗುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಇಂಥದ್ದೊಂದು ಭರವಸೆ ನೀಡಿದ್ದು ಬೇರಾರೂ ಅಲ್ಲ, ಬೊರೊಸಿಲ್ ಲಿಮಿಟೆಡ್ ಕಂಪನಿಯ ಎಂಡಿ ಶ್ರೀವರ್​ ಖೆರುಕ.

    ಇದನ್ನೂ ಓದಿ: ಡಿಸೆಂಬರ್‌ವರೆಗೂ ಇರುತ್ತೆ ಈ ಕರೊನಾ ಕಾಟ: ಎಚ್ಚರಿಕೆ ನೀಡಿದ ಡಾ. ಮಂಜುನಾಥ್

    ಬೊರೊಸಿಲ್ ಲಿಮಿಟೆಡ್ ಅಥವಾ ಬೊರೊಸಿಲ್ ರಿನ್ಯುವೇಬಲ್ ಲಿಮಿಟೆಡ್​ನ ಯಾವುದೇ ಉದ್ಯೋಗಿ ಕರೊನಾದಿಂದಾಗಿ ಮೃತಪಟ್ಟರೆ ಅವರ ಕುಟುಂಬಕ್ಕೆ ಮುಂದಿನ 2 ವರ್ಷ ಕಾಲ ಸಂಬಳ ಮುಂದುವರಿಯಲಿದೆ. ಮಾತ್ರವಲ್ಲ ಅವರ ಮಕ್ಕಳು ಭಾರತದಲ್ಲಿ ಪದವಿ ಪಡೆಯುವವರೆಗಿನ ವಿದ್ಯಾಭ್ಯಾಸದ ಖರ್ಚನ್ನೂ ಭರಿಸಲಾಗುವುದು ಎಂದು ಹೇಳಿದ್ದಾರೆ.

    ನಾವು ಹೀಗೆ ನೀಡುವ ಸಹಾಯ ಆ ಕುಟುಂಬಕ್ಕೆ ಆದ ನಷ್ಟದ ಅಳತೆ ಅಲ್ಲ. ಅಷ್ಟಕ್ಕೂ ನಮ್ಮ ನಿಜವಾದ ಆಸ್ತಿಯೇ ಆಗಿರುವ ಉದ್ಯೋಗಿಗಳನ್ನು ನಮ್ಮ ಕಂಪನಿಯ ಬ್ಯಾಲೆನ್ಸ್​ ಶೀಟ್​ನಲ್ಲಿ ತೋರಿಸಲಾಗದು. ಹೀಗಾಗಿ ನಾವು ಅವರಿಗೆ ಸಾಧ್ಯವಾದಷ್ಟೂ ಮಟ್ಟಿಗೆ ನೆರವು ನೀಡಲಿದ್ದೇವೆ. ಈ ಕಷ್ಟ ಕಾಲ ದೂರವಾಗಲಿದೆ, ಒಳ್ಳೆಯ ನಾಳೆಗಳು ಬರಲಿವೆ ಎಂದೂ ಅವರು ಭರವಸೆ ತುಂಬಿದ್ದಾರೆ. ಬೊರೊಸಿಲ್ ಎಂಡಿಯ ಈ ಉದಾತ್ತ ನಿಲುವಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

    ಉದ್ಯೋಗಿಗಳು ಕರೊನಾಕ್ಕೆ ಬಲಿಯಾದರೆ 2 ವರ್ಷದ ಸಂಬಳ ನೀಡಲು ಮುಂದಾಗಿರುವ ಖಾಸಗಿ ಕಂಪನಿ!
    ಬೊರೊಸಿಲ್ ಎಂಡಿ ಶ್ರೀವರ್ ಖೆರುಕ ಭರವಸೆ

    ಫಾರಿನ್ನಿಂದ ಫ್ರೆಂಡ್​ ಮೆಸೇಜ್​ ಬಂದ್ರೆ ಹುಷಾರು!; ಹುಷಾರಿಲ್ಲ ಅಂತಾರೆ, ಹಣ ಕೇಳ್ತಾರೆ, ಅಸಲಿಯತ್ತೇ ಬೇರೆ..!

    ಕರೊನಾ ಸೋಂಕಿತರ ಕಷ್ಟ ನೋಡಿ ಬೈಕನ್ನೇ ಆಂಬುಲೆನ್ಸ್ ಮಾಡಿದ; ಸಂಕಷ್ಟಕ್ಕೆ ಮರುಗಿದ ಇಂಜಿನಿಯರ್​ಗೆ ಖರ್ಚಾಗಿದ್ದು ಗರಿಷ್ಠ 25 ಸಾವಿರ ರೂ.​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts