More

    ಕುಡಿಯುವ ನೀರಿನ ಸಮಸ್ಯಾತ್ಮಕ 97 ಗ್ರಾಮಗಳ ಗುರುತು

    ಪರಶುರಾಮ ಕೆರಿ ಹಾವೇರಿ

    ಬೇಸಿಗೆ ಆರಂಭವಾಗಿದ್ದು, ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಈವರೆಗೆ ಕುಡಿಯುವ ನೀರಿನ ಸಮಸ್ಯೆ ಪ್ರಮುಖವಾಗಿ ತಲೆದೋರಿಲ್ಲ. ನೀರಿನ ಹಾಹಾಕಾರ ತಲೆದೋರುವ ಮೊದಲು ಜಿಲ್ಲಾಡಳಿತ ಎಚ್ಚೆತ್ತು, ಸಮಸ್ಯೆ ಎದುರಾಗದಂತೆ ಪೂರ್ವಸಿದ್ಧತೆ ಕಾರ್ಯ ಕೈಗೊಂಡಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆಗೆ ಟಾಸ್ಕ್​ಫೋರ್ಸ್ ಅಡಿ ತುರ್ತು ಕಾಮಗಾರಿಗಳಿಗಾಗಿ ಅನುದಾನ ಮೀಸಲಿರಿಸಲಾಗಿದೆ. 97 ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದೆ.

    ಜಿಲ್ಲಾದ್ಯಂತ 748 ಜನವಸತಿ ಗ್ರಾಮಗಳಿವೆ. ಕುಡಿಯಲು ಮತ್ತು ದಿನಬಳಕೆಗಾಗಿ ಬಹುತೇಕ ಕಡೆಗಳಲ್ಲಿ ಕೊಳವೆಬಾವಿ ಮತ್ತು ಕೆರೆಗಳನ್ನು ಅವಲಂಬಿಸಲಾಗಿದೆ. 2019 ಮತ್ತು 2020ರಲ್ಲಿ ಉತ್ತಮ ಮಳೆಯಾಗಿದ್ದು, ಅಂತರ್ಜಲಮಟ್ಟ ಹೆಚ್ಚಳವಾಗಿದೆ. ಅಲ್ಲದೆ, ಕೊಳವೆಬಾವಿಗಳು ಮರುಪೂರಣಗೊಂಡಿವೆ. ಹೀಗಾಗಿ, ಬಹುತೇಕ ಗ್ರಾಮಗಳಲ್ಲಿ ಮಾರ್ಚ್ ಮುಗಿದರೂ ನೀರಿನ ಕೊರತೆ ಅಷ್ಟಾಗಿ ಕಂಡುಬಂದಿಲ್ಲ.

    ಪ್ರತಿ ತಾಲೂಕಿಗೆ 15ಲಕ್ಷ ರೂ: ತಾಲೂಕು ಕೇಂದ್ರಗಳನ್ನು ಹೊರತುಪಡಿಸಿ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಬವಣೆ ಎದುರಾಗುವ ಸಾಧ್ಯತೆಯಿದೆ. ಅದಕ್ಕಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆಗೆ ಪ್ರತಿ ತಾಲೂಕಿನ ಟಾಸ್ಕ್​ಫೋರ್ಸ್​ಗೆ 15ಲಕ್ಷ ರೂ. ಅನುದಾನ ಮೀಸಲಿರಿಸಲಾಗಿದೆ. ಏಪ್ರಿಲ್, ಮೇ ತಿಂಗಳ ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆದೋರಿದರೆ ತುರ್ತಾಗಿ ಕೊಳವೆಬಾವಿಗಳನ್ನು ಕೊರೆಸಲು ಸರ್ಕಾರದಿಂದ ನಿರ್ದೇಶನವಿದೆ. ನೀರಿನ ಸಮಸ್ಯೆ ಎದುರಾಗಬಹುದಾದ ಗ್ರಾಮಗಳ ಪಟ್ಟಿ ಮಾಡಿ ಕೊಳವೆಬಾವಿ ಕೊರೆಸಲು ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಇಲಾಖೆಗೆ ಸೂಚಿಸಲಾಗಿದೆ.

    ಬಾಡಿಗೆ ಬೋರ್​ವೆಲ್ ಇಲ್ಲ: ನಾಲ್ಕೈದು ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಕೊಳವೆಬಾವಿಗಳ ಸಂಖ್ಯೆ ಕಡಿಮೆಯಿತ್ತು. ಅಲ್ಲದೆ, ದುರಸ್ತಿ ಅಥವಾ ನೀರಿನ ಕೊರತೆಯಾಗಿ ಹಾಹಾಕಾರ ಉಂಟಾಗಿತ್ತು. ಆ ಸಂದರ್ಭದಲ್ಲಿ ರೈತರ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ, ಈ ಬೇಸಿಗೆಯಲ್ಲಿ ಬೋರ್​ವೆಲ್​ಗಳನ್ನು ಬಾಡಿಗೆ ರೂಪದಲ್ಲಿ ಪಡೆಯುವ ಪ್ರಸಂಗ ಬರುವುದು ತೀರಾ ಕಡಿಮೆ ಎನ್ನುತ್ತಾರೆ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಸಂಭಾಜಿ ಅತ್ತರವಾಲಾ.

    ಕೆರೆಗಳು ಭರ್ತಿ: ಮುಂಗಾರಿನಲ್ಲಿ ಸುರಿದ ಭಾರಿ ಮಳೆಯಿಂದ ಬಹುತೇಕ ಕೆರೆಗಳು ಭರ್ತಿಯಾಗಿವೆ. ಶಿಗ್ಗಾಂವಿ ಏತ ನೀರಾವರಿ ಹಾಗೂ ಯುಟಿಪಿ ಕಾಲುವೆಗಳ ಮೂಲಕ ಕೆಲ ಕೆರೆಗಳನ್ನು ತುಂಬಿಸಲಾಗಿದೆ.

    ಜಲಜೀವನ್ ಮಿಷನ್ ವರದಾನ: ಜಿಲ್ಲೆಯಲ್ಲೂ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಪ್ರತಿವ್ಯಕ್ತಿಗೆ ಪ್ರತಿದಿನ 55ಲೀ. ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ಇದಾಗಿದೆ. ಜಲಮೂಲಗಳ ನವೀಕರಣ, ಓವರ್​ಹೆಡ್ ಟ್ಯಾಂಕ್​ಗಳ ನವೀಕರಣ, ನಿರ್ಮಾಣ ಕಾರ್ಯ ನಡೆಯುತ್ತಿದೆ. ಜೆಜೆಎಂನಲ್ಲಿ ಸಾಕಷ್ಟು ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ.

    ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ನೀರಿನ ಬವಣೆ ಎದುರಾದರೆ ಆಯಾ ಪಿಡಿಒಗಳು ತುರ್ತು ಕ್ರಮ ಕೈಗೊಳ್ಳುತ್ತಿದ್ದಾರೆ. ಟ್ಯಾಂಕರ್ ನೀರು ಸರಬರಾಜು ಅಥವಾ ಬೋರ್​ವೆಲ್ ಬಾಡಿಗೆ ಪಡೆಯುವ ಪ್ರಸಂಗಬಾರದು. ತುರ್ತು ಕ್ರಮ ಕೈಗೊಳ್ಳಲು ಟಾಸ್ಕ್​ಫೋರ್ಸ್ ಅಡಿ ಅಗತ್ಯ ಅನುದಾನವಿದೆ.

    | ಸಂಭಾಜಿ ಅತ್ತರವಾಲಾ ಇಇ, ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts