More

    ಮೈಗಳ್ಳರಾಗಿ ಜವಾಬ್ದಾರಿಯಿಂದ ನುಣುಚಿಕೊಳ್ಳದಿರಿ: ಕುಷ್ಟಗಿ ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠ ಆಕ್ರೋಶ

    ಕುಷ್ಟಗಿ: ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪುರಸಭೆಯ ವಿಶೇಷ ಸಭೆಯಲ್ಲಿ ಅಧ್ಯಕ್ಷ ಹಾಗೂ ಸದಸ್ಯರು ವೈಯಕ್ತಿಕ ವಿಚಾರಗಳನ್ನಿಟ್ಟುಕೊಂಡು ಆರೋಪ ಪ್ರತ್ಯಾರೋಪದಲ್ಲಿ ಮುಳುಗಿದ್ದು ಕಂಡುಬಂತು.

    ಸಭೆಯ ಆರಂಭದಲ್ಲಿ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಅಧ್ಯಕ್ಷ ಜಿ.ಕೆ.ಹಿರೇಮಠ, ಎಲ್ಲ ಅಧಿಕಾರಿಗಳು ಮೈಗಳ್ಳರಾಗಿದ್ದೀರಿ. ಮೈಗೆ ಎಣ್ಣೆ ಹಚ್ಚಿಕೊಂಡವರಂತೆ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದೀರಿ. ಸದಸ್ಯರಿಗೆ ಗೌರವ ಕೊಡಲ್ಲ. ಜನರ ಕೆಲಸ ಎಂದರೆ ಅಸಡ್ಡೆಯಾಗಿದೆ ಎಂದು ತರಾಟೆಗೆ ತಗೆದುಕೊಂಡರು. ಅಧಿಕಾರಿಗಳ ವಿರುದ್ಧ ಠರಾವು ಪಾಸ್ ಮಾಡಿ ಬೇರೆಡೆ ವರ್ಗಾಯಿಸಿ ಎಂದು ಸದಸ್ಯರು ಒತ್ತಾಯಿಸಿದರು.

    ಕೊಪ್ಪಳ ರಸ್ತೆಗೆ ಹೊಂದಿಕೊಂಡಿರುವ ಪುರಸಭೆಯ ಖಾಲಿ ನಿವೇಶನದಲ್ಲಿ ಅಂಗಡಿ ಮಾಡಿಕೊಳ್ಳಲು ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿರುವ ಬಗ್ಗೆ ಪ್ರಸ್ತಾಪಿಸುತ್ತಿದ್ದಂತೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಪುರಸಭೆಯಿಂದಲೇ ಶೆಡ್ ನಿರ್ಮಿಸಿ ಬಾಡಿಗೆ ನೀಡುವಂತೆ ಸಲಹೆ ನೀಡಿದರು. ರಸ್ತೆಯ ಅಕ್ಕ-ಪಕ್ಕ ಹಲವರು ಅಂಗಡಿ ಮಾಡಿಕೊಂಡಿದ್ದಾರೆ. ಅದರಂತೆ ಅಲ್ಲಿಯೂ ಮಾಡಿಕೊಳ್ಳಲಿ ಎಂದು ಹೇಳಿದ ಅಧ್ಯಕ್ಷ ವಿರುದ್ಧ ಹರಿಹಾಯ್ದ ಕಲ್ಲೇಶ ತಾಳದ್, ಸಾರ್ವಜನಿಕರು ಮಾಡುವ ತಪ್ಪನ್ನು ನೀವೂ ಮಾಡುತ್ತೀರಾ ಎಂದು ಪ್ರಶ್ನಿಸಿದರು.

    ಹಳೇ ವಿದ್ಯುತ್ ಕಂಬಗಳ ಬದಲಾವಣೆ ಹಾಗೂ ಹೊಸ ತಂತಿ ಅಳವಡಿಸುವ ಸಂಬಂಧ ಅರ್ಜಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜೆಸ್ಕಾಂ ಉಪ ವಿಭಾಗದ ಎಇಇ ಮಂಜುನಾಥರನ್ನು ಸದಸ್ಯರು ತರಾಟೆಗೆ ತಗೆದುಕೊಂಡರು. ಕ್ರಮ ಕೈಗೊಳ್ಳದಿದ್ದಲ್ಲಿ ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಮುಖ್ಯಾಧಿಕಾರಿ ಷಣ್ಮುಖಪ್ಪ ಇದ್ದರು.

    ನಾನು ಎಲ್ಲ ಅನುಭವಿಸಿದ್ದೇನೆ
    ಕೆಲ ವಿಚಾರಗಳ ಬಗ್ಗೆ ಅಧ್ಯಕ್ಷ ಜಿ.ಕೆ.ಹಿರೇಮಠ ಜತೆ ವಾಗ್ವಾದ ನಡೆಸಿದ ಮೈನುದ್ದೀನ್ ಮುಲ್ಲಾ, ಇನ್ನೇನು ನಿಮ್ಮ ಅಧಿಕಾರವೇ ಮುಗಿದು ಹೋಗುತ್ತದೆ ಎಂದು ಕಾಲೆಳದರು. ಅಧಿಕಾರ ಎಲ್ಲರದ್ದೂ ಮುಗಿಯುತ್ತದೆ. ನಾನು ಎಲ್ಲ ಅನುಭವಿಸಿದ್ದೇನೆಂದು ಹೇಳುವ ಮೂಲಕ ಅಧ್ಯಕ್ಷ ಹಿರೇಮಠ ಅಚ್ಚರಿ ಮೂಡಿಸಿದರು. ಪ್ರತಿ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಮಾತ್ರ ಅಧ್ಯಕ್ಷರ ವಿರುದ್ಧ ಮಾತನಾಡುತ್ತಿದ್ದರು. ಈ ಬಾರಿ ಸ್ವಪಕ್ಷೀಯರೂ ಪ್ರತಿ ವಿಚಾರಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದು, ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯಾಗುವ ಮುನ್ಸೂಚನೆಯಂತೆ ಕಂಡುಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts